ಕಲುಷಿತ ನೀರು ಸೇವನೆಯಿಂದ ಬಾಧಿತ ಕವಾಡಿಗರಹಟ್ಟಿಗೆ ಮುಖ್ಯಮಂತ್ರಿ ಭೇಟಿ* *ಮೃತ ಕುಟುಂಬಕ್ಕೆ ಸಾಂತ್ವನ, ನೆರವಿನ ಭರವಸೆ.

by | 06/10/23 | ಸುದ್ದಿ


ಚಿತ್ರದುರ್ಗ.ಅ.6: ಕಳೆದ ಆಗಸ್ಟ್ 1 ರಂದು ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ 240 ಜನರು ಅಸ್ವಸ್ಥರಾಗಿದ್ದರು. 6 ಜನರು ಮೃತಪಟ್ಟಿದ್ದಾರೆ. ಇವರೆಲ್ಲರೂ ಪರಿಶಿಷ್ಟ ಜಾತಿ ಹಾಗೂ ದುರ್ಬಲ ವರ್ಗಕ್ಕೆ ಸೇರಿದವರಾಗಿದ್ದಾರೆ. ಘಟನೆ ಬಗ್ಗೆ ತಿಳಿದ ತಕ್ಷಣ ಅಧಿಕಾರಿಗಳು ಹಾಗೂ ಜನಪ್ರತಿ‌ನಿಧಿಗಳಿಗೆ ಕರೆ ಮಾಡಿ ತುರ್ತಾಗಿ ಸ್ಪಂದಿಸುವಂತೆ ಸೂಚನೆ ನೀಡಿದ್ದೆ. ಸರ್ಕಾರ ಇಲ್ಲಿನ ಜನರ ಪರವಾಗಿ ಇದ್ದು, ಮೃತರ ಕುಟುಂಬಕ್ಕೆ ಉದ್ಯೋಗ, ಸಂತ್ರಸ್ತರಿಗೆ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದರು.

ಶುಕ್ರವಾರ ಚಿತ್ರದುರ್ಗ ನಗರದ ಕವಾಡಿಗರಹಟ್ಟಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಕವಾಡಿಗರ ಹಟ್ಟಿ ನಿವಾಸಿಗಳಿಗೆ ನಿವೇಶನ ನೀಡಲು 3 ಎಕರೆ ಜಮೀನಿನು ಮಂಜೂರು ಮಾಡಲಾಗಿದೆ. ಅಭಿವೃದ್ಧಿಗಾಗಿ ರೂ.4 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ನಿವಾಸಿಗಳಿಗೆ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಮೃತರ ಕುಟುಂಬಕ್ಕೆ ಸರ್ಕಾರದಿಂದ ರೂ.5 ಲಕ್ಷ ಹಾಗೂ ನಗರ ಸಭೆಯಿಂದ ರೂ.5 ಲಕ್ಷ ಸೇರಿದಂತೆ ತಲಾ ರೂ.10 ಲಕ್ಷ ಪರಿಹಾರ ನೀಡಲಾಗಿದೆ ಎಂದರು.


*ಕಲುಷಿತ ನೀರು ಸರಬಾರಜು : ಅಧಿಕಾರಿಗಳೇ ನೇರ ಹೊಣೆ*

ಸರ್ಕಾರಕ್ಕೆ ಶುದ್ಧ ಕುಡಿಯುವ ನೀರು ಕೊಡುವ ಜವಾಬ್ದಾರಿ ಇದೆ. ಕಲುಷಿತ ನೀರು ಸರಬರಾಜು ಆಗಿ ಜನರಿಗೆ ತೊಂದರೆ ಉಂಟಾದರೆ ಅಧಿಕಾರಿಗಳನ್ನೇ ನೇರವಾಗಿ ಹೊಣೆ ಮಾಡಿ, ಮುಲಾಜು ಇಲ್ಲದೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಕವಾಡಿಗರ ಹಟ್ಟಿಯಲ್ಲಿ ಮೊದಲೇ ಶುದ್ದ ನೀರಿನ ವ್ಯವಸ್ಥೆ ಇದ್ದಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ. ಘಟನೆ ಬಳಿಕ ಶುದ್ದ ಕುಡಿಯುವ ನೀರಿಗೆ ತೊಂದರೆ ಆಗದಂತೆ ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಇಂತಹ ಅನಾಹುತ ನಡೆದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ ಎಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

*42 ಲಕ್ಷ ಹೆಕ್ಟೇರ್ ಬೆಳೆ ನಾಶ : ರೂ.30‌ ಸಾವಿರ ಕೋಟಿ ನಷ್ಟ*

122 ವರ್ಷಗಳಲ್ಲೇ ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಆಗಿದೆ. ಈಗಾಗಲೇ 195 ತಾಲೂಕುಗಳನ್ನು ಬರಪೀಡತ ಪ್ರದೇಶ ಎಂದು ಘೋಷಿಸಲಾಗಿದೆ. ಕೃಷಿ ಸಚಿವರು ಸಭೆ ನಡೆಸಲಿದ್ದು ಬರ ಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚಾಗಬಹುದು. ರಾಜ್ಯದಲ್ಲಿ ಒಟ್ಟು 42 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ರೂ. 30 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದೆ. ಕೇಂದ್ರ ವಿಪತ್ತು ನಿರ್ವಹಣಾ ನಿಧಿ (ಎನ್.ಡಿ.ಆರ್.ಎಫ್)ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ರೂ.4860 ಕೋಟಿ ಪರಿಹಾರ ಕೇಳಿದ್ದೇವೆ. ಸದ್ಯ ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದ್ದು. 11 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನೆಡೆಸಿ, ಅವಲೋಕಿಸಿ ವರದಿ ನೀಡಲಿದೆ. ಚಿತ್ರದುರ್ಗ ಜಿಲ್ಲೆಗೂ ಬರ ಅಧ್ಯಯನ ತಂಡ ಬರಲಿದೆ ಎಂದು ವಿವರಿಸಿದರು. ರಾಜ್ಯದಲ್ಲಿ ತೀವ್ರ ತರನಾದ ಬರಾಗಲ ಬಂದಿದೆ. ಶುದ್ಧ ಕುಡಿಯುವ ನೀರು, ಜಾನುವಾರುಗಳಿಗೆ ನೀರು ಹಾಗೂ ಮೇವಿನ ಕೊರತೆ ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಜನರಿಗೆ ಉದ್ಯೋಗ ನೀಡಬೇಕು. ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ತಿಳಿಸಿದರು.

ಸರ್ಕಾರದಿಂದ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿ ಜನರ ಜೀವನ ಮಟ್ಟ ಸುಧಾರಣೆ ಮಾಡಲಾಗುತ್ತಿದೆ. 1.26 ಕೋಟಿ ಮಹಿಳೆಯರಿಗೆ ಗೃಹಲಕ್ಷೀ ಯೊಜನೆ ಜಾರಿ ಮಾಡಲಾಗಿದೆ. ಇದರಲ್ಲಿ 1.10 ಕೋಟಿ ಜನರಿಗೆ ತಲಾ‌ ರೂ.2000 ಹಣವನ್ನು ಬ್ಯಾ‌ಂಕ್ ಖಾತೆಗೆ ಜಮೆ ಮಾಡಲಾಗಿದೆ. ಇನ್ನೂ 16 ಲಕ್ಷ ಜನರಿಗೆ ಬ್ಯಾಂಕ್ ಖಾತೆ ಹಾಗೂ ಆಧಾರ್ ಜೋಡಣೆ ತೊಂದರೆಯಿಂದ ಹಣ ಜಮೆ ಆಗಿರುವುದಿಲ್ಲ. ಶಕ್ತಿ ಯೋಜನೆಯಡಿ 50 ರಿಂದ 60 ಲಕ್ಷ ಮಹಿಳೆಯರು ಪ್ರತಿನಿತ್ಯ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಕುಟುಂಬದ ಸದಸ್ಯರಿಗೆ ತಲಾ ಒಂದು 10 ಕೆ.ಜಿ. ಅಕ್ಕಿ ನೀಡಲು ತೀರ್ಮಾನಿಸಲಾಗಿದೆ. ಸದ್ಯ 5 ಕೆ.ಜಿ. ಅಕ್ಕಿ ನೀಡುತ್ತಿದ್ದು, ಉಳಿದ 5 ಕೆ.ಜಿ. ಅಕ್ಕಿ ಬದಲಿಗೆ ಹಣ ನೀಡಲಾಗುತ್ತಿದೆ ಎಂದರು.


ಕಲುಷಿತ ನೀರನ್ನು ಕುಡಿದು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿ 6 ಜನರು ಮರಣ ಹೊಂದಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದವರು, ಇವರ ವೃತ್ತಿ ಕೂಲಿ ಮಾಡುವುದು, ಸಪಾಯಿ ಕರ್ಮಾಚಾರಿ, ಕೃಷಿ ಕಾರ್ಮಿಕರು, ಹಮಾಲಿ ಕೆಲಸದಲ್ಲಿ ತೊಡಿಗರುವ ಇದ್ದಾರೆ. ಆರ್ಥಿಕವಾಗಿ ತುಂಬಾ ದುರ್ಬಲರಾಗಿರುತ್ತಾರೆ. ಇವರಿಗೆ ನಿವೇಶನ, ಮನೆ, ಜಮೀನು, ಉದ್ಯೋಗ ಮೂಲಭೂತ ಸೌಕರ್ಯಗಳು ಒದಗಿಸಬೇಕು. ರಸ್ತೆ ಅಗಲೀಕರಣದಿಂದ ಕವಾಡಿಗರಹಟ್ಟಿ 60 ಮನೆ ತೆರವುಗೊಳಿಸಬೇಕಾಗಿದೆ. ಇವರಿಗೆ ಸೂಕ್ತ ಪರಿಹಾರ ನೀಡಿ, ನಂತರ ತೆರವುಗೊಳಿಸಬೇಕು.ನಿವೇಶನ, ವಸತಿ ಕಲ್ಪಿಸಲು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮೃತರ ಗೌರವಾರ್ಥ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಡಿ.ಸುಧಾಕರ್, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ, ಜಿ.ಪಂ.ಸಿಇಓ ಎಸ್.ಜಿ.ಸೋಮಶೇಖರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಮೀನಾ, ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಉಪವಿಭಾಗಧಿಕಾರಿ ಆರ್.ಕಾರ್ತಿಕ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್, ತಹಶೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ರೇಣುಕಾ, ಮಾಜಿ ಮಂತ್ರಿ ಹೆಚ್.ಆಂಜನೇಯ, ಮಾಜಿ ಸಂಸದ ಎಂ.ಚಂದ್ರಪ್ಪ, ಸೇರಿದಂತೆ, ಹಿರಿಯ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *