ಸಹಕಾರಿಕ್ಷೇತ್ರ ದೇಶದ ಆರ್ಥಿಕ ಪ್ರಗತಿಗೆ ಅಪಾರವಾದ ಕೊಡುಗೆಯನ್ನ ನೀಡಿದೆ :ಸಹಕಾರರತ್ನ ವೀರಭದ್ರಬಾಬು

by | 16/11/23 | ಸುದ್ದಿ


ಹಿರಿಯೂರು :
ಈ ಸಹಕಾರಿ ಚಳುವಳಿಗೆ ಸುಮಾರು 120 ವರ್ಷಗಳ ಇತಿಹಾಸವಿದ್ದು, ಈ ಸಹಕಾರಿ ಕ್ಷೇತ್ರ ದೇಶದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದೆ, ಈ ದೇಶದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು ಕೆಲಸ ನಿರ್ವಹಿಸುತ್ತಿದ್ದು, ಸುಮಾರು 60-70 ಸಾವಿರ ಕೋಟಿ ರೂಗಳ ಠೇವಣಿ ಹೊಂದಿದೆ, ಅಲ್ಲದೆ ಈ ಸಹಕಾರಿ ಸಂಘಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಅವಕಾಶಗಳು ಸೇರಿದಂತೆ ಬಡಜನರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ನಮ್ಮ ದೇಶ ಆರ್ಥಿಕ ಸಬಲತೆ ಗಳಿಸಲು ಸಾಧ್ಯವಾಗಿದೆ ಎಂಬುದಾಗಿ ಕೆಎಂ.ಎಫ್ ಹಾಗೂ ಡಿಸಿಸಿ ನಿರ್ದೇಶಕರು, ಸಹಕಾರರತ್ನ ಪ್ರಶಸ್ತಿ ಪುರಸ್ಕೃತ ವೀರಭದ್ರಬಾಬು ಹೇಳಿದರು.
ನಗರದ ಗುರುಭವನದಲ್ಲಿ ರಾಜ್ಯ ಸಹಕಾರಿ ಮಹಾಮಂಡಳಿ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ಚಿತ್ರದುರ್ಗ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚಿತ್ರದುರ್ಗ, ತಾಲ್ಲೂಕು ವ್ಯವಸಾಯ ಉತ್ಪನ್ನಗಳ ಮಾರಾಟ ಸಹಕಾರಸಂಘ, ತಾಲ್ಲೂಕಿನ ಎಲ್ಲಾ ಪತ್ತಿನ ಸಹಕಾರ ಸಂಘಗಳು, ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳು, ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 70ನೇ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷ ನವಂಬರ್ 14 ರಿಂದ 20ರವರೆಗೆ ರಾಜ್ಯಾದ್ಯಂತ ಹಾಗೂ ರಾಷ್ಟ್ರಾದ್ಯಂತ ಈ ಸಹಕಾರಿ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಸಹಕಾರ ಚಳುವಳಿ ನಡೆದು ಬಂದ ದಾರಿ ಹಾಗೂ ಈ ದಾರಿಯಲ್ಲಿನ ಸಾಧನೆ ಹಾಗೂ ವೈಫಲ್ಯಗಳನ್ನು ಕುರಿತು ಚಿಂತನ-ಮಂಥನ ನಡೆಸಲಾಗುತ್ತದೆ ಎಂಬುದಾಗಿ ಹೇಳಿದರು.
ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಪ್ರತಾಪಸಿಂಹ ಮಾತನಾಡಿ, ಸಹಕಾರಿ ಕ್ಷೇತ್ರ ವಿಶಾಲವಾದ ವ್ಯಾಪ್ತಿಪ್ರದೇಶವನ್ನು ಹೊಂದಿದ್ದು, ಈ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೃಷಿಕರಿಗೆ ಎಲ್ಲಾ ರೀತಿಯ ಸಾಲಸೌಲಭ್ಯ ದೊರಕಲಿದ್ದು, ಪಶುಸಂಗೋಪನೆಗೆ ಸಹಾಯಧನ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ರೈತರಿಗೆ ರಸಗೊಬ್ಬರಗಳ ರಿಯಾಯಿತಿ ಸೇರಿದಂತೆ ಎಲ್ಲಾರೀತಿಯ ಸೌಲಭ್ಯಗಳು ದೊರಕುತ್ತಿವೆ ಎಂಬುದಾಗಿ ಹೇಳಿದರು.
ಆರಂಭದಲ್ಲಿ ಪ್ರಾಸ್ತಾವಿಕನುಡಿಗಳನ್ನಾಡಿದ ವಾಣಿವಿಲಾಸ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಆಲೂರು ಹನುಮಂತರಾಯಪ್ಪ ಮಾತನಾಡಿ, ನಮ್ಮ ಚಿತ್ರದುರ್ಗ ಜಿಲ್ಲೆ ಸಹ ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ರಾಜ್ಯದ ಸಹಕಾರ ಸಚಿವರಾಗಿದ್ದ ದಿವಂಗತ ಬಿ.ಎಲ್.ಗೌಡ, ಕೆ.ಹೆಚ್.ರಂಗನಾಥ್, ಹೆಚ್.ಏಕಾಂತಯ್ಯ, ಹಾಗೂ ದಿವಂಗತ ವಿ.ಮಸಿಯಪ್ಪ ಇಂತಹ ಮಹನೀಯರನ್ನು ಕೊಡುಗೆಯಾಗಿ ನೀಡಿದ್ದು, ಇವರೆಲ್ಲರ ಕನಸಿನಕೂಸು ಹಾಗೂ ಜಿಲ್ಲೆಯ ರೈತರ ಜೀವನಾಡಿಯಾಗಿದ್ದ ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ರಾಜ್ಯಸರ್ಕಾರ ಪುನರಾರಂಭಿಸಬೇಕು ಎಂಬುದಾಗಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಸಹಕಾರಿಗಳನ್ನು ಹಾಗೂ ಉತ್ತಮ ಸಹಕಾರ ಸಂಘಗಳ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕರು, ಕಾರ್ಯದರ್ಶಿಗಳನ್ನು ಶಾಲುಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕರು ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷರಾದ ಎಸ್.ಜೆ.ಹನುಮಂತರಾಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ರಾಜು, ಸಹಕಾರರತ್ನ ಪುರಸ್ಕೃತರು ಹಾಗೂ ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕರಾದ ರಾಮರೆಡ್ಡಿ, ಸಂಪನ್ಮೂಲ ವ್ಯಕ್ತಿ ಐ.ಎಂ.ಚಂದ್ರಶೇಖರಯ್ಯ, ಸಿಮುಲ್ ನಿರ್ದೇಶಕರಾದ ಯಶವಂತರಾಜ್, ಕೃಷಿಕ ಸಮಾಜದ ಅಧ್ಯ್ಕ್ಷ ಹೆಚ್.ಆರ್.ತಿಮ್ಮಯ್ಯ, ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಂದಿಕೆರೆ ಜಗದೀಶ್, ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಕೀರ್ತಿ ಕುಮಾರಿ, ಪ್ರಭಾರ ಸಹಕಾರ ಸಂಘದ ಉಪನಿರ್ದೇಶಕರಾದ ಟಿ.ಮಧುಶ್ರೀನಿವಾಸ್, ಸಹಕಾರಿ ಸಂಘಗಳ ಲೆಕ್ಕಪರಿಶೋಧ ಉಪನಿರ್ದೇಶಕರಾದ ಕೆ.ಮಹೇಶ್ವರಪ್ಪ, ಸಹಕಾರಿ ಅಭಿವೃದ್ಧಿ ಅಧಿಕಾರಗಳಾದ ಕೆ.ಶಿವಮೂರ್ತಿ, ಜಿಲ್ಲಾ ಸಹಕಾರಿ ಯೂನಿಯನ್ ಸಿಇಓ ನಾಗರಾಜ್ ಪಾಟೀಲ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಸತೀಶ್ ನಾಯ್ಕ, ಮೇಲ್ವಿಚಾರಕರುಗಳಾದ ಶಶಿಧರ್, ಹಾಗೂ ಶ್ರೀರಧರ್, ಟಿಎಪಿಸಿಎಂಎಸ್ ಕಾರ್ಯದರ್ಶಿ ಗುರುಸ್ವಾಮಿ, ತಾಲ್ಲೂಕು ಸಹಕಾರಿ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷ ಎಸ್.ಎಸ್.ರಂಗಪ್ಪ, ಉಪಾಧ್ಯರಕ್ಷ ರಾಮಚಂದ್ರಯ್ಯ, ಕಾರ್ಯದರ್ಶಿ ಕೆ.ಎಸ್.ರಂಗಸ್ವಾಮಿ, ಖಜಾಂಚಿ ಎಂ.ಜಗದೀಶ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *