ತಾಯಿ, ಶಿಶು ಮರಣ ಪ್ರಮಾಣ ತಗ್ಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ

by | 17/11/23 | ಆರೋಗ್ಯ


ಬಳ್ಳಾರಿ,ನ.17
ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವ ಗರ್ಭಿಣಿ ಮಹಿಳೆಯರಿಗೆ ಅಗತ್ಯ ಪರೀಕ್ಷೆ ನಡೆಸಿ, ಕಾಲ ಕಾಲಕ್ಕೆ ಸೂಕ್ತ ಲಸಿಕೆ ನೀಡಬೇಕು. ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಅವರು, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಅಭಿಯಾನದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಯಂದಿರ ಮರಣವನ್ನು ತಡೆಯುವುದು, ಅನಗತ್ಯ ಗರ್ಭಧಾರಣೆಯನ್ನು ತಡೆಯುವುದು ಅತ್ಯಗತ್ಯವಾಗಿದೆ. ಗರ್ಭಪಾತ ಮತ್ತು ಅಪೂರ್ಣ ಗರ್ಭಪಾತಕ್ಕೆ ಸಂಬಂಧಿಸಿದ ಸಂಭವನೀಯ ತೊಡಕುಗಳ ಬಗ್ಗೆ ಆರೋಗ್ಯ ಸಮುದಾಯವು ತಿಳಿಯಬೇಕು ಎಂದರು.
ಪ್ರಮುಖವಾಗಿ ಗರ್ಭಿಣಿ ತಾಯಿಯ ಸಾವುಗಳು ತೀವ್ರ ರಕ್ತಸ್ರಾವ, ಸೋಂಕುಗಳು, ಅಸುರಕ್ಷಿತ ಗರ್ಭಪಾತ, ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಮತ್ತು ಅಸಮರ್ಪಕ ಹೆರಿಗೆಯಿಂದ ಉಂಟಾಗಲಿದ್ದು, ಇದಕ್ಕೆ ವೈದ್ಯಾಧಿಕಾರಿಗಳು ಎಚ್ಚರವಹಿಸಬೇಕು ಎಂದು ಹೇಳಿದರು.
ಗರ್ಭಿಣಿ ಮಹಿಳೆಯರಿಗೆ, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೌಲಭ್ಯಗಳು ದೂರವಾಗಿದ್ದು, ಕೆಲವು ಅಸಮರ್ಪಕ ಮತ್ತು ಕಳಪೆ ಗುಣಮಟ್ಟದ ಪ್ರಸವಪೂರ್ವ ಸೇವೆಗಳು ತಾಯಿಯ ಆರೋಗ್ಯ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತವೆ. ಇವುಗಳನ್ನು ತಪ್ಪಿಸಲು ಜಾಗೃತಿ ಮತ್ತು ಅಗತ್ಯ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಕಾಲ ಕಾಲಕ್ಕೆ ಅಗತ್ಯವಾದ ಲಸಿಕೆ ನೀಡಬೇಕು, ಯಾವುದೇ ಗರ್ಭಿಣಿ ಮತ್ತು ಶಿಶುಗಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಹೆರಿಗೆಗಳು ಸಂಭವಿಸಿದಾಗ ಅಲ್ಲಿನ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತುರ್ತಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು. ಬದಲಾಗಿ ದೂರದ ನಗರದ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವಂತಿಲ್ಲ, ಅತ್ಯಂತ ಕಠಿಣ ಪರಿಸ್ಥಿಯಲ್ಲಿ ಮಾತ್ರ ವಿಮ್ಸ್ ಅಥವಾ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಬೇಕು. ಅಲ್ಲಿನ ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಉಳಿದುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಬಾಣಂತಿಯರಿಗೆ ಪೌಷ್ಟಿಕ ಆಹಾರದ ಸೇವನೆಯ ಮಹತ್ವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಅಶಾಕಾರ್ಯಕರ್ತೆಯರು ಬಾಣಂತಿಯರ ಕಾಳಜಿ ವಹಿಸಬೇಕು. ಇದರಿಂದ ಬಾಲ್ಯದಲ್ಲಿಯೇ ಶಿಶು ಮರಣ ಸಂಭವಿಸುವ ಸಾಧ್ಯತೆ ಕಡಿಮೆಯಾಗಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು, ಜಿಲ್ಲೆಯಲ್ಲಿ ಸಂಭವಿಸಿದ ತಾಯಿ ಮತ್ತು ಶಿಶು ಮರಣ ಪ್ರಕರಣಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನೀಲ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಟಾನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ವಿಮ್ಸ್ ಪ್ರಸೂತಿ ತಜ್ಞ ಡಾ.ವೀರೆಂದ್ರಕುಮಾರ, ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆಯುಷ್ ಅಧಿಕಾರಿ ಡಾ,ಸುಜಾತ ಪಾಟೀಲ. ಸೇರಿದಂತೆ ಖಾಸಗಿ ಆಸ್ಪತ್ರೆ ವೈದ್ಯಾಧಿಕಾರಿಗಳು, ಶುಶೂಷ್ರಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಮತ್ತಿತರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *