ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹದಲ್ಲಿ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ರೇಖಾ ಭ್ರಷ್ಟಾಚಾರ ವಿರೋಧಿಸಿ, ರಾಷ್ಟ್ರಕ್ಕೆ ಬದ್ಧರಾಗಿರಿ

by | 02/11/23 | ಕಾನೂನು


ಚಿತ್ರದುರ್ಗ ನ.02:
ಭ್ರಷ್ಟಾಚಾರ ವಿರೋಧ ಮಾಡಬೇಕು. ನಾವು ರಾಷ್ಟ್ರಕ್ಕೆ ಬದ್ಧರಾಗಿರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೇಶದ ಮುಂದಿನ ಸತ್ಪ್ರಜೆಗಳಾಗಿದ್ದು, ವಿದ್ಯಾರ್ಥಿ ಜೀವನದಲ್ಲಿಯೇ ವಿದ್ಯಾರ್ಥಿಗಳು ಭ್ರಷ್ಟಾಚಾರ ವಿರೋಧಿಸುವ ಅವಶ್ಯಕತೆ ಇದೆ. ಭ್ರಷ್ಟಾಚಾರದ ಜೀವನ ನಿಮ್ಮಗಳ ಮನೆಯಿಂದಲೇ ತೊಡೆದುಹಾಕಿ ಎಂದರು.
ಲಂಚ ಎಂಬ ವಿಷಯ ಯಾವುದೇ ಹಂತದಲ್ಲಿಯಾದರೂ ಪ್ರಾರಂಭವಾಗಬಹುದು. ಆದರೆ ಯಾವುದೇ ಸ್ತರದಲ್ಲಿ ಲಂಚ ಕೊಡುವ ಅವಶ್ಯಕತೆಯೂ ಇಲ್ಲ. ಭ್ರಷ್ಟಾಚಾರದ ಘಟನೆಯನ್ನು ಸೂಕ್ತ ಸಂಸ್ಥೆಗೆ ವರದಿ ಮಾಡಬೇಕು. ಸುಭದ್ರ ಭಾರತ ನಿರ್ಮಾಣಕ್ಕೆ ಯುವ ಜನತೆ ಕೈಜೋಡಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಮೊಬೈಲ್ ಅವಶ್ಯಕತೆ ಇದೆ. ಆದರೆ ಅದೇ ಮೊಬೈಲ್ ನಿಮ್ಮನ್ನು ಹಾಳು ಮಾಡುವ ಸಾಧನವಾಗಬಾರದು. ನಿಮ್ಮಗಳ ಗುರಿ ಸಾಧನೆ ಉನ್ನತ ಅಧಿಕಾರಿಯಾಗುವ ಕಡೆಗೆ ಗಮನಹರಿಸಬೇಕು. ಮೊಬೈಲ್‍ಗಳಿಗೆ ದಾಸರಾಗಬೇಡಿ. ಅವಶ್ಯಕತೆ ಇರುವಷ್ಟು ಮಾತ್ರ ಮೊಬೈಲ್ ಬಳಕೆ ಮಾಡಿ, ಹೆಚ್ಚಿನ ಸಮಯವನ್ನು ವ್ಯಾಸಂಗಕ್ಕೆ ಮೀಸಲಿಡಿ ಎಂದು ಕಿವಿಮಾತು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ದೇಶದ ಆರ್ಥಿಕತೆ, ಅಸಮಾನತೆ, ಅಭಿವೃದ್ಧಿಗೆ ಭ್ರಷ್ಟಾಚಾರ ಎಂಬುವುದು ಸಮಾಜದಲ್ಲಿ ಮಾರಕವಾದ ಪಿಡುಗಾಗಿದೆ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಪ್ರಾಮಾಣಿಕತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ವಿಭಾಗದ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಮಾತನಾಡಿ, ಭ್ರಷ್ಟಾಚಾರ ಎಂಬುವುದು ಎಲ್ಲಾ ಕಚೇರಿ ಹಾಗೂ ಮನೆಗಳಲ್ಲಿಯೂ ನಡೆಯುತ್ತದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಭ್ರಷ್ಟಾಚಾರ ವಿಷಯ ಕಂಡುಬಂದರೆ ಸಂಬಂಧಪಟ್ಟ ಸಂಸ್ಥೆಗೆ ತಿಳಿಸಬೇಕು ಎಂದು ಹೇಳಿದರು.
ಕರ್ನಾಟಕ ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಮಲ್ಲೇಶಪ್ಪ ಮಾತನಾಡಿ, ಪ್ರತಿಯೊಬ್ಬ ಸರ್ಕಾರಿ ನೌಕರರು ತನ್ನ ಆದಾಯಕ್ಕೆ ತಕ್ಕಂತೆ ಜೀವನ ಮಾಡಬೇಕು. ಒಂದು ಸಲ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡರೆ ತಮ್ಮ ಜೀವನವೇ ಹಾಳಾಗುತ್ತದೆ. ಯುವ ಪೀಳಿಗೆ ಭ್ರಷ್ಟಾಚಾರ ನಿರ್ಮಾಲನೆಗೆ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಉಪಾಧೀಕ್ಷಕ ಎನ್.ಮೃತ್ಯುಂಜಯ ಅವರು ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರ ನಿರ್ಮಾಲನೆ ಕುರಿತು ಪ್ರತಿಜ್ಞಾವಿಧಿ ಭೋದಿಸಿ, ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಸಿದ್ರಾಮ ಚಿನಗೊಂಡ, ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ವಸಂತ್ ಕುಮಾರ್, ಶಿಲ್ಪಾ ಸೇರಿದಂತೆ ಇತರರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *