ಚಿತ್ರದುರ್ಗ ಫೆ.15:
ಜವಾಬ್ದಾರಿಯುತ ಪೋಷಕರು ಮಕ್ಕಳ ಸ್ವಾತಂತ್ರ್ಯ ಹರಣ ಮಾಡಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಕೆ.ಗಿರೀಶ್ ಸಲಹೆ ನೀಡಿದರು.
ಇಲ್ಲಿನ ಚಿತ್ರ ಡಾನ್ ಬೋಸ್ಕ್ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರ-ಡಾನ್ ಬೋಸ್ಕೋ ಹಾಗೂ ಬ್ರೆಡ್ಸ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ರಕ್ಷಣೆಯ ಸಹಭಾಗೀದಾರರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ, ಆರೋಗ್ಯ ವ್ಯವಸ್ಥೆ ಸೇರಿದಂತೆ ಸಮಾಜದಲ್ಲಿನ ಹಕ್ಕುಗಳ ಕೊಡಿಸಲು ಹೆಚ್ಚಿನ ಆಲೋಚನೆ ಮಾಡಲಾಗುತ್ತದೆ. ಆದರೆ ಮನೆಯಲ್ಲಿ ತಂದೆ-ತಾಯಿ ಮಕ್ಕಳಿಗೆ ಕೊಡಬೇಕಾದ ಹಕ್ಕುಗಳ ಬಗ್ಗೆ ಆಲೋಚನೆ ಮಾಡುತ್ತಿಲ್ಲ ಎಂದರು.
ಐಎಎಸ್, ಐಪಿಎಸ್, ವೈದ್ಯರು ಆಗಬೇಕು ಎಂಬ ಮಹಾದಾಸೆಯಿಂದ ಆಧುನಿಕ ಯುಗದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಪೈಪೋಟಿಗೆ ದೂಡಿ, ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ನಾವು ಮಕ್ಕಳಿಗೆ ಪುಸ್ತಕದ ಜ್ಞಾನಕ್ಕೆ ಒಲವು ನೀಡಿ, ಸಾಮಾನ್ಯ ಜ್ಞಾನದ ಕಡೆಗೆ ಚಿಂತನೆ ಮಾಡುತ್ತಿಲ್ಲ ಎಂದು ಹೇಳಿದರು.
“ನಿದ್ದೆ”ಯೂ ಮಕ್ಕಳ ಹಕ್ಕು: ಮಕ್ಕಳ ಹಕ್ಕುಗಳಲ್ಲಿ ನಿದ್ದೆಯೂ ಸಹ ಒಂದು. ನಿದ್ದೆ ಮಾಡುವುದು ಮಕ್ಕಳ ಹಕ್ಕು. ಪೋಷಕರು ತಮ್ಮ ಮಕ್ಕಳನ್ನು ನಿದ್ರೆಯಿಂದ ವಂಚಿತರನ್ನಾಗಿ ಮಾಡಿದ್ದಾರೆ. ಹಾಗಾಗಿ ಮಕ್ಕಳು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಕೆ.ಗಿರೀಶ್ ಅಭಿಪ್ರಾಯಪಟ್ಟರು.
ನಿದ್ದೆ ಸಮರ್ಪಕವಾಗಿ ಮಾಡದೇ ಇದ್ದರೆ ದೇಹದಲ್ಲಿ ಅಸಮಾತೋಲನ ಉಂಟಾಗುತ್ತದೆ. ಕಾಯಿಲೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಮಕ್ಕಳಿಗೆ ನಿದ್ದೆ ಮಾಡಲು ಬಿಡಬೇಕು. ಮಕ್ಕಳು ಆರೋಗ್ಯವಾಗಿರಲು ನಿದ್ದೆಯೇ ಔಷಧಿಯಾಗಿದ್ದು, ಈ ಬಗ್ಗೆ ಪೋಷಕರಿಗೆ ತಿಳಿವಳಿಕೆ ಹೇಳಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಅರಿವಿನ ಕೊರತೆ ಇದೆ. ಮಕ್ಕಳ ಹಕ್ಕುಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡುವ ಅವಶ್ಯಕತೆ ಇದೆ. ಮಕ್ಕಳಿಗೆ ಬದುಕುವ, ವಿಕಾಸ ಹೊಂದುವ ಹಕ್ಕು, ರಕ್ಷಣೆ ಪಡೆಯುವ ಹಕ್ಕು, ಭಾಗವಹಿಸುವ ಹಕ್ಕು ಸೇರಿದಂತೆ ಇನ್ನು ಅನೇಕ ಹಕ್ಕುಗಳಿವೆ. ಆದರೆ ಮಕ್ಕಳ ಹಕ್ಕುಗಳು ಪೋಷಕರಿಂಲೇ ಉಲ್ಲಂಘನೆಯಾಗುತ್ತಿವೆ ಎಂದರು.
ಬ್ರೆಡ್ಸ್ ನಿರ್ದೇಶಕ ರೆವರೆಂಡ್ ಫಾದರ್ ರೂಬಿನ್ ಮ್ಯಾಥ್ಯೂ ಅವರು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಬ್ರೆಡ್ಸ್ ಸಂಸ್ಥೆಯು ಕ್ರೀಂ ಯೋಜನೆಯ ಮೂಲಕ ಹಕ್ಕಳ ಹಕ್ಕುಗಳನ್ನು ಎತ್ತಿಹಿಡಿಯಲು, ಮಕ್ಕಳ ಹಕ್ಕು ಉಲ್ಲಂಘನೆಯಾಗದಂತೆ, ಹಕ್ಕುಗಳ ರಕ್ಷಣೆಗಾಗಿ ಹಲವಾರು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸಮಾಜವನ್ನು ಮಕ್ಕಳಸ್ನೇಹಿ ಸಮಜ ಮಾಡಲು ನಾವೆಲ್ಲರೂ ಭಾಗಿಗಳಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, 100 ಮಕ್ಕಳಲ್ಲಿ 3 ಮಕ್ಕಳು ಹೆಚ್‍ಐವಿ ಸೋಂಕಿತರು ಇದ್ದಾರೆ ಇದು ಅಘಾತಕಾರಿ ಸಂಗತಿಯಾಗಿದ್ದು, ಮಕ್ಕಳ ಅಪೌಷ್ಠಿಕತೆಯೂ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದರು.
2004 ರಿಂದ ಈವರೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ತಡೆಗಟ್ಟುವ ರೋಗಳನ್ನು ತಡೆಗಟ್ಟಿ ಚಿಕಿತ್ಸೆ-ಸಲಹೆ ಸೂಚನೆ ನೀಡಬೇಕು ಎಂದು ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಆರ್.ಪ್ರಭಾಕರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಕ್ಕಳ ಹಕ್ಕುಗಳಿಗೆ ಚ್ಯುತಿ ಆಗದಂತೆ ಎಲ್ಲ ರೀತಿಯ ಅವಕಾಶಗಳನ್ನು ಕಲ್ಪಿಸಿದೆ. ದೇಶದ ಒಟ್ಟು ಜನರಲ್ಲಿ ಶೇ.40ರಷ್ಟು ಮಂದಿ ಮಕ್ಕಳು ಇದ್ದಾರೆ. ಮಕ್ಕಳಿಗೆ ಪೌಷ್ಠಿಕ ಆಹಾರ, ಶಿಕ್ಷಣ ಸೇರಿದಂತೆ ಎಲ್ಲ ಸವಲತ್ತುಗಳನ್ನು ಕಲ್ಪಿಸಕೊಡದಿದ್ದರೆ ಮಾನವ ಸಂಪನ್ಮೂಲ ನಶಿಸಿ ಹೋಗಲಿದೆ. ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಯೂ ಕುಂಠಿತವಾಗಲಿದೆ ಎಂದರು.
ಚಿತ್ರ ಡಾನ್‍ಬೋಸ್ಕೋ ಸಂಸ್ಥೆಯು ಕಳೆದ 10-12 ವರ್ಷಗಳಿಂದ ಮಕ್ಕಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಆಹಾರ ಸಾಮಗ್ರಿ, ಔಷಧಿ ವಿತರಣೆ, ಆನ್‍ಲೈನ್ ಶಿಕ್ಷಣ ಸೇರಿದಂತೆ ಅನೇಕ ನೆರವು ನೀಡಿದೆ ಎಂದು ಸಂಸ್ಥೆಯ ಕಾರ್ಯ ಶ್ಲಾಘಿಸಿದ ಅವರು, ಮಕ್ಕಳು ದೇಶದ ಆಸ್ತಿ. ಈ ಸಂಪನ್ಮೂಲ ಸದ್ಭಳಕೆಯಾಗಬೇಕು. ಸುಸ್ಥಿರ ದೇಶ ನಿರ್ಮಾಣದಲ್ಲಿ ಎಲ್ಲ ಇಲಾಖೆಗಳ ಪಾತ್ರವೂ ಇದೆ ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ಎನ್.ಯಶೋಧರ ಮಾತನಾಡಿ, ಪೋಷಕರು ತಮ್ಮ ಆಸೆ-ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರುವುದು ಬೇಡ. ಮಗುವಿಗೆ ಸ್ವತಂತ್ರವಾದ ವಾತಾವರಣ ಕಲ್ಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಡಿ.ಕೆ.ಶೀಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಕೆಂಪಹನುಮಯ್ಯ, ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಪೊಲೀಸ್ ಇಲಾಖೆಯ ಕಾಳಿ ಕೃಷ್ಣ, ಚಿತ್ರ-ಡಾನ್ ಬೋಸ್ಕೋ ಸಂಸ್ಥೆಯ ರೆ.ಫಾ.ಜಾನ್ ಪೌಲ್, ರೆ.ಫಾ.ಸಜಿ ಜಾರ್ಜ್ ಸೇರಿದಂತೆ ಮತ್ತಿತರರು ಇದ್ದರು. ಚಿತ್ರ ಡಾನ್ ಬೋಸ್ಕೋ ಸಂಸ್ಥೆಯ ತೆರೆಸ ಹಾಗೂ ನೀಲಪ್ಪ ನಿರೂಪಿಸಿದರು. ಭಾರತಿ ಸ್ವಾಗತಿಸಿದರು. ಡಿ.ಬಿ.ಟೆಕ್ ವಿದ್ಯಾರ್ಥಿನಿಯರು ಪ್ರಾರ್ಥನಾ ನೃತ್ಯ ಮಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಯ ಸಹಭಾಗೀದಾರರ ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಕೆ.ಗಿರೀಶ್ ಸಲಹೆ ಮಕ್ಕಳ ಸ್ವಾತಂತ್ರ್ಯ ಹರಣ ಮಾಡಬೇಡಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments