ಹಿರಿಯೂರು ನಗರದ ನಾಗರೀಕರಿಗೆ ಮೂಲಭೂತ ಸೌಲಭ್ಯ ಒದಗಿಸಿದ ನಂತರ ತೆರಿಗೆ ವಸೂಲಿ ಆಂದೋಲನಕ್ಕೆ ಚಾಲನೆ ನೀಡಿದೆ ನಗರಸಭೆ ಪೌರಾಯುಕ್ತರಾದ ಹೆಚ್.ಮಹಂತೇಶ್ ಹೇಳಿಕೆ

by | 18/10/23 | ಆರ್ಥಿಕ


ಹಿರಿಯೂರು :
ನಗರದ ನಾಗರೀಕರಿಗೆ ಮೂಲಭೂತ ಸೌಲಭ್ಯ ಒದಗಿಸಿದ ನಂತರ ತೆರಿಗೆ ವಸೂಲಾತಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ, ನಗರದಲ್ಲಿ ಸ್ವಚ್ಛತೆ, ನೀರು ಸರಬರಾಜು, ಬೀದಿದೀಪ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ನಗರಸಭೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿವರ್ಗ ಹಾಗೂ ಸಿಬ್ಬಂದಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಹೆಚ್.ಮಹಂತೇಶ್ ಹೇಳಿದರು.
ನಗರಸಭೆ ವತಿಯಿಂದ ತೆರಿಗೆ ವಸೂಲಾತಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ ನಗರದ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ, ಕಂದಾಯ ಕಟ್ಟುವ ಬಗ್ಗೆ ಅರಿವು ಮೂಡಿಸಿದರಲ್ಲದೆ, ನಾಗರೀಕರು ಕಟ್ಟದೆ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಕಟ್ಟುನಿಟ್ಟಾಗಿ ಕಟ್ಟುವಂತೆ ಸೂಚನೆ ನೀಡಿ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ನಗರಸಭೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಸಮಯದ ಪರಿವೇ ಇಲ್ಲದಂತೆ ಎಲ್ಲರೂ ಕೆಲಸ ಮಾಡುತ್ತಿದ್ದು, ನಗರದ ಅಭಿವೃದ್ಧಿಯ ದೃಷ್ಟಿಯಿಂದ ಒಂದಷ್ಟು ದೊಡ್ಡ ದೊಡ್ಡ ಕನಸುಗಳನ್ನು ಈಡೇರಿಸಲು ಎಲ್ಲರೂ ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ, ಈ ನಿಟ್ಟಿನಲ್ಲಿ ನಗರದ ನಾಗರೀಕರು ಸಹ ನಮ್ಮ ಜೊತೆ ಸಹಕರಿಸಬೇಕಿದೆ ಎಂದರು.
ನಗರದ ಮನೆ, ನಿವೇಶನ, ವಾಣಿಜ್ಯ ಕಟ್ಟಡಗಳು, ಶಾಲಾ ಕಟ್ಟಡಗಳ ಮಾಲೀಕರುಗಳು ತಮ್ಮ ಸ್ವತ್ತಿನ ಬಾಕಿ ಹಾಗೂ ಚಾಲ್ತಿ ಸಾಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆಯನ್ನು ನಗರಸಭೆಗೆ ಪಾವತಿಸಲು ಸೂಚಿಸಿದರಲ್ಲದೆ, ನಗರಸಭೆ ಮಾಲೀಕತ್ವದ ಮಳಿಗೆಗಳ ಬಾಡಿಗೆದಾರರು ಮಳಿಗೆಗಳ ಬಾಕಿ ಶೀಘ್ರ ಪಾವತಿಸುವಂತೆ ತಿಳಿಸಿದರು.
ನಗರದ ನಾಗರೀಕರು ತೆರಿಗೆಗಳನ್ನು ಕಾಲಕಾಲಕ್ಕೆ ಪಾವತಿಸುವುದು ನಗರದ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದು, ಇಲ್ಲವಾದಲ್ಲಿ ದಂಡಪಾವತಿ ಹಾಗೂ ನಲ್ಲಿ ಕಡಿತದಂತಹ ಅನಗತ್ಯ ಕೆಲಸಗಳಿಗೆ ಎಡೆಮಾಡಿಕೊಡಬೇಕಾಗುತ್ತದೆ ಎಂಬುದಾಗಿ ಮನೆಮನೆಗೂ ಹೋಗಿ ಮನವರಿಕೆ ಮಾಡಿಕೊಟ್ಟರು.
ನಾಗರೀಕರು ಈ ಹಿಂದಿನಂತೆ ನಗರಸಭೆಯಿಂದ ಚಲನ್ ಪಡೆದು ಹೋಗಿ ಬ್ಯಾಂಕ್ ನಲ್ಲಿ ನಿಂತು ಆಸ್ತಿ ತೆರಿಗೆ, ನೀರಿನ ತೆರಿಗೆ, ಉದ್ದಿಮೆ ಪರವಾನಿಗೆ ಶುಲ್ಕ, ಮಳಿಗೆ ಬಾಡಿಗೆ ಕಟ್ಟುವ ಅಗತ್ಯವಿಲ್ಲ, ನಗರಸಭೆಯಿಂದ ಸಂಬಂಧಪಟ್ಟ ಚಲನ್ ಪಡೆದು ಆನ್ ಲೈನ್, ಗೂಗಲ್ ಪೇ, ಫೋನ್ ಪೇ, ಯುಪಿಐ ಆ್ಯಪ್ ಮೂಲಕ ತೆರಿಗೆ ಪಾವತಿ ಮಾಡಬಹುದಾಗಿದೆ ಎಂದರಲ್ಲದೆ,
ನಿಗದಿತ ತೆರಿಗೆ ಸಂಗ್ರಹದ ಗುರಿ ಮುಟ್ಟದಿದ್ದ ಪಕ್ಷದಲ್ಲಿ 15ನೇ ಹಣಕಾಸು ಅನುದಾನ ಮತ್ತು ಇತರೆ ಅನುದಾನಗಳು ಸ್ಥಳೀಯ ಸಂಸ್ಥೆಗಳಿಗೆ ತಲುಪುವುದಿಲ್ಲ ಎಂಬ ಸರ್ಕಾರದ ಖಡಕ್ ಆದೇಶವಿರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಬಾರದು ಎಂಬ ಸದುದ್ದೇಶದಿಂದ ನಗರದ ನಾಗರಿಕರು ಯಾವುದೇ ಬಾಕಿ ಉಳಿಸಿಕೊಳ್ಳಬಾರದು ಎಂಬುದು ನಗರಸಭೆಯ ನಿಲುವಾಗಿದೆ ಎಂದರು.
ಈಗಾಗಲೇ ಹಿರಿಯೂರು ನಗರಸಭೆ ವತಿಯಿಂದ ಬಾಕಿ ತೆರಿಗೆ ವಸೂಲಿಗೆ 5 ತಂಡಗಳನ್ನು ರಚಿಸಿ, ವಾರ್ಡ್ ವಾರು ವಸೂಲಾತಿಗೆ ಕ್ರಮಕೈಗೊಳ್ಳಲಾಗಿದೆ, ತೆರಿಗೆ ಬಾಕಿ ಉಳಿಸಿಕೊಂಡಿರುವ ಮನೆಗಳ ಮಾಲೀಕರಿಗೆ ನೋಟೀಸ್ ನೀಡಲಾಗಿದ್ದು, ನಿಗದಿತ ಅವಧಿ ಒಳಗೆ ಬಾಕಿ ಪಾವತಿಸದಿದ್ದರೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದರು.
ನಗರದ ಖಾಸಗಿ ಶಾಲಾ ಕಟ್ಟಡಗಳ ಆಸ್ತಿ ತೆರಿಗೆಗೆ ವಿನಾಯ್ತಿ ನೀಡುವ ಸಂಬಂಧ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಾಲಂ 94 ರಲ್ಲಿ ಸರ್ಕಾರದ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸುತ್ತಿರುವ ಕಟ್ಟಡಗಳು ಅಥವಾ ಕಾಲಿ ಭೂಮಿಗಳಿಗೆ ಮಾತ್ರವೇ ತೆರಿಗೆ ವಿನಾಯ್ತಿ ನೀಡಲು ಉಲ್ಲೇಖಿಸಲಾಗಿದೆ
ಅಧಿನಿಯಮದ ಪ್ರಕಾರ ಮಂಜೂರು ಮಾಡಿದ ವಿನಾಯ್ತಿಗಳು ಏನೇ ಇದ್ದರೂ ಸಹ ನಾಗರೀಕ ಸೌಲಭ್ಯಗಳನ್ನು ಒದಗಿಸಿದ್ದಕ್ಕಾಗಿ ಮತ್ತು ಸಾಮಾನ್ಯ ಹಾಗೂ ವಿಶೇಷ ಸೇವೆಗಳನ್ನು ಸಲ್ಲಿಸಿದ್ದಕ್ಕಾಗಿ ಅಗತ್ಯ ಸೇವಾ ಶುಲ್ಕವನ್ನು ಸಂಗ್ರಹಿಸಲು ಮುನ್ಸಿಪಲ್ ಕೌನ್ಸಿಲ್ ಗೆ ಅವಕಾಶವಿದೆ, ಖಾಸಗಿ ಶಾಲಾ ಸಂಸ್ಥೆಯವರು ಈ ಶರತ್ತುಬದ್ಧ ವಿನಾಯಿತಿ ತೆರಿಗೆ ವ್ಯವಸ್ಥೆಯನ್ನು ಸದುಪಯೋಗ ಮಾಡಿಕೊಳ್ಳಲು ಸಹ ನಗರಸಭೆ ವತಿಯಿಂದ ಸೂಚಿಸಲಾಗಿದೆ ಎಂಬುದಾಗಿ ಅವರು ಹೇಳಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *