ವೃತ್ತಿ ಮಾತ್ಸರ್ಯವೋ…ಪ್ರಚಾರದ ಅಮಲೋ..? ಪ್ರಕಾಶ್ ಹಿರಿಯೂರು

by | 20/02/23 | ವಿಶ್ಲೇಷಣೆ, ವೈರಲ್

ವೃತ್ತಿ ಮಾತ್ಸರ್ಯವೋ…ಪ್ರಚಾರದ ಅಮಲೋ..? ಸಾಮಾಜಿಕ ಜಾಲತಾಣದ ಮುಖಪುಟದ ವೈರಲ್
************
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆಸುವುದು ಚುನಾವಣೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಾದರೂ, ಸರ್ಕಾರದ ಆಡಳಿತದ ಎಂಜಿನ್ ಇರೋದು ಕಾರ್ಯಾಂಗದ ಬ್ಯೂರೋಕ್ರೆಸಿಯ ಕೈಯಲ್ಲಿಯೇ ! ಅದರಲ್ಲೂ ಮುಖ್ಯವಾಗಿ IAS ಮತ್ತು IPS ಗಳದ್ದೇ ಇಲ್ಲಿ ಕಾರುಬಾರು. ನಾಗರಿಕ ಸೇವಾ ಅಧಿಕಾರಿಗಳು ದಕ್ಷರು, ಸೇವಾ ಮನೋಭಾವ ಉಳ್ಳವರು ಹಾಗೂ ಸಾಮಾನ್ಯ ಜನರ ನೋವಿಗೆ ದನಿಯಾಗುವವರೂ ಆಗಿದ್ದಲ್ಲಿ ನಿಸ್ಸಂಶಯವಾಗಿ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದೇ ಬರುತ್ತದೆ. ಒಂದೊಮ್ಮೆ ಬ್ಯೂರೋಕ್ರೆಸಿಯಲ್ಲಿ ಮಾನವೀಯ ಅಂತಃಕರಣವಿಲ್ಲದ , ಜನರ ಭಾವನೆಗಳಿಗೆ ಸ್ಪಂದಿಸದ ಅಥವಾ ಎಲ್ಲದರಲ್ಲೂ ವಿವಾದವೆಬ್ಬಿಸುವ ಸ್ವಪ್ರತಿಷ್ಠೆಯ ಅಧಿಕಾರಿಗಳೇ ತುಂಬಿದ್ದಲ್ಲಿ ಶಾಸಕಾಂಗ ಎಷ್ಟೇ ಪ್ರಬಲವಾಗಿದ್ದರೂ ಸರ್ಕಾರಕ್ಕೆ ಕೆಟ್ಟ ಹೆಸರು ಗ್ಯಾರಂಟೀ ! ಇದು ಡೆಮೊಕ್ರೆಸಿಯ ಮೇಲಿನ ಬ್ಯೂರೋಕ್ರೆಸಿಯ ಹಿಡಿತದ ಒಂದು ಝಲಕ್.

ಕಳೆದ ವರ್ಷವಷ್ಟೇ ಮೈಸೂರಿನ ಜಿಲ್ಲಾಧಿಕಾರಿ ಯಾಗಿದ್ದ ಶ್ರೀಮತಿ ರೋಹಿಣಿ ಸಿಂಧೂರಿ ಹಾಗೂ ಆಯುಕ್ತರಾಗಿದ್ದ ಶ್ರೀಮತಿ ಶಿಲ್ಪಾನಾಗ್ ಎಂಬ ಇಬ್ಬರು ಮಹಿಳಾ ಐ.ಎ.ಎಸ್ ಅಧಿಕಾರಿಗಳ ನಡುವಿನ ಅಂತರ್ಯುದ್ಧ ರಾಜ್ಯಾದ್ಯಂತ ಬೇಡದ ಕಾರಣಕ್ಕೆ ಸುದ್ದಿಮಾಡಿ ಜನರ ಗಮನ ಸೆಳೆದು ಕೊನೆಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಅದನ್ನು ಬಗೆಹರಿಸುವಂತಹ ಸೆನ್ಸಿಟೀವ್ ಸೀನ್‌ ಕ್ರಿಯೇಟ್ ಆಗಿತ್ತು. ಈಗ ಅದೇ ಮಹಿಳಾ ಅಧಿಕಾರಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈಗಿನ ಬಹಿರಂಗ ಯುದ್ಧದಲ್ಲಿ ರೋಹಿಣಿ ವಿರುದ್ಧ ಕತ್ತಿ‌ಗುರಾಣಿ ಹಿಡಿದಿರುವವರು ರೂಪಾ ಮೌದ್ಗಿಲ್ ಎಂಬ ಐಪಿಎಸ್ ಅಧಿಕಾರಿ.

ಈ ಇಬ್ಬರು ಸ್ಮಾರ್ಟ್ ಅಧಿಕಾರಿಗಳ ಶೀತಲ ಸಮರ ಆಡಳಿತಾತ್ಮಕ ಕಾರಣಕ್ಕೆ ಸುದ್ದಿಯಾಗಿದ್ದಲ್ಲಿ ಅದು ರಾಜ್ಯದ ಸಾಮಾನ್ಯಜನರ ಗಮನವನ್ನು ಅಷ್ಟಾಗಿ ಸೆಳೆಯುತ್ತಿರಲಿಲ್ಲ. ಆದರೆ ಇಲ್ಲಿ ವೈಯಕ್ತಿಕ ಕಾರಣ ಹಾಗೂ ವೃತ್ತಿ ಮಾತ್ಸರ್ಯದ ಸೋಂಕು ಎರಡೂ ಲಿಂಕ್ ಆಗಿ ಸಿಂಧೂರಿಯವರ ಸುತ್ತ ನಡೆದಿದೆಯೆನ್ನಲಾದ ಅನೇಕ ಹಳೆಯ ವರ್ಣರಂಜಿತ ಘಟನಾವಳಿಗಳಿಗೆ ಸ್ಪೈಸೀ ಟಚ್ ಕೊಟ್ಟು ಇಂತಹಾ ಸುದ್ದಿಗಳಿಗಾಗಿಯೇ ಬಕಪಕ್ಷಿಗಳಂತೆ ಕಾದು ಕೂತಿರುವ ಮಾಧ್ಯಮಗಳಿಗೆ ಮಟನ್ ಬಿರಿಯಾನಿ ಕೊಟ್ಟಂತಿದೆ !

ಈ ಹಿಂದೆ ರೋಹಿಣಿ ಸಿಂಧೂರಿಯವರು ಜೆಡಿಎಸ್ ಶಾಸಕರೊಬ್ಬರ ಆಸ್ತಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಬಹಿರಂಗವಾಗಿ ಫ಼ೈಟ್ ಮಾಡಿದ್ದು ಜಗಜ್ಜಾಹೀರಾಗಿತ್ತು. ಈಗ ಅದೇ ಶಾಸಕರೊಂದಿಗೆ ಈಯಮ್ಮ ಸಂಧಾನಕ್ಕಾಗಿ ಮುಂದಾಗಿರುವ ವಿಚಾರವನ್ನು ಹಿಡಿದುಕೊಂಡು ರೂಪಾ ಮೌದ್ಗಿಲ್ ರವರು ರೋಹಿಣಿಯವರ ವಿರುದ್ಧ ನಿನ್ನೆಯಿಂದ ತಮ್ಮ ಫ಼ೇಸ್ ಬುಕ್ ನಲ್ಲಿ ಸರಣಿಯೋಪಾದಿಯಲ್ಲಿ ಆಪಾದನೆಗಳ ರೂಪದ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಅವರ ಕೆಲವು ಖಾಸಗೀ ಭಾವಚಿತ್ರಗಳನ್ನೂ ಅಪ್ ಲೋಡ್ ಮಾಡಿ, ಆಡಳಿತಾತ್ಮಕ ವಿಚಾರದ ಜೊತೆಗೆ ನೈತಿಕತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನೂ ಎತ್ತಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ಧ ರೂಪಾರವರು ಎತ್ತಿರುವ ಪ್ರಶ್ನೆಗಳು, ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನೇಕ ಮಾಹಿತಿಗಳು , ಫೋಟೋಗಳು, ವೈಯಕ್ತಿಕ ವಿಚಾರ…. ಇತ್ಯಾದಿಗಳು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಎನ್ನುವ ಚರ್ಚೆ ರಾಜ್ಯದಲ್ಲಿ ಸಧ್ಯದ ಹಾಟ್ ಡಿಬೇಟ್ ಟಾಪಿಕ್ಕು ! ಈ ವಿಷಯದಲ್ಲಿ ರೂಪಾರವರ ವೇಗ ಆವೇಗ ಹಾಗೂ ಭಾವೋದ್ವೇಗವೆಲ್ಲವನ್ನೂ ನೋಡಿದರೆ ಸಿಂಧೂರಿಯವರ ವಿರುದ್ಧ ಯಾವುದೇ ರೀತಿಯ ಕಾನೂನು‌ ಹೋರಾಟಕ್ಕೂ ತಾನು ರೆಡಿ ಎನ್ನುವ ಸೂಚನೆಯನ್ನು ಕೊಟ್ಟೇ ಆತ್ಮವಿಶ್ವಾಸದಿಂದ ಮುಂದಡಿಯಿಟ್ಟಿದ್ದಾರೆ.

ಈ ಹಿಂದೆ ಡಿ.ಕೆ ರವಿ ಎಂಬ ಐ ಎ ಎಸ್ ಅಧಿಕಾರಿಯ ಆತ್ಮಹತ್ಯೆಯ ಎಪಿಸೋಡು, ರೋಹಿಣಿಯವರು ಮೈಸೂರಿನ ಜಿಲ್ಲಾಧಿಕಾರಿಯಾಗಿ ನಡೆಸಿದ ದರ್ಬಾರು, ಕೊರೋನಾ ಕಾಲದಲ್ಲಿ ಜನ ಸಾಯುತ್ತಿದ್ದರೆ ಇವರು ಲಕ್ಷಗಟ್ಟಲೆ ಖರ್ಚುಮಾಡಿ ತಮ್ಮ ಡಿ.ಸಿ ಬಂಗಲೆಯನ್ನು ನವೀಕರಣ‌ಮಾಡಿಸಿಕೊಂಡಿದ್ದು, ಈಜುಕೊಳ ಕಟ್ಟಿಸಿದ್ದು, ಚಾಮರಾಜನಗರದಲ್ಲಿ ಆಕ್ಸಿಜನ್ ಕೊರೆತೆಯಿಂದ ಜನ ಸತ್ತಿದ್ದಕ್ಕೂ ಕಾರಣರಾಗಿದ್ದು, ಮೈಸೂರಿನ ಜಿಲ್ಲಾಧಿಕಾರಿಯಾಗಿ ರಿಪೋರ್ಟ್ ಮಾಡಿಕೊಂಡ ತಿಂಗಳೊಳಗೇ ಕನ್ನಡಿಗ ಶರತ್ ರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಬಂದಿದ್ದು, ಸರ್ಕಾರದ ಮಟ್ಟದಲ್ಲಿ ಅಪಾರ ಪ್ರಭಾವ ಹೊಂದಿರುವುದು , ಕುಟುಂಬದ ಹೆಸರಲ್ಲಿ ಕೋಟಿಗಟ್ಟಲೆ ಆಸ್ತಿ ಮಾಡಿಕೊಂಡಿರುವುದು…ಇವೇ ಮೊದಲಾದ ಹತ್ತೊಂಭತ್ತು ಆರೋಪಗಳ ಸುರಿಮಳೆಯನ್ನೇ ರೋಹಿಣಿಯವರ ವಿರುದ್ಧ ರೂಪಾ ಮೌದ್ಗಿಲ್ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸುರಿಸಿರುತ್ತಾರೆ.

ಈ ಎಲ್ಲಾ ಆರೋಪಗಳಿಗೂ ಗರಂ ಆಗಿರುವ ರೋಹಿಣಿ, ರೂಪಾರನ್ನು ಮಾನಸಿಕ ಸ್ಥಿಮಿತ ಕಳೆದು ಕೊಂಡಿದ್ದಾರೆಂದೂ ತಿರುಗೇಟು ನೀಡಿ ಅವರ ವಿರುದ್ದ ಕಾನೂನು ಸಮರಕ್ಕೆ ಮುಂದಾಗುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಅದಾವುದಕ್ಕೂ ಕೇರ್ ಮಾಡದ ರೂಪಾ ಮೌದ್ಗಿಲ್ , ಸಿಂಧೂರಿಯವರ ಮತ್ತಷ್ಟು ಹಸಿಹಸಿ ಕರ್ಮಕಾಂಡಗಳನ್ನು ಬಯಲಿಗೆಳೆಯುವುದಾಗಿ ಆಕ್ರೋಶ ಹೊರಹಾಕಿದ್ದಾರೆ…!

ಇದು ಯಾಕೋ ನೆವರ್ ಎಂಡಿಂಗ್ ಅನಿಸುತ್ತಿದೆ.

ಭಾರತೀಯ ನಾಗರಿಕ ಸೇವಾ ಅಧಿಕಾರಿಗಳಿಬ್ಬರ ಈ ಆರೋಪ ಪ್ರತ್ಯಾರೋಪಗಳಿಂದ ಕರುನಾಡಿನ‌ ನಾಗರಿಕರಿಗೆ ಪುಕ್ಕಟ್ಟೆ ಮನರಂಜನೆ ಹಾಗೂ ಮಾಧ್ಯಮಗಳಿಗೆ ಅದರಲ್ಲೂ ಡಿಜಿಟಲ್ ಮಾಧ್ಯಮಗಳಿಗೆ ಫ಼ುಲ್ ಮೀಲ್ಸ್ ಸಿಕ್ಕಂತಾಗಿ ಕಲರ್ ಫ಼ುಲ್ ಕಾಂಟ್ರೋವರ್ಸಿಯಲ್ಲಿ ಕರುನಾಡು ರಂಗೇರುವಂತೆ ಮಾಡಿದೆ. ನಮ್ಮ ಜನರೂ ಸಹ ಈ ಇಬ್ಬರು ಅಧಿಕಾರಿಗಳ ಎಪಿಸೋಡನ್ನು ಅವರದೇ ಆದ ರೀತಿಯಲ್ಲಿ ಚರ್ಚಿಸುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ.

ಆದರೆ ಇದು ನಾಗರಿಕ ಸೇವಾ ಅಧಿಕಾರಿಗಳ ಲೆವೆಲ್ಲಿಗೆ ತರವಲ್ಲದ ನಡೆಯೆಂದು ಸಂಬಂಧಿಸಿದವರಿಗೆ ಇನ್ನೂ
ಅನಿಸುತ್ತಿಲ್ಲವೇ..?? ಹಾಗಾದರೆ ಈ ತರಹದ ಎಪಿಸೋಡುಗಳಿಗೆ ಏನು ಕಾರಣ ?

ನಮ್ಮ ಕೆಲವು ಐ.ಎ.ಎಸ್ ಅಧಿಕಾರಿಗಳಿಗೆ ತಾವು ಮಾಡಿದ್ದೆಲ್ಲವೂ ಯೆಸ್ ಎನ್ನುವ ಪಿತ್ಥ‌ ಸದಾ ನೆತ್ತಿಯ ಮೇಲೆ ಕೂರಿರುತ್ತೆ. ಹೀಗಾಗಿಯೇ ಅಧಿಕಾರವೆನ್ನುವುದು ಜನಸೇವೆಗೆ ಸಿಕ್ಕ ಅವಕಾಶವೆಂದು‌ ಭಾವಿಸದೇ ಅದು ಜನರನ್ನು ಆಳಲು , ಪವರ್ ಚಲಾಯಿಸಲು , ಭ್ರಷ್ಟಾಚಾರದಲ್ಲಿ ಮುಳುಗೇಳಲು ಸಿಕ್ಕ ಸುವರ್ಣ ಅವಕಾಶದಂತೆ ಇಂಥವರು ಭ್ರಮಿಸುತ್ತಾರೆ. ಈ ಐಲುಗಳ ಜೊತೆಗೆ ಪ್ರಚಾರದ ಅಮಲು ಸಹಾ ಸೇರಿಕೊಂಡಲ್ಲಿ ಅಲ್ಲಿಗೆ ಮುಗೀತು ! ಇವರನ್ನು ಕಂಟ್ರೋಲ್ ಮಾಡಲು ಯಾರಿಗೂ ಆಗೋಲ್ಲ. ಹೀಗಾಗಿಯೇ ತಮ್ಮ ದಿನನಿತ್ಯದ ಆಗುಹೋಗುಗಳ ಬಗೆಗೆ ರನ್ನಿಂಗ್ ಕಾಮೆಂಟರಿ ಮಾಡುವಂತಹ ವಂಧಿಮಾಗಧ ಮಾಧ್ಯಮದವರನ್ನು ಇಟ್ಟುಕೊಂಡು ತಮ್ಮ ಅನೇಕಾನೇಕ ಒಣ ಸಾಧನೆಗಳ ಹಸಿ‌ವಿಡಿಯೋಗಳನ್ನು, ಸಿಂಗಂ ರೀತಿಯ ಭಂಗಿಗಳನ್ನೂ ಅಬ್ಬರದ ಪ್ರಚಾರಕ್ಕೆ ಉಪಯೋಗಿಸಿಕೊಂಡು ತಾನೊಬ್ಬ ದಕ್ಷ ಜನನಾಯಕ ಎಂದೋ ಅಥವಾ ಡೇರ್ ಅಂಡ್ ಡೆವಿಲ್ ಹೀರೋ ಎಂದೋ ಬಿಂಬಿಸಿಕೊಳ್ಳುತ್ತಲೇ ಗಮನ ಸೆಳೆಯುತ್ತಾರೆ. ಈ ಪ್ರಚಾರದ ಹುಚ್ಚು ಒಮ್ಮೊಮ್ಮೆ ಇವರಿಂದ ಮಾಡಬಾರದ ಕೆಲಸಗಳನ್ನೂ ಮಾಡಿಸಿಬಿಡುತ್ತೆ.

ಈ ಇಬ್ಬರು ಮಹಿಳಾ ಅಧಿಕಾರಿಗಳ ವಿಚಾರದಲ್ಲಿಯೂ ಪ್ರಚಾರದ ಮೈಲೇಜ್ ನ ಹೊಳಹು ಸಾಕಷ್ಟಿದೆಯೆಂಬುದು ಮೇಲ್ನೋಟಕ್ಕೆ ಕಣ್ಣಿಗೆ ರಾಚುತ್ತದೆ.

ಸರ್ಕಾರದ ಸೇವಾ ನಿಯಮಗಳಡಿಯಲ್ಲಿ ರೂಪಾ ಮೌದ್ಗಿಲ್ ರವರ ವರ್ತನೆ ಎಷ್ಟರಮಟ್ಟಿಗೆ ಸಹನೀಯ ಎಂಬುದು ಇತರರಿಗಿಂತ ಅವರಿಗೇ ಚೆನ್ನಾಗಿ ಗೊತ್ತು. ಒಬ್ಬ ದಕ್ಷ ಅಧಿಕಾರಿಣಿಯಾಗಿ ಹೆಸರು ಮಾಡಿರುವ ಅವರಿಗೆ ಯಾವ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು- ಬಾರದು ಎಂಬುದರ ಸಂಪೂರ್ಣ ಅರಿವು ಇದ್ದೇ ಇರುತ್ತದೆ. ಅದರಲ್ಲೂ ಮತ್ತೊಬ್ಬ ಮಹಿಳಾ ಅಧಿಕಾರಿಯ ವೈಯಕ್ತಿಕ ಫೋಟೋಗಳನ್ನೂ ತಮ್ಮ ಫ಼ೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಪ್ರಶ್ನೆಗಳನ್ನು ಕೇಳಿರುವುದು ನೈತಿಕವಾಗಿ ಸರಿಯಲ್ಲವಾದರೂ ಇದರ ಹಿಂದೆ ಬಲವಾದ ಉದ್ದೇಶವಂತೂ ಇದ್ದೇ ಇದೆ. ಇದು ಒಂದು ಬ್ಯೂರೋಕ್ರೆಟಿಕ್ ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣ ಮಾಡಿದಲ್ಲಿ ಮಾತ್ರ ಅವರ ಉದ್ದೇಶವನ್ನು ಸಹ್ಯ ಎನ್ನಬಹುದು. ಇಲ್ಲವಾದಲ್ಲಿ ಇದು ವೃತ್ತಿ ಮಾತ್ಸರ್ಯದ ಸಂಕೇತಗಳಂತೆಯೂ ತೋರಿ , ರೋಹಿಣಿಯವರ ತೇಜೋವಧೆಗಾಗಿ ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪರ್ಯಾವಸನಗೊಳ್ಳಲೂ ಬಹುದು.

ರೂಪಾ ಮೌದ್ಗಿಲ್ ರವರು ರೋಹಿಣಿಯವರಿಗೆ ಬಹಿರಂಗವಾಗಿ ಕೇಳಿರುವ ಅನೇಕ ಆಡಳಿತಾತ್ಮಕ ಹಾಗೂ ವೈಯಕ್ತಿಕ ಪ್ರಶ್ನೆಗಳಿಗೆ ಅದೇ ಮಾದರಿಯಲ್ಲೇ ಅವರು ಉತ್ತರಿಸಿದ್ದರೆ ಚೆನ್ನಾಗಿರುತ್ತಿತ್ತು. ಇದರಿಂದ ಒಂದು ವ್ಯವಸ್ಥೆಯ ಹಿನ್ನೆಲೆಯಲ್ಲಿ ಏನೆಲ್ಲಾ ರಂಪ ರಾಮಾಯಣಗಳು ಅಡಗಿರಬಲ್ಲವೆಂಬ ಸಹಜ ಕುತೂಹಲಕ್ಕೆ ಬ್ರೇಕ್ ಬೀಳುತ್ತಿತ್ತು. ರೂಪಾರವರ ಯಾವ ಪ್ರಶ್ನೆಗಳಿಗೂ ರೋಹಿಣಿಯವರ ಉತ್ತರಗಳಲ್ಲಿ ಮುಚ್ಚಿಡುವಂಥಾದ್ದೇನಿರಲಾರದು. ಹೀಗಾಗಿ ಅವುಗಳಿಗೆ ದಾಖಲೆ ಸಹಿತ ಸಾಮಾಜಿಕ ಜಾಲತಾಣದಲ್ಲೇ ಪ್ರತ್ಯುತ್ತರ ನೀಡಿದ್ದಲ್ಲಿ ಜೊಳ್ಳಾವುದು- ಗಟ್ಟಿ ಯಾವುದು ಎಂಬ ನಿರ್ಧಾರವನ್ನು ಜನರೇ ಮಾಡುತ್ತಿದ್ದರು.

ಏನೇ ಆಗಲಿ, IAS, IPS ಗಳೆಂದರೆ ದೇವಮಾನವರಲ್ಲ, ಅವರೂ ಸಹ ಹೀಗೆಲ್ಲಾ ಗೋಲಿ, ಕುಂಟೆಬಿಲ್ಲೆ ಆಡುವ ಮಕ್ಕಳ ಲೆವೆಲ್ಲಿಗೂ ಹೋಗಿ ಬಹಿರಂಗವಾಗಿ ಕಿತ್ತಾಡಬಹುದೆಂಬ ಸತ್ಕೀರ್ತಿಯನ್ನು ಸರಳವಾಗಿ ತೋರಿಸಿಕೊಟ್ಟ ನಮ್ಮ ಮಹಿಳಾ ಅಧಿಕಾರಿಗಳಿಗೆ ಅಭಿನಂದನೆಗಳು. ಏಕೆಂದರೆ ಹಣ, ಅಸೂಯೆ, ಮಾತ್ಸರ್ಯ, ಪ್ರಚಾರ, ಹೆಸರು ಹಾಗೂ ಶ್ರೇಷ್ಠತೆಯ ವ್ಯಸನಗಳಿಗೆ ಅತೀತರು ಭೂಲೋಕದಲ್ಲಿ ಯಾರಾದರೂ ಇದ್ದಾರೆಯೇ…?

ಅದರಲ್ಲೂ….ಎರಡು ಜಡೆಗಳು…?

** ಮರೆಯುವ ಮುನ್ನ **

ನಮ್ಮ ವೈಯಕ್ತಿಕ ಗುಣ- ಸ್ವಭಾವಗಳೇನೇ ಇರಲಿ , ನಾವು ಏನೇ ಓದಿರಲಿ, ಒಂದು ಹುದ್ದೆ, ಒಂದು ಸ್ಥಾನಮಾನದಲ್ಲಿ ಅಂತ ಇದ್ದಾಗ ಅದರ ಗೌರವ ಕಾಪಾಡಿಕೊಂಡು ಬರುವುದು ಅದನ್ನು ವಹಿಸಿಕೊಂಡವರ ಆದ್ಯ ಕರ್ತವ್ಯವಾಗಬೇಕಿತ್ತು. ತಮ್ಮ ನಡೆ ನುಡಿಗಳನ್ನು ಜನಸಾಮಾನ್ಯರು ಗಮನಿಸುತ್ತಿದ್ದಾರೆಂಬ ಕನಿಷ್ಠ ಕನ್ಸರ್ನ್ ಇಂಥವರಲ್ಲಿ ಇರಬೇಕಿತ್ತು. ತಮ್ಮ ದಕ್ಷ ಆಡಳಿತದ ನಡೆಯಿಂದ ಇತರರಿಗೆ ಮಾದರಿಯಾಗಬೇಕಿತ್ತು. ಕಾನೂನು‌ ಹೋರಾಟಕ್ಕೆ ಅದರದ್ದೇ ಆದ ಮಾರ್ಗವಿದೆ ಎಂಬ ಯಃಕಿಂಚಿತ್ ಅರಿವಿರಬೇಕಿತ್ತು,

ಒಬ್ಬ ಅಧಿಕಾರಿಗೆ ತಾವಿರುವ ಹುದ್ದೆಯ ಮೂಲಕ ಜನ ಸಾಮಾನ್ಯರ ಬದುಕನ್ನು ಹಸನು‌ ಮಾಡಲು, ಸಾಮಾಜಿಕ ಪರಿವರ್ತನೆ ತರಲು ತಾನೇನು ಮಾಡಬಲ್ಲೆ ಎಂಬ ಪ್ರಾಮಾಣಿಕ ಕಾಳಜಿ ಮುಖ್ಯವೇ ಹೊರತು ತಾನು ನೋಡಲು ಎಷ್ಟು ಸುಂದರವಾಗಿದ್ದೇನೆ, ತಾನೆಂತಹಾ ಬಂಗಲೆ, ಕಾರು, ಬೆಲೆಬಾಳುವ ವಸ್ತುಗಳನ್ನು ಉಪಯೋಗಿಸುತ್ತಿದ್ದೇನೆ ಅಥವಾ ತನಗೆಷ್ಟು ಮಂದಿ ತಾವಾಗಿಯೇ ಮುಗಿಬಿದ್ದು ಪ್ರಚಾರ ಕೊಡುತ್ತಾರೆ ಎಂಬುದು ತಲೆ ತಿರುಗಿಸುವಂತಾಗಬಾರದು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕಾರ್ಯಾಂಗದ ಎಂಜಿನ್ನುಗಳಿಗೆ ತಮಗೆ ಅಧಿಕಾರ ಸಿಕ್ಕಿರೋದು ಜನಸೇವೆಗಾಗಿ ಹಾಗೂ ತಾನು ಪಬ್ಲಿಕ್ ಸರ್ವೆಂಟೇ ಹೊರತು ಪಬ್ಲಿಕ್ ರೂಲರ್ ಅಲ್ಲ , ತನ್ನ ವರ್ತನೆಯ ಮೇಲೆ ಸರ್ಕಾರದ ಇಮೇಜೂ ಅಡಗಿದೆ…. ಎಂಬ ಕಾಮನ್ ಸೆನ್ಸ್ ಇಲ್ಲದೇ ಹೋದಲ್ಲಿ ಈ ತರಹದ ಅವಘಡಗಳು ಕಾಮನ್. ಅದರಲ್ಲೂ ಇಂದಿನ ಬಹುತೇಕ ನಾಗರಿಕ ಸೇವಾ ಅಧಿಕಾರಿಗಳಲ್ಲಿ ಪವರ್ ನಲ್ಲಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಮಿಂಚುವ, ಆನಂತರ ರಾಜಕೀಯದ ಆಕರ್ಷಣೆಗೆ ಒಳಗಾಗಿ ಅದರತ್ತ ಮುಖಮಾಡುವ ಸ್ವಕೇಂದ್ರೀಕೃತ ಮೆಂಟಾಲಿಟಿ ಹೆಚ್ಚಾಗುತ್ತಿರುವುದೂ ಇಂತಹ ಘಟನೆಗಳಿಗೆ ಪರೋಕ್ಷ ಕಾರಣ.

ಬಹುಶಃ ಈ ತರಹದ ವಿಚಿತ್ರ ಕ್ರೇಜ಼ು, ಪಬ್ಲಿಸಿಟಿಯ ಮೋಜು ಸಿಂಧೂರಿಯವರಂತಹ ಪ್ರಚಾರ ಪ್ರಿಯ ಅಧಿಕಾರಿಗಳ ಸದಾ ವಿವಾದಾತ್ಮಕ ವಿಷಯಗಳಿಗೆ ಅಥವಾ ರೂಪಾ ಮೌದ್ಗಿಲ್ ರಂತಹ ಅಧಿಕಾರಿಗಳ ದಕ್ಷತೆಯ ಬ್ರಾಂಡ್ ಇಮೇಜ್ ಕಾಪಾಡಿಕೊಳ್ಳಲಿಕ್ಕೆ, ವೃತ್ತಿ ಮೈಲೇಜ್ ಹೆಚ್ಚಿಸಿಕೊಳ್ಳಲಿಕ್ಕೆ ಉತ್ತೇಜಿಸುವ ಅಂಶಗಳಾಗಿಯೂ ಕೆಲಸ ಮಾಡಿರಬಲ್ಲದು !

ಒಟ್ಟಾರೆ…. ಜನರಿಗೆ, ಮಾಧ್ಯಮದವರಿಗೆ ಬಿಟ್ಟಿ ಮನರಂಜನೆ ಒದಗಿಸಲು ಈ ಚುನಾವಣಾ ಸಮಯದಲ್ಲಿ ನಮ್ಮ ರಾಜಕಾರಣಿಗಳಲ್ಲೇ ಪಕ್ಷಾತೀತವಾಗಿ ಸಕತ್ ಪೈಪೋಟಿ ಇರುವಾಗ ಅದರ ಜವಾಬ್ದಾರಿಯನ್ನು ನಾಗರಿಕ ಸೇವಾ ಅಧಿಕಾರಿಗಳು ಹೊರಬಾರದಿತ್ತು..!

ವೆರಿ ಸ್ಯಾಡ್ !

ಪ್ರೀತಿಯಿಂದ….

ಹಿರಿಯೂರು ಪ್ರಕಾಶ್.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page