ಸರ್ಕಾರಿ ಅನುದಾನ ಮತ್ತು ಚುನಾವಣೆ ಟಿಕೆಟ್ ಗಾಗಿ ಒಕ್ಕಲಿಗ ಜಪ ಮಾಡುವ ಕುಂಚಿಟಿಗ ಮುಖಂಡರ ಬಗ್ಗೆ ಎಚ್ಚರವಹಿಸಿರಿ :ಒಕ್ಕೂಟಅಧ್ಯಕ್ಷ ಕಸವನಹಳ್ಳಿರಮೇಶ್

by | 18/11/23 | ಸುದ್ದಿ


ಹಿರಿಯೂರು :
ಕುಂಚಿಟಿಗ ಸಮಾಜದ ಹೆಸರಿನಲ್ಲಿ ವೈಯಕ್ತಿಕ ಲಾಭ ಮಾಡಿಕೊಂಡು ಸ್ವಹಿತಾಸಕ್ತಿ ಕಾಪಾಡಿಕೊಳ್ಳುವ ಧಾರ್ಮಿಕ ನೇತಾರರು ಮತ್ತು ರಾಜಕೀಯ ಧುರೀಣರು ಕೇವಲ ಸರ್ಕಾರಿ ಅನುದಾನ ಮತ್ತು ಚುನಾವಣೆ ಟಿಕೆಟ್ ಗಾಗಿ ಒಕ್ಕಲಿಗ ಜಪ ಮಾಡುತ್ತ ಕುಂಚಿಟಿಗರಿಗೆ ಕಳೆದ 27 ವರ್ಷಗಳಿಂದ ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ, ಔದ್ಯೋಗಿಕವಾಗಿ ನಿರಂತರವಾಗಿ ಶೋಷಣೆ ಮಾಡುತ್ತ ಬಂದಿರುತ್ತಾರೆಂದು ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಕುಂಚಿಟಿಗರಿಗೆ ಕೇಂದ್ರ ಸರ್ಕಾರದಲ್ಲಿದ್ದ ಓಬಿಸಿ ಮೀಸಲಾತಿಯನ್ನು ಉದ್ದೇಶ ಪೂರ್ವಕವಾಗಿ ತೆಗೆದು ಹಾಕಿಸಿ ,ಕುಂಚಿಟಿಗರೆಲ್ಲ ಒಕ್ಕಲಿಗ ಎಂದು ಬರೆಯಿಸಿ ಓಬಿಸಿ ಮೀಸಲಾತಿ ಪಡೆಯಿರಿ ಎಂದು ಕಾನೂನು ಬಾಹಿರ ಉಪದೇಶ ಮಾಡಿದ ಧಾರ್ಮಿಕ ನೇತಾರರು ಮತ್ತು ರಾಜಕೀಯ ಧುರೀಣರ ಮಾತು ಕೇಳಿ ಬಹುತೇಕ ರೈತಾಪಿ ಕುಂಚಿಟಿಗರು ತಂದೆ ಜಾತಿ ಕುಂಚಿಟಿಗ ಇದ್ದಾಗ್ಯೂ ಮಕ್ಕಳಿಗೆ ಒಕ್ಕಲಿಗ ಎಂದು ಬರೆಯಿಸಿ,ಸಿಕ್ಕಂತ ನೌಕರಿ,ಗೆದ್ದ ರಾಜಕೀಯ ಸ್ಥಾನಮಾನಗಳನ್ನು ಕಳೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ ನಕಲಿ ಜಾತಿಪತ್ರ ಪಡೆದ ಆರೋಪದಡಿ ಕಾನೂನಾತ್ಮಕ ತೊಂದರೆ ಅನುಭವಿಸುವಂತಾಗಿದೆ. ಆದಾಗ್ಯೂ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕುಂಚಿಟಿಗ ನೆಲದಲ್ಲಿ ಒಕ್ಕಲಿಗ ಜಪ ಮಾಡುವ ಚಾಣಕ್ಯರು ಜಯಂತಿ ಮತ್ತು ಪ್ರತಿಮೆ ಸ್ಥಾಪನೆ ಹೆಸರಿನಲ್ಲಿ ಭಾವನಾತ್ಮಕ ತಂತ್ರಗಾರಿಕೆ ಮಾಡಿ ಕುಂಚಿಟಿಗರನ್ನು ಆಡಕತ್ತರಿಗೆ ಸಿಲುಕಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿರುತ್ತಾರೆ.
ಅಂತವರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಪಡೆದು ದಾಖಲೆ ಸಹಿತ ಮನೆ ದೇವರು ಮತ್ತು ಕುಲ ಬೆಡಗು ಸಹಿತ ತಮ್ಮ ಬಯೋಡೇಟಾ ಬಹಿರಂಗ ಪಡಿಸಲಿ ಎಂದು ಕಸವನಹಳ್ಳಿ ರಮೇಶ್ ಸವಾಲು ಹಾಕಿದ್ದಾರೆ. ಇನ್ನು ಮುಂದೆ ಕುಂಚಿಟಿಗರನ್ನು ಕಡೆಗಣಿಸಿ ಒಕ್ಕಲಿಗ ಮಂತ್ರ ಜಪಿಸುವವವರಿಗೆ ಸ್ವಾಭಿಮಾನಿ ಕುಂಚಿಟಿಗರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಇಂತವರಿಗೆ ಹೆಣ್ಣು ಕೊಟ್ಟರೆ,ನಾಳೆ ನಿಮ್ಮ ಮಕ್ಕಳು ಮೊಮ್ಮಕ್ಕಳು,ಜಾತಿ ಸಿಂಧುತ್ವ ಸಿಗದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಕಳೆದ 27 ವರ್ಷಗಳಿಂದ ಕೇಂದ್ರ ಓಬಿಸಿ ಮೀಸಲಾತಿ ತಪ್ಪಿಸಿ ಮೀಸಲಾತಿ ಆಸೆಗಾಗಿ ಅನ್ಯ ಜಾತಿಗಳತ್ತ ಮುಖ ಮಾಡಿದ್ದ ಕುಂಚಿಟಿಗರಿನ್ನು ಇಕ್ಕಟ್ಟಿಗೆ ಸಿಲುಕಿಸಿ,ಈಗ ಕುಲ ಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿ ಮಾಡದೇ ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದು ಇಬ್ಬಾಗ ಮಾಡಿ ಕುಂಚಿಟಿಗರಿಗೆ ಕೈ ಬಿಟ್ಟು ಹೋದ ಕೇಂದ್ರ ಓಬಿಸಿ ಮೀಸಲಾತಿ ಕೊಡಿಸುವ ನೆಪದಲ್ಲಿ ನಗರ ಕುಂಚಿಟಿಗರಿಗೆ ಕೇಂದ್ರ ಓಬಿಸಿ ಮೀಸಲಾತಿ ತಪ್ಪಿಸಿ ಗಾಯದ ಮೇಲೆ ಬರೆ ಎಳೆಯಲಾಗಿದೆ.ಇನ್ನು ಮುಂದೆ ನಗರ ಕುಂಚಿಟಿಗರಿಗೆ ಇಡಬ್ಲೂಎಸ್ ಮೀಸಲಾತಿ ಕೂಡ ಕೈ ಬಿಟ್ಟು ಹೋಗಿ ಜನರಲ್ ಮೆರಿಟ್ ನಲ್ಲಿ ಬರುತ್ತಾರೆ.ಇದಕ್ಕೆಲ್ಲ ಟಿ.ಬಿ.ಜಯಚಂದ್ರರವರು ನೇರ ಹೊಣೆ ಎಂದು ಕಸವನಹಳ್ಳಿ ರಮೇಶ್ ತಿಳಿಸಿದರು.
ರಾಜ್ಯ ಸರ್ಕಾರದ ಕರಾಳ ತೀರ್ಮಾನವನ್ನು ಕರ್ನಾಟಕ ರಾಜ್ಯದ 18 ಜಿಲ್ಲೆ 46 ತಾಲ್ಲೂಕುಗಳ ಕೇಂದ್ರ ಸ್ಥಾನದಲ್ಲಿ ವಾಸಿಸುವ ನಗರ ಕುಂಚಿಟಿಗರು ನಿಮ್ಮ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿರುವ ಕುಂಚಿಟಿಗ ಸಂಘ ಸಂಸ್ಥೆಗಳ ಮುಖಂಡರುಗಳನ್ನು ಸೇರಿಸಿ ಪತ್ರಿಕಾ ಗೋಷ್ಠಿ ಕರೆದು ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಗಾಗಿ ಒತ್ತಾಯ ಮಾಡಬೇಕೆಂದು ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್ ಮನವಿ ಮಾಡಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *