ನುಡಿದಂತೆ ನಡೆದವರಿಗೆ ಬರಗಾಲ ಕಾಡುತ್ತಿದೆ- ನಾರಾಯಣಸ್ವಾಮಿ

by | 04/11/23 | ರಂಗಭೂಮಿ

ಹೊಸದುರ್ಗ: ಕರ್ನಾಟಕ ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ನುಡಿದಂತೆ ನಡೆದವರಿಗೆ ಬರಗಾಲ ಕಾಡುತ್ತಿದೆ. ಹೀಗಾಗಿ ಇಲ್ಲಿ ಸಂಸ್ಕಾರವಂತ ವ್ಯಕ್ತಿಗಳ ಮಾರ್ಗದರ್ಶನ ಕೊರತೆ ಎದ್ದು ಕಾಣುತ್ತಿದ್ದು, ಮಾನವೀಯತೆಯ ಮೌಲ್ಯಗಳನ್ನು ಮರೆಯುತ್ತಿದ್ದೇವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಾಣೇಹಳ್ಳಿ ಶ್ರೀಮಠದ ಶಿವಕುಮಾರ ಬಯಲು ರಂಗಮಂದಿರದಲ್ಲಿ ಶ್ರೀ ಶಿವಕುಮಾರ ಕಲಾಸಂಘದಿಂದ ಆಯೋಜಿಸಲಾಗಿದ್ದ ಎರಡನೇ ದಿನ ಶುಕ್ರವಾರ ನಡೆದ ರಾಷ್ಟ್ರೀಯ ನಾಟಕೋತ್ಸವ-2023ರ ಉದ್ದೇಶಿಸಿ ಮಾತನಾಡಿದ ಅವರು, ಅನೇಕ ರಾಜಕಾರಣ ನೋಡಿ ಭಾಷಣ ಕೇಳುವುದನ್ನೆ ಬೇಡ ಅನ್ನಿಸಿದೆ. ಪ್ರಾಮಾಣಿಕರ ಕೊರತೆಯಿಂದ ಭಾಷಣ ಕೇಳುವ ಅವಶ್ಯಕತೆ ಇಲ್ಲದಾಗಿದೆ ಎಂದು ಬೇಸರಿಸಿದರು.

ಬಸವಣ್ಣನವರ ವಚನಗಳನ್ನು ಪ್ರತಿಯೊಬ್ಬರ ಮನ, ಹೃದಯಕ್ಕೆ ತಲುಪಿಸುವ ಹಾಗೂ ಬಸವಣ್ಣನ ಹಾದಿಯಲ್ಲಿ ಮನುಕುಲ ನೋಡುವ ದೃಷ್ಠಿಯಲ್ಲಿ ಇಲ್ಲಿ ನಾಟಕೋತ್ಸವವನ್ನು ಮಾಡಲಾಗುತ್ತಿದೆ. ವಚನಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗಬಾರದು ಎಂದು ಹಿಂದಿ ಭಾಷೆಗೆ ತರ್ಜುಮೆ ಮಾಡಿ ಉತ್ತರ ಭಾರತದಾದ್ಯಂತ ವಚನಗಳನ್ನು ಪಸರಿಸುವ ಕೆಲಸವನ್ನು ಪಂಡಿತಾರಾಧ್ಯ ಸ್ವಾಮೀಜಿ ಮಾಡುತ್ತಿದ್ದಾರೆ ಎಂದರು.

ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನಸ್ಸು ಪರಿಶುದ್ದವಾದರೆ ಏನನ್ನಾದರೂ ಸಾಧಿಸಬಹುದು. ಕಲೆ, ಸಾಹಿತ್ಯ, ಸಂಗೀತದ ಪರಿಚಯವಿಲ್ಲದ ಮನುಷ್ಯ ಜೀವನದಲ್ಲಿ ಸಂತಸದಿಂದ ಇರಲು ಸಾಧ್ಯವಿಲ್ಲ. ಹಾಗಾಗಿ ಸಂಗೀತ ಮನುಷ್ಯನ ಅವಿಭಾಜ್ಯ ಅಂಗವಾಗಿದೆ ಎಂದರು.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಒಳ್ಳೆಯ ಮಾತುಗಳಿಗೆ ಬರ ಇಲ್ಲ. ಮಾತುಗಳನ್ನು ಕೃತಿಯಲ್ಲಿ ತರುವುದಕ್ಕೆ ಬರವಿದೆ. ನುಡಿದಂತೆ ನಡೆಯುವಲ್ಲಿ ರಾಜಕಾರಣಿ, ಮಠಾಧೀಶರು ಎಡವುತ್ತಿದ್ದಾರೆ. ಶಿಕ್ಷಣ ಜಾಸ್ತಿಯಾದಂತೆಲ್ಲಾ ಸಂಸ್ಕಾರ ಕಳೆದುಕೊಳ್ಳುತ್ತಿದ್ದೇವೆ. ಮನೆ, ಮಠ, ಸಮಾಜದಿಂದ ಒಳ್ಳೆಯ ಸಂಸ್ಕಾರ ಸಿಗುತ್ತಿಲ್ಲ ಎಂದು ಬೇಸರಿಸಿದ ಅವರು, ರಂಗಭೂಮಿಯ ಮೂಲಕ ಜನರ ಮನಸ್ಸನ್ನು ಅರಳಿಸುವ ಕೆಲಸ ಆಗುತ್ತದೆ. ಸಾಹಿತ್ಯ, ಸಂಗೀತ, ಭಾವನೆಗಳನ್ನು ಅರ್ಥ ಮಾಡಿಸುವ ಕಲೆ ಇದೆ ಎಂದರು.

ವೇದಿಕೆಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಶಾಸಕರಾದ ಡಿ.ಎಸ್.ಸುರೇಶ್, ಮಾಡಾಳ್ ವಿರೂಪಾಕ್ಷಪ್ಪ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೋ.ಕೆ.ಬಿ.ಗುಡಸಿ, ಸಂಗೀತ ನಿರ್ದೇಶಕ ವಿ.ಮನೋಹರ್, ಕೇರಳದ ರಾಷ್ಟ್ರಕವಿ ಎಂ.ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ ಸಾಲಿಯಾನ ಮತ್ತಿತರಿದ್ದರು. ಸ್ವಾತಂತ್ರ ಹೋರಾಟಗಾರ ಎನ್.ಎಂ.ಬಸವರಾಜಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ತಿಪ್ಪೇಸ್ವಾಮಿ, ಸುಬೇದರ್ ಶಿವಕುಮಾರ ಅವರನ್ನು ಅಭಿನಂದಿಸಲಾಯಿತು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *