ಶ್ರೀಕೃಷ್ಣ ಭಗವಂತ ಸಕಲರಿಂದ ಪೂಜನೀಯ -ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

by | 06/09/23 | ಚರಿತ್ರೆ


ಚಿತ್ರದುರ್ಗ ಸೆ.06:
ಶ್ರೀಕೃಷ್ಣ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಶೂದ್ರ ಕುಲದಲ್ಲಿ ಹುಟ್ಟಿದರೂ ಬ್ರಾಹ್ಮಣರಾದಿಯಾಗಿ ಸಕಲ ಜನರಿಂದಲೂ ಶ್ರೀಕೃಷ್ಣ ಭಗವಂತ ಪೂಜನೀಯವಾಗಿದ್ದಾನೆ. ಶ್ರೀ ಕೃಷ್ಣ ಗೀತಸಾರ ಪ್ರತಿಯೊಬ್ಬರ ಜೀವನಕ್ಕೂ ದಾರಿ ದೀಪವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಆಯೋಜಿಸಲಾದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಈಗಲೂ ಮೌಢ್ಯ, ಕಂದಾಚಾರಗಳು ಮನೆ ಮಾಡಿವೆ. ಇವುಗಳಿಂದ ಹೊರಬರಬೇಕು. ವಿಜ್ಞಾನ ಹಾಗೂ ನಾಗರಿಕತೆ ಇಂದು ಬಹಳಷ್ಟು ಮುಂದುವರೆದಿದೆ. ಯಾದವ ಸಮುದಾಯದವರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಮುದಾಯ ಪ್ರಬಲವಾಗಬೇಕು. ಹಳೆಯ ಮೌಢ್ಯಗಳ ಪಾಲನೆ ಬಿಡಬೇಕು. ಶುಚ್ಚಿತ್ವ ಕಾಪಾಡಿಕೊಳ್ಳಬೇಕು. ಯಾರೊಬ್ಬರು ಇಂತಹದೇ ಜಾತಿ ಹುಟ್ಟಬೇಕು ಎಂದು ಅರ್ಜಿಹಾಕಿ ಜನಿಸುವುದಿಲ್ಲ. ಹುಟ್ಟು ಆಕಸ್ಮಿಕ. ಬಡತನದಲ್ಲಿ ಹುಟ್ಟಿದವರು ತಮ್ಮ ಸ್ಥಿತಿಯನ್ನು ಮೀರಿ ಉತ್ತಮ ಸ್ಥಾನಮಾನಗಳಿಸಬಹುದು. ಇದಕ್ಕೆ ಶಿಕ್ಷಣ ಹಾಗೂ ಕಷ್ಟಪಟ್ಟು ದುಡಿಯುವ ಮನಸ್ಸಿರಬೇಕು ಎಂದರು.
ಶ್ರೀಕೃಷ್ಣ ಎಲ್ಲಾ ವರ್ಗದ ಜನರನ್ನು ಪ್ರೀತಿಯಿಂದ ಕಂಡಿರುವ ಕುರಿತು ಪುರಾಣಗಳಲ್ಲಿ ಉಲ್ಲೇಖವಿದೆ. ಸಕಲ ಜನರನ್ನು ಪ್ರೀತಿಸಬೇಕು. ಸಕಲ ಜೀವಾತ್ಮಗಳಿಗೂ ಲೇಸು ಬಯಸಬೇಕು. ಮುಂದಿನ ವರ್ಷದಲ್ಲಿ ಶ್ರೀಕೃಷ್ಣ ಜಯಂತಿಯನ್ನು ವೇಷಭೂಷಣ, ಚಿತ್ರಕಲಾ, ಲೇಖನ ಸ್ಪರ್ಧೆಗಳನ್ನು ಆಯೋಜಿಸಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ಸಾಹಿತಿ ಎಸ್.ಆನಂದ ಉನ್ಯಾಸ ನೀಡಿ, ಪುರಾಣಗಳ ಪ್ರಕಾರ ಶ್ರೀಕೃಷ್ಣ ಅಹಿರ ಜನಾಂಗದಲ್ಲಿ ಹುಟ್ಟಿದ್ದಾನೆ. ಸದಾ ಪ್ರಕೃತಿಯೊಂದಿಗೆ ಕೃಷ್ಣ ಬೆರೆಯುತ್ತಿದ್ದ. ಅಂದಿನ ಜಾತಿ ಸಮಾಜವನ್ನೂ ಮೀರಿ ಎಲ್ಲಾ ಜನರನ್ನು ಸಮಚಿತ್ತದಿಂದ ನೋಡಿದ. ಹಿಂದುಳಿದ ಜಾಂಬವಂತನ ಮಗಳನ್ನು ಮದುವೆಯಾದ. ಎಲ್ಲಾ ಕಳೆದಕೊಂಡು ಇಲ್ಲದವರಾಗಿದ್ದ ಪಾಂಡವರ ಪರ ನಿಂತು ಕುರುಕ್ಷೇತ್ರದಲ್ಲಿ ಜಯ ತಂದಿತ್ತ. ದೇಹ ಹಾಗೂ ಆತ್ಮದ ಕುರಿತು ಕೃಷ್ಣ ನೀಡಿದ ಸಂದೇಶ ಇಂದಿಗೂ ಸತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ರಂಗನಾಥ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಯಾದವ ಸಮುದಾಯ ಪ್ರಧಾನ ಕಾರ್ಯದರ್ಶಿ ಆನಂದ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮೀಕಾಂತ ಸೇರಿದಂತೆ ಸಮುದಾಯದ ಮುಖಂಡರಾದ ಆರ್.ಕೃಷ್ಣಪ್ಪ, ಬಿ.ಪಿ.ಪ್ರಕಾಶ್, ಸಿ.ವೀರಭದ್ರಪ್ಪ, ಸುಧಾಕರ್, ಧನಂಜಯ, ಹೊನ್ನೂರು ತಿಮ್ಮಪ್ಪ, ಈಶ್ವರಪ್ಪ, ಡಿ.ಜೆ.ಗೋವಿಂದಪ್ಪ, ಟಿ.ತಿಮ್ಮಪ್ಪ, ನಾಗೇಂದ್ರಪ್ಪ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಸ್ವಾಗತಿಸಿದರು. ರಂಗನಿರ್ದೇಶಕ ಕೆ.ಪಿ.ಗಣೇಶಯ್ಯ ನಿರೂಪಿಸಿದರು. ಚಳ್ಳಕೆರೆಯ ಮುತ್ತುರಾಜ್ ತಂಡ ಗೀತಗಾಯನ ನಡೆಸಿಕೊಟ್ಟರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *