ಚಿತ್ರದುರ್ಗ ನ. 10:
ಸದೃಢ ಯುವಜನ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅನಿಮಿಯ (ರಕ್ತ ಹೀನತೆ) ಮುಕ್ತ ಕರ್ನಾಟಕ ಯೋಜನೆ ಪೂರಕವಾಗಿದ್ದು, ಜಿಲ್ಲೆಯ ಎಲ್ಲ ಪಿಯುಸಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನಿಮಿಯು ಮುಕ್ತ ಕರ್ನಾಟಕ ಯೋಜನೆ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಭಿನವ್ ಅವರು, ರಾಜ್ಯದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ 16 ರಿಂದ 18 ವರ್ಷದ ಯುವ ಜನರನ್ನು ಪತ್ತೆಹಚ್ಚಿ, ಅವರಿಗೆ ಪೂರಕ ಚಿಕಿತ್ಸಾ ಕ್ರಮಗಳ ಮೂಲಕ ಆರೋಗ್ಯ ಸುಧಾರಣೆ ಮಾಡಲು ಆರೋಗ್ಯ ಇಲಾಖೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಯಾ ಕಾಲೇಜುಗಳಲ್ಲಿಯೇ ಅವರಲ್ಲಿನ ಹಿಮೋಗ್ಲೋಬಿನ್ ಅಂಶದ ಪ್ರಮಾಣವನ್ನು ಪರೀಕ್ಷಿಸಿ 11 ಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಅಂಶ ಹೊಂದಿರುವ ವಿದ್ಯಾರ್ಥಿಗಳ ವಿವರವನ್ನು ಸಂಗ್ರಹಿಸಲಾಗುವುದು, ಇದಕ್ಕಾಗಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯರ ತಂಡದ ನೆರವು ಪಡೆಯಲಾಗುವುದು. ಮೊದಲು ದತ್ತಾಂಶ ಸಂಗ್ರಹಿಸಿ, ರಕ್ತಹೀನತೆಯಿಂದ ಬಳಲುತ್ತಿರುವ ಯುವಜರಿಗೆ ಫೋಲಿಕ್ ಆಮ್ಲ, ಕಬ್ಬಿಣಾಂಶದ ಮಾತ್ರೆಗಳನ್ನು ನೀಡುವುದು, ಪೌಷ್ಠಿಕ ಆಹಾರ ಸೇವನೆ ಕುರಿತಂತೆ ಜಾಗೃತಿ ಮೂಡಿಸುವುದು ಮುಂತಾದ ಆರೋಗ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಮಹಿಳೆಯರಲ್ಲಿ ರಕ್ತ ಹೀನತೆ ತಡೆಗಟ್ಟಲು ಸ್ವ ಸಹಾಯ ಗುಂಪುಗಳೊಂದಿಗೆ ಸಭೆ ನಡೆಸಿ, ಜಾಗೃತಿ ಮೂಡಿಸಲಾಗುವುದು ಎಂದರು. ಜಿ.ಪಂ. ಸಿಇಒ ಸೋಮಶೇಖರ್ ಅವರು ಪ್ರತಿಕ್ರಿಯಿಸಿ, ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಲ್ಲಿನ ರಕ್ತ ಹೀನತೆ ಪತ್ತೆಹಚ್ಚುವ ಕಾರ್ಯ ಸಮರ್ಪಕವಾಗಿ ನಡೆಯಬೇಕು, ರಕ್ತ ಹೀನತೆಯ ನಿವಾರಣೆಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಜರುಗಬೇಕು, ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಬಾಲ್ಯ ನ್ಯುಮೋನಿಯಾ ತಡೆಗೆ ಅಭಿಯಾನ :
*********ಜಿಲ್ಲೆಯಲ್ಲಿ 05 ವರ್ಷದೊಳಗಿನ ಮಕ್ಕಳಲ್ಲಿ ಕಾಡುವಂತಹ ನ್ಯುಮೋನಿಯಾವನ್ನು ಪತ್ತೆಹಚ್ಚಲು ಇದೇ ನವೆಂಬರ್ 12 ರಿಂದ 2024 ರ ಫೆಬ್ರವರಿ 29 ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಶಾ, ಅಂಗನವಾಡಿ, ಎ.ಎನ್‍ಎಂ. ಕಾರ್ಯರ್ತರ ಮೂಲಕ ಮನೆ ಮನೆಗಳಲ್ಲಿ ಸಮೀಕ್ಷೆ ನಡೆಸಿ, 05 ವರ್ಷದೊಳಗಿನ ಮಕ್ಕಳಲ್ಲಿ ಸಂಶಯಾಸ್ಪದ ನ್ಯುಮೋನಿಯಾ ಪ್ರಕರಣಗಳನ್ನು ಪತ್ತೆ ಹಚ್ಚಲು ಕ್ರಮ ವಹಿಸಲಾಗುವುದು, ಇಂತಹ ಸಂಶಯಾಸ್ಪದ ಮಕ್ಕಳನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿ, ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿ, ನ್ಯುಮೋನಿಯಾ ಮುಕ್ತ ಸಮಾಜ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಆರ್‍ಸಿಹೆಚ್ ಅಧಿಕಾರಿ ಡಾ. ಅಭಿನವ್ ಹೇಳಿದರು. ಬಾಲ್ಯದಲ್ಲಿ ಮಕ್ಕಳಿಗೆ ಕಾಡುವ ಶೀತ, ಕೆಮ್ಮು, ಜ್ವರ ರೋಗ ಲಕ್ಷಣಗಳಲ್ಲಿ ಸಂಶಯಾಸ್ಪದ ನ್ಯುಮೋನಿಯಾ ಪತ್ತೆಗೆ ಹೆಚ್ಚಿನ ತರಬೇತಿ ಅಗತ್ಯವಿದೆ, ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು, ಈ ಬಗ್ಗೆ ಆರೋಗ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಅತಿಸಾರ ಭೇದಿ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿ:
ಅತಿಸಾರ ಭೇದಿಯಿಂದ ಸಾವು ಸಂಭವಿಸುವುದನ್ನು ತಡೆಯುವುದಕ್ಕಾಗಿ ಸಮುದಾಯದಲ್ಲಿ ಅರಿವು ಮೂಡಿಸಲು ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ನ.15 ರಿಂದ 28 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ತಿಳಿಸಿದರು. ಜಿಲ್ಲೆಯಲ್ಲಿ ಐದು ವರ್ಷದೊಳಗಿನ 1,54,500 ಮಕ್ಕಳಿದ್ದು, ಐದು ವರ್ಷದೊಳಗಿನ ಪ್ರತಿ ಮಗುವಿನ ಮನೆಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ಕೈ ತೊಳೆಯುವುದು ಸೇರಿದಂತೆ ಆರೋಗ್ಯಕರ ಜೀವನಶೈಲಿಯ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳು ಸಹ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಪ್ರತಿ ವರ್ಷ ಅತಿಸಾರ ಸಂಬಂಧಿ ರೋಗಗಳಿಂದ ದೇಶದಲ್ಲಿ 62 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗುತ್ತಾರೆ. ಸ್ವಚ್ಛತೆಯ ಕೊರತೆ, ಅಶುದ್ಧ ನೀರಿನ ಸೇವನೆ ಅತಿಸಾರ ಭೇದಿಯ ಪ್ರಮುಖ ಕಾರಣಗಳಾಗಿವೆ. ಎರಡು ವಾರಗಳ ಕಾಲ ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಒಆರ್‍ಎಸ್ ಸ್ಯಾಚೆಟ್ ಹಾಗೂ ಝಿಂಕ್ ಮಾತ್ರೆಗಳನ್ನು ವಿತರಿಸಲು ಕ್ರಮ ವಹಿಸಲಾಗುವುದು ಎಂದರು.
ಓಆರ್‍ಎಸ್ ಹಾಗೂ ಜಿಂಕ್ ಮಾತ್ರೆ ಅತಿಸಾರ ಭೇದಿ ನಿಯಂತ್ರಿಸುವಲ್ಲಿ ಅತ್ಯಂತ ಪರಿಣಾಕಾರಿ. ಈ ಪಾಕ್ಷಿಕದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಿದ್ದು, ಈ ಕಾರ್ಯಕ್ರಮ ಯಶಸ್ವಿಗೆ ಸಮುದಾಯದ ಸಹಭಾಗಿತ್ವ ಬಹಳ ಮುಖ್ಯವಾಗಿದೆ. ಆಸ್ಪತ್ರೆ, ಸಂಸ್ಥೆಗಳ ಓವರ್ ಹೆಡ್ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಲಾಗುವುದು ಈ ಕಾರ್ಯಕ್ರಮದ ಭಾಗವಾಗಿದೆ ಎಂದರು. ಜಿ.ಪಂ. ಸಿಇಒ ಸೋಮಶೇಖರ್ ಪ್ರತಿಕ್ರಿಯಿಸಿ ಈಗಾಗಲೆ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿನ ಓವರ್ ಹೆಡ್ ಟ್ಯಾಂಕ್‍ಗಳನ್ನು ಒಂದು ಸುತ್ತು ಸ್ವಚ್ಛ ಮಾಡಿಸಲಾಗಿದೆ. ಈಗ ಪುನಃ ಎಲ್ಲ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಡಿಡಿಪಿಐ ರವಿಶಂಕರ್ ರೆಡ್ಡಿ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಸುಬ್ರಾ ನಾಯಕ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರವೀಂದ್ರ, ಸೇರಿದಂತೆ ಶಿಶು ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅನಿಮಿಯ ಮುಕ್ತ ಕರ್ನಾಟಕಕ್ಕೆ ಯುವಜನರ ಆರೋಗ್ಯ ತಪಾಸಣೆ- ಎಸ್.ಜೆ. ಸೋಮಶೇಖರ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments