ಸ್ವ-ಸಹಾಯ ಸಂಘಗಳ ಸದಸ್ಯರು ತಯಾರಿಸಿರುವ ಹಣತೆ, ತಿಂಡಿ ತಿನಿಸುಗಳ ಮಾರಾಟ ದೀಪಾವಳಿ ಹಬ್ಬದ ಪ್ರಯುಕ್ತ “ದೀಪ ಸಂಜೀವಿನಿ” ಕಾರ್ಯಕ್ರಮಕ್ಕೆ ಚಾಲನೆ

by | 09/11/23 | ಪರಿಸರ


ಚಿತ್ರದುರ್ಗ ನ.09:
ದೀಪಾವಳಿ ಹಬ್ಬದ ಪ್ರಯುಕ್ತ ದೀಪ ಸಂಜೀವಿನಿ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ ಗುರುವಾರ ಚಾಲನೆ ನೀಡಿದರು.
ನಗರದ ಗಾಂಧಿ ವೃತ್ತದ ಉಪಾಧ್ಯಾಯ ಹೋಟೆಲ್ ಮುಂಭಾಗದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಸಂಜೀವಿನಿ ಮಾಸಿಕ ಸಂತೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟ-ದೀಪ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ದೃಷ್ಠಿಯಿಂದ ಹಾಗೂ ದೀಪಾವಳಿ ಹಬ್ಬದ ಸಂದರ್ಭವನ್ನು ಬಳಸಿಕೊಂಡು ಮಾರಾಟ ಮೇಳಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ದೀಪಾವಳಿ ಹಬ್ಬವು ಪ್ರಸಿದ್ಧವಾದ ಹಬ್ಬವಾಗಿದ್ದು, ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬವೇ ಬೆಳಕಿನ ಹಬ್ಬ ದೀಪಾವಳಿ. ಈ ದೀಪಾವಳಿಯಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಕೈಚಳಕ, ಪರಿಶ್ರಮ ಹಾಗೂ ಸೃಜನಶೀಲತೆಯಿಂದ ತಯಾರಿಸಿದ ವಿವಿಧ ವಿನ್ಯಾಸದ ದೀಪಗಳನ್ನು ಬಳಸುವುದರ ಮೂಲಕ ಮಾರುಕಟ್ಟೆ ಒದಗಿಸುವುದು ಹಾಗೂ ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುವುದರ ಮೂಲಕ ಮಹಿಳೆಯರ ಸ್ವಾವಲಂಬಿ ನಡೆಗಳನ್ನು ಪ್ರೇರೇಪಿಸುವುದಕ್ಕಾಗಿ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ಮಣ್ಣಿನ ಹಣತೆಗಳು ಹಾಗೂ ಹಬ್ಬದ ವಿಶೇಷ ತಿಂಡಿ-ತಿನಿಸುಗಳ ಮಳಿಗೆಗಳನ್ನು ದೀಪಾವಳಿ ಹಬ್ಬದ ಪ್ರಯುಕ್ತ ದೀಪ ಸಂಜೀವಿನಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಿಲ್ಲೆಯ ವಿವಿಧೆಡೆಗಳಿಂದ ಸಂಜೀವಿನಿ ಒಕ್ಕೂಟದವರು ವಿವಿಧ ರೀತಿಯ ದೀಪಗಳು, ತಿಂಡಿ-ತಿನಿಸುಗಳು, ಗಾಣದಿಂದ ತಯಾರಿಸಿದ ಎಣ್ಣೆ ಸೇರಿದಂತೆ ವಿವಿಧ ಬಗೆಯ ಎಲ್ಲಾ ಉತ್ಪನ್ನಗಳನ್ನು ಮನೆಯಲ್ಲಿಯೇ ಸ್ವ-ಸಹಾಯ ಸಂಘದವರೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿರುವಂತಹ ಉತ್ಪನ್ನಗಳನ್ನು ಬಳಸಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದರು.
ಸಂಜೀವಿನಿ ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕ, ಮೆದೇಹಳ್ಳಿ ಒನಕೆ ಓಬವ್ವ ಸಂಜೀವಿನಿ ಗ್ರಾಮ ಪಂಚಾಯಿತಿಮಟ್ಟದ ಒಕ್ಕೂಟ ಸೇರಿದಂತೆ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿದ ಹಣತೆ, ವಿವಿಧ ವಿನ್ಯಾಸದ ಆಕರ್ಷಕ ದೀಪಗಳು, ಮತ್ತಿತರ ದೀಪಾವಳಿ ಹಬ್ಬದ ಅಲಂಕಾರಿಕ ವಸ್ತುಗಳು ಪ್ರದರ್ಶನ ಹಾಗೂ ಹಪ್ಪಳ, ಉಪ್ಪಿನಕಾಯಿ, ಲಾಡು, ಹೋಳಿಗೆ, ಶೇಂಗಾ ಚಿಕ್ಕಿ, ಶೇಂಗಾ ಉಂಡೆ ಮತ್ತಿತರ ತಿಂಡಿ-ತಿನಿಸುಗಳು, ಗಾಣದಿಂದ ತಯಾರಿಸಿದ ಶೇಂಗಾ ಎಣ್ಣೆ, ಜೋಳ-ಸಜ್ಜೆ ರೊಟ್ಟಿ, ಬಟ್ಟೆ ಬ್ಯಾಗ್, ಅಲಂಕಾರಿಕ ವ್ಯಾನಿಟಿ ಬ್ಯಾಗ್, ಮಾರಾಟ ಮಳಿಗೆಗಳನ್ನು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ ವೀಕ್ಷಿಸಿದರು.
ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕಂಡು ಬಂದಿತು. ಜನರು ಆಕರ್ಷಕವಾಗಿದ್ದ, ವಿವಿಧ ವಿನ್ಯಾಸದ ದೀಪಗಳಿಗೆ ಆಕರ್ಷಿತರಾಗಿ ಖರೀದಿಗೆ ಮುಂದಾದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಜಿಲ್ಲಾ ನಿರ್ವಹಣಾ ಅಭಿಯಾನದ ಕಾರ್ಯಕ್ರಮ ವ್ಯವಸ್ಥಾಪಕ ಯೋಗೇಶ್, ಜಿಲ್ಲಾ ವ್ಯವಸ್ಥಾಪಕರಾದ ಭೋಜರಾಜ, ರಮೇಶ್, ದೇವರಾಜ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *