ಸಮಾಜಕ್ಕಾಗಿ ಬದುಕಿದವರು ನಾರಾಯಣ ಗುರುಗಳು*ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

by | 31/08/23 | ಸಾಮಾಜಿಕ

ಚಿತ್ರದುರ್ಗ ಆ.31:
ಕೇರಳದ ಬಸವಣ್ಣ ಎಂದೇ ಪ್ರಖ್ಯಾತಿ ಪಡೆದ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟವರು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ನಗರದ ಚಳ್ಳಕೆರೆ ರಸ್ತೆಯ ಆರ್ಯ ಈಡಿಗರ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ದೊಡ್ಡ ಮಾತನ್ನು ನಾವೆಲ್ಲರೂ ಪಾಲಿಸಬೇಕಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲಿ ಕೆಳಜಾತಿಯವರ ಮೇಲೆ ಆಗುತ್ತಿರುವ ದೌರ್ಜನ್ಯಗಳು, ಹೆಣ್ಣು ಮಕ್ಕಳ ಮೇಲೆ ವಿಧಿಸಿರುವ ನಿಬಂಧನೆಗಳನ್ನು ಅಹಿಂಸಾತ್ಮಕವಾಗಿ ವಿರೋಧಿಸಿ, ಮಾನವಕುಲ ಒಂದೇ ಎಂಬ ಸಿದ್ದಾಂತವನ್ನು ಸಮಾಜಕ್ಕೆ ನೀಡಿದವರು. ಇಂತಹ ಮಹನೀಯರ ವಿಚಾರಧಾರೆಗಳನ್ನು ಮುಂದಿನ ದಿನಗಳಲ್ಲಿ ಪಠ್ಯಪುಸ್ತಕದಲ್ಲಿ ಸೇರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಮಹನೀಯರ ಜಯಂತಿಗಳನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ನಾರಾಯಣ ಗುರುಗಳ ವಿಚಾರಧಾರೆಗಳಿಗೆ ಪ್ರತಿಯೊಬ್ಬರು ಆಕರ್ಷಿತರಾಗುತ್ತಾರೆ. ಅವರು ಮೌನಕ್ರಾಂತಿಯ ಮೂಲಕ ಸಮಾಜದ ಅರಿವು ಮತ್ತು ಉತ್ತಮ ಸಂದೇಶಗಳನ್ನು ನೀಡಿ, ಸಮಾಜವನ್ನು ಪರಿವರ್ತನೆಗೆ ತಂದವರು ನಾರಾಯಣಗುರುಗಳು ಎಂದರು.
ಅನಿಬೆಸೆಂಟ್ ಅವರು ಹೇಳುವಂತೆ ಬ್ರಹ್ಮಶ್ರೀ ನಾರಾಯಣಗುರುಗಳು ಯೋಗದಲ್ಲಿ ಪತಂಜಲಿಗೆ ಸರಿಸಮಾನರು, ಜ್ಞಾನದಲ್ಲಿ ಶಂಕರಾಚಾರ್ಯರಿಗೆ ಸರಿಸಮಾನರು, ಅದೇ ರೀತಿಯಾಗಿ ಮಾನವೀಯತೆಯಲ್ಲಿ ಏಸುಕ್ರಿಸ್ತರಿಗೆ ಸರಿಸಮಾನರು. ಅಷ್ಟೋಂದು ದೀರ್ಘಜ್ಞಾನ ಹೊಂದಿದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಸಾಮಾನ್ಯ ಮನುಷ್ಯರಾಗಿ ಜನ್ಮತಾಳಿ, ಸಂತ ಪದವಿಗೇರಿದವರು ನಾರಾಯಣಗುರುಗಳು ಎಂದರು.
ನಾರಾಯಣಗುರು ಅವರ ತತ್ವ ಮತ್ತು ವಿಚಾರಗಳನ್ನು ನಾವು ರೂಢಿಸಿಕೊಳ್ಳುವ ಮೂಲಕ ತಮ್ಮ ಮಕ್ಕಳಿಗೂ ತಿಳಿಸಬೇಕು. ಇಂತಹ ಮಹನೀಯರನ್ನು ಪಠ್ಯದ ಮೂಲಕ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಎಸ್‍ಆರ್‍ಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಈ. ಗಂಗಾಧರ್ ಉಪನ್ಯಾಸ ನೀಡಿ, ನಾರಾಯಣಗುರುಗಳು ಸಾಮಾಜಿಕ ಕಾಳಜಿಯುಳ್ಳವರಾಗಿದ್ದವರು. ಸಮಾಜದ ಅನಿಷ್ಠ ಪದ್ಧತಿ, ತಾರತಮ್ಯ, ಮೂಢನಂಬಿಕೆ, ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ್ದರು. ಶೋಷಣೆಯ ವಿರುದ್ಧ ಹಲವಾರು ಹೋರಾಟಗಳನ್ನು ನಡೆಸಿದರು ಎಂದು ಹೇಳಿದ ಅವರು, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಆರ್.ದಿಶಾ ವಿದ್ಯಾರ್ಥಿನಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ್, ಆರ್ಯ ಈಡಿಗರ ಸಮಾಜದ ಜಿಲ್ಲಾ ಅಧ್ಯಕ್ಷ ಹೆಚ್.ಜೀವನ್, ಕಾರ್ಯದರ್ಶಿ ಟಿ.ಮಂಜುನಾಥ್, ನಗರಸಭೆ ಸದಸ್ಯೆ ಅನುರಾಧ ರವಿಕುಮಾರ್, ಚಿತ್ರದುರ್ಗ ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಚಳ್ಳಕೆರೆ ತಾಲ್ಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *