ಸಿನಿಮಾ

ಹೊಸದಾಗಿ ರಚಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ 1781 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ನೀಡಿದ ಆಶ್ವಾಸನೆಯಂತೆ ಹಕ್ಕುಪತ್ರ ವಿತರಣೆ ಜಿ.ಹೆಚ್ಚ್.ತಿಪ್ಪಾರೆಡ್ಡಿ


ಚಿತ್ರದುರ್ಗ ಮಾರ್ಚ್27:
ನಾವು ನೀಡಿದ ಆಶ್ವಾಸನೆಯಂತೆ ರಾಜ್ಯದ ಲಂಬಾಣಿ, ಕುರುಬ, ಗೊಲ್ಲರಹಟ್ಟಿ, ತಾಂಡಾಗಳು ಹಾಗೂ ನಗರದ ಕೊಳಚೆ ಪ್ರದೇಶದಲ್ಲಿ ವಾಸವಿದ್ದ ಜನರಿಗೆ ಶಾಶ್ವತ ಹಕ್ಕು ಪತ್ರಗಳನ್ನು ಸರ್ಕಾರದಿಂದ ನೀಡಲಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಹೊಸದಾಗಿ ರಚಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.
ಬಹುಕಾಲದಿಂದಲೂ ಪೂರ್ವಜರಿಂದ ಬಳುವಳಿಯಾಗಿ ಬಂದ ಜಾಗದಲ್ಲಿ ನೀವೆಲ್ಲಾ ವಾಸವಿದ್ದಿರಿ. ಇದು ಕಂದಾಯ ಇಲಾಖೆ ಮ್ಯಾಪ್‍ನಲ್ಲಿ ನಮೂದಾಗದ ಕಾರಣ ಈ ಜಾಗದ ಹಕ್ಕು ನಿಮಗೆ ಲಭಿಸಿರಲಿಲ್ಲ. ಆದರೆ ಇಂದು ಸರ್ಕಾರ ಈ ಜಾಗದ ಹಕ್ಕು ಶಾಶ್ವತವಾಗಿ ನಿಮಗೆ ನೀಡಿದೆ. ಇದರ ಜೊತೆಗೆ ಈ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಸಬಾ ಹಾಗೂ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯ ಒಟ್ಟು 20 ಹಳ್ಳಿಗಳ 1781 ಕುಟುಂಬಗಳಿಗೆ ಇಂದು ಶಾಶ್ವತ ಹಕ್ಕುಪತ್ರ ನೀಡಲಾಗಿದೆ ಎಂದರು.


ಪ್ರಧಾನ ಮಂತ್ರಿಗಳು ಕಲಬುರ್ಗಿಯಲ್ಲಿ ಜರುಗಿದ ಕಾರ್ಯದಲ್ಲಿ ಉತ್ತರ ಕರ್ನಾಟಕ ಭಾಗದ 52 ಸಾವಿರ ಜನರಿಗೆ ಹಕ್ಕು ಪತ್ರ ವಿತರಿಸಿದ್ದರು. ಇದು ಗಿನ್ನಿಸ್ ದಾಖಲೆಯಾಗಿದೆ. ಇದೇ ಮಾದರಿಯಲ್ಲಿ ದಕ್ಷಿಣ ಕರ್ನಾಟಕ ಭಾಗದ ಜನರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದ ಹಕ್ಕು ಪತ್ರ ವಿತರಿಸಲು ಕಾರ್ಯಕ್ರಮ ರೂಪಿಸಲಾಗಿತ್ತು. ಕೇಂದ್ರ ಗೃಹ ಸಚಿವರ ಸಮಯ ನಿಗದಿಯಾಗದ ಕಾರಣ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶದಂತೆ ತಾಲ್ಲೂಕುವಾರು ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಧಿಕಾರಿ ಆರ್.ಚಂದ್ರಯ್ಯ, ಭೂ ದಾಖಲೆಗಳ ಉಪನಿರ್ದೇಶಕ ರಾಮಾಂಜನೇಯ, ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ, ತಾಲ್ಲೂಕು ಪಂಚಾಯಿತಿ ಇಒ ಹನುಮಂತಪ್ಪ, ಚಿತ್ರದುರ್ಗ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ, ನಗರಸಭೆ ಆಯುಕ್ತ ಶ್ರೀನಿವಾಸ ಸೇರಿದಂತೆ ಮತ್ತಿತರರು ಇದ್ದರು.
ಫೋಟೋ ವಿವರ: ಚಿತ್ರದುರ್ಗ ನಗರದ ತ.ರಾ.ಸು ರಂಗಮಂದಿರದಲ್ಲಿ ಸೋಮವಾರ ಹೊಸದಾಗಿ ರಚಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಕ್ಕುಪತ್ರ ವಿತರಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಇದ್ದಾರೆ.
======
ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ, ಹೊಲಿಗೆಯಂತ್ರ, ಟಾಕಿಂಗ್ ಲ್ಯಾಪ್‍ಟಾಪ್ ವಿತರಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ಅಂಗವಿಕಲರಿಗೆ ವಿವಿಧ ಸೌಲಭ್ಯ ವಿತರಣೆ
*********
ಚಿತ್ರದುರ್ಗ(ಕರ್ನಾಟಕ ವಾರ್ತೆ)ಮಾ.27:
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2022-23ನೇ ಸಾಲಿನ ವಿವಿಧ ಯೋಜನೆಗಳಡಿ ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿತರಿಸಿದರು.
ನಗರದ ತರಾಸು ರಂಗಮಂದಿರದ ಆವರಣದಲ್ಲಿ ಸೋಮವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 9 ಮಂದಿ ಅಂಗವಿಕಲ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಿಸಲಾಯಿತು.
ಯಂತ್ರಚಾಲಿತ ದ್ವಿಚಕ್ರ (ರೆಟ್ರೋಫಿಟ್‍ಮೆಂಟ್ ಸಹಿತ) ಯೋಜನೆಯಡಿ 4 ಮಂದಿ ದೈಹಿಕ ಅಂಗವಿಕಲತೆ ಹೊಂದಿರುವ ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ, ಹೊಲಿಗೆಯಂತ್ರ ಯೋಜನೆಯಡಿ 3 ಮಂದಿ ಶ್ರವಣದೋಷ ಅಂಗವಿಕಲತೆ ಹೊಂದಿರುವ ಅಂಗವಿಕಲರಿಗೆ ಹೊಲಿಗೆಯಂತ್ರ ಹಾಗೂ ಟಾಕಿಂಗ್ ಲ್ಯಾಪ್‍ಟಾಪ್ ಯೋಜನೆಯಡಿ ಇಬ್ಬರು ದೃಷ್ಠಿದೋಷ ಹೊಂದಿರುವ ಅಂಗವಿಕಲರಿಗೆ ಟಾಕಿಂಗ್ ಲ್ಯಾಪ್‍ಟಾಪ್‍ಅನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಎಂಆರ್‍ಡಬ್ಲ್ಯೂ ಮೈಲಾರಪ್ಪ ಸೇರಿದಂತೆ ಅಂಗವಿಕಲ ಫಲಾನುಭವಿಗಳು ಇದ್ದರು.
ಫೋಟೋ ವಿವರ: ಚಿತ್ರದುರ್ಗ ನಗರದ ತರಾಸು ರಂಗಮಂದಿರದ ಆವರಣದಲ್ಲಿ ಸೋಮವಾರ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಗವಿಕಲ ಫಲಾನುಭವಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಯಂತ್ರಚಾಲಿತ ದ್ವಿಚಕ್ರ ವಾಹನ, ಹೊಲಿಗೆಯಂತ್ರ ಹಾಗೂ ಟಾಕಿಂಗ್ ಲ್ಯಾಪ್‍ಟಾಪ್ ಸೌಲಭ್ಯ ವಿತರಿಸಿದರು.

ತಿರುಗಿ ಬಾರದೂರಿಗೆ ನಡೆದ ಅಲ್ಲೂರಿ ..

ತಿರುಗಿ ಬಾರದೂರಿಗೆ ನಡೆದ ಅಲ್ಲೂರಿ …….
*************************************
8 ಜನವರಿ 2022 ಅಣ್ಣ ರಮೇಶ್‌ಬಾಬು ನಿಧನ;
28 ಸೆಪ್ಟೆಂಬರ್ 2022 ತಾಯಿ‌ ಇಂದಿರಾದೇವಿ ನಿಧನ;
15 ನವಂಬರ್ 2022 ತಂದೆ ಸೂಪರ್ ಸ್ಟಾರ್ ಕೃಷ್ಣ‌ ನಿಧನ.

ಕಳೆದ ಹನ್ನೊಂದು ತಿಂಗಳ ಅವಧಿಯಲ್ಲಿ ತನ್ನ ಕುಟುಂಬದ ಮೂವರು ಹಿರಿಯರನ್ನು ಕಳೆದುಕೊಂಡ ದೌರ್ಭಾಗ್ಯವಂತ ನಟ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ! ಅವರ ದೌರ್ಭಾಗ್ಯದ ಸಾಲಿಗೆ ಅವರ ತಂದೆ ತೆಲುಗು ಚಿತ್ರರಂಗದ ಒಂದು ಕಾಲದ ಸುಂದರ ನಟ, ನಟ ಶೇಖರ ಘಟ್ಟಮನೇನಿ ಶಿವರಾಮಕೃಷ್ಣ ಮೂರ್ತಿ ಅಥವಾ ಎಲ್ಲರ ನೆಚ್ಚಿನ ಸೂಪರ್ ಸ್ಟಾರ್ ಕೃಷ್ಣ ಇಂದು ಸೇರಿದ್ದು ದುರಂತಮಯ ಘಟ್ಟ.

ವಯೋ ಸಹಜ ಖಾಯಿಲೆ ಹಾಗೂ ಹೃದಯಾಘಾತದಿಂದ ಇಂದು ಮುಂಜಾನೆ‌ ಕೊನೆಯುಸಿರೆಳೆದ ಕೃಷ್ಣ ರ ನಿಧನದಿಂದ ತೆಲುಗು ಚಿತ್ರರಂಗವನ್ನು‌ ದಶಕಗಳ ಕಾಲ ಆಳಿದ ಒಂದು‌ ಭವ್ಯ ಕೊಂಡಿ ಕಳಚಿದಂತಾಗಿದೆ.

ನಮಗಿನ್ನೂ ಚೆನ್ನಾಗಿ ನೆನಪಿರುವಂತೆ, ನಮ್ಮ ಬಾಲ್ಯದ ದಿನಗಳಲ್ಲಿ ಟೂರಿಂಗ್ ಟಾಕೀಸ್ ನಲ್ಲಿ ಕನ್ನಡ ಹೊರತಾಗಿ ಇತರೆ‌ ಭಾಷೆಯ ಚಿತ್ರಗಳನ್ನೂ ನೋಡುವ ಖುಷಿ ನಮ್ಮದಾಗಿತ್ತು. ಕನ್ನಡದಲ್ಲಿ ಅಣ್ಣಾವ್ರು, ತಮಿಳಿನಲ್ಲಿ ಎಂ.ಜಿ.ಆರ್, ಶಿವಾಜಿ ಗಣೇಶನ್, ತೆಲುಗಿನಲ್ಲಿ ಎನ್.ಟಿ.ಆರ್ , ಅಕ್ಕಿನೇನಿ ನಾಗೇಶ್ವರರಾವ್ ಹಾಗೂ ಕೃಷ್ಣ ಇವರ ಚಿತ್ರಗಳೆಂದರೆ ಮುಗಿಬಿದ್ದು‌ ನೋಡುತ್ತಿದ್ದ ದಿನಗಳವು. ಕನ್ನಡ ಬಿಟ್ಟು ಇತರೆ ಭಾಷೆ ಅರ್ಥವಾಗದಿದ್ದರೂ, ಈ ನಾಯಕ ನಟರಿದ್ದಾರೆಂದರೆ ಸಾಕು, ಅವರ ಅಮೋಘ ಅಭಿನಯದಿಂದ ಇಡೀ ಚಿತ್ರವೇ ನಮಗೆ ಅರ್ಥವಾಗುತ್ತಿತ್ತು. ಅದರಲ್ಲೂ ತೆಲುಗಿನ ಕೃಷ್ಣ ರವರ ಅನೇಕ ‌ಸಿನಿಮಾಗಳು ಆ ಕಾಲದ ಪಡ್ಡೆಗಳಾಗಿದ್ದ ನಮಗೆ ಖುಷಿ ಕೊಡಲು ಕಾರಣ ಅವರ ಸಿನಿಮಾಗಳಲ್ಲಿನ ಡಿಶುಂ ಡಿಶುಂ ಫ಼ೈಟಿಂಗ್ಸ್, ಸಾಂಗ್ಸ್, ಹಾಗೂ ಜೇಮ್ಸ್ ಬಾಂಡ್ ಮಾದರಿಯ ಪತ್ತೇದಾರಿ ಸಾಹಸ. ನೋಡಲು ಸ್ಫುರದ್ರೂಪಿಯಾಗಿದ್ದ ಕೃಷ್ಣ ನಮ್ಮ ಪಾಲಿನ ನೆಚ್ಚಿನ ತೆಲುಗು ಹೀರೋ ಆಗಿದ್ದರು.

1960- 70 ರ ದಶಕಗಳ ಕಪ್ಪು ಬಿಳುಪು ಚಿತ್ರಗಳ ಸುವರ್ಣಯುಗದಲ್ಲಿ ಕೃಷ್ಣ ನಟಿಸಿ ತೆರೆಕಂಡ ಅನೇಕ ಚಿತ್ರ ಗಳು ಸೂಪರ್ ಹಿಟ್ ಆಗಿದ್ದವು. ಅವುಗಳಲ್ಲಿ ತೇನೆ ಮನಸುಲು, ಸಾಕ್ಷಿ, ಪಂಡಂಟಿ ಕಾಪುರಂ, ಮರಪುರಾನಿ‌ ಕಥ, ಸ್ತ್ರೀ ಜನ್ಮ, ಮಂಚಿ ಕುಟುಂಬಂ, ಪಗಸಾದಿಸ್ತಾ, ಅಕ್ಕ ಚೆಲ್ಲಿಲು…ಮುಂತಾದ ಸಾಂಸಾರಿಕ ಕಥೆಗಳು ಹಿಟ್ ಆಗಿದ್ದವು. ಆದರೆ ನಮಗೆ ಕೃಷ್ಣ ಎಂದರೆ ನೆನಪಿಗೆ ಬರುವ ಚಿತ್ರಗಳೆಂದರೆ ಕೌಬಾಯ್ ಪಾತ್ರಗಳ ಜೇಮ್ಸ್ ಬಾಂಡ್ ಮಾದರಿ ಚಿತ್ರಗಳು. ಅವುಗಳಲ್ಲಿ ಗೂಢಾಚಾರಿ 116, ಜೇಮ್ಸ್ ಬಾಂಡ್ 777, ಮೋಸಗಾಳ್ಳುಕ್ಕು‌ ಮೋಸಗಾಡು, ಏಜೆಂಟ್ ಗೋಪಿ…ಮುಂತಾದವು ಕಣ್ಣಿಗೆ ಹಬ್ಬದಂತಿದ್ದವು. ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಡುತ್ತಾ ಬಂದ ಕೃಷ್ಣ ರ ಪ್ರತಿಭೆ ಅನಾವರಣವಾಗಿದ್ದು ಅವರ ಮಹತ್ವಾಕಾಂಕ್ಷೆಯ ನೂರನೇ ಅದ್ಭುತ ಚಿತ್ರ ” ಅಲ್ಲೂರಿ ಸೀತಾರಾಮರಾಜು ” ವಿನ ಪಾತ್ರದಲ್ಲಿ . ಬಹುಶಃ ಕೃಷ್ನರಿಗೆ ಸ್ಟಾರ್ ಡಂ ಕೊಟ್ಟ ಚಿತ್ರ ಅದು. ಈ ಚಿತ್ರದ ಖದರ್ ಹೇಗಿತ್ತೆಂದರೆ ಅದು ಬಿಡುಗಡೆಯಾದ ನಂತರ ಇವರು ನಟಿಸಿದ ಹತ್ತು ಕೌಟುಂಬಿಕ ಚಿತ್ರಗಳು ಸಾಲು ಸಾಲಾಗಿ ಮಕಾಡೆ ಮಲಗಿದ್ದವು. ಕಾರಣ , ಸೀತಾರಾಮರಾಜು ವಿನ ಅಬ್ಬರದಲ್ಲಿ ಕೃಷ್ಣ ರನ್ನು ಕಣ್ತುಂಬಿಕೊಂಡಿದ್ದ ತೆಲುಗು ಪ್ರೇಕ್ಷಕ ಅವರನ್ನು ಸಾಂಸಾರಿಕ ಸಾಫ಼್ಟ್ ರೋಲ್ ಗಳಲ್ಲಿ ಒಪ್ಪಿಕೊಳ್ಳಲು ತಯಾರಾಗಿರಲಿಲ್ಲ. ಅಂದ ಮೇಲೆ ಆ ಪಾತ್ರದ ಎಫ಼ೆಕ್ಟು ಹೇಗಿತ್ತೆಂಬುದನ್ನು ಊಹಿಸಿ.

ಇನ್ನು ಎಪ್ಪತ್ತು ಎಂಭತ್ತರ ದಶಕದಲ್ಲಿ ಕೃಷ್ಣ ರ ಸಿನಿ ಜರ್ನಿ ಉತ್ತುಂಗದಲ್ಲಿತ್ತು. ಅನ್ನದಮ್ಮುಲ ಸವಾಲ್, ಹೇಮಾಹೇಮಿಲು, ಮಂಡೇಗುಂಡೆಲು, ಕುರುಕ್ಷೇತ್ರಮು, ಕುಮಾರ್ ರಾಜಾ ( ಅಣ್ಣಾವ್ರ ಶಂಕರ್ ಗುರು ರಿಮೇಕ್ ), ದೊಂಗಲಕು ದೊಂಗ, ಪಲ್ನಾಟಿ‌ಸಿಂಹಂ, ಅಗ್ನಿಪರ್ವತಂ, ವಜ್ರಾಯುಧಂ, ಜಮದಗ್ನಿ, ಅಶ್ವಥಾಮ, ಸಿಂಹಾಸನಂ….ಹೀಗೆ ಹಿಟ್ ಸಿನಿಮಾಗಳ ಸರದಾರರಾಗಿ ಮೆರೆದ ‌ಕೃಷ್ಣರವರದ್ದು ಒಬ್ಬ ಪಕ್ಕಾ ಪ್ರೊಫ಼ೆಷನಲ್ ಪರ್ಸನಾಲಿಟಿ .

ಕೃಷ್ಣ ಕೇವಲ ನಟ ಮಾತ್ರವಲ್ಲ, ನಿರ್ಮಾಪಕ ನಿರ್ದೇಶಕರೂ ಆಗಿದ್ದರು. ಸುಮಾರು ಹದಿನೈದು ಸಿನಿಮಾಗಳನ್ನು‌ ನಿರ್ದೇಶಿಸಿದ ಕೀರ್ತಿ ಇವರದ್ದು. ಅದಕ್ಕಿಂತ ಹೆಚ್ಚಿಗೆ ಪದ್ಮಾಲಯ ಫ಼ಿಲಂಸ್ ಲಾಂಛನದಲ್ಲಿ ಹಾಗೂ ಪತ್ನಿ ವಿಜಯ ನಿರ್ಮಲರ ಸಾಂಗತ್ಯದಲ್ಲಿ ಅನೇಕಾನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ ತೆಲುಗು ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದರು. ರಾಜಕೀಯ ರಂಗದಲ್ಲೂ ಮಿಂಚಿ‌ ಒಮ್ಮೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಲೋಕಸಭಾ ಸದಸ್ಯರೂ ಸಹ ಆಗಿದ್ದರು. ತೆಲುಗು ದೇಶಂ ಗೆ ಟಾಂಗ್ ಕೊಡಲು ” ನಾ‌ ಪಿಲಪೇ ಪ್ರಭಾಂಜನಂ ” ಎಂಬ‌ ಚಿತ್ರ ಆಗ ಸಾಕಷ್ಟು ವಿವಾದಾತ್ಮಕವಾಗಿದ್ದರೂ ಹಿಟ್ ಆಗಿತ್ತು.

ಎರಡನೇ ಪತ್ನಿ ವಿಜಯ ನಿರ್ಮಲ ಜೊತೆ ಕೃಷ್ಣ ಅತಿ ಹೆಚ್ಚು 48 ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದರೆ, ಜಯಪ್ರದಾ ನಾಯಕಿಯಾಗಿ ಇವರೊಂದಿಗೆ ಸುಮಾರು 47 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅಷ್ಟೇ ಅಲ್ಲದೇ ನಂದಮೂರಿ, ಅಕ್ಕಿನೇನಿ‌ ಅಲ್ಲದೇ ತಮ್ಮ ಸಮಕಾಲೀನ ಎಲ್ಲಾ ಕಲಾವಿದರ ಜೊತೆಯಲ್ಲೂ ಕೃಷ್ಣ ತೆರೆ ಹಂಚಿಕೊಂಡಿದ್ದರು.

ತೆಲುಗು ಚಿತ್ರ ರಂಗದಲ್ಲಿನ ಮೊಟ್ಟ ಮೊದಲ ಸಿನಿಮಾ ಸ್ಕೋಪ್ ಚಿತ್ರ ಅಲ್ಲೂರಿ ಸೀತಾರಾಮರಾಜು ವಿನ‌ ನಿರ್ಮಾಣ ಹಾಗೂ ನಾಯಕ ಕೃಷ್ಣ, ಮೊದಲ ಈಸ್ಟ್ ಮನ್ ಕಲರ್‌ ಸಿನಿಮಾ “ಈ‌ನಾಡು” ವಿನ ಕರ್ತೃ ಕೃಷ್ಣ, ಮೊದಲ 70mm ಸಿನಿಮಾ ಸಿಂಹಾಸನಂ ನಾಯಕ ಕೃಷ್ಣ, ಮೊದಲ DTS ಚಿತ್ರ ” ತೆಲುಗು ವೀರಾ ಲೇವರ ” ನಿರ್ಮಿಸಿದ್ದು ಕೃಷ್ಣ, ಹಾಗೂ ಕೌಬಾಯ್‌ ಪಾತ್ರಗಳನ್ನು ಮೊಟ್ಟಮೊದಲು ಪರಿಚಯಿಸಿದ್ದು ಕೃಷ್ಣ. ….ಹೀಗೆ ಅವರ ಸಾಧನೆಗಳ ಪಟ್ಟಿ‌ ಬೆಳೆಯುತ್ತಾ ಹೋಗುತ್ತದೆ. ಅವರ ಅನನ್ಯ ಕೊಡುಗೆಗಳಿಗಾಗಿ ಪದ್ಮಭೂಷಣ, ನಂದಿ ಅವಾರ್ಡ್, ಆಂಧ್ರ ಯೂನಿವರ್ಸಿಟಿ ಯಿಂದ ಡಾಕ್ಟರೇಟ್, ಫ಼ಿಲಂ‌ಫ಼ೇರ್ , ಎನ್.ಟಿ.ಆರ್ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೂ ಕೃಷ್ಣ ಭಾಜನರಾಗಿದ್ದರು.

ಇಬ್ಬರು ಪತ್ನಿಯರನ್ನು‌ ಹೊಂದಿದ್ದ ಕೃಷ್ಣ ರ ಮೊದಲ ಪತ್ನಿ ಇಂದಿರಾ ದೇವಿಯ ಐದು ಜನ ಮಕ್ಕಳಲ್ಲಿ‌ ಇಂದಿನ ಸೂಪರ್ ಸ್ಟಾರ್ ಮಹೇಶ್ ಬಾಬು ಒಬ್ಬರು. ಅತ್ಯಂತ‌ ಸೂಕ್ಷ್ಮ ಹಾಗೂ ಮೃದುಭಾಷಿತ ಕೃಷ್ಣ ರವರ ಅಗಲಿಕೆ ತೆಲುಗು ಚಿತ್ರಜಗತ್ತಿಗೆ ಬಹುದೊಡ್ಡ ನಷ್ಟ.

** ಮರೆಯುವ ಮುನ್ನ **

ಎಂಭತ್ತರ ದಶಕದಲ್ಲಿ ಕನ್ನಡದಲ್ಲಿ ವರನಟ ಡಾ. ರಾಜ್‌ಕುಮಾರ್ ಹಾಗೂ ‌ಜಯಪ್ರದಾರ ಜೋಡಿಯಲ್ಲಿ ಅದ್ದೂರಿಯ ” ಲವ ಕುಶ” ಚಿತ್ರವನ್ನು‌ ತಮ್ಮ ಪದ್ಮಾಲಯ ಫ಼ಿಲಂಸ್ ಅಡಿಯಲ್ಲಿ ನಿರ್ಮಾಣ‌ ಮಾಡಲು ಎಲ್ಲವನ್ನೂ ರೆಡಿ‌ ಮಾಡಿಕೊಂಡು‌, ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತ ಹಾಗೂ ಹಾಡುಗಳ ಧ್ವನಿಮುದ್ರಣ ಕಾರ್ಯವೂ ಜರುಗಿತ್ತು. ಅದೇನು ಕಾರಣವೋ ಗೊತ್ತಿಲ್ಲ. ಆನಂತರ ಈ‌ ಚಿತ್ರ ಮುಂದುವರೆಯಲೇ ಇಲ್ಲ. ಇಲ್ಲವಾಗಿದ್ದಲ್ಲಿ ಅದು ಬಹುಶಃ ‌ಕನ್ನಡದ ಒಂದು ಅದ್ದೂರಿ ಪೌರಾಣಿಕ ಚಿತ್ರವಾಗುವ ಎಲ್ಲಾ ಸಾಧ್ಯತೆ ಇತ್ತು. ಇದರ ಹೊರತಾಗಿಯೂ ಡಾ. ರಾಜ್ ಕುಮಾರ್ ರವರೊಂದಿಗೆ ಹಾಗೂ ಕನ್ನಡ ಚಿತ್ರರಂಗದ ಜೊತೆ ಕೃಷ್ಣರಿಗೆ ಉತ್ತಮ ಭಾಂದವ್ಯವಿತ್ತು. ಕರ್ನಾಟಕದಲ್ಲೂ ಅವರಿಗೆ ಉತ್ತಮ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಸುಮಾರು ಐದು ದಶಕಗಳ ಕಾಲ ತಮ್ಮ‌ ಅನನ್ಯ‌ ಸೇವೆ ಮತ್ತು ಸಾಧನೆಗಳಿಂದ ತೆಲುಗು ಚಿತ್ರರಂಗದ ಕೀರ್ತಿಯನ್ನು ಎತ್ತರಕ್ಕೇರಿಸಿದ ನಟಶೇಖರ ಕೃಷ್ಣರವರ ಅಗಲಿಕೆ ತೆಲುಗು ಚಿತ್ರರಂಗದ ಚರಿತೆಯಲ್ಲಿ ಒಂದು‌‌ ಕರಾಳ ದಿನ. ದಿಗ್ಗಜರಾದ ನಂದಮೂರಿ ತಾರಕ ರಾಮಾರಾವ್, ಅಕ್ಕಿನೇನಿ ನಾಗೇಶ್ವರರಾವ್, ಶೋಭನ್ ಬಾಬು, ಕೃಷ್ಣಂರಾಜು, ಮುಂತಾದ ಪ್ರತಿಭಾನ್ವಿತ ನಾಯಕನಟರ ಸಾಲಿನ ನೇಪಥ್ಯಕ್ಕೆ ಸೂಪರ್ ಸ್ಟಾರ್ ಕೃಷ್ಣ ಇಂದು ಸರಿದಿದ್ದಾರೆ. ಅವರ ಸೂಪರ್ ಸ್ಟಾರ್ ಪರಂಪರೆಯನ್ನು ಪುತ್ರ‌ ಮಹೇಶ್ ಬಾಬು ಅಚ್ಚುಕಟ್ಟಾಗಿ ಮುಂದುವರೆಸಿಕೊಂಡು‌ ಹೋಗುತ್ತಿದ್ದಾರೆಂಬ ಕಿಂಚಿತ್ ಸಮಾಧಾನದಲ್ಲಿ ಅಗಲಿದ ಶ್ರೇಷ್ಠ ನಟಶೇಖರನಿಗೆ ಅಭಿಮಾನದ ಅಕ್ಷರನಮನಗಳು.

ಹಿರಿಯೂರು ಪ್ರಕಾಶ್.

ಹೊಸಬರ ‘ಕಂಬ್ಳಿಹುಳ’ಕ್ಕೆ ಸ್ಯಾಂಡಲ್ ವುಡ್ ಸಿನಿ ತಾರೆಯರ ಸಾಥ್

ಬೆಂಗಳೂರು. ಕಂಟೆಂಟ್ ಒಳಗೊಂಡ, ಹೊಸತನವುಳ್ಳ ಸಿನಿಮಾಗಳು ಯಾವತ್ತೂ ಗೆಲ್ಲುತ್ತೆ, ಸಪೋರ್ಟ್ ಸಿಗುತ್ತೆ ಅನ್ನೋದಕ್ಕೆ ‘ಕಂಬ್ಳಿಹುಳ’ ಸಿನಿಮಾ ಸಾಕ್ಷಿಯಾಗಿದೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಕಳೆದೊಂದು ವಾರದಿಂದ ಸಖತ್ ಸುದ್ದಿಯಲ್ಲಿರುವ ಸಿನಿಮಾ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ಕಂಬ್ಳಿಹುಳ. ನವೆಂಬರ್ 4ರಂದು ರಾಜ್ಯಾದ್ಯಂತ ತೆರೆಕಂಡ ಈ ಚಿತ್ರ ಪ್ರೇಕ್ಷಕ ಪ್ರಭುಗಳನ್ನು ಮಾತ್ರವಲ್ಲ ಚಂದನವನದ ಸಿನಿ ತಾರೆಯರ ಮನಸೂರೆಗೊಂಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲೂ ‘ಕಂಬ್ಳಿಹುಳ’ ಸಿನಿಮಾದ್ದೇ ಮಾತು. ಚಿತ್ರ ನೋಡಿದ ಚಿತ್ರ ಪ್ರೇಮಿಗಳು ಸಿನಿಮಾದ ಹೊಸತನವನ್ನು ಒಪ್ಪಿ ಅಪ್ಪಿಕೊಂಡಿದ್ದು ಮಾತ್ರವಲ್ಲದೇ ಹೊಸಬರ ಪ್ರಯತ್ನವಿರುವ ಚಿತ್ರವನ್ನು ಇನ್ನಷ್ಟು ಜನ ನೋಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಸಪೋರ್ಟ್ ಕಂಬ್ಳಿಹುಳ, ನಮ್ಮ ಮಣ್ಣಿನ ಸಿನಿಮಾ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ. ಇದು ಕನ್ನಡ ಸಿನಿ ಪ್ರೇಮಿಗಳು ಹೊಸಬರ ಸಿನಿಮಾಗೆ ನೀಡುತ್ತಿರೋ ಸಪೋರ್ಟ್ ಆದ್ರೆ ಇತ್ತ ಚಂದನವನ ಕೂಡ ಕಂಬ್ಳಿಹುಳ ಸಿನಿಮಾ ತಂಡಕ್ಕೆ ಬೆನ್ನೆಲುಬಾಗಿ ನಿಂತಿದೆ.

ಹೌದು. ಚಂದನವನದ ಸಿನಿ ತಾರೆಯರು, ನಿರ್ಮಾಪಕರು, ನಿರ್ದೇಶಕರು ಸಿನಿಮಾ ಬಗ್ಗೆ ಕೇಳಿ ಬರ್ತಿರೋ ಪ್ರಶಂಸೆ ಕಂಡು ಸ್ವತಃ ಸಿನಿಮಾ ನೋಡಿ ಸಿನಿಮಾ ತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸಿನಿಮಾ ತಂಡಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ಸಿನಿಮಾವೊಂದರ ಗೆಲುವಿಗಾಗಿ ಚಿತ್ರರಂಗ ಒಗ್ಗಟ್ಟಾಗಿ ನಿಂತಿರೋದ್ರ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ಮಾತುಗಳು ಕೇಳಿ ಬರ್ತಿದೆ.

ನಟ, ನಿರ್ದೇಶಕ ರಿಷಬ್ ಶೆಟ್ಟಿ ‘ಕಂಬ್ಳಿಹುಳ’ ಚಿತ್ರಕ್ಕೆ ಎಲ್ಲೆಡೆಯಿಂದ ಸಾಕಷ್ಟು ಪ್ರಶಂಸೆ ಕೇಳಿ ಬರುತ್ತಿದೆ. ಆದಷ್ಟು ಬೇಗ ಸಿನಿಮಾ ನೋಡುತ್ತೇನೆ ಎಂದು ಪೋಸ್ಟ್ ಹಾಕಿದ್ದು, ಧನಂಜಯ್, ಧನ್ವೀರ್, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಚೇತನ್ ಕುಮಾರ್, ನಟಿ ಅದಿತಿ ಪ್ರಭುದೇವ ಕೂಡ ಚಿತ್ರಕ್ಕೆ ಸಪೋರ್ಟ್ ಮಾಡಿ ಪೋಸ್ಟ್ ಹಾಕಿದ್ದು ಆದಷ್ಟು ಬೇಗ ಸಿನಿಮಾ ನೋಡೋದಾಗಿ ತಿಳಿಸಿದ್ದಾರೆ.

ನಿರ್ದೇಶಕರಾದ ಸಿಂಪಲ್ ಸುನಿ, ಜಯತೀರ್ಥ, ಯೋಗರಾಜ್ ಭಟ್, ಚಾರ್ಲಿ ಕಿರಣ್ ರಾಜ್, ವಿನಯ್ ರಾಜ್ ಕುಮಾರ್ ಈಗಾಗಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹೊಸಬರ ಪ್ರಯತ್ನವನ್ನು ಹಾಡಿ ಹೊಗಳಿದ್ದಾರೆ. ಇನ್ನಷ್ಟು ಜನ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಸಿನಿಮಾ ಬಗ್ಗೆ ಎಲ್ಲರೂ ತೋರಿಸುತ್ತಿರುವ ಪ್ರೀತಿ ಹಾಗೂ ಚಿತ್ರರಂಗದ ಸಹಕಾರ ಕಂಡು ಚಿತ್ರತಂಡ ಸಂತಸಗೊಂಡಿದ್ದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ನವನ್ ಶ್ರೀನಿವಾಸ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರ ಮಲೆನಾಡು ಭಾಗದಲ್ಲಿ ನಡೆಯುವ ಪ್ರೇಮಕಥೆ ಸುತ್ತ ಹೆಣೆಯಲಾದ ಕಥೆಯನ್ನು ಒಳಗೊಂಡಿದೆ.

ನಾದದ ನವನೀತ’ ರಾಷ್ಟ್ರ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಬೆಂಗಳೂರು ನ.5

ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ ‘ನಾದದ ನವನೀತ’ ಸಾಕ್ಷ್ಯ ಚಿತ್ರಕ್ಕೆ 68ನೇ ರಾಷ್ಟ್ರಪ್ರಶಸ್ತಿ ಬಂದ ಹಿನ್ನೆಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಡಿಯಲ್ಲಿ ಇದನ್ನು ನಿರ್ಮಾಣ ಮಾಡಿದ ಆಯುಕ್ತ ಡಾ.ಪಿ. ಎಸ್. ಹರ್ಷ ಅವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸನ್ಮಾನಿಸಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ. ಮ. ಹರೀಶ್, ಜೈ ಜಗದೀಶ್, ಉಮೇಶ್ ಬಣಕಾರ್, ಶಿಲ್ಪ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ ನಾನು ಮೂಲತಃ ಚಿತ್ರ ನಿರ್ದೇಶಕ ಸಾಕ್ಷ್ಯ ಚಿತ್ರ ನಿರ್ದೇಶಕನಲ್ಲ. ಆದರೂ ಅನಂತಮೂರ್ತಿ, ಗೋಪಾಲಕೃಷ್ಣರಂತಹ ಕುರಿತಾದ ಸಾಕ್ಷ್ಯ ಚಿತ್ರಗಳನ್ನು ನಿರ್ದೇಶನ ಮಾಡಿ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ರಾಜಕೀಯ ನಂಟಿಲ್ಲದ ಹಾಗೂ ಇಂಗ್ಲೀಷ್ ಬಾರದ ಹೆಸರಾಂತ ಹಿಂದುಸ್ತಾನಿ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಸಾಕ್ಷ್ಯ ಚಿತ್ರವನ್ನು ಇಲಾಖೆಯೊಂದಿಗೆ ಜೊತೆಗೂಡಿ ನಿರ್ಮಾಣ ಮಾಡಲು ಹೊರಟಾಗ ಇದು ಕೇವಲ ಸಂದರ್ಶನವಾಗಬಾರದು ಬೇರೆ ರೀತಿಯಲ್ಲಿ ಮಾಡಬೇಕೆಂದು ಅಂದುಕೊಂಡು ಮಾಡಿದ ಡಾಕ್ಯುಮೆಂಟರಿ ‘ನಾದದ ನವನೀತ’. ಕರ್ನಾಟಕದಲ್ಲಿ ಅನೇಕ ಸಾಧಕರು ತಮ್ಮ ಸಾಧನೆಯನ್ನು ಬಿಟ್ಟು ಹೋಗಿದ್ದಾರೆ ಅವುಗಳು ಸರಿಯಾಗಿ ದಾಖಲಾಗಿಲ್ಲ. ಅಂತಹ ವ್ಯಕ್ತಿಗಳ ಪರಿಚಯ ಮುಂದಿನ ಪೀಳಿಗೆಗೆ ಆಗಬೇಕು. ಇದು ಸಾಧ್ಯವಾಗಬೇಕಾದರೆ ಸರ್ಕಾರ ಮನಸ್ಸು ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಗಿರೀಶ್ ಕಾಸರವಳ್ಳಿ ತಿಳಿಸಿದ್ರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ. ಎಸ್. ಹರ್ಷ ಮಾತನಾಡಿ ಸಮಾಜಕ್ಕಾಗಿ ದುಡಿದ ಅದೆಷ್ಟೋ ಮುಖಗಳು ಇಂದಿನ ಯುವ ಪೀಳಿಗೆಗೆ ತಿಳಿದಿಲ್ಲ. ಆಧುನಿಕ ಭರಾಟೆಯಲ್ಲಿ ಸ್ವತಂತ್ರ ಯೋಧರು, ಸಾಮಾಜಿಕ ಹೋರಾಟಗಾರರನ್ನು ಇಂದಿನ ಯುವ ಪೀಳಿಗೆ ಮರೆತಿದೆ ಅದರ ಅರಿವನ್ನು ಮೂಡಿಸಲು ಮಾಡಿದ ಸಾಕ್ಷ್ಯ ಚಿತ್ರವೇ ‘ನಾದದ ನವನೀತ’. ಗಿರೀಶ್ ಕಾಸರವಳ್ಳಿ ಅವರು ತುಂಬಾ ಅದ್ಭುತವಾಗಿ ಅದನ್ನು ಸಾಕ್ಷೀಕರಿಸಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಬರುವ ಹಾಗೆ ಮಾಡಿ ನಾಡಿಗೆ ಹೆಮ್ಮೆ ತಂದಿದ್ದಾರೆ ಎಂದು ಸಂತಸ ಹಂಚಿಕೊಂಡ್ರು.

ಇದೇ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಸುಂದರ್ ರಾಜ್ ಮಾತಾಡುತ್ತಾ ನಮ್ಮ ಕವಿಗಳಿಗೆ ಎಂಟು ಜ್ಞಾನಪೀಠ ಬಂದಿದೆ ಎಂದಾಗ ಗಿರೀಶ್ ಕಾಸರವಳ್ಳಿ ಯವರು ನಮ್ಮ ಚಿತ್ರರಂಗಕ್ಕೆ ಕೂಡ ಎಂಟು ಸ್ವರ್ಣ ಕಮಲ ಬಂದಿದೆ ಎಂಬುದನ್ನು ಮರೆಯಬಾರದು ಎಂದರು.

ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿವರ್ಷ ನಾಡಿನ ಸಾಧಕರು, ಪ್ರತಿಭಾವಂತರ ಕುರಿತಂತೆ ಸಾಕ್ಷ್ಯ ಚಿತ್ರಗಳನ್ನು ತಯಾರಿಸುತ್ತದೆ. ಈವರೆಗೂ ನೂರಾರು ಮಂದಿಯ ಜೀವನಕಥೆಗಳನ್ನು ಇಲಾಖೆ ತಯಾರಿಸಿದೆ. ಇದೇ ಮೊದಲ ಬಾರಿಗೆ ಕಥೇತರ ವಿಭಾಗದಲ್ಲಿ ಇಲಾಖೆ ನಿರ್ಮಿಸಿದ ಹೆಸರಾಂತ ಹಿಂದುಸ್ತಾನಿ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಕುರಿತ ಸಾಕ್ಷ್ಯ ಚಿತ್ರಕ್ಕೆ ಕಥೇತರ ವಿಭಾಗದಲ್ಲಿ ‘ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರ’ ಎಂಬ ಪ್ರಶಸ್ತಿ ದೊರೆತಿದೆ.

ಲವ್ ರಿಸೆಟ್’ ಕಿರುಚಿತ್ರದ ಸಾಂಗ್ ರಿಲೀಸ್ – ಪವನ್, ಸಂಜನಾ ಬುರ್ಲಿ ಅಭಿನಯದ ಕಿರುಚಿತ್ರ

ಬೆಂಗಳೂರು ನ.4 ಲವ್ ರಿಸೆಟ್’ ಕಿರುಚಿತ್ರದ ಸಾಂಗ್ ರಿಲೀಸ್ – ಪವನ್, ಸಂಜನಾ ಬುರ್ಲಿ ಅಭಿನಯದ ಕಿರುಚಿತ್ರ

ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವುಳ್ಳ ಶ್ರೀ ಗಣೇಶ್ ‘ಲವ್ ರಿಸೆಟ್’ ಎಂಬ ಮತ್ತೊಂದು ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಶೇಷ ಏನಪ್ಪ ಅಂದ್ರೆ ಈ ಕಿರುಚಿತ್ರದಲ್ಲಿ ಸಿನಿಮಾದಂತೆಯೇ ಬ್ಯೂಟಿಫುಲ್ ಲೊಕೇಶನ್ ನಲ್ಲಿ ಸೆರೆ ಹಿಡಿದ ಹಾಡು ಕೂಡ ಇದೆ. ಇಂದು ಶ್ರೀ ಗಣೇಶ್ ಹಾಗೂ ಅವರ ತಂಡ ‘ಲವ್ ರಿಸೆಟ್’ ಹಾಡಿನೊಂದಿಗೆ ಮಾಧ್ಯಮ ಮಿತ್ರರನ್ನು ಎದುರುಗೊಂಡಿತ್ತು.

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಪವನ್ ಹಾಗೂ ಸಂಜನಾ ಬುರ್ಲಿ ನಾಯಕ ನಾಯಕಿಯಾಗಿ ನಟಿಸಿರುವ ಕಿರುಚಿತ್ರ ‘ಲವ್ ರಿಸೆಟ್’. ಲವ್ ಸಬ್ಜೆಕ್ಟ್ ಒಳಗೊಂಡ ಕಿರುಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಕೃಷಿಯಲ್ಲಿ ಅರಳಿದ ‘ಅನುರಾಗದ ನೆನಪೀಗ ಕೊನೆಯಾಗಲಿ’ ಎಂಬ ಸುಂದರವಾದ ಹಾಡೊಂದಿದೆ. ಸರಿಗಮಪ ಖ್ಯಾತಿಯ ಸುನೀಲ್, ಅನನ್ಯ ಪ್ರಕಾಶ್ ದನಿಯಾಗಿರುವ ಈ ಹಾಡಿಗೆ ಜೋಯಲ್ ಹಾಗೂ ಅಭಿಲಾಶ್ ಸಂಗೀತ ನಿರ್ದೇಶನವಿದೆ. ಅಂದ್ಹಾಗೆ ನಾಳೆ ಎ2 ಮ್ಯೂಸಿಕ್ ನಲ್ಲಿ ಈ ಸಾಂಗ್ ಬಿಡುಗಡೆಯಾಗುತ್ತಿದೆ.

ನಿರ್ದೇಶಕ ಶ್ರೀಗಣೇಶ್ ಮಾತನಾಡಿ ನಾವಿದನ್ನು ಕಿರುಚಿತ್ರ ಅಂತ ಮಾಡಿಲ್ಲ. ಒಂದು ಸಿನಿಮಾ ರೀತಿ ಮಾಡಿದ್ದೀವಿ. ಕ್ವಾಲಿಟಿ ಕೂಡ ಸಿನಿಮಾ ರೀತಿಯೇ ಮೂಡಿಬಂದಿದೆ. ಕಲಾವಿದರು, ತಂತ್ರಜ್ಞರು ಪ್ರತಿಯೊಬ್ಬರು ಅನುಭವವುಳ್ಳವರೇ ಇಲ್ಲಿ ಕೆಲಸ ಮಾಡಿದ್ದಾರೆ. ಕಿರುಚಿತ್ರ ಎಂದು ಬಂದಾಗ ಹಾಡು ಅಥವಾ ಟೀಸರ್ ಬಿಡುಗಡೆ ಮಾಡಿ ಪ್ರಮೋಷನ್ ಮಾಡೋದು ಬಹಳ ಕಡಿಮೆ. ಅಂತಹದ್ದೊಂದು ಪ್ರಯತ್ನವನ್ನು ನಾವು ಮಾಡಿದ್ದೇವೆ. ಸದ್ಯ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಇದೇ ತಿಂಗಳ ಕೊನೆಯಲ್ಲಿ ‘ಲವ್ ರಿಸೆಟ್’ ಕಿರುಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ರು.

ನಿರ್ದೇಶಕರು ಕಿರುಚಿತ್ರದ ಬಗ್ಗೆ ಹೇಳಿದಾಗ ಹಾಗೂ ಸಿನಿಮಾದಲ್ಲಿರುವಂತೆ ಹಾಡು ಕೂಡ ಇದೆ ಎಂದಾಗ ಸಖತ್ ಇಂಟ್ರಸ್ಟಿಂಗ್ ಎನಿಸಿತು. ಜೊತೆಗೆ ಶ್ರೀ ಗಣೇಶ್ ಅವರ ಕೆಲಸದ ಬಗ್ಗೆ ಮುಂಚೆಯೇ ತಿಳಿದಿತ್ತು. ಆದ್ರಿಂದ ಈ ಪ್ರಾಜೆಕ್ಟ್ ಒಪ್ಪಿಕೊಂಡೆ. ಕಲಾವಿದರು, ತಂತ್ರಜ್ಞರಿಗೂ ಲವ್ ಸ್ಟೋರಿ ಅಂತ ಇರುತ್ತೆ. ಪ್ರೀತಿ ಹಾಗೂ ಕೆರಿಯರ್ ಅಂತ ಬಂದಾಗ ಅದನ್ನು ಹೇಗೆ ಮ್ಯಾನೇಜ್ ಮಾಡ್ತಾರೆ ಅನ್ನೋದ್ರ ಸುತ್ತ ಹೆಣೆಯಲಾದ ಕಥೆ ಕಿರುಚಿತ್ರದಲ್ಲಿದೆ. ಶಿರಸಿಯಲ್ಲಿ ಒಟ್ಟು ನಾಲ್ಕು ದಿನ ಶೂಟ್ ಮಾಡಿದ್ವಿ ಒಂದೊಳ್ಳೆ ಟ್ರಿಪ್ ಹೋಗಿ ಬಂದ ಫೀಲ್ ಇತ್ತು ಎಂದು ನಾಯಕ ಪವನ್ ತಮ್ಮ ಅನುಭವ ಹಂಚಿಕೊಂಡ್ರು.

ಈ ಕಿರುಚಿತ್ರವನ್ನು ಸಂತೋಷ್ ನಿರ್ಮಿಸಿದ್ದು, ಮ್ಯಾಜಿಕ್ ಫ್ರೇಮ್ ಕ್ರಿಯೇಷನ್ಸ್ ಸಹ ನಿರ್ಮಾಣವಿದೆ. ಪ್ರಜ್ವಲ್ ಭಾರಧ್ವಜ್ ಛಾಯಾಗ್ರಹಣ, ಜೋಯಲ್ ಹಾಗೂ ಅಭಿಲಾಶ್ ಸಂಗೀತ ನಿರ್ದೇಶನ, ಅಸ್ಲಾಮ್ ಮತ್ತು ಕೃಷ್ಣ ಸುಜ್ಞಾನ್ ಸಂಕಲನ, ರಂಜಿತ್ ಶಂಕರೆ ಗೌಡ ಸಹ ನಿರ್ದೇಶನ ಈ ಕಿರುಚಿತ್ರಕ್ಕಿದೆ.

ನವೀರಾದ ಪ್ರೇಮಕಥೆ ಹೊತ್ತ ‘ಖಾಸಗಿ ಪುಟಗಳು’ ನವೆಂಬರ್ 18ಕ್ಕೆ ರಿಲೀಸ್

ನವೀರಾದ ಪ್ರೇಮಕಥೆಯುಳ್ಳ ‘ಖಾಸಗಿ ಪುಟಗಳು’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಂತೋಷ್ ಶ್ರೀಕಂಠಪ್ಪ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಟ್ರೇಲರ್ ಹಾಗೂ ಚೆಂದದ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದೆ. ಇದೀಗ ಪ್ರೇಕ್ಷಕರ ಮುಂದೆ ಬರಲು ಸಿನಿಮಾ ರೆಡಿಯಾಗಿದ್ದು, ನವೆಂಬರ್ 18ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

‘ಖಾಸಗಿ ಪುಟಗಳು’ ಚಿತ್ರ ಸಂಪೂರ್ಣ ಹೊಸಬರ ಪ್ರಯತ್ನ. ಕಾಲೇಜು ಹುಡುಗನ್ನೊಬ್ಬನ ನವೀರಾದ ಪ್ರೇಮಕಥೆ ಹೊತ್ತ ಸಿನಿಮಾವಿದು. ಕಿರುಚಿತ್ರದಲ್ಲಿ ನಟಿಸಿ ಅನುಭವ ಇರುವ ವಿಶ್ವ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಶ್ವೇತಾ ಡಿಸೋಜ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದ ನಾಯಕಿ ಶ್ವೇತ ಡಿಸೋಜ ಮಾತನಾಡಿ ಹಿಂದಿಯಲ್ಲಿ ‘ವೈ’ ಎಂಬ ಸಿನಿಮಾದಲ್ಲಿ ನಟಿಸಿದ್ದೇನೆ. ಇದು ನನ್ನ ಮೊದಲ ಕನ್ನಡ ಸಿನಿಮಾ. ಭೂಮಿ ಪಾತ್ರದಲ್ಲಿ ನಟಿಸಿದ್ದೇನೆ. ಇನೋಸೆಂಟ್ ಹಾಗೂ ಮೆಚೋರ್ಡ್ ಎರಡು ಶೇಡ್ ನಲ್ಲಿ ಕಾಣಸಿಗಲಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ಕಿರುಚಿತ್ರಗಳಲ್ಲಿ ಅಭಿನಯಿಸುತ್ತಿದ್ದೆ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬ ಆಸೆಯಿತ್ತು. ನಾಯಕ ನಟನಾಗಿ ಇದು ನನ್ನ ಮೊದಲ ಸಿನಿಮಾ. ಒಂದು ತಂಡವಾಗಿ ಎಲ್ಲರೂ ಈ ಸಿನಿಮಾವನ್ನು ಮಾಡಿದ್ದೇವೆ. ನವೆಂಬರ್ 18ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಹರಸಬೇಕು ಎಂದು ನಾಯಕ ವಿಶ್ವ ಕೇಳಿಕೊಂಡ್ರು.

ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮಾತನಾಡಿ ಸಂತೋಷ್ ಶ್ರೀಕಂಠಪ್ಪ ಅವರಿಗೆ ಇರುವ ಸಿನಿಮಾ ಪ್ರೀತಿ ನೋಡಿ ಈ ಚಿತ್ರವನ್ನು ಒಪ್ಪಿಕೊಂಡೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ, ಕೆ. ಕಲ್ಯಾಣ್, ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ ಬರೆದಿದ್ದಾರೆ. ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ ಎಲ್ಲರೂ ಸಿನಿಮಾ ನೋಡಿ ಹೊಸಬರನ್ನು ಬೆಳೆಸಿ ಎಂದು ಕೇಳಿಕೊಂಡ್ರು.

ಚೇತನ್ ದುರ್ಗಾ, ನಂದಕುಮಾರ್,ಶ್ರೀಧರ್, ನಿರೀಕ್ಷಾ ಶೆಟ್ಟಿ, ದಿನೇಶ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಎಸ್ ವಿ ಎಂ ಮೋಶನ್ ಪಿಕ್ಚರ್ ಬ್ಯಾನರ್ ನಡಿ ಮಂಜು ವಿ ರಾಜ್, ವೀಣಾ ವಿ ರಾಜ್, ಮಂಜುನಾಥ್ ಡಿ ಎಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ,ರಾಕೇಶ್ ಆಚಾರ್ಯ ಬಿ.ಜಿ.ಎಂ ಮಾಡಿದ್ದು, ಆಶಿಕ್ ಕುಸುಗೋಳಿ ಸಂಕಲನ ಚಿತ್ರಕ್ಕಿದೆ.