ಹೆಣ್ಣು ಮಕ್ಕಳಿಗೆ 18 ವರ್ಷ ವಯಸ್ಸಿನ ನಂತರವೆ ಮದುವೆ ಮಾಡಿ, ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪೂರಕ ವಾತಾವರಣ ನಿರ್ಮಿಸಿ: ಡಾ.ವೈ ರಮೇಶಬಾಬು ಮನವಿ

by | 11/11/23 | ಕಾನೂನು


ಬಳ್ಳಾರಿ,ನ.11
ಮದುವೆ ಜೀವನದ ಒಂದು ಭಾಗವಾದರೂ, ಹೆಣ್ಣು ಮಕ್ಕಳಿಗೆ 18 ವರ್ಷ ವಯಸ್ಸು ತುಂಬಿದ ನಂತರವೇ ಮದುವೆ ಮಾಡಿಸುವ ಮೂಲಕ ತಾಯ್ತನದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ತಾಯಿ ಮಗುವಿನ ಸದೃಢ ಆರೋಗ್ಯ ವೃದ್ಧಿಗಾಗಿ ಪಾಲಕರು ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶಬಾಬು ಮನವಿ ಮಾಡಿದರು.
ಅವರು ಇಂದು ಶ್ರೀರಾಮರಂಗಾಪೂರ ಆಸ್ಪತ್ರೆಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿ, ಕುಟುಂಬದ ಸದಸ್ಯರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಋತುಚಕ್ರ ಆರಂಭವಾದ ಕೂಡಲೇ ಮದುವೆಯ ಬಗ್ಗೆ ಯೋಚಿಸುವುದನ್ನು ತಡೆಯಬೇಕು ಎಂದು ಮನವಿ ಮಾಡಿದರು.
ಬಾಲ್ಯದಲ್ಲಿ ಮದುವೆ ಮಾಡುವುದರಿಂದ ಗರ್ಭಕೋಶದ ಪೂರ್ಣ ಬೆಳವಣಿಗೆಯಾಗದಿರುವುದು ಹಾಗೂ ಅವಧಿಯಲ್ಲಯೇ ಗರ್ಭವತಿಯಾಗುವುದರಿಂದ ಮಗುವಿನ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಗುವಿನ ಜನನ, ಅಂಗವಿಕಲ, ಬುದ್ಧಿಮಾಂದ್ಯತೆ ಮಗುವಿನ ಜನನ, ಸಹಜ ಹೆರಿಗೆ ಅಲ್ಲದೇ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಸಂಭವ ಉಂಟಾಗುವುದು. ಸರಿಯಾದ ಆಹಾರ ಪದ್ಧತಿಯೂ ರಕ್ತಹೀನತೆಯಿಂದ ಬಳಲುವ ಸಾಧ್ಯತೆಯಾಗಿ ತಾಯಿ ಮರಣವಾಗಬಹುದು ಎಂದು ವಿವರಿಸಿದರು.
18 ವರ್ಷಕ್ಕಿಂತ ಪೂರ್ವದಲ್ಲಿ ಮದುವೆ ಮಾಡುವುದನ್ನು ಪಾಲಕರು ಮುಂದೂಡುವುದರ ಜೊತೆಗೆ ತಾಯಿ ಮಗುವಿನ ಆರೋಗ್ಯ ಕಾಪಾಡಲು ಕೈ ಜೋಡಿಸಬೇಕೆಂದು ವಿನಂತಿಸಿದರು..
ಪೋಕ್ಸೋ ಕಾಯ್ದೆ
ಪೋಕ್ಸೋ ಕಾಯ್ದೆ ಅಡಿಯಲ್ಲಿ 18 ವರ್ಷದ ಒಳಗಡೆ ಹೆಣ್ಣು ಮಗುವಿಗೆ ಮದುವೆ ಮಾಡಿಸಿದಲ್ಲಿ ಮದುವೆಯಾಗುವ ಗಂಡ ಹಾಗೂ ತಂದೆ ತಾಯಿ, ಹೆಣ್ಣಿನ ಪಾಲಕರು ಮತ್ತು ತಂದೆ ತಾಯಿಯಂದಿರಿಗೆ ಹಾಗೂ ಮದುವೆಯಲ್ಲಿ ಭಾಗವಹಿಸಿದವರು ಸೇರಿದಂತೆ ಇತರರಿಗೂ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಒಂದರಿಂದ ಎರಡು ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯಲ್ಲಿ ತಾಯಿ ಕಾರ್ಡ್ ವಿತರಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಹೆಣ್ಣು ಮಗುವಿನ ವಯಸ್ಸು 18 ವರ್ಷ ಇರುವ ಬಗ್ಗೆ ಶಾಲಾ ದಾಖಲಾತಿಗಳು ಮತ್ತು ಜನನ ಪ್ರಮಾಣ ಪತ್ರವನ್ನು ಪರಿಶೀಲಿಸಿ ತಾಯಿ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಒಂದು ವೇಳೆ ಗರ್ಭಿಣಿಯ ನೋಂದಣಿ ಸಮಯದಲ್ಲಿ 18 ವರ್ಷ ತುಂಬುವ ಪೂರ್ವದಲ್ಲಿಯೇ ಮದುವೆ ಮಾಡಿಸಿರುವುದು ಗೊತ್ತಾದಲ್ಲಿ ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡುವ ಮಾರ್ಗಸೂಚಿ ಹಿನ್ನಲೆಯಲ್ಲಿ ಪಾಲಕರು ಯೋಚಿಸಿ, ನಂತರ ಮದುವೆ ಮಾಡುವುದರ ಬಗ್ಗೆ ಗಮನ ಹರಿಸಬೇಕು. ಯಾವುದೇ ದೂರುಗಳಿದ್ದರೆ ಉಚಿತ ಮಕ್ಕಳ ಸಹಾಯವಾಣಿ- 1098 ಕರೆ ಮಾಡಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಕ್ಷಯರೋಗಿಯೊಬ್ಬರಿಗೆ ಪೌಷ್ಟಿಕ ಆಹಾರದ ಕಿಟ್ ಒದಗಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಭರತ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್, ಸಮುದಾಯ ಆರೋಗ್ಯ ಅಧಿಕಾರಿ ಮಮತಾ ಚೆನ್ನಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕವಿತಾ, ಕ್ಷಯರೋಗ ಮೇಲ್ವಿಚಾರಕ ಈರಣ್ಣ ಹಾಗೂ ಆಶಾ ಕಾರ್ಯಕರ್ತೆ ದುರ್ಗಾವೇಣಿ ವಿಶಾಲಾಕ್ಷಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *