ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಃಶಕ್ತಿ ಪ್ರತೀಕ -ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

by | 02/10/23 | ಸುದ್ದಿ


ಚಿತ್ರದುರ್ಗ ಅ.02:
ಅಂತಃಶಕ್ತಿ ಜಾಗೃತಗೊಳಿಸಿ ಉತ್ತಮ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜಗತ್ತಿಗೆ ಮಾದರಿಯಾಗಬಹುದು. ಅದಕ್ಕೆ ಮಹಾತ್ಮಾ ಗಾಂಧೀಜಿಯವರೇ ಉತ್ತಮ ನಿದರ್ಶನ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ 154ನೇ ಜನ್ಮ ದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಭೌತಿಕ ಲಕ್ಷಣಗಳನ್ನು ಆಧರಿಸಿ ಜಗತ್ತು ನಮ್ಮನ್ನು ಗೌರವಿಸುತ್ತದೆ ಎಂಬುದು ಸುಳ್ಳು. ಗಾಂಧೀಜಿಯವರು ತುಂಡು ಬಟ್ಟೆ ತೊಟ್ಟು, ಕೈಯಲ್ಲಿ ಊರುಗೋಲು ಹಿಡಿದು ದೇಶ ಸುತ್ತಿ, ಅವರ ತತ್ವ ಹಾಗೂ ಆಲೋಚನೆಗಳಿಂದ ಭಾರತೀಯರನ್ನು ಆಕರ್ಷಿಸಿ ಬ್ರಿಟೀಷರ ವಿರುದ್ಧ ಒಗ್ಗೂಡಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮ್ಮ ದೈಹಿಕ ಎತ್ತರದ ಬಗ್ಗೆ ಕೀಳರಿಮೆ ಹೊಂದದೆ, ದೇಶದ ಎರಡನೇ ಪ್ರಧಾನ ಮಂತ್ರಿಯಾಗಿ ದೇಶವನ್ನು ಸಂಕಷ್ಟ ಸಮಯದಲ್ಲಿ ಮುಂದುವರೆಸಿದರು. ಈ ಇಬ್ಬರೂ ಮಹನೀಯರು ಅವರೊಳಗಿನ ಅಂತಃಶಕ್ತಿ ಪ್ರತೀಕವಾಗಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ನಮ್ಮಲ್ಲಿ ಅಂತಃಶಕ್ತಿಯ ಕೊರತೆಯಿದ್ದಾಗ ನಾವು ಬಾಹ್ಯವಾಗಿ ಒಳ್ಳೆಯ ಬಟ್ಟೆ, ಆಭರಣ ಅಥವಾ ಅಲಂಕಾರದಿಂದ ಸಮಾಜದಲ್ಲಿ ನಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಗಾಂಧೀಜಿ ಎಂದಿಗೂ ತಮ್ಮ ಬಾಹ್ಯ ನೋಟದ ಬಗ್ಗೆ ತಲೆ ಕೆಡಿಸಿಕೊಳ್ಳದೇ, ತಮ್ಮ ಅಂತಃಶಕ್ತಿಯನ್ನು ಸದಾ ಹೆಚ್ಚಿಸಿಕೊಳ್ಳುವಲ್ಲಿ ತೊಡಗಿದ್ದರು. ತಮ್ಮ ತತ್ವ ವಿಚಾರಗಳಿಂದ ದೇಶದ ಕೋಟ್ಯಾಂತರ ಜನರನ್ನು ಮುನ್ನಡೆಸಿದರು. ಹಾಗೆಯೇ ದೇಶದ ಪ್ರಧಾನಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಎಂದಿಗೂ ತಮ್ಮ ದೈಹಿಕ ಎತ್ತರದ ಬಗ್ಗೆ ಕೀಳರಿಮೆ ಹೊಂದಿರಲಿಲ್ಲ, ಬದಲಾಗಿ ತಮ್ಮ ಋಣಾತ್ಮಕ ಅಂಶಗಳನ್ನು ಮರೆತು, ಅದನ್ನೇ ಧನಾತ್ಮಕ ಅಂಶವಾಗಿಸುವತ್ತ ಚಿಂತಿಸಿದರು. ಇದರಿಂದ ಜೀವನದಲ್ಲಿ ಉತ್ತಮ ಯಶಸ್ಸು ಗಳಿಸಿದರು. ಶಾಸ್ತ್ರಿಯವರ ಧೈರ್ಯ, ದೇಶಪ್ರೇಮ, ಪ್ರಾಮಾಣಿಕತೆಯನ್ನು ಇಡೀ ದೇಶ ಕೊಂಡಾಡುತ್ತದೆ ಎಂದರು.
ಬಹಳಷ್ಟು ಜನರು ಉಪದೇಶಗಳನ್ನು ಬೋಧಿಸುತ್ತಾರೆ. ಆದರೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಗಾಂಧೀಜಿ ಹೀಗೆ ಇರಲಿಲ್ಲ. ಅವರು ಬೋಧಿಸಿ ಎಲ್ಲಾ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಂಡು ಚಾಚು ತಪ್ಪದೇ ಪಾಲಿಸಿಕೊಂಡು ಬಂದರು. ಹಾಗಾಗಿಯೇ ಅವರನ್ನು ರಾಷ್ಟ್ರಪಿತ ಎಂದು ಕರೆದು ಗೌರವಿಸಲಾಗುತ್ತಿದೆ. ಗಾಂಧೀಜಿ ಹಾಗೂ ಜರ್ಮನಿಯ ಹಿಟ್ಲರ್ ಒಂದೇ ಕಾಲಘಟ್ಟದಲ್ಲಿ ಜೀವಿಸಿದ್ದರು. ಆದರೆ ಗಾಂಧೀಜಿಯವರು ಜನತೆಯ ಮೇಲೆ ಬೀರಿದ ಪರಿಣಾಮ ಹಾಗೂ ಹಿಟ್ಲರ್ ಸರ್ವಾಧಿಕಾರಿ ಧೋರಣೆಗೂ ತುಂಬಾ ವ್ಯತ್ಯಾಸವಿದೆ. ಹಿಟ್ಲರ್ ಬಗ್ಗೆ ಜನರಲ್ಲಿ ಇದಿದ್ದು ಭಯ, ಆದರೆ ಗಾಂಧೀಜಿ ಬಗ್ಗೆ ಭಾರತೀಯರಲ್ಲಿ ಇದ್ದಿದ್ದು ಪ್ರೀತಿ. ಗಾಂಧೀಜಿ ಎಂದಿಗೂ ಸ್ವಾರ್ಥ ಚಿಂತನೆ ಮಾಡಲಿಲ್ಲ. ಸತ್ಯ, ಅಹಿಂಸೆ, ಸರ್ವಧರ್ಮ ಸಮನ್ವಯತೆ ಪಾಲಿಸಿದರು. ಪ್ರತಿಯೊಬ್ಬರು ತಮ್ಮ ಜೀವನದಲ್ಲಿನ ಕೊರತೆಗಳ ಬಗ್ಗೆ ಚಿಂತಿಸದೇ, ತಮ್ಮಲ್ಲಿನ ಶಕ್ತಿಯ ಬಗ್ಗೆ ಧನಾತ್ಮಕವಾಗಿ ಚಿಂತಿಸಿದರೆ ಜೀವನದಲ್ಲಿ ಉತ್ತುಂಗ ಸ್ಥಾನಕ್ಕೆ ಏರಬಹುದು. ಗಾಂಧೀಜಿ ಸರ್ವಧರ್ಮಗಳ ಸಾರ ಒಂದೇ ಎಂದು ತಿಳಿಸಿದರು. ಈ ಭಾವನೆ ದೇಶದ ಪ್ರತಿಯೊಬ್ಬ ಜನರಲ್ಲಿ ಇರುವುದರಿಂದಲೇ ದೇಶದಲ್ಲಿ ಹಲವಾರು ಧರ್ಮಗಳಿದ್ದರೂ ಶಾಂತಿ ನೆಲೆಸಿದೆ. ದೇಶ ಒಕ್ಕೂಟ ವ್ಯವಸ್ಥೆಯಡಿ ಒಗ್ಗಟಿನಿಂದ ಮುಂದುವರಿಯುತ್ತಿದೆ. ಮಹಾತ್ಮಾ ಗಾಂಧೀಜಿಯವರ ಸರಳ ಜೀವನ, ತತ್ವಗಳ ಬಗ್ಗೆ ಇಂದಿನ ಪೀಳಿಗೆ ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಅವರು ಸತ್ಯಾಗ್ರಹ ಹಾಗೂ ಅಹಿಂಸೆಯ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಗಾಂಧೀಜಿ ಅವರ ಜೀವನವೇ ಜಗತ್ತಿಗೆ ಒಂದು ಸಂದೇಶವಾಗಿದೆ. ಗಾಂಧೀಜಿ ಅವರ ತತ್ವಾದರ್ಶಗಳನ್ನು ನಿತ್ಯಜೀವನದಲ್ಲಿ ಮೈಗೂಡಿಸಿಕೊಂಡು ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ಕಾರ್ಯನಿರ್ವಹಿಸಬೇಕು. ದಾರ್ಶನಿಕರು, ಮಹನೀಯರ ಆಶಯದಂತೆ ಪ್ರತಿಯೊಬ್ಬರು ಅಹಿಂಸಾ ತತ್ವ ಪಾಲಿಸುವುದರ ಜತೆಗೆ ಸತ್ಯ, ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದರು.
ಪ್ರಾಮಾಣಿಕವಾಗಿ ದೇಶವನ್ನು ಮುನ್ನೆಡೆಸಿದ ಕೀರ್ತಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರಿಗೆ ಸಲ್ಲುತ್ತದೆ. ಮಹನೀಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಸರಳತೆ, ನೇರ ನಡೆ-ನುಡಿಗಳಿಂದ ಅತೀ ಎತ್ತರಕ್ಕೆ ಬೆಳೆದು, ಸತ್ಯ, ಶಾಂತಿ, ಅಹಿಂಸೆ ಎಂಬ ಮಹಾ ಅಸ್ತ್ರಗಳೊಡನೆ ಬ್ರಿಟೀಷರನ್ನು ಮಣಿಸಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಮ್ಮ ಹೆಮ್ಮೆಯ ವಿಶ್ವನಾಯಕರು. ಅವರ ಜೀವನಗಾಥೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕಿದೆ ಎಂದರು.
ಗಾಂಧೀಜಿ ಅವರ ಜೀವನ ಆದರ್ಶಗಳನ್ನು ಜನರಿಗೆ ವಿಶೇಷವಾಗಿ ಯುವ ಸಮುದಾಯಕ್ಕೆ ಪರಿಚಯಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿದ್ಯಾರ್ಥಿ ಯುವಜನರಲ್ಲಿ ಮಹಾತ್ಮಾ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳವಳಿ, ಸರಳೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪøಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಮೊದಲಾದ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿತ್ತು, ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಸಂತಜೋಸೆಫ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ಮಾಡಿದರು. ಮೀನಾಕ್ಷಿ ಭಟ್, ಆರ್.ಎಂ.ಅಮೃತ, ತೇಜಸ್ವಿನಿ ಮತ್ತು ಸಂಗಡಿಗರು ವೈಷ್ಣವ ಜನತೋ ಹಾಗೂ ರಘುಪತಿ ರಾಘವ ರಾಜಾರಾಂ, ರಾಮ್‍ಧುನ್ ಗೀತಗಾಯನ ನಡೆಸಿಕೊಟ್ಟರು.

ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ:
***************ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ.ಆನಂದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *