ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 1856876 ಮತದಾರರು, 2168 ಮತಗಟ್ಟೆಗಳು* ಏ.26ರ ಮತದಾನಕ್ಕೆ ಕಾರ್ಯಕ್ಕೆ 9904 ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕ ಜಿಲ್ಲಾಧಿಕಾರಿ .ಚುನಾವಣಾಧಿಕಾರಿ ವೆಂಕಟೇಶ್

by | 22/04/24 | ಲೋಕಸಭಾ ಚುನಾವಣೆ-2024

ಚಿತ್ರದುರ್ಗ ಏ.22:
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏಪ್ರಿಲ್ 26ರಂದು ಮತದಾನ ಜರುಗಲಿದೆ. ಲೋಕಸಭಾ ಕ್ಷೇತ್ರದ 8 ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ 1856876 ಮತದಾರರು ಇದ್ದು, 2168 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ 9904 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮತದಾನ ಸಿದ್ಧತೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಚುನಾವಣಾ ಕಣದಲ್ಲಿ 18 ಪುರುಷ ಹಾಗೂ 2 ಮಹಿಳೆಯರು ಸೇರಿ 20 ಅಭ್ಯರ್ಥಿಗಳು ಇದ್ದಾರೆ. ಒಂದು ಬ್ಯಾಲೆಟ್ ಯುನಿಟ್‍ನಲ್ಲಿ 16 ಅಭ್ಯರ್ಥಿಗಳ ವಿವರ ನಮೂದು ಮಾಡಬಹುದಾಗಿದೆ. ಹಾಗಾಗಿ ಈ ಬಾರಿಯ ಮತದಾನದಲ್ಲಿ 2 ಬ್ಯಾಲೆಟ್ ಯುನಿಟ್‍ಗಳು ಇರಲಿವೆ. 20 ಅಭ್ಯರ್ಥಿಗಳು ಒಂದು ನೋಟಾ ಸೇರಿ 21  ವಿವರಗಳನ್ನು ಬ್ಯಾಲೆಟ್ ಯುನಿಟ್‍ನಲ್ಲಿ ನಮೂದು ಮಾಡಲಾಗುವುದು. 2168 ಮತಗಟ್ಟೆಗಳಿಗೆ 4336 ಬ್ಯಾಲೆಟ್ ಯುನಿಟ್, 2168 ಕಂಟ್ರೋಲ್ ಯುನಿಟ್ ಹಾಗೂ ವಿವಿಪ್ಯಾಟ್‍ಗಳು ಬಳಕೆಯಾಗಿಲಿವೆ.  ಮುಂಜಾಗೃತವಾಗಿ 947 ಬ್ಯಾಲೆಟ್ ಯುನಿಟ್, 642 ಕಂಟ್ರೋಲ್ ಯುನಿಟ್ ಹಾಗೂ 745 ವಿವಿಪ್ಯಾಟ್‍ಗಳನ್ನು ಹೆಚ್ಚುವರಿವಾಗಿ ಮೀಸಲು ಇರಿಸಿ ಸದ್ಧಪಡಿಸಿಕೊಳ್ಳಲಾಗಿದೆ. ಮತಗಟ್ಟೆಗಳಿಗೆ ನಿಯೋಜನೆಗೊಂಡ 9904 ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಎರಡು ಹಂತದ ತರಬೇತಿ ನೀಡಲಾಗಿದೆ. ಇದರಲ್ಲಿ ಅಗತ್ಯ ಇರುವ ಮತದಾನ ಅಧಿಕಾರಿ ಹಾಗೂ ಸಿಬ್ಬಂದಿ ಬಲಕ್ಕೆ ಅನುಗುಣವಾಗಿ ಶೇ.20 ರಷ್ಟು ಹೆಚ್ಚುವರಿ ಸಿಬ್ಬಂದಿಗೆ ತರಬೇತಿ ನೀಡಿ ಮೀಸಲು ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

*ಮತದಾರರನ್ನು ಆಕರ್ಷಿಸಲು 54 ವಿಶೇಷ ಮತಗಟ್ಟೆಗಳ ಸ್ಥಾಪನೆ :*

ಚಿತ್ರದುರ್ಗ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರನ್ನು ಆಕರ್ಷಿಸಲು 54 ವಿಶೇಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಮಹಿಳಾ ಮತದಾರರನ್ನು ಉತ್ತೇಜಿಸಲು ಪ್ರತಿ ವಿಧಾನಸಭಾವಾರು ಮಹಿಳಾ ಮತದಾರರು ಹೆಚ್ಚಿರುವ 5 ಕಡೆ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ ಚುನಾವಣಾ ಕಾರ್ಯ ನಿರ್ವಹಿಸಲಿದ್ದಾರೆ. ಇದೇ ಮಾದರಿಯಲ್ಲಿ ಪ್ರತಿ ವಿಧಾನ ಸಭಾವಾರು 6 ವಿಶೇಷ ಚೇತನ, ಯುವ, ವಿಷಯಾಧಾರಿತ ಹಾಗೂ ಸ್ಥಳೀಯ ಇತಿಹಾಸ ಪರಂಪರೆ, ಸಂಸ್ಕøತಿ ಬಿಂಬಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಚುನಾವಣಾ ಆಯೋಗದಿಂದ ಬಿಸಿಲಾಘಾತ ಹಾಗೂ ಕೋವಿಡ್ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನವಿದೆ. ಮತಗಟ್ಟೆಗಳಲ್ಲಿ ತೆಂಗಿನ ಚಪ್ಪರ ಹಾಗೂ ಶಾಮೀಯಾನ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

*368 ಮೈಕ್ರೋ ಅಬ್ಸರ್‌ವರ್‌ಗಳ ನೇಮಕ 1167 ಮತಗಟ್ಟೆಗಳ ವೆಬ್ ಕಾಸ್ಟಿಂಗ್:
*

ಚುನಾವಣಾ ಆಯೋಗದ ನಿರ್ದೇಶನದಂತೆ ಕೇಂದ್ರ ಸರ್ಕಾರ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 368 ಅಧಿಕಾರಿಗಳಿಗೆ ತರಬೇತಿ ನೀಡಿ, 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈಕ್ರೋ ಅಬ್ಸರ್‌ವರ್‌ಗಳ ನೇಮಕ ಮಾಡಲಾಗಿದೆ.  ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ಮತಗಟ್ಟೆಗಳ ಪೈಕಿ ಶೇ.50 ರಷ್ಟು ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ಮಾಡಬೇಕು. ಇದರ ಅನುಸಾರ ಕ್ಷೇತ್ರದ 1167 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು. ಈ ವೆಬ್ ಕಾಸ್ಟಿಂಗ್‍ನ್ನು ಜಿಲ್ಲಾ ಹಂತದ ಕಂಟ್ರೋಲ್ ರೂಮ್, ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗದ ಕಂಟ್ರೋಲ್ ರೂಮ್‍ಗಳ ಮೂಲಕ ವೀಕ್ಷಣೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

*ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿ ಮತ ಎಣಿಕೆ ಕೇಂದ್ರ:*

ಪ್ರತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಏಪ್ರಿಲ್ 25 ರಂದು ಅಂತಿಮ ಹಂತದ ಮತದಾನ ಯಂತ್ರಗಳ ಯಾಧೃಚ್ಛೀಕರಣ (ರ್ಯಾರಮೈಜೇಷನ್) ಜರುಗಲಿದೆ. ಮತದಾನ ನಂತರ ಡಿ ಮಸ್ಟರಿಂಗ್ ಕೇಂದ್ರಗಳಲ್ಲಿ ಮತದಾನ ಯಂತ್ರಗಳನ್ನು ಸಂಗ್ರಹಿಸಿ ಭದ್ರಪಡಿಸಿ, ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್‍ರೂಮ್‍ಗೆ ಕಳುಹಿಸಿಕೊಡಲಾಗುತ್ತದೆ. ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.

*17,47,963 ಮತದಾರರಿಗೆ ಓಟರ್ ಸ್ಲಿಪ್ ವಿತರಣೆ:*

ಲೋಕಸಭಾ ಕ್ಷೇತ್ರದ 17,47,963 ಓಟರ್ ಸ್ಲಿಪ್ ವಿತರಣೆ ಮಾಡಲಾಗಿದೆ. ಇದರಲ್ಲಿನ ಕ್ಯೂರ್ ಕೋಡ್ ಬಳಸಿಕೊಂಡು ಮತದಾರರ ಮತ್ತು ಮತದಾನ ಕೇಂದ್ರದ ಮಾಹಿತಿ ಪಡೆಯಬಹುದಾಗಿದೆ. ಈ ಓಟರ್ ಸ್ಲಿಪ್‍ಗಳು ಮಾಹಿತಿಗಾಗಿ ಮಾತ್ರ ನೀಡಲಾಗಿದ್ದು, ಮತದಾನ ಸಂದರ್ಭದಲ್ಲಿ ಚುನಾವಣಾ ಆಯೋಗದಿಂದ ನೀಡಿರುವ ಎಪಿಕ್ ಕಾರ್ಡ್ ಅಥವಾ ಗೊತ್ತುಪಡಿಸಿದ 12 ಮಾದರಿಯ ಗುರುತಿನ ಚೀಟಿಗಳಲ್ಲಿ ಒಂದು ಕಡ್ಡಾಯವಾಗಿ ಹಾಜರು ಪಡಿಸಬೇಕು.

*ಅಂಚೆ ಮತದಾನ:*

ಜಿಲ್ಲೆಯ 509 ಜನರು ಸೇನೆ ಹಾಗೂ ಅರೆ ಸೇನಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತಿದ್ದಾರೆ. ಇವರಿಗೆ ಅಭ್ಯರ್ಥಿಗಳ ಬ್ಯಾಲೆಟ್‍ನ ವಿದ್ಯುನ್ಮಾನ ಅಂಚೆ ಮತ ಪತ್ರವನ್ನು ಆನ್‍ಲೈನ್ ಮೂಲಕವೇ ಸೃಜಿಸಿ ರವಾನೆ ಮಾಡಲಾಗಿದೆ. ಇವರು ತಾವು ಕರ್ತವ್ಯ ನಿರ್ವಹಿಸುತಿರುವ ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ ಮತದಾನ ಸೇವಾ ಕೇಂದ್ರಗಳಲ್ಲಿ ಮತ ಚಲಾಯಿಸುವರು. 85 ವರ್ಷ ದಾಟಿದ 2722 ಹಿರಿಯ ನಾಗರಿಕರು ಹಾಗೂ 1526 ವಿಕಲಚೇತನ ಮತದಾರಲ್ಲಿ ಮನೆಯಿಂದ ಮತ ಚಲಾಯಿಸಲು ಆಯ್ಕೆ ಮಾಡಿಕೊಂಡಿದ್ದು. ಏಪ್ರಿಲ್ 13 ರಿಂದ 16 ವರೆಗೆ 8 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಯಿಂದ ಮತದಾನ ಪ್ರಕ್ರಿಯೆ ನಡೆದಿದ್ದು, 85 ವರ್ಷ ಮೇಲ್ಪಟ್ಟ 2061 ಹಾಗೂ 1475 ವಿಕಲಚೇತನರು ಮತ ಚಲಾಯಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಕರ್ತವ್ಯದಲ್ಲಿ ತೊಡಗಿದ ಬೇರೆ ಲೋಕಸಭಾ ಕ್ಷೇತ್ರ 896 ನೌಕರರು ಫಾರಂ 12 ಅಡಿ ಹಾಗೂ ಅರ್ಜಿಸಲ್ಲಿಸಿದ್ದು, ಇವರ ಮತದಾನಕ್ಕೆ ಅನುಕೂಲವಾಗುವಂತೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಅಂಚೆ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಏಪ್ರಿಲ್ 21 ವರೆಗೆ 575 ಜನರು ಮತ ಚಲಾಯಿಸಿದ್ದಾರೆ.
ಅಗತ್ಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಗಳ 884 ಮತದಾರರು ಮತಚಲಾಯಿಸಲು ಫಾರಂ 12 ಡಿ ಅಂಚೆ ಮತ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇವರ ಮತದಾನಕ್ಕೆ ಅನುಕೂಲವಾಗುವಂತೆ ಚಿತ್ರದುರ್ಗ ಜಿಲ್ಲೆಯ ತಹಶೀಲ್ದಾರ್ ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರ ತೆರೆಯಲಾಗಿದೆ. 464 ಜನರು ಮತ ಚಲಾಯಿಸಿದ್ದಾರೆ.

ಫಾರಂ 12 ಎ ಅಡಿ ಜಿಲ್ಲೆಯ 7906 ಜನರಿಗೆ ಚುನಾವಣೆ ಕರ್ತವ್ಯ ನಿರತ ಮತದಾರ ಪ್ರಮಾಣ ಪತ್ರ ನೀಡಲಾಗಿದೆ. ಇವರು ಮತದಾನ ದಿನ ನಿಯೋಜನೆಗೊಂಡ ಮತಗಟ್ಟೆಗಳಲ್ಲಿಯೇ ತಮ್ಮ ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

*ರೂ.7.53 ಕೋಟಿ ಮೌಲ್ಯದ ಹಣ, ಮದ್ಯ ಹಾಗೂ ವಸ್ತುಗಳ ವಶ:*

ಮಾದರಿ ನೀತಿ ಸಂಹಿತೆ ಪಾಲನೆಗಾಗಿ 30 ಎಫ್.ಎಸ್.ಟಿ, 48 ಎಸ್.ಎಸ್.ಟಿ, 8 ವಿ.ಎಸ್.ಟಿ, ವಿ.ವಿ.ಟಿ, ಎ.ಟಿ. ಹಾಗೂ ಎ.ಇ.ಓ ತಂಡಗಳನ್ನು ಹಾಗೂ 195 ಸೆಕ್ಟರ್ ಆಫೀಸರ್‌ಗಳನ್ನು ನೇಮಿಸಲಾಗಿದೆ. ಇದುವರೆಗೂ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ರೂ.2,49,76,348 ನಗದು, ರೂ.1,40,43,006 ಮೌಲ್ಯದ 34142.69 ಲೀಟರ್ ಮದ್ಯ, ರೂ.3,55,00,000 ಮೌಲ್ಯದ ಸುಮಾರು 5.3 ಕೆ.ಜಿ. ಚಿನ್ನಾಭರಣ, ರೂ.7,79,160 ಮೌಲ್ಯದ ಉಚಿತ ಕೊಡಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಕಾಯ್ದೆ ಉಲ್ಲಂಘನೆ ಅಡಿ 863 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

*ಮತದಾರರು ಅಲ್ಲದವರು ಕ್ಷೇತ್ರ ತೊರೆಯಲು ಸೂಚನೆ:*

ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ನಂತರ ರಾಜಕೀಯ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷದವರು ಮನೆ ಮನೆ ಪ್ರಚಾರ ನಡೆಸಬಹದು. ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಕ್ಷೇತ್ರದ ಮತಾದರರು ಅಲ್ಲದವರು ಕ್ಷೇತ್ರ ಬಿಡಲು ಸೂಚನೆ ನೀಡಲಾಗಿದೆ. ಮತದಾನದ ದಿನ ಸಾರ್ವತ್ರಿಕ ರಜೆ, ಏಪ್ರಿಲ್ 24ರ ಸಂಜೆ 6 ಗಂಟೆಯಿಂದ 26ರ ಸಂಜೆ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ, ಜಾತ್ರೆ ಉತ್ಸವಗಳನ್ನು ನಿಷೇಧ ಹಾಗೂ ಸಿ.ಆರ್.ಪಿ.ಸಿ ಕಲಂ 144 ಅಡಿ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

*ಕಂಟ್ರೋಲ್ ರೂಂ ಸ್ಥಾಪನೆ:*

ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್ ರೂಂಗಳನ್ನು ತರೆಯಲಾಗಿದೆ. ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿದಂತೆ  ಜಿಲ್ಲಾ ಕಂಟ್ರೋಲ್ ರೂಮ್ ಸಂಖ್ಯೆ 1950 ಹಾಗೂ ಮೊಳಕಾಲ್ಮೂರು (08198-229234) ಚಳ್ಳಕೆರೆ (08195-295095), ಚಿತ್ರದುರ್ಗ (08194-222416), ಹಿರಿಯೂರು(08193-263226) ಹೊಸದುರ್ಗ(08199-295058), ಹೊಳಲ್ಕೆರೆ (08191-200013) ಸಾರ್ವಜನಿಕರು ಕರೆ ಮಾಡಬಹದು. ಚುನಾವಣೆ ಆಯೋಗದಿಂದ ಮತದಾನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲಾ ಅರ್ಹ ಮತದಾರರು ತಪ್ಪದೇ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೋರಿದ್ದಾರೆ.

*8 ಜನರ ಗಡಿಪಾರು 3300 ಪೊಲೀಸರ ನೇಮಕ:*

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾತನಾಡಿ, ಮತದಾನ ಶಾಂತಿಯುತವಾಗಿ ನಡೆಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯ 1808 ಜನರ ವಿರುದ್ಧ ಕಾನೂನು ಪ್ರಕ್ರಿಯೆ ಜರುಗಿಸಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಎದುರಿಗೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. 8 ಜನರಿಗೆ ಗಡಿಪಾರು ಮಾಡಲಾಗಿದೆ.
ಜಿಲ್ಲೆಗೆ ಎರಡು ಸಿ.ಆರ್.ಪಿ.ಎಫ್ ತುಕಡಿಗಳು ಆಗಮಿಸಿವೆ. ಇದುವರೆಗೂ ಜಿಲ್ಲೆಯಲ್ಲಿ ಗಲಭೆ ಉಂಟಾಗುವ 41 ಕಡೆ ಪೊಲೀಸ್ ಬಲ ಪ್ರದರ್ಶನವನ್ನು ಮಾಡಲಾಗಿದೆ. 36 ಕಡೆ ರೂಟ್ ಮಾರ್ಚ್ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ವೈರ್‍ಲೆಸ್ ಸಂವಹನ ಸ್ಥಾಪಿಸಲಾಗಿದೆ. 20 ಮತಗಟ್ಟೆ ವ್ಯಾಪ್ತಿಯಲ್ಲಿ ಒಂದು ಪಿ.ಎಸ್.ಐ ನೇತೃತ್ವದಲ್ಲಿ ಸೆಕ್ಟರ್ ಪೊಲೀಸ್ ತಂಡ, 4 ಸೆಕ್ಟರ್ ಸಂಚಾರಿ ಪೊಲೀಸ್ ತಂಡಗಳ ಮೇಲೆ ಸರ್ಕ್‍ಲ್ ಇನ್ಸೆಪ್ಟರ್‍ಗಳ ಪೊಲೀಸ್ ತಂಡ, 6 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒರ್ವ ಡಿವೈಎಸ್‍ಪಿ ಹಾಗೂ 2 ಎ.ಎಸ್.ಪಿ ಹಾಗೂ ಒಬ್ಬ ಎಸ್ಪಿ ಕರ್ತವ್ಯ ನಿರ್ವಹಿಸಲಿದ್ದಾರೆ.  ಒಟ್ಟಾರೆ 3300 ಪೊಲೀಸ್ ಸಿಬ್ಬಂದಿಗಳನ್ನು ಮತದಾನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ 950 ಗೃಹ ರಕ್ಷಕರು, 6 ಕೆ.ಎಸ್.ಆರ್.ಪಿ.ಸಿ ತುಕಡಿ ಹಾಗೂ ಸಿ.ಆರ್.ಪಿ.ಎಫ್ ತುಕಡಿಗಳು ಇರಲಿವೆ. ಜಿಲ್ಲೆಯಲ್ಲಿ 280 ಸೂಕ್ಷ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಉಳಿದಂತೆ ಪ್ರತಿ ಮತಗಟ್ಟೆ ಒರ್ವ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ. ಮತದಾನ ತರುವಾಯ ಸ್ಟ್ರಾಂಗ್ ರೂಮ್ ಹಾಗೂ ಮತ ಎಣಿಕೆ ದಿನ ಮತ ಎಣಿಕೆ ಕೇಂದ್ರಗಳನ್ನು ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.

*ಮತದಾನ ಹೆಚ್ಚಳ ಕ್ರಮ:*

ಜಿಲ್ಲಾ ಸ್ಪೀಪ್ ಅಧ್ಯಕ್ಷ ಹಾಗೂ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಮಾತನಾಡಿ, ಕಳೆದ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.70.7 ರಷ್ಟು ಮತದಾನವಾಗಿತ್ತು. ಈ ಬಾರಿ ಈ ಮತದಾನ ಪ್ರಮಾಣ ಹೆಚ್ಚಿಸಲು ಅನೇಕ ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಳೆದ ಬಾರಿ ಚಿತ್ರದುರ್ಗ ಹಾಗೂ ಹಿರಿಯೂರು ಕ್ಷೇತ್ರದಲ್ಲಿ ಕಡಿಮೆ ಮತದಾನ ದಾಖಲಾಗಿತ್ತು. ಈ ಕ್ಷೇತ್ರಗಳಲ್ಲಿ ಜಿಲ್ಲಾ ಪ್ರಮಾಣಕ್ಕಿಂತಲೂ ಶೇ.10 ರಷ್ಟು ಕಡಿಮೆ ಮತದಾನ ದಾಖಲಾದ  58 ಮತಗಟ್ಟೆಗಳನ್ನು ಗುರುತಿಸಿ ಹೆಚ್ಚಿನ ಮನೆ ಮನೆಗೆ ತೆರಳಿ ಕರಪತ್ರ ಹಂಚಿ ಮತದಾನ ಜಾಗೃತಿ ನಡೆಸಲಾಗಿದೆ. ವಿಕಲಚೇತನರ ಮತದಾನ ಹೆಚ್ಚಿಸಲು ತ್ರಿಚಕ್ರ ವಾಹನ ಜಾಥ, ಮಹಿಳಾ ಮತದಾರರನ್ನು ಸಳೆಯಲು ರಂಗೋಲಿ, ಮೆಹಂದಿ ಹಾಗೂ ಪಿಂಕ್ ಬೂತ್‍ಗಳನ್ನು ಸ್ಥಾಪಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳಿಂದ ಮತದಾನಕ್ಕೆ ಮನವಿ ಮಾಡಿಸಲಾಗಿದೆ. ಇದರೊಂದಿಗೆ ಹಿರಿಯ ನಾಗರಿಕರಲ್ಲಿ ಸಹ ಮತದಾನ ಜಾಗೃತಿ ಮೂಡಿಸಲಾಗಿದೆ. ಪಂಜಿನ ಮೆರವಣಿಗೆ, ಕ್ಯಾಂಡಲ್ ಟಾರ್ಚ್, ಮ್ಯಾರಥಾನ್, ವಾಕಥಾನ್ ಸಹ ನಡೆಸಲಾಗಿದೆ. ಕರಪತ್ರ ಹಂಚುವುದರ ಜೊತೆಗೆ ವಿಡಿಯೋ ವಾಲ್ ಮೂಲಕವೂ ಮತದಾನದ ಜಾಗೃತಿ ಮೂಡಿಸಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page