ಚಿತ್ರದುರ್ಗ ನ. 18 :
ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಈಗಾಗಲೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಜಿಲ್ಲೆಯಲ್ಲಿ ಆರಂಭವಾಗಿದ್ದು, ಈ ಸಂಬಂಧ ನ. 18 ಮತ್ತು 19 ರಂದು ಎರಡೂ ದಿನಗಳಂದು ಅಭಿಯಾನದಡಿ ವಿಶೇಷ ನೊಂದಣಿ ಅಭಿಯಾನ ಕೈಗೊಳ್ಳಲಾಗಿದೆ. ಯುವ ಮತದಾರರ ನೊಂದಣಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ತಪ್ಪದೆ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಹೇಳಿದರು.
ಶನಿವಾರದಂದು ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ನೊಂದಣಿ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ನ. 18 ಮತ್ತು 19 ರಂದು ವಿಶೇಷ ನೊಂದಣಿ ಅಭಿಯಾನ ನಡೆಸಲಾಗುತ್ತಿದೆ. ಈ ಎರಡೂ ದಿನಗಳಂದು ಸಾರ್ವಜನಿಕರು ಮತಗಟ್ಟೆಗಳಿಗೆ ಭೇಟಿ ನೀಡಿ, ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಬದಲಾವಣೆಗಳಿದ್ದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಯುವ ಮತದಾರರ ನೊಂದಣಿಗಾಗಿಯೇ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗುತ್ತಿದೆ. 18 ವರ್ಷ ತುಂಬಿದ ಎಲ್ಲರೂ ತಪ್ಪದೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು. ಆಯಾ ಕಾಲೇಜು ಮಟ್ಟದಲ್ಲಿಯೇ ನಮೂನೆ-06 ಅನ್ನು ಭರ್ತಿ ಮಾಡಿ, ಅಗತ್ಯ ದಾಖಲೆ ಸಲ್ಲಿಸಬೇಕು. ಹೆಸರು ಸೇರ್ಪಡೆ ಮಾಡಲು ವರ್ಷಕ್ಕೆ ನಾಲ್ಕು ಅವಕಾಶಗಳನ್ನು ನೀಡಲಾಗುತ್ತದೆ. ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ 01 ನೇ ತಾರೀಕುಗಳನ್ನು ಅರ್ಹತಾ ದಿನಗಳೆಂದು ಘೋಷಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು, ಯುವಜನರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಲು ಇದೊಂದು ಸುವರ್ಣಾವಕಾಶವಾಗಿದೆ. ಈಗಾಗಲೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದವರು, ಮತಗಟ್ಟೆಗಳಿಗೆ ಭೇಟಿ ನೀಡಿ, ಪಟ್ಟಿಯನ್ನು ಪರಿಶೀಲಿಸಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳಬೇಕು. ಇದರಿಂದ ಚುನಾವಣೆ ಸಮಯದಲ್ಲಿ ಯಾವುದೇ ಗೊಂದಲಗಳೂ ಉಂಟಾಗುವುದಿಲ್ಲ, ಅಲ್ಲದೆ ಅಕ್ರಮ ಮತದಾನವನ್ನು ತಡೆಗಟ್ಟಬಹುದಾಗಿದೆ. ಮತದಾರರ ಭಾವಚಿತ್ರವಿರುವ ಗುರುತಿನ ಕಾರ್ಡ್ ಅನ್ನು ನೇರವಾಗಿ ಮತದಾರರ ಮನೆಗೆ ಪೋಸ್ಟ್ ಮೂಲಕ ತಲುಪಿಸಲಾಗುವುದು. ಎಪಿಕ್ ಕಾರ್ಡ್ ಅನ್ನು ಬೇರೆ ಎಲ್ಲಿಯೂ ನೀಡಲಾಗುವುದಿಲ್ಲ ಎಂದರು. ಒಟ್ಟಾರೆ ಯಾವೊಬ್ಬ ಅರ್ಹರೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಯುವಜನರ ಪಾತ್ರ ಪ್ರಮುಖವಾಗಿದ್ದು, ಪ್ರತಿಯೊಬ್ಬರೂ ಇದರಲ್ಲಿ ಕೈಜೋಡಿಸಬೇಕು. ಮತದಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿ, ಅಕ್ಕಪಕ್ಕದ ಮನೆಗಳ ಯುವ ಮತದಾರರ ನೊಂದಣಿಗೆ ಕರೆ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಬೇಕು. ಯಾವುದೇ ಗೊಂದಲಗಳಿದ್ದಲ್ಲಿ ಟೋಲ್ ಫ್ರೀ ಸಂಖ್ಯೆ 1950 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದರು.
ಉಪವಿಭಾಗಾಧಿಕಾರಿ ಕಾರ್ತಿಕ್, ತಹಸಿಲ್ದಾರ್ ನಾಗವೇಣಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಸೇರಿದಂತೆ ಸರ್ಕಾರಿ ಕಲಾ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.
ಕಾಲೇಜಿನ ನೂರಾರು ವಿದ್ಯಾರ್ಥಿಗಳು ಈ ವಿಶೇಷ ನೊಂದಣಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನಮೂನೆ-06 ಅನ್ನು ಭರ್ತಿ ಮಾಡಿ, ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಲ್ಲಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಗಾಗಿ ವಿಶೇಷ ನೊಂದಣಿ ಅಭಿಯಾನ ಯುವ ಮತದಾರರ ನೊಂದಣಿಗೆ ನ. 18 ಮತ್ತು 19 ರಂದು ಅಭಿಯಾನ- ದಿವ್ಯಪ್ರಭು ಜಿ.ಆರ್.ಜೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments