ಚಿತ್ರದುರ್ಗ ಮಾ.10:
ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅಕ್ರಮ ಮದ್ಯ ಸಾಗಾಣಿಕೆ ತಡೆ ಸೇರಿದಂತೆ ವಿವಿಧ ಅಕ್ರಮಗಳನ್ನು ತಡೆಗಟ್ಟಿ, ನ್ಯಾಯಸಮ್ಮತ ಚುನಾವಣೆಗೆ ಸಹಕಾರ ನೀಡುವಂತೆ ನೆರೆಯ ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದರು.
ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಕೈಗೊಳ್ಳಬೇಕಿರುವ ಪ್ರಾಥಮಿಕ ಹಂತದ ಮುಂಜಾಗ್ರತಾ ಕ್ರಮಗಳ ಕುರಿತು ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶೀಘ್ರದಲ್ಲಿಯೇ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲಿದ್ದು, ಈ ಸಂದರ್ಭದಲ್ಲಿ ಚುನಾವಣೆ ಸಂಬಂಧ ಜರುಗಬಹುದಾದ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸುಮಾರು 35 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗುವುದು. ಆಂಧ್ರಪ್ರದೇಶದೊಂದಿಗೆ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 150 ಕಿ.ಮೀ. ಗಡಿ ಪ್ರದೇಶ ಹಂಚಿಕೊಂಡಿದ್ದು, ಚುನಾವಣೆ ಸಂದರ್ಭದಲ್ಲಿ ನೆರೆಯ ರಾಜ್ಯದಿಂದ ಈ ಜಿಲ್ಲೆಯೆಡೆಗೆ ಅಕ್ರಮವಾಗಿ ಮದ್ಯ, ವಿವಿಧ ಬಗೆಯ ಸಾಮಗ್ರಿಗಳ ಸಾಗಾಣಿಕೆ ಮಾಡುವುದು, ಗೂಂಡಾಗಳು ಜಿಲ್ಲೆಯೊಳಗೆ ಆಗಮಿಸಿ, ಚುನಾವಣೆಯ ಮೇಲೆ ಪ್ರಭಾವ ಬೀರುವಂತಹ ಸಾಧ್ಯತೆಗಳಿರುತ್ತವೆ. ಹೀಗಾಗಿ ಇಂತಹ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸುವ ಸಲುವಾಗಿ ಆಂಧ್ರದ ಗಡಿಯಲ್ಲಿ ಬರುವ ಮೊಳಕಾಲ್ಮೂರು ತಾಲ್ಲೂಕಿನ ಉಡೇವು, ಮಲ್ಲಸಮುದ್ರ, ಯದ್ದಲುಬೊಮ್ಮನಹಟ್ಟಿ, ಪಾತಪ್ಪನಗುಡಿ, ಕಣಪುಪ್ಪೆ. ಚಳ್ಳಕೆರೆ ತಾಲ್ಲೂಕಿನ ನಾಗಪ್ಪನಹಳ್ಳಿ ಗೇಟ್. ಹಿರಿಯೂರು ತಾಲ್ಲೂಕಿನ ಖಂಡೇನಹಳ್ಳಿ ಹಾಗೂ ಪಿ.ಡಿ. ಕೋಟೆ ಕ್ರಾಸ್ ಸೇರಿದಂತೆ ಒಟ್ಟು 08 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, ತೀವ್ರ ನಿಗಾ ವಹಿಸಲಾಗುವುದು. ಅದೇ ರೀತಿ ಆಂಧ್ರಪ್ರದೇಶ ರಾಜ್ಯದ ವ್ಯಾಪ್ತಿಯಲ್ಲಿಯೂ ಅಧಿಕಾರಿಗಳು ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ, ಅಕ್ರಮವಾಗಿ ಅಲ್ಲಿಂದ ಮದ್ಯ ಸಾಗಾಣಿಕೆಯಾಗದಂತೆ ಹಾಗೂ ಮತದಾರರಿಗೆ ಹಂಚಿಕೆ ಮಾಡುವ ಸಲುವಾಗಿ ವಿವಿಧ ಸಾಮಗ್ರಿಗಳನ್ನು ಸಾಗಿಸದಂತೆ ನಿಗಾ ವಹಿಸಬೇಕು. ಅಲ್ಲದೆ ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಹಾಗೂ ಚುನಾವಣೆಯ ಮೇಲೆ ಪ್ರಭಾವ ಬೀರದಂತೆ ಮಾಡಲು, ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿ ಆ ರಾಜ್ಯದ ಗಡಿ ಪ್ರದೇಶದಲ್ಲಿ ಗುರುತಿಸಲಾದ ರೌಡಿಶೀಟರ್‍ಗಳನ್ನು ಪಟ್ಟಿ ಮಾಡಿ, ಅವರ ಬಗ್ಗೆಯೂ ವಿಶೇಷ ನಿಗಾ ವಹಿಸಲು ಅಲ್ಲಿನ ಅಧಿಕಾರಿಗಳು ಕ್ರಮ ವಹಿಸಬೇಕು. ಆಂಧ್ರಪ್ರದೇಶದ ವ್ಯಕ್ತಿಗಳು, ಈ ಭಾಗದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸದಂತೆ ನಿಗಾ ವಹಿಸುವುದು. ಆಂಧ್ರ ಗಡಿ ಪ್ರದೇಶ ವ್ಯಾಪ್ತಿಯಲ್ಲಿನ ಮದ್ಯದಂಗಡಗಳಲ್ಲಿ ಸರಾಸರಿಗಿಂತಲೂ ಹೆಚ್ಚಿನ ಮದ್ಯ ವಹಿವಾಟು ನಡೆಯುತ್ತಿದ್ದಲ್ಲಿ, ಅಂತಹ ವಹಿವಾಟಿನ ಬಗ್ಗೆಯೂ ನಿಗಾ ವಹಿಸಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ನೆರೆಯ ರಾಜ್ಯದ ಅಧಿಕಾರಿಗಳು ಇಲ್ಲಿನ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಕೋರಿದರು.
ಇದಕ್ಕೆ ಪ್ರತಿಯಾಗಿ ಸ್ಪಂದಿಸಿದ ಅನಂತಪುರ ಜಿಲ್ಲೆಯ ಕಲೆಕ್ಟರ್ ನಾಗಲಕ್ಷ್ಮಿ ಅವರು, ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸಲು ಬೇಕಾದ ಎಲ್ಲ ಸಹಕಾರ ನೀಡಲಾಗುವುದು, ಈ ನಿಟ್ಟಿನಲ್ಲಿ ಜಿಲ್ಲೆಯ ಗಡಿ ವ್ಯಾಪ್ತಿಯಲ್ಲಿಯೂ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, ಅಕ್ರಮ ಮದ್ಯ ಮತ್ತು ಸಾಮಗ್ರಿಗಳ ಸಾಗಾಣಿಕೆ ತಡೆಗೆ ತೀವ್ರ ನಿಗಾ ವಹಿಸಲಾಗುವುದು ಎಂದು ಹೇಳಿದರು.
ವಿಡಿಯೋ ಸಂವಾದದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರು, ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ವಿರುವ ಮಾಹಿತಿ ವಿನಿಮಯ ಮಾಡಿಕೊಂಡರು. ಅನಂತಪುರ ಜಿಲ್ಲೆ ಜಿಲ್ಲಾ ರಕ್ಷಣಾಧಿಕಾರಿ ಡಾ. ಫಕೀರಪ್ಪ ಕಾಗಿನೆಲ್ಲಿ ಅವರು ಮಾತನಾಡಿ, ಆಂಧ್ರ ಗಡಿ ಭಾಗದ ವ್ಯಾಪ್ತಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಸಂಚಾರಿ ಚೆಕ್‍ಪೋಸ್ಟ್‍ಗಳನ್ನು ಮಾಡಲಾಗುವುದು, ಅಲ್ಲದೆ ಸ್ಥಾಪಿತ ಚೆಕ್‍ಪೋಸ್ಟ್‍ಗಳಲ್ಲಿ ಅಕ್ರಮ ತಡೆಗೆ ತೀವ್ರ ಕಟ್ಟೆಚ್ಚರ ವಹಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಸೇರಿದಂತೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ನಿಯೋಜಿತ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳಾಗಿರುವ ತಹಸಿಲ್ದಾರರು, ಅಬಕಾರಿ ಇಲಾಖೆ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಚುನಾವಣಾ ಅಕ್ರಮಗಳ ತಡೆಗಾಗಿ ಆಂಧ್ರ ಅಧಿಕಾರಿಗಳ ಸಹಕಾರ ಕೋರಿಕೆ ಗಡಿಭಾಗದ ಚೆಕ್‍ಪೋಸ್ಟ್‍ಗಳಲ್ಲಿ ತೀವ್ರ ನಿಗಾ : ದಿವ್ಯಪ್ರಭು ಜಿ.ಆರ್.ಜೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments