ವಿಶ್ವಕರ್ಮ ಜಯಂತಿ ಆಚರಣೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಜಗತ್ತಿನ ಎಲ್ಲಾ ಸೃಷ್ಠಿಗೆ ವಿಶ್ವಕರ್ಮರೆ ಮೂಲ

by | 17/09/23 | ಸುದ್ದಿ


ಚಿತ್ರದುರ್ಗ ಸೆ.17:
ಕಣ್ಣಿಗೆ ಕಾಣುವಂತಹ ಪ್ರತಿಯೊಂದು ಆಕೃತಿಯನ್ನೂ ನಿರ್ಮಾಣ ಮಾಡಿರುವಂತಹ ಶ್ರೇಯಸ್ಸು ಹಾಗೂ ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ. ಇಡೀ ಜಗತ್ತು ವಿಶ್ವಕರ್ಮರಿಂದ ನಿರ್ಮಾಣವಾಗಿದೆ. ಜಗತ್ತಿನ ಎಲ್ಲಾ ಸೃಷ್ಠಿಗೆ ವಿಶ್ವಕರ್ಮರೆ ಮೂಲ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಆಚರಣೆ ಸಮಾರಂಭದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ದೇಶದ ಯಾವುದೇ ಭಾಗದಲ್ಲಿನ ಕೆತ್ತನೆ ಕಾರ್ಯ ಅದು ವಿಶ್ವಕರ್ಮರ ಕೈಯಿಂದ ಮೂಡಿಬಂದಿವೆ. ವಿಶ್ವಕರ್ಮ ಸಮುದಾಯ ಇಲ್ಲದೇ ಯಾವುದೇ ಬದುಕು ನಡೆಯುವುದಿಲ್ಲ. ವಿಶ್ವಕರ್ಮ ಸಮುದಾಯದ, ಬೆಂಬಲ, ಕರಕುಶತೆ, ಪಾಲುಗಾರಿಕೆ ಇಲ್ಲದೆ, ರೈತ, ಉದ್ಯಮಿ ಸೇರಿದಂತೆ ಯಾವ ಮನುಷ್ಯರ ಬದುಕು ನಡೆಯುವುದಿಲ್ಲ. ಭಾರತೀಯ ಕಲೆ, ಸಂಸ್ಕøತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ವಿಶ್ವಕರ್ಮರ ಮೇಲಿದೆ ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಕರ್ಮರ ಸಂಪೂರ್ಣ ಉನ್ನತಿಗಾಗಿ ಇಂದು ಹೊಸ ಕಾರ್ಯಕ್ರಮ ಘೋಷಣೆ ಮಾಡಿದ್ದಾರೆ. ವಿಶ್ವಕರ್ಮರಿಗೆ ಎಲ್ಲ ತರಹದ ಸೌಲಭ್ಯ ಕೊಡುವಂತಹ ಕೌಶಲ ತರಬೇತಿ, ಉದ್ಯಮ ಪ್ರಾರಂಭಕ್ಕೆ ಬೇಕಾದ ಸಾಲಸೌಲಭ್ಯ ಸೇರಿದಂತೆ ಸಾಂಪ್ರಾದಾಯಿಕ ವೃತ್ತಿಗಳನ್ನು ಉಳಿಸಿ, ಬೆಳೆಸಲು ವಿಶ್ವಕರ್ಮರಿಗಾಗಿ ಯೋಜನೆ ರೂಪಿಸಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ವಿಶ್ವಕರ್ಮ ಸಮಾಜ ಶ್ರಮ ಮತ್ತು ಕೌಶಲ್ಯ ಎರಡಕ್ಕೂ ಪಾತ್ರರಾಗಿದ್ದಾರೆ. ದೇಶದ ಸಂಸ್ಕøತಿ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ. ಪ್ರತಿಯೊಂದು ಕಾರ್ಯಕ್ಕೂ ವಿಶ್ವಕರ್ಮರು ಬೇಕೆ ಬೇಕು. ವಿಶ್ವಕರ್ಮರಿಲ್ಲದೇ ಯಾವುದೇ ಕಾರ್ಯ ನಡೆಯವುದಿಲ್ಲ. ರೈತರು ದೇಶದ ಬೆನ್ನೆಲುಬುದರೆ ರೈತರಿಗೆ ವಿಶ್ವಕರ್ಮ ಸಮಾಜವೇ ಬೆನ್ನೆಲುಬು ಎಂದರು.
ಬದಲಾದ ಆಧುನಿಕತೆ, ತಂತ್ರಜ್ಞಾನಕ್ಕೆ ತಕ್ಕಂತೆ ವಿಶ್ವಕರ್ಮ ಸಮಾಜ ಪ್ರಸ್ತುತ ಹೊಸ ಬದುಕಿಗೆ ತೆರೆದುಕೊಳ್ಳಬೇಕಿದೆ. ಶಿಲೆಯಲ್ಲಿ ಕಲೆ ಅರಳಿಸುವ ವಿಶ್ವಕರ್ಮ ಸಮುದಾಯದವರ ಕುಲಕಸುಬು ನಶಿಸಬಾರದು ಎಂದು ಕಳಕಳಿ ವ್ಯಕ್ತಪಡಿಸಿದ ಅವರು, ಕಲೆ ಮತ್ತು ಕೌಶಲ್ಯ ವಿಶ್ವಕರ್ಮರಿಗೆ ವರ ಇದ್ದಂತೆ ಎಂದರು.
ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತರು, ಸುರಭೀ ಹೊಯ್ಸಳ ಕಲಾನಿಕೇತನ ಕಾರ್ಯದರ್ಶಿಗಳು ಹಾಗೂ ಹೊಯ್ಸಳ ಶಿಲ್ಪಕಲಾ ಕುಟೀರ ಅಧ್ಯಕ್ಷ ಶಿಲ್ಪಿ ಎಸ್. ಮಂಜುನಾಥಚಾರ್ಯ ಉಪನ್ಯಾಸ ನೀಡಿ, ವಿಶ್ವಕರ್ಮ ಇಡೀ ಭೂಮಂಡಲವನ್ನು ಸೃಷ್ಠಿ ಮಾಡಿರುವಂತಹ ಸೃಷ್ಠಿಕರ್ತ. ವಿಶ್ವಕರ್ಮ ಎಂಬ ಒಂದು ದೇವರ ಹೆಸರಲ್ಲ. ಶಕ್ತಿ ಅಲ್ಲ, ವಿಶ್ವ ಅಂದರೆ ಒಂದು ಬ್ರಹ್ಮಾಂಡ. ಕರ್ಮ ಅಂದರೆ ಸೃಷ್ಠಿ. ಬೃಹ್ಮಾಂಡ ಸೃಷ್ಠಿಯ ಹೆಸರು. ಅಖಂಡ ಬ್ರಹ್ಮಾಂಡದಲ್ಲಿ ವಿಶ್ವಕರ್ಮನಿಗೆ ಮಹತ್ವವಾದ ಹೆಸರಿದೆ. ಸೃಷ್ಠಿಯ ಮೂಲ ಪುರುಷ ವಿಶ್ವಕರ್ಮ ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ಮುಖಂಡ ಪ್ರಸನ್ನಾಚಾರ್, ಶಿಲ್ಪಿ ಸುರೇಶ್ ಮಾತನಾಡಿದರು. ಸಿಂದಗಿ ಆಲಮೇಲ ಶ್ರೀವಿಶ್ವಬ್ರಾಹ್ಮಣ ಮೂರುಝೂವದಮಠ ಹಾಗೂ ಕರ್ನಾಟಕ ರಾಜ್ಯ ವಿಶ್ವಬ್ರಾಹ್ಮಣ ಮಠಾಧಿಪತಿಗಳ ಮತ್ತು ಪೀಠಾಧಿಪತಿಗಳ ಅಭಿವೃದ್ದಿ ಸಂಘದ ಅಧ್ಯಕ್ಷ ಶ್ರೀ ರಾಮಚಂದ್ರಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಟಿ.ಸುರೇಶಾಚಾರ್, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎ. ಶಂಕರಾಚಾರ್, ಉಪಾಧ್ಯಕ್ಷರಾದ ಕೃಷ್ಣಾಚಾರ್, ಮಲ್ಲಿನಾಥಾಚಾರ್, ಬಾಲಬ್ರಹ್ಮಾಚಾರ್, ಕಾರ್ಯದರ್ಶಿ ಕೆ.ಶಿವಣ್ಣಾಚಾರ್, ಪ್ರಧಾನ ಕಾರ್ಯದರ್ಶಿ ಎ.ಗೋವರ್ಧನ, ಮಹಿಳಾ ಘಟಕದ ಅಧ್ಯಕ್ಷೆ ವಿಜಯ ನಾಗೇಂದ್ರಾಚಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಸೇರಿದಂತೆ ಜಿಲ್ಲೆಯ ವಿಶ್ವಕರ್ಮ ಸಮಾಜದ ಮುಖಂಡರು ಇದ್ದರು. ಚಿತ್ರದುರ್ಗ ಉಮೇಶ ಪತ್ತಾರ ಮತ್ತು ತಂಡದವರಿಂದ ಗೀತಗಾಯನ ನಡೆಸಿಕೊಟ್ಟರು.
ವಿಶ್ವಕರ್ಮರ ಭಾವಚಿತ್ರ ಮೆರವಣಿಗೆ :
*********ವಿಶ್ವಕರ್ಮ ಜಯಂತಿ ಅಂಗವಾಗಿ ಚಿತ್ರದುರ್ಗ ನಗರದ ಬುರುಜನಹಟ್ಟಿಯ ಕೋಟೆ ಆಂಜನೇಯ ದೇವಸ್ಥಾನದಿಂದ ವಿಶ್ವಕರ್ಮರ ಭಾವಚಿತ್ರ ಮೆರವಣೆಗೆಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ನಾದಸ್ವರ ಡೊಳ್ಳು ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಆರಂಭವಾದ ಮೆರವಣಿಗೆಯು ನಗರ ಪ್ರಮುಖ ವೃತ್ತಗಳ ಮೂಲಕ ಸಂಚರಿಸಿ, ತರಾಸು ರಂಗ ಮಂದಿರ ತಲುಪಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *