ತಾಲ್ಲೂಕಿನ ಶಾಲೆಗಳಲ್ಲಿ ಗುಣಾತ್ಮಕಶಿಕ್ಷಣಕ್ಕಾಗಿ ವಿಶೇಷವಾದ ಕಾರ್ಯಕ್ರಮಗಳನ್ನ ಕರ್ನಾಟಕ ಸರ್ಕಾರ ಹಮ್ಮಿಕೊಳ್ಳಲಾಗಿದೆ ತಾ||ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿಕೆ

by | 08/11/23 | ಶಿಕ್ಷಣ


ಹಿರಿಯೂರು ನ.8
ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡಲು ವಿಶೇಷ ಕಾರ್ಯಗಳನ್ನು ಕರ್ನಾಟಕ ಸರ್ಕಾರವು ಹಮ್ಮಿಕೊಂಡಿದ್ದು, ಸರ್ಕಾರದ ಜೊತೆ ಸಮುದಾಯವು ಸಹ ಕೈಜೋಡಿಸಿದಾಗ ಮಾತ್ರ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಉದ್ದೇಶಿಸಿ ನಡೆಸಲಾದ ಆನ್ ಲೈನ್ ಸಭೆಯಲ್ಲಿ ಪಾಲ್ಗೊಂಡು ತಾಲೂಕಿನಲ್ಲಿ ಆಯೋಜಿಸಿರುವ ನಾಲ್ಕು ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಸೂಚಿಸಿ, ಅವರು ಮಾತನಾಡಿದರು.
ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ರಚಿಸಿ, ಆ ವಿದ್ಯಾರ್ಥಿಗಳಿಂದ ತಾವು ಓದಿದ ಶಾಲೆಗೆ ಗುಣಾತ್ಮಕತೆಯನ್ನು ಹೆಚ್ಚಿಸಲು ಅಗತ್ಯವಿರುವ ಸಾಧನ ಸಲಕರಣೆ ಮತ್ತಿತರ ಸಾಮಗ್ರಿಗಳನ್ನು ಪಡೆಯಲು ಕ್ರಮ ವಹಿಸಲು ತಿಳಿಸಿದರು.
ಎಲ್ಲಾ ಶಾಲೆಗಳಲ್ಲೂ ಇದೇ ತಿಂಗಳ 17 ಮತ್ತು 18ನೇ ತಾರೀಖಿನಂದು ಪೋಷಕರ ಸಭೆಗಳನ್ನು ಆಯೋಜಿಸಿ ಅಲ್ಲಿ ಓದುತ್ತಿರುವ ಮಕ್ಕಳ ಎಲ್ಲಾ ಪೋಷಕರು ವಿಶೇಷವಾಗಿ ತಾಯಂದಿರು ತಪ್ಪದೇ ಸಭೆಗೆ ಹಾಜರಾಗಲು ತಿಳಿಸಿದಲ್ಲದೆ, ಈ ಸಭೆಯಲ್ಲಿ ಮಕ್ಕಳ ಪ್ರಗತಿ ಬಗ್ಗೆ ಚರ್ಚಿಸಿ ಮಕ್ಕಳ ಉತ್ತಮ ಕಲಿಕೆಗಾಗಿ ಶಿಕ್ಷಕರು ಮತ್ತು ಪೋಷಕರು ಮಾಡಬೇಕಾದ ಕಾರ್ಯಗಳನ್ನು ಪರಸ್ಪರ ಅರಿತುಕೊಳ್ಳಬೇಕು ಎಂಬುದಾಗಿ ಹೇಳಿದರು.
ಈ ಸಭೆಗೆ ಪ್ರತಿಯೊಬ್ಬ ಪೋಷಕರು ಹಾಜರಾಗುವಂತೆ ಮನವೊಲಿಸಲು ತಿಳಿಸಿ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಈ ಕಾರ್ಯಕ್ರಮಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದಲೇ ಗೊತ್ತುಪಡಿಸಿದ ಒಬ್ಬ ಸಂಪನ್ಮೂಲ ವ್ಯಕ್ತಿಯನ್ನು ಮುಖ್ಯ ಅತಿಥಿಯಾಗಿ ಕಳುಹಿಸಲಾಗುವುದು ಎಂದು ತಿಳಿಸಿದರು.
ಶಾಲೆಗಳಲ್ಲಿ ಪ್ರಸ್ತುತ ಆಯೋಜಿಸುತ್ತಿರುವ ಶೈಕ್ಷಣಿಕ ಪ್ರವಾಸಗಳು ಮತ್ತು ಶಾಲಾ ವಾರ್ಷಿಕೋತ್ಸವಗಳು ಮಕ್ಕಳ ಶೈಕ್ಷಣಿಕ ಕಲಿಕೆಗೆ ಅಷ್ಟಾಗಿ ಪೂರಕವಾಗಿ ಇಲ್ಲದಿರುವುದನ್ನು ಪ್ರಸ್ತಾಪಿಸಿ, ಎರಡು ಕಾರ್ಯಕ್ರಮಗಳಿಗೂ ವಿಶೇಷವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದು, ಅದರಂತೆ ಕಾರ್ಯಕ್ರಮಗಳನ್ನು ನಡೆಸಲು ಸೂಚಿಸಿದರು.
ಶೈಕ್ಷಣಿಕ ಪ್ರವಾಸಗಳು ಕೇವಲ ತೋರಿಕೆಗಾಗದೆ ಮಕ್ಕಳಿಗೆ ತರಗತಿ ಕೋಣೆಯಲ್ಲಿ ಕಲಿತಿದ್ದನ್ನು ಕ್ಷೇತ್ರ ಪ್ರವಾಸಗಳ ಮೂಲಕ ಇನ್ನಷ್ಟು ಅರ್ಥ ಮಾಡಿಕೊಳ್ಳುವಂತೆ ಇರಬೇಕು, ವಾರ್ಷಿಕೋತ್ಸವಗಳಲ್ಲಿ ಕೇವಲ ಚಲನಚಿತ್ರ ಗೀತೆಗಳಿಗೆ ನೃತ್ಯವನ್ನು ಆಯೋಜಿಸಿ ಶಾಲೆ, ಶಿಕ್ಷಕರು ಮತ್ತು ಮಕ್ಕಳ ಸಾಧನೆಯನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ ಎಂದು ಹೇಳಿದರು.
ವಾರ್ಷಿಕೋತ್ಸವ ಸಮಾರಂಭಗಳಲ್ಲಿ ಮಕ್ಕಳ ಸಾಧನೆಯನ್ನು ಬಿಂಬಿಸುವ, ಶಾಲೆಯ ಪ್ರಗತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಮಾಡಬೇಕು ಹಾಗೂ ಮಕ್ಕಳಿಗೆ ಪ್ರೇರಣೆ ನೀಡುವಂತಹ ವ್ಯಕ್ತಿಗಳನ್ನು, ಶಾಲೆಗೆ ಸಹಾಯ, ಸಹಕಾರಗಳನ್ನು ನೀಡಿದಂತಹ ವ್ಯಕ್ತಿಗಳನ್ನು ಕರೆದು ಸನ್ಮಾನಿಸುವುದು ಸೂಕ್ತವಾಗಿದೆ ಎಂದರಲ್ಲದೆ,
ಈ ನಿಟ್ಟಿನಲ್ಲಿ ಶಾಲಾ ಕಾರ್ಯಕ್ರಮಗಳು ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವಂತೆ ಹಾಗೂ ಜ್ಞಾನಾರ್ಜನೆಗೆ ಪೂರಕವಾಗಿರುವಂತೆ ಆಯೋಜಿಸಬೇಕು ಎಂಬುದಾಗಿ ಹೇಳಿದರು.
ಈ ಆನ್ ಲೈನ್ ಸಭೆಯಲ್ಲಿ ಹಿರಿಯೂರು ತಾಲ್ಲೂಕಿನ 410 ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ತಾಲೂಕಿನ ಮೇಲ್ವಿಚಾರಣಾ ಸಿಬ್ಬಂದಿಗಳು ವಿವಿಧ ಶಾಲೆಗಳಿಂದ ಭಾಗವಹಿಸಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *