ಜನಧ್ವನಿ ವಾರ್ತೆ ಕೊಪ್ಪಳ, ನವೆಂಬರ್ 01 (ಕರ್ನಾಟಕ ವಾರ್ತೆ): ಕಾಲುಬಾಯಿ ರೋಗ ನಿಯಂತ್ರಣ ಜಿಲ್ಲಾ ನಿರ್ವಹಣಾ ಸಮಿತಿಯ ಮತ್ತು ಚರ್ಮಗಂಟು ರೋಗದ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 31ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ, ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆಯಡಿ ಮೂರನೇಯ ಸುತ್ತಿನ ಕಾಲುಬಾಯಿ ನಿರೋಧಕ ಲಸಿಕಾ ಅಭಿಯಾನದ ಬಗ್ಗೆ ಚರ್ಚೆ ನಡೆಯಿತು. ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆಯಡಿ ಮೂರನೇಯ ಸುತ್ತಿನ ಕಾಲುಬಾಯಿ ನಿರೋಧಕ ಲಸಿಕಾ ಅಭಿಯಾನ ಕುರಿತು ಕೈಗೊಂಡ ಅಗತ್ಯ ಪೂರ್ವಸಿದ್ಧತೆಗಳ ಕುರಿತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಹೆಚ್.ನಾಗರಾಜ್ ಅವರು ಸಭೆಗೆ ಸವಿವರವಾಗಿ ತಿಳಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆಯಡಿ 3ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವು ನವೆಂಬರ್ 7ನೇ ತಾರೀಖಿನಿಂದ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು, ಲಸಿಕಾ ತಂಡದ ಮುಖ್ಯಸ್ಥರು ಹಾಗೂ ಎಲ್ಲಾ ಲಸಿಕಾದಾರರು ತಮ್ಮ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ವ್ಯಾಪಕ ಪ್ರಚಾರಕ್ಕೆ ಸಲಹೆ: ಆಕಾಶವಾಣಿ ಬಾನುಲಿ ಕೇಂದ್ರಗಳಲ್ಲಿ ಲಸಿಕಾ ಅಭಿಯಾನ ಕುರಿತಂತೆ ಪ್ರಚಾರಕೈಗೊಳ್ಳಬೇಕು. ಲಸಿಕಾ ಅಭಿಯಾನದ ಪ್ರಚಾರಕ್ಕೆ ಕರ ಪತ್ರಗಳನ್ನು ಹಂಚಬೇಕು. ಬ್ಯಾನರಗಳನ್ನು ಪ್ರದರ್ಶಿಸಬೇಕು. ಸ್ಥಳೀಯ ದಿನ ಪತ್ರಿಕೆಗಳಲ್ಲಿ ಪ್ರಕಟಣೆಗಳನ್ನು ಹೊರಡಿಸಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಗ್ರಾಮದ ಗ್ರಾಮ ಪಂಚಾಯತಿಗೆ ಲಸಿಕೆಯ 2 ದಿನದ ಮುಂಚಿತವಾಗಿ ತಿಳಿಸಿ ಗ್ರಾಮ ಪಂಚಾಯತ್ ವತಿಯಿಂದ ಡಂಗುರ ಅಥವಾ ಟಾಂ ಟಾಂ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಆಯಾ ತಾಲ್ಲೂಕಿನ ವಿಸ್ತರಣಾ ಅಧಿಕಾರಿಗಳು ಎಂ.ಪಿ.ಸಿ.ಎಸ್, ರೈತ ಸಂಪರ್ಕ ಕೇಂದ್ರ ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ ಕಾಲು ಬಾಯಿ ಲಸಿಕಾ ಅಭಿಯಾನದ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಶಿಷ್ಠಾಚಾರದಂತೆ ಕಾರ್ಯಕ್ರಮ ನಡೆಸಿ: ಈ ಲಸಿಕಾ ಕಾರ್ಯಕ್ರಮದ ಉದ್ಘಾಟನೆಯು ಶಿಷ್ಟಾಚಾರದಂತೆ ಎಲ್ಲಾ ಕಡೆಗಳಲ್ಲೂ ಅಚ್ಚುಕಟ್ಟಾಗಿ ನಡೆಯಬೇಕು. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಸಂಸದರು, ಮಾನ್ಯ ಸ್ಥಳೀಯ ವಿಧಾನ ಸಭಾ ಶಾಸಕರುಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ ಉದ್ಘಾಟನೆ ನೆರವೇರಿಸುವಂತೆ ಕಾರ್ಯಕ್ರಮಕ್ಕೆ ಏರ್ಪಾಡು ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳಿಗೆ ಸಿಇಓ ಸೂಚನೆ: ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಫೌಜಿಯಾ ತರುನ್ನುಮ್ ಅವರು ಮಾತನಾಡಿ, ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ ಎಲ್ಲಾ ಅಧಿಕಾರಿಗಳು ಕಾರ್ಯಮಗ್ನರಾಗಬೇಕು. ರೋಗ ಇನ್ನೂ ಹರಡದಂತೆ ಮತ್ತು ಹೆಚ್ಚು ಸಾವುಗಳು ಕಂಡುಬರದAತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಚರ್ಮಗಂಟು ರೋಗದ ಬಗ್ಗೆ ರೈತರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಬೇಕು. ರೋಗದ ಕುರಿತು ಮುನ್ನೆಚ್ಚರಿಕೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರಂತರವಾಗಿ ಪತ್ರಿಕಾ ಪ್ರಕಟಣೆಗಳನ್ನು ತಾಲ್ಲೂಕುವಾರು ನೀಡುವಂತೆ ಮತ್ತು ರೋಗನಿಯಂತ್ರಣ ವರದಿಯನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಲಸಿಕೆಗಳ ಶೇಖರಣೆ: ಕೊಪ್ಪಳ ಜಿಲ್ಲೆಯಲ್ಲಿ ದನ ಮತ್ತು ಎಮ್ಮೆ ಸೇರಿ ಒಟ್ಟು 2.95 ಲಕ್ಷ ಜಾನುವಾರುಗಳಿಗೆ ಕಾಲು-ಬಾಯಿ ಲಸಿಕೆಗೊಳಪಡಿಸಲು ನವೆಂಬರ್ 7ರಿಂದ ಡಿಸೆಂಬರ್ 7ರವರೆಗೆ 30 ದಿನ ಅಭಿಯಾನ ನಡೆಯಲಿದೆ. 3ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಅವಶ್ಯವಿರುವ 2.95 ಲಕ್ಷ ಡೋಸುಗಳ ಲಸಿಕೆಯು ಸರಬರಾಜಾಗಬೇಕಿದ್ದು, ಈ ಲಸಿಕೆಗಳನ್ನು ಶೇಖರಣೆಗಾಗಿ ಜಿಲ್ಲೆಯ 7 ವಾಕ್-ಇನ್ ಕೂಲರ್ ಮತ್ತು 18 ಐ.ಎಲ್.ಆರ್ ಗಳಲ್ಲಿ ಅಗತ್ಯ ಶೇಖರಣಾ ತಾಪಮಾನ ವ್ಯವಸ್ಥೆಯಡಿ ತಂಪು-ಸರಪಳಿಯಡಿ ಶೇಖರಿಸಲಾಗಿದೆ. ಈಗಾಗಲೇ 2.95 ಲಕ್ಷ ಸೀರಿಂಜ್ ಹಾಗೂ ನೀಡಲ್ಸ್ಗಳು ಸರಬರಾಜಾಗಿದ್ದು, ಲಭ್ಯ ಜಾನುವಾರುಗಳ ಸಂಖ್ಯೆಗಳಿಗನುಗುಣವಾಗಿ ಆಯಾ ತಾಲ್ಲೂಕುಗಳಿಗೆ ವಿತರಿಸಲಾಗಿದೆ. ಒಟ್ಟು 188 ಲಸಿಕಾದಾರರನ್ನು ಗುರುತಿಸಲಾಗಿದ್ದು, ಲಸಿಕಾದಾರರಿಗೆ ಆದೇಶ ಜಾರಿ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಲಭ್ಯವಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹಾಗೂ ಇಲಾಖೇತರ ಲಸಿಕೆದಾರರನ್ನು ಬಳಸಿಕೊಂಡು 30 ದಿನಗಳ ಅವಧಿಗೆ ದಿನಾಂಕವಾರು ಹಾಗೂ ಗ್ರ‍್ರಾಮವಾರು ಪೂರ್ಣ ವೇಳಾಪಟ್ಟಿಯನ್ನು ತಯಾರಿಸಿ ಲಸಿಕಾ ಕಾರ್ಯಕ್ರಮವನ್ನು ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ 100-120 ಜಾನುವಾರುಗಳಿಗೆ ಒಂದು ಬ್ಲಾಕ್‌ನಂತೆ ಗ್ರಾಮವಾರು ಬ್ಲಾಕ್‌ಗಳನ್ನು ರಚಿಸಿ ಮೈಕ್ರೋಪ್ಲಾನ್‌ನ್ನು ತಯಾರಿಸಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಸಭೆಗೆ ತಿಳಿಸಿದರು.
ಲಸಿಕಾ ಕಾರ್ಯಕ್ರಮದಲ್ಲಿ ಜಾನುವಾರುಗಳಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾದಲ್ಲಿ ನಿಯಂತ್ರಣಕ್ಕಾಗಿ ಅವಶ್ಯವಿರುವ ಔಷಧಿಗಳನ್ನು ದಾಸ್ತಾನಿಕರಿಸಲು, ಲಸಿಕಾ ಕಾರ್ಯಕ್ರಮದಲ್ಲಿ ದೈನಂದಿನ ಲಸಿಕಾ ವರದಿಯನ್ನು ಆನ್‌ಲೈನ್‌ನಲ್ಲಿ ಅದೇ ದಿನ ಮಧ್ಯಾಹ್ನ 2 ಗಂಟೆಯೊಳಗಾಗಿ ದಾಖಲಿಸುವಂತೆ ಸಂಬಂ
ಧಿಸಿದ ಅಧಿಕಾರಿಗಳಿಗೆ ಸೂಚಿಸಿ ಕ್ರಮ ವಹಿಸಲಾಗಿದೆ ಎಂದು ಉಪ ನಿರ್ದೇಶಕರು ಸಭೆಗೆ ತಿಳಿಸಿದರು.
ಸಭೆಯಲ್ಲಿ ವಿವಿಧ ತಾಲೂಕುಗಳ ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಅಲಕಾನಂದ ಮಳಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಾಲಿಕ್ಲಿನಿಕ್, ಜಿಲ್ಲಾ ಹಾಲು ಒಕ್ಕೂಟ, ಪ್ರಾದೇಶಿಕ ಪ್ರಾಣಿ ರೋಗ ಪ್ರಯೋಗಾಲಯ ಸಂಶೋಧನಾಧಿಕಾರಿಗಳು, ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು, ಕನಕಗಿರಿ, ಕಾರಟಗಿಯ ಪಶು ಆಸ್ಪತ್ರೆ ವೈದ್ಯಾಧಿಕಾರಿಗಳು ಇದ್ದರು. ಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಮೋಹನ್ ಸ್ವಾಗತಿಸಿದರು.
===========
ಕಾಲುಬಾಯಿ.ಚರ್ಮ ಗಂಟು ರೋಗ ಚಿಕಿತ್ಸೆಗೆ ಸಕಲ ಸಿದ್ದತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments