ಸಮಾಜದಲ್ಲಿ ಅಭಿವೃದ್ಧಿ ಪ್ರತಿಯೊಬ್ಬರಲ್ಲಿಯೂ ಆತ್ಮವಲೋಕನ ಅಗತ್ಯ: ಶ್ಯಾಮ್ ಪ್ರಸಾದ್

by | 07/11/23 | ಕಾನೂನು

ಮಡಿಕೇರಿ ನ.07 ಪ್ರಜಾಪ್ರಭುತ್ವದವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಅಭಿವೃದ್ಧಿಯ ಕನಸು ಕಾಣುತ್ತಾರೆ. ಆದರೆ ಸರ್ವಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳು ಆಗುತ್ತಿವೆಯೇ ಎಂಬ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಎಚ್.ಸಿ.ಶ್ಯಾಮ್ ಪ್ರಸಾದ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿ, ಜಿಲ್ಲಾಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಭಾರತ್ ಸ್ಕೌಟ್ಸ್ ಧ್ವಜ ದಿನಾಚರಣೆ ಪ್ರಯುಕ್ತ ಮಂಗಳವಾರ ಏರ್ಪಡಿಸಲಾಗಿದ್ದ ಬೃಹತ್ ಜಾಥಾಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ತಲುಪಿವೆಯೇ ಎಂಬ ಬಗ್ಗೆ ಆತ್ಮವಲೋಕನ ಮಾಡಬೇಕಿದೆ. ನಿಜವಾದ ಅಭಿವೃದ್ಧಿ ಕಾರ್ಯಗಳು ನಾಗರಿಕರಿಗೆ ತಲುಪುತ್ತಿವೆಯೇ ಎಂಬುದರ ಬಗ್ಗೆ ಯೋಚಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹೇಳಿದರು.
ಸಮಾಜದಲ್ಲಿ ಬಾಲಾಪರಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳನ್ನು ಬಾಲ್ಯ ವಿವಾಹಕ್ಕೆ ತಳ್ಳಲಾಗುತ್ತಿದೆ. ಗಾಂಜಾ ಪ್ರಕರಣಗಳು ವರದಿ ಆಗುತ್ತಿವೆ. ಇಂತಹ ವ್ಯವಸ್ಥೆ ಬಗ್ಗೆ ಸದಾ ಎಚ್ಚರ ವಹಿಸಬೇಕು ಎಂದು ಎಚ್.ಸಿ.ಶ್ಯಾಮ್ ಪ್ರಸಾದ್ ಅವರು ತಿಳಿಸಿದರು.
ಸಮಾಜದ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಜವಾಬ್ದಾರಿ ಅರಿತು ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಯಾರೂ ಸಹ ದ್ವಿಮುಖ ನೀತಿ ಅನುಸರಿಸಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಪ್ರತಿಪಾದಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ ಅವರು ಮಾತನಾಡಿ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಹೀಗೆ ಎಲ್ಲರ ಸಹಕಾರದೊಂದಿಗೆ ಭಾರತ್ ಸ್ಕೌಟ್ಸ್ ಧ್ವಜ ದಿನಾಚರಣೆ ಪ್ರಯುಕ್ತ ಮಾದಕ ವಸ್ತು ಬಳಕೆ ವಿರುದ್ಧ ಜಾಗೃತಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಕುರಿತು ಜಾಗೃತಿ, ಬಾಲ್ಯ ವಿವಾಹ ನಿಷೇಧ ಹೀಗೆ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನವೆಂಬರ್, 14 ರವರೆಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಕಾನೂನು ನೆರವು ಅಭಿರಕ್ಷಕರಾದ ಕೆ.ಆರ್.ವಿದ್ಯಾಧರ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ರಾಣಿ ಮಾಚಯ್ಯ, ಸ್ಥಾನಿಕ ಆಯುಕ್ತರಾದ ಎಚ್.ಆರ್.ಮುತ್ತಪ್ಪ, ತರಬೇತಿ ಆಯುಕ್ತರಾದ ಮೈಥಿಲಿ ರಾವ್, ಜಂಟಿ ಕಾರ್ಯದರ್ಶಿ ಬೊಳ್ಳಜ್ಜೀರ ಅಯ್ಯಪ್ಪ, ಸಗಾಯ ಮೇರಿ, ಸುಲೋಚನ, ಸಹ ಕಾರ್ಯದರ್ಶಿ ಕುಟ್ಟಪ್ಪ, ಜಿಲ್ಲಾ ಸಂಯೋಜಕರಾದ ದಮಯಂತಿ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಇತರರು ಇದ್ದರು.
ಜಾಥವು ಜಿಲ್ಲಾಡಳಿತ ಭವನದ ಆವರಣದಿಂದ ಹೊರಟು ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಇಂದಿರಾ ಗಾಂಧಿ ವೃತ್ತ ಬಳಿಕ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಮಾನವ ಸರಪಳಿ ಮಾಡಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್‍ನ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *