ಸಾಂಸ್ಕೃತಿಕ

ಜಾನಪದ ಸಂಗೀತ ಕರ್ನಾಟಕದ ಶ್ರೀಮಂತ ಕಲೆ*: ದಳವಾಯಿ ಅಭಿಮತ


ನಾಯಕನಹಟ್ಟಿ ನ.,23.ಹೋಬಳಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಲ್ಲೂರ ಹಳ್ಳಿಯ ಶಿವಕುಮಾರ್ ಟಿ ತಂಡದ ವತಿಯಿಂದ ಜಾನಪದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಲ್ಲೂರ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ದಳವಾಯಿ ಇವರು ಕಾರ್ಯಕ್ರಮವನ್ನು ಕೀ ಬೋರ್ಡ್ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ,ಜನರು ಸ್ವತಃ ಹಾಡು ಕಟ್ಟಿ ಬಾಯಿಂದ ಬಾಯಿಗೆ ಹರಡುತ್ತಾ ಪ್ರಸಿದ್ದಿಯಾದ ಜಾನಪದ ಗೀತೆಗಳು ನಮ್ಮ ಕರ್ನಾಟಕದ ಶ್ರೀಮಂತ ಕಲೆಗಳಲ್ಲಿ ಒಂದಾಗಿದೆ, ನಮ್ಮ ಸಂಸ್ಕೃತಿ ಆಚಾರಗಳಿಗೆ ಅನುಗುಣವಾಗಿ ಪ್ರತಿ ಸಂದರ್ಭಕ್ಕೂ ಹಾಡು ಕಟ್ಟಿ ಮೆರುಗನ್ನು ನೀಡಿರುವ ಮಹಾನ್ ಕಲಾವಿದರನ್ನು ಸ್ಮರಿಸಿ ಜಾನಪದ ಗೀತೆಗಳ ಸಂಗೀತ ನಿನಾದಗಳನ್ನು,ಸಾಹಿತ್ಯಗಳನ್ನು ಅಳಿಯದಂತೆ ನಾವು ಉಳಿಸಬೇಕಿದೆ ಎಂದು ಹೇಳಿದರು.


ಕಲಾ ತಂಡದ ನಾಯಕ ಶಿವಕುಮಾರ್ ಟಿ ಮಾತನಾಡಿ ಸತತವಾಗಿ 10 ವರ್ಷಗಳಿಂದ ಕಲಾವಿದನಾಗಿ ಕಲಾ ಸೇವೆಯನ್ನು ಮಾಡಲು ನನಗೆ ಮುಖ್ಯವಾದ ಪ್ರೇರೇಪಣೆ ನೀಡಿದ್ದು ನನ್ನ ಗುರುಗಳಾದ ಡಿ. ರಾಜಣ್ಣ ಇವರ ಸೂಕ್ತ ಮಾರ್ಗದರ್ಶನದಿಂದ ಇಂದು ನಾನು ವಿಷ್ಣು ಸಾಂಸ್ಕೃತಿಕ ಕಲಾ ಸಂಘವನ್ನು ಕಟ್ಟಿಕೊಂಡು ಕಲಾ ಸೇವೆಯನ್ನು ಮಾಡಲು ನೆರವಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ಎಸ್.ಟಿ ಇವರ ಅನುಮತಿಯಿಂದಾಗಿ ಇಂದು ಜಾನಪದ ಸಂಗೀತ ಕಾರ್ಯಕ್ರಮವನ್ನು ಮಾಡುವ ಸೌಭಾಗ್ಯ ನಮ್ಮ ಕಲಾ ತಂಡಕ್ಕೆ ಲಭಿಸಿದೆ,ಇದೆ ತರ ನಮ್ಮ ತಂಡದಿಂದ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು ಜನರ ಪ್ರೋತ್ಸಾಹ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಮುಖ್ಯ ಶಿಕ್ಷಕ ವೆಂಕಟೇಶ್ ಹೆಚ್.ಡಿ ಇವರು ಮಾತನಾಡಿ, ಚಲನ ಚಿತ್ರ ಗೀತೆಗಳ ಮಧ್ಯೆ ಜನಪದ ಗೀತೆಗಳನ್ನು ಹಾಡುವ ಪರಿಪಾಟಲು ಕಡಿಮೆಯಾಗುತ್ತಿದೆ, ಜನಪದ ಗೀತೆಗಳ ಸಾಹಿತ್ಯ ಹಾಗೂ ಅವುಗಳ ಮಹತ್ವ ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಸಾಂದರ್ಭಿಕ ಹಾಡುಗಳಾಗಿವೆ.ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಹಾಡುವ ಕಲೆಯನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಕಲಾವಿದರಾಗಿ ಹೊರ ಹೊಮ್ಮುವ ಅವಕಾಶಗಳಿವೆ ಎಂದು ತಿಳಿಸಿದರು.


ಕಲಾವಿದ ರಾಜಣ್ಣ ಮಾತನಾಡಿ ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ, ಯಾರಿಗೆ ನಿರಂತರ ಬದ್ಧತೆ ಹಾಗೂ ಕಲಿಯುವ ಹಂಬಲ ಹೊಂದಿ ಅದರಂತೆ ಸತತ ಪ್ರಯತ್ನಗಳನ್ನು ಮಾಡುವರೋ ಅವರು ನಿಜವಾಗಿ ಉತ್ತಮ ಕಲಾವಿದರಗುತ್ತಾರೆ, ಆದ್ದರಿಂದ ಕಲೆಗೆ ಪ್ರೋತ್ಸಾಹ ನೀಡುವ ಮನಸ್ಸುಳ್ಳ ವ್ಯಕ್ತಿಗಳ ಕೊರತೆಯಿದೆ. ಇದರ ಪರಿಣಾಮ ಕಲಾವಿದರು ಸೃಷ್ಟಿ
ಯಾಗುವ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಬಹುಮುಖ ಪ್ರತಿಭೆಯ ಟಿ.ಶಿವಕುಮಾರ್ ಬಹಳ ವರ್ಷಗಳಿಂದ ಕಲಾವಿದನಾಗಿ ತಂಡವನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಕಲಾ ಸೇವೆಯನ್ನು ಮಾಡುತ್ತಾ ಸಾಗುತ್ತಿರುವ ಉದಯೋನ್ಮುಖ ಪ್ರತಿಭೆ ಎಂದು ಗಾಯಕ ಶಿಕ್ಷಕರಾದ ಕೆ.ಟಿ.ನಾಗಭೂಷಣ್ ಹೇಳಿದರು.
ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದ ಗಾಯಕರಾದ ಶಿವಕುಮಾರ್ ಟಿ,ಪ್ರಿಯಾಂಕ,ರಾಜಣ್ಣ,ತಿಪ್ಪೇಸ್ವಾಮಿ,ನಾಗಭೂಷಣ್,ನೀಲಪ್ಪ ತೂಲಹಳ್ಳಿ,ಇವರು ವಿವಿಧ ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷೆ ಮಂಜುಳಾ ಬಸವರಾಜ್, ಎಸ್ ಡಿ ಎಂ ಸಿ ಅಧ್ಯಕ್ಷ ಜಯಣ್ಣ, ಕಲಾ ತಂಡದ ನಾಯಕ ಶಿವಕುಮಾರ್ ಟಿ, ರಿದಂ ಪ್ಯಾಡ್ ವಾದಕ ಎಂ ವಿ ಬದ್ರಿ, ಕೀ ಬೋರ್ಡ್ ವಾದಕ ರಾಜಣ್ಣ,ಗಾಯಕ ಪವನ್ ತಳಕು ,ಶಿಕ್ಷಕರಾದ ವೀರಭದ್ರಪ್ಪ ಡಿ.ಕೆ,ರಂಜಿತಾ,ಮಹಾಂತೇಶ್, ಸೌಮ್ಯ , ಓಬಕ್ಕ,ಪ್ರಸನ್ನ ಕುಮಾರ್, ಬಡ ಮ್ಯಾಕಲಯ್ಯ, ಶಾಲಾ ವಿದ್ಯಾರ್ಥಿಗಳು,ಊರಿನ ಗ್ರಾಮಸ್ಥರು ಹಾಗೂ ಮತ್ತಿತರು ಹಾಜರಿದ್ದರು.

ಕನ್ನಡನಾಡುನುಡಿ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಕರವೇ ತಾಲ್ಲೂಕುಅಧ್ಯಕ್ಷರಾದ ಕೃಷ್ಣಪೂಜಾರಿ ಹೇಳಿಕೆ


ಹಿರಿಯೂರು :
ರಾಜ್ಯದಲ್ಲಿ ಕನ್ನಡ ಭಾಷೆ ನೆಲ, ಜಲದ ವಿಷಯ ಬಂದಾಗ ಕನ್ನಡನಾಡುನುಡಿ ರಕ್ಷಣೆಗಾಗಿ ಪ್ರಾಣ ತ್ಯಾಗಕ್ಕೂ ಕರ್ನಾಟಕ ರಕ್ಷಣಾ ವೇದಿಕೆ ಸದಾ ಸಿದ್ದವಾಗಿರುತ್ತದೆ ಎಂಬುದಾಗಿ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಕೃಷ್ಣ ಪೂಜಾರಿ ಹೇಳಿದರು.
ತಾಲ್ಲೂಕಿನ ಕಸ್ತೂರಿರಂಗಪ್ಪನಹಳ್ಳಿ ಗೇಟ್ ಬಳಿ ಇರುವ ಗಾರ್ಮೆಂಟ್ ಮುಂಭಾಗದಲ್ಲಿ ಕರವೇ ಆಟೋ ಚಾಲಕರು ಹಾಗೂ ಮಾಲೀಕರು ಏರ್ಪಡಿಸಲಾಗಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ ನೆಲ-ಜಲ ಉಳಿವಿಗೆ ಹಾಗೂ ರಕ್ಷಣೆಗಾಗಿ ನಮ್ಮ ಸಂಘಟನೆಯು ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇವೆ. ರಾಜ್ಯದ ಯಾವ ಮೂಲೆಯಲ್ಲಿ ಕನ್ನಡಿಗರಿಗೆ ಯಾವುದೇ ರೀತಿಯ ಅನ್ಯಾಯವಾದರೂ ಸಹ ನಮ್ಮ ಕರವೇ ವತಿಯಿಂದ ಖಂಡಿಸಿ ಹೋರಾಟಕ್ಕಿಳಿದಿದ್ದೇವೆ ಎಂದರಲ್ಲದೆ,
ಇದೀಗ ತಾಲೂಕಿನಲ್ಲಿಯೂ ಕರವೇ ಸಂಘಟನೆಯನ್ನು ಅತ್ಯಂತ ಬಲಿಷ್ಠವಾಗಿ ಕಟ್ಟಲು ನಾವೆಲ್ಲಾ ಪಣತೊಟ್ಟಿದ್ದು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕನ್ನಡತಾಯಿ ಭುವನೇಶ್ವರಿಯ ತೇರು ಹೀಗೆಯೇ ನಿರಂತರವಾಗಿ ಎಲ್ಲರ ಮನೆ ಮನದಲ್ಲೂ ಸಾಗುತ್ತಲಿರಲಿ ಎಂಬುದಾಗಿ ಅವರು ಹೇಳಿದರು.
ಕನ್ನಡ ಭುವನೇಶ್ವರಿ ಮಾತೆಗೆ ಪೂಜೆ ನೆರವೇರಿಸಿದ ಬಳಿಕ ಆಟೋ ಮಾಲೀಕರು ರಾಷ್ಟ್ರೀಯ ಹೆದ್ದಾರಿ ಮೂಲಕ ನಗರ ಪ್ರವೇಶಿಸಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಕಾರ್ಯಕರ್ತರು ಆಟೋಗಳಲ್ಲಿ, ಕಾರ್ ಗಳಲ್ಲಿ ಬಾವುಟಗಳನ್ನು ಕಟ್ಟಿಕೊಂಡು ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಕರವೇ ಚಾಲಕರ ಮತ್ತು ಮಾಲೀಕರ ಘಟಕದ ಅಧ್ಯಕ್ಷ ರಾಮು, ಗೌರವಾಧ್ಯಕ್ಷ ವಿಶ್ವನಾಥ್,ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ರಾಮು, ಸದಸ್ಯರಾದ ರಾಜು, ಪಾತಲಿಂಗಪ್ಪ, ಕಿರಣ್,ರಾಜಣ್ಣ, ಮಂಜಣ್ಣ, ಅನಿಲ್, ಶಿವು, ಸಿಕೆ ಕುಮಾರ್, ರಾಘು, ಅಪ್ಪು, ಗೋವಿಂದ, ಬಾಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಲೂಕು ಕಸಾಪದಿಂದ ನ.25ರಂದು ವೈಭವದ 68 ನೇ ಕನ್ನಡ ರಾಜ್ಯೋತ್ಸವ

ಚಳ್ಳಕೆರೆ ನ. 17.ಕನ್ನಡದ ಮನಸ್ಸುಗಳೆಲ್ಲ ಸೇರಿ ಕನ್ನಡದ ಹಬ್ಬವನ್ನು ನ.25ರಂದು ವಿಜೃಂಭಣೆಯಿಂದ ಆಚರಿಸೋಣ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿಟಿ ವೀರಭದ್ರ ಸ್ವಾಮಿ ಕರೆ ನೀಡಿದ್ದಾರೆ.


 ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಇದೇ ತಿಂಗಳ25ರಂದು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಿದ್ದು

ಮಕ್ಕಳಲ್ಲಿ ಕನ್ನಡ ನಾಡು ನುಡಿ ವಿಷಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಬಾರಿ ವಿದ್ಯಾರ್ಥಿ ಸ್ನೇಹಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಕ್ರಮ ಕೈಗೊಂಡಿದ್ದು ಈಗಾಗಲೇ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಹಾಗೂ ಕನ್ನಡ ಸಾಂಸ್ಕೃತಿಕ ನೃತ್ಯ ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಿದ್ದು ನವೆಂಬರ್ 17 ರ ಒಳಗೆ ಶಾಲೆಗಳ ವಿದ್ಯಾರ್ಥಿಗಳು ನೊಂದಾಯಿಸಿಕೊಳ್ಳಲು ಕೋರಲಾಗಿದೆ ಈ ಬಗ್ಗೆ ಶಾಲಾ ಕಾಲೇಜುಗಳಿಗೆ ಸೂಚನೆಗಳನ್ನು ರವಾನಿಸಲಾಗಿದೆ ಎಂದು ತಿಳಿಸಿದರು.


ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪಾರಿತೋಷಕ ಅಭಿನಂದನಾ ಪತ್ರ ಹಾಗೂ ನಗದು ಬಹುಮಾನವನ್ನು ನೀಡಲಾಗುವುದ ಹಾಗೆಯೇ ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 125ಕ್ಕೆ 125 ಹಾಗೂ ಪಿಯುಸಿ ಬಿಎಡ್ ಹಾಗೂ ಪದವಿ ಕನ್ನಡ ವಿಷಯದಲ್ಲಿ 100ಕ್ಕೆ100 ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಈ ಸಂಬಂಧ ಈಗಾಗಲೇ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಪ್ರಾಂಶುಪಾಲರು ಹೆಚ್ಚಿನ ಆದ್ಯತೆ ನೀಡಿ ವಿದ್ಯಾರ್ಥಿಗಳ ಮಾಹಿತಿ ನೀಡಲು ಸೂಚಿಸಲಾಗಿದೆ ತಾಲೂಕು ಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯನ್ನು ನ.20ರಂದು ತಾಲೂಕಿನ ವಿಶ್ವ ಭಾರತಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು ಈ ಬಾರಿಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಪಡೆದವರಿಗೆ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದ್ದು ಹೆಚ್ಚಿನ ಕನ್ನಡದ ಮನಸುಗಳು ಆಜೀವ ಸದಸ್ಯತ್ವವನ್ನು ಪಡೆಯಲು ಪ್ರೇರೇಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ವಿಶೇಷವಾಗಿ ಈ ಬಾರಿ ಮಾಧ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಮಾಡಿದ ಒಬ್ಬ ಸಾಧಕರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ತಾಲೂಕು ಮಟ್ಟದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.  ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ ಒಂದೊಂದು ಕ್ಷೇತ್ರದ ಒಬ್ಬ ಸಾಧಕರಿಗೆ ಸನ್ಮಾನಿಸಲಾಗುವುದು ಆದ್ದರಿಂದ ಈ ಬಾರಿ ಪ್ರಥಮವಾಗಿ ಮಾಧ್ಯಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ ಚಿತ್ತಯ್ಯ ಮಾತನಾಡಿ ಕಳೆದ ವರ್ಷ ಐದು ದಿನಗಳ ಕಾಲ ಕನ್ನಡದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು ಆದರೆ ಈ ಬಾರಿ ತಾಲೂಕಿನಲ್ಲಿ ವರುಣನ ಆವಕೃಪೆಯಿಂದ ಬರ ಆವರಿಸಿರುವುದರಿಂದ ಅದ್ದೂರಿಯಾಗಿ ಆಚರಿಸದೆ ಯಾವುದೇ ಕುಂದು ಕೊರತೆಗಳು ಉಂಟಾಗದಂತೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು ನ.25ರ ಬೆಳಿಗ್ಗೆ 10 ಗಂಟೆಗೆ ಪ್ರವಾಸಿ ಮಂದಿರದಿಂದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಮೂಲಕ ನಗರದ ರಾಜಬೀದಿಗಳಲ್ಲಿ ಸಂಚರಿಸಿ ನೆಹರು ವೃತ್ತದ ಮೂಲಕ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದ ಕಾರ್ಯಕ್ರಮದ ವೇದಿಕೆಗೆ ಆಗಮಿಸಲಾಗುವುದು ತಾಲೂಕಿನ ಎಲ್ಲ ಕನ್ನಡ ಅಭಿಮಾನಿಗಳು ಲೇಖಕರು ಸಾಹಿತಿಗಳು ಸರ್ವಧರ್ಮದ ಹಾಗೂ ಸಂಘಟನೆಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಕಾರ್ಮಿಕರು ಆಟೋ ಚಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು

ಸಭೆಯಲ್ಲಿ ತಾಲೂಕು ಕಸಾಪ ಕಾರ್ಯದರ್ಶಿ ಕೆ ಚಿತ್ತಯ್ಯ  ಕಸಬ ಹೋಬಳಿಯ ಕಸಾಪ ನಿರ್ದೇಶಕ ಸಂಜೀವಿನಿ ಲ್ಯಾಬ್ ಎಂಎನ್ ಮೃತ್ಯುಂಜಯ, ಜಗನ್ನಾಥ ಉಪಸ್ಥಿತರಿದ್ದರು.

ಗೋಪನಹಳ್ಳಿ ಗ್ರಾಮದಲ್ಲಿ ಇಟ್ಟಕ್ಕಿ ಗೌಡರಿಂದ ಹೂ ಚೆಲ್ಲುವ ಮೂಲಕ ದೀವಣಿಗೆ ಹಬ್ಬಕ್ಕೆ ಚಾಲನೆ


. ಜನಧ್ವನಿ ವಾರ್ತೆ ಮ.11 ವಿವಿಧ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬದ ಬದಲಾಗಿ ದೀವಣಿಗೆಹಬ್ಬ ಆಚರಣೆ ಮಾಡಲು ಮಂಗಳವಾರ ಅಮವಾಸೆಯದಿಂದ ಚಾಲನೆದೊರೆಯಲಿದೆ.
ದೀಪಾವಳಿ ಹಬ್ಬದ ಆಚರಣೆ ಇಲ್ಲಿ ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿದ್ದು. ಹಳ್ಳಿಗಳಲ್ಲಿ ದೀಪಾವಳಿ ಹಬ್ಬದ ಆಚರಣೆ ಅಷ್ಟಾಗಿ ಕಂಡು ಬರುತ್ತಿಲ್ಲ. ದೀವಣಿಗೆ(ಎತ್ತಿನ)ಹಬ್ಬದ ಹೆಸರಿನಲ್ಲಿ ಆಚರಣೆ ಎತ್ತುಗಳಿಗೆ ಶೃಂಗಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ಮಂಗಳವಾರ ಅಮಾವಾಸೆ ಮುಗಿದ ನಂತರ ಹಳ್ಳಿಗಳಲ್ಲಿ ದೀವಣಿಗೆ ಹಬ್ಬಗಳ ಸಾಲೇ ಶುರುವಾಗುತ್ತದೆ. ಆದರೆ ಎಲ್ಲಾ ಹಳ್ಳಿಗಳಲ್ಲೂ ಒಂದೇ ದಿನ ದೀವಣಿಗೆ ಆಚರಿಸದೆ ಅಯಾ ಹಳ್ಳಿಯ ಮುಖಂಡರ ತೀರ್ಮಾನದಂತೆ ಆಯಾ ವಾರದ ದಿನ ಮುಂದಿನ ಅಮಾವಸ್ಯೆ ಬರುವ ತನಕ ಒಂದು ತಿಂಗಳ ಪೂರ್ತಿ ದೀಪಾವಳಿ ಹಬ್ಬ ಆಚರಿಸುತ್ತಾರೆ.
ತಂಗಟೆ ಹೂವು ದೀಪಾವಳಿ ಆಚರಣೆ ತಿಂಗಳಲ್ಲಿ ಅಡವಿಯಲ್ಲಿ ಎಲ್ಲಿನೋಡಿದರೂ ಗೋಲ್ಡ್ ಕಲರ್ ಕಾಣುತ್ತದೆ ಈ ಹೂವುಗಳನ್ನು ಕೆಲವು ದೇವರುಗಳಿಗೆ ಬಂಗಾರದ ಹೂವೆಂದು ಮುಡಿಸುವ ಪದ್ದತಿ ಇದೆ.
ವಿಶೇಷ:
ಹಬ್ಬಕ್ಕೆ ಮೂರು ದಿನ ಮುಂಚಿಯೇ ಗೊಲ್ಲ ಸಂಪ್ರದಾಯಕ್ಕೆ ಸೇರಿದ ಇಟ್ಟಕ್ಕಿಗೌಡ ಅಡವಿಯಲ್ಲಿ ಬದು, ಅರಣ್ಯ, ಸೇರಿದಂತೆ ವಿವಿಧ ಕಡೆಗಳಲ್ಲಿ ಬೆಳೆದ ತಂಗಟೆ(ಬಂಗಾರ) ಹೂವುಗಳನ್ನು ಕಿತ್ತು ತಂದು ಶುಕ್ರವಾರ ಹಾಗೂ ಶನಿವಾರ ಗ್ರಾಮದ ಎಲ್ಲಾ ದೇವಾಸ್ಥನಗಳಿಗೆ ಮೊದಲು ಹಾಕಿ ನಂತರ ಬುಡ್ಡೆ(ಗುಡ್ಡೆ)ಕಲ್ಲಿಗೆ ಹಾಕಿ ನಂತರ ಗ್ರಾಮಗಳ ಪ್ರತಿ ಮನೆಗಳ ಬಾಗಿಲಿಗೆ ಚೆಲ್ಲಿ ಹೋಗುತ್ತಾರೆ. ಹೀಗೆ ತಂಗಟೆ ಹೂವು ಚೆಲ್ಲಿದ ರಾತ್ರಿಯಿಂದ ದೇವಸ್ಥಾನಗಳಿಗೆ ಅಂಟಿ-ಪಿಂಟಿ ಎಂಬ ದೀಪದಾನ ಸಂಪ್ರದಾಯ ಆರಂಭವಾಗುತ್ತದೆ, ಗ್ರಾಮದ 9 ಜನ ಅಯಾಗಾರರು ಕಳ್ಳೆ ಮುಳ್ಳು ಜಾತಿಯ ಬೇಲಿಯನ್ನು ಕಡಿದು ಈಡು(ಕಿಚ್ಚು) ಮುಳ್ಳಿನ ಗೂಡನ್ನು ಕಟ್ಟಲಾಗುತ್ತದೆ. ಗೊಲ್ಲಸುಮುದಾಯದ ಇಟ್ಟಕ್ಕಿ ಗೌಡರು ಪೂಜೆ ನಂತರ ಮುಳ್ಳಿನ ಗೂಡಿಗೆ ಬೆಂಕಿ ಹಚ್ಚಿ ಶೃಂಗಾರಗೊಳಿಸಿದ ಎತ್ತುಗಳನ್ನು ಸುತ್ತುವರಿಸಿ ಪೂಜೆ ಸಲ್ಲಿಸಿ ನಂತರ ಕಿಚ್ಚಿನ ಪೂಜೆಗೆಂದು ಮಾಡಿದ ಎಡೆಯ ಅನ್ನವನ್ನು ಕಲಸಿದ ಮುಸರೆಯನ್ನು ತಂದು ರೈತರು ತಮ್ಮ ಜಮೀನುಗಳಿಗೆ ಹಾಕಿದರೆ ಬೆಳೆಗಳಿಗೆ ಯಾವುದೇ ಕೀಟ, ರೋಗ ಬಾದೆ ಹಾಗೂ ಬೆಳೆಗಳಿಗೆ ಯಾವುದೇ ದೃಷ್ಠಿ ಬೀಳುವುದಿಲ್ಲ ಬೆಳೆಯೂ ಸಹ ಉಲುಸಾಗಿ ಹೆಚ್ಚಿನ ಇಳುವರಿ ಬರುತ್ತದೆ ಎಂಬ ನಂಬಿಕೆ ಹಳ್ಳಿಯ ರೈತರ ನಂಬಿಕೆಯಾಗಿಯಾಗಿದೆ.

ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸುವ ಹಾಗೂ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಇಂತಹ ವೇಧಿಕೆಗಳು ಸಹಕಾರಿಯಾಗಲಿವೆ ಶಾಸಕ ಟಿ.ರಘುಮೂರ್ತಿ.


ಚಳ್ಳಕೆರೆ ನ.10 ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು. ಸೋಲು, ಗೆಲುವಿನ ಬಗ್ಗೆ ಯೋಚಿಸದೆ ಸ್ಪರ್ಧೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.
ನಗರದ ಸ್ವಾಮಿವಿವೇಕಾನಂದ ವಿದ್ಯಾ ಸಂಸ್ಥೆ ಆವರಣದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಬರಗಾಲವಿದ್ದರೂ ಶಿಕ್ಷಣ ಕ್ಷೇತ್ರ, ಕಲೆ, ಸಾಹಿತ್ಯ, ರಂಗಭೂಮಿ ಕೃಷಿಗೆ ಬರವಿಲ್ಲ , ಬುಡಕಟ್ಟು ಸಂಸ್ಕೃತಿಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಶಿಕ್ಷಣದ ಜತೆಗೆ ಮಕ್ಕಳಿಗೆ ಇಂಥ ಸಾಂಸ್ಕೃತಿಕ ವೇದಿಕೆಗಳನ್ನು ಕಲ್ಪಿಸುವ ಮೂಲಕ ಮಕ್ಕಳಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು.
ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಕ್ರೀಡೆ, ಕಲೆ, ನಾಟಕ ನೃತ್ಯದಂತಹ ಪಠ್ಯೇತರ ಚಟುವಟಿಕೆಗಳನ್ನು ಕಲಿಸುವ ಹಾಗೂ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಇಂತಹ ವೇಧಿಕೆಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಬಿಇಒ ಕೆ.ಎಸ್.ಸುರೇಶ್ ಮಾತನಾಡಿ,ಶಾಲೆಗಳಲ್ಲಿ ಮಕ್ಕಳ ಪಾಠದ ಜತೆಗೆ ಅವರಲ್ಲಿನ ವಿಶೇಷ ಕೌಶಲ,ಅಭಿರುಚಿ ಗುರುತಿಸುವ ಮಹತ್ವದ ಕಾರ್ಯ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಿಂದ ಆನಾವರಣಗೊಳ್ಳುವುದು ಎಂದು ತಿಳಿಸಿದರು.
ಮಕ್ಕಳಲ್ಲಿ ನಾನಾ ರೀತಿಯ ಪ್ರತಿಭೆಗಳಿರುವ ಹಿನ್ನೆಲೆಯಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ಹೀಗೆ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ 28 ಸ್ವರ್ಧೆಗಳನ್ನು ನಡೆಸಲಾಗುತ್ತಿದ್ದು, ತೀರ್ಪುಗಾರರು ಯಾವುದೇ ಪಕ್ಷಪಾತ ಮಾಡದೆ ಕಲೆ ಮತ್ತು ಕೌಶಲ ಗುರುತಿಸಿ ತೀರ್ಪು ನೀಡುವ ಮೂಲಕ ಮಕ್ಕಳಿಗೆ ಪ್ರೋತ್ಸಾಹಿಒಸಬೇಕು. ಇಲ್ಲಿ ಪ್ರಥಮ ಸ್ಥಾನ ಪಡೆದವರು ಜಿಲ್ಲಾ ಹಂತಕ್ಕೆ ಹೋಗುವರು ಎಂದು ತಿಳಿಸಿದರು.


ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸುಜಾತ,ಕವಿತಾ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಲಿಂಗೇಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಪ್ರಭಾರ ಬಿಆರ್ಸಿ ತಿಪ್ಪೇಸ್ವಾಮಿ, ದೈಹಿಕ ಪರಿವೀಕ್ಷಕ ಸುನೀಲ್ಕುಮಾರ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀನಿವಾಸ್,ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಕುಮಾರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ, ಪದಾಧಿಕಾರಿಗಳಾದ ಈರಣ್ಣ, ವೀರಣ್ಣ, ಸದಾಶಿವಪ್ಪ, ನಾಗರಾಜ್, ಇಸಿಒಗಳಾದ ಮಾರುತಿ ಭಂಡಾರಿ,ಗಿರೀಶ್ ಇತರರಿದ್ದರು.

ವಿಶೇಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಹ್ವಾನಿಸುವಂತೆ ಜಿಲ್ಲಾ ಕ.ಸ.ಪ ಅಧ್ಯಕ್ಷ ಶಿವಸ್ವಾಮಿ.


ಚಿತ್ರದುರ್ಗ ಅ.,29 ಕನ್ನಡ ರಾಜ್ಯೋತ್ಸವ ಆಚರಣೆ
ಅಗವಾಗಿ ಶ್ರೀ ತರಳಬಾಳು ಬೃಹನ್ಮಠ, ಸಿರಿಗೆರೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಿರಿಗೆರೆಯಲ್ಲಿ ನ.3 ರಿಂದ 5 ರ ವರೆಗೆ ಮೂರು ದಿನಗಳು ಕರ್ನಾಟಕ ಹೆಸರಿನ *50 ನೇ ವರ್ಷಾಚರಣೆಯ* *ವಿಶೇಷ ರಾಜ್ಯೋತ್ಸವ* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಾಹಿತಿಗಳಚಿಂತಕರು. ಕನ್ನಡ ಮನಸ್ಸುಳ್ಳವರು.ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಕ.ಸ.ಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದ್ದಾರೆ.

ಗಣಪ ಹೋದ ಜೋಕುಮಾರಸ್ವಾಮಿ ಮನೆ ಮನೆಗೆ ಮಹಿಳೆಯ ಪುಟ್ಟಿಮೇಲೆ ಬಂದ…


ಚಳ್ಳಕೆರೆ ಜನಧ್ವನಿ ವಾರ್ತೆ ಸೆ.25 ಗಣೇಶ ಹಬ್ಬದ ನಂತರ ಜೋಕುಮಾರಸ್ವಾಮಿಯನ್ನು ಹೊತ್ತ ಮಹಿಳೆಯರು ಸಾಮಾನ್ಯವಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮನೆ ಮನೆಗೆ ಬರುವುದು ಕಾಣಬಹುದಾಗಿದೆ.


ಮನೆ ಮನೆಗೆ ಸಮೃದ್ಧಿ ಹೊತ್ತು ತರುವ ಜೋಕುಮಾರಸ್ವಾಮಿ ರಾಜ್ಯಾದ್ಯಂತ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಇಲ್ಲಿ ಗಣೇಶ ಚತುರ್ಥಿಯ ನಂತರ ಕಾಣಿಸಿಕೊಳ್ಳುವ ಪ್ರಮುಖ ಆಚರಣೆಗಳಲ್ಲಿ ಜೋಕುಮಾರಸ್ವಾಮಿಯೂ ಒಂದು.ಗಣೇಶ ಚತುರ್ಥಿಯ ಐದನೇ ದಿನ ಅಂದರೆ, ಅಷ್ಟಮಿಯ ದಿನ ಮೂಲಾನಕ್ಷತ್ರದಲ್ಲಿ ಜೋಕುಮಾರಸ್ವಾಮಿಯ ಜನನವಾಗುತ್ತದೆ. ಗಂಗಾಮತಸ್ಥರು ಮನೆತನದವರು ಹೊಲದಿಂದ ಮಣ್ಣು ತಂದು ಬಡಿಗೇರ ಮನೆಯಲ್ಲಿ ಜೋಕುಮಾರಸ್ವಾಮಿಯ ಮೂರ್ತಿಯನ್ನು ಮಾಡಿಸುತ್ತಾರೆ. ನಂತರ ಏಳು ದಿನಗಳ ಕಾಲ ಆ ಮೂರ್ತಿಯನ್ನು ಗಂಗಾಮತಸ್ಥರು ಮನೆತನದವರು ಏಳು ಊರುಗಳಿಗೆ ತಗೆದುಕೊಂಡು ಹೋಗುತ್ತಾರೆ. ಅದರಲ್ಲೂ ಪ್ರಮುಖವಾಗಿ ರೈತರ ಮನೆಗೆ ಜೋಕುಮಾರಸ್ವಾಮಿಯನ್ನು ಹೊತ್ತುಕೊಂಡು ಹೋಗಲಾಗುತ್ತದೆ. ಜೋಕುಮಾರನನ್ನು ಹೊತ್ತು ಬರುವ ಮಹಿಳೆಯರು .


ಜೋಕುಮಾರಸ್ವಾಮಿಗೆ ಕಾಲುಗಳಿಲ್ಲದ ಕಾರಣ ಮಹಿಳೆಯರು ಬುಟ್ಟಿಯಲ್ಲಿ ಹೊತ್ತು ತಿರುಗುತ್ತಾರೆ. ಜೋಕುಮಾರ ಸ್ವಾಮಿಯನ್ನು ಹೊತ್ತು ತಂದ ಮಹಿಳೆಯರು ಮನೆ ಮನೆಗೆ ಭೇಟಿ ನೀಡುತ್ತಾರೆ. ಮನೆಯ ಮುಂದೆ ಬಾಗಿಲಲ್ಲಿ ಜೋಕುಮಾರಸ್ವಾಮಿ ಮೂರ್ತಿ ಇಟ್ಟು ಅವನ ಕುರಿತು ಜಾನಪದ ಹಾಡು ಹೇಳುತ್ತಾರೆ. ಜೋಕು­ಮಾರನನ್ನು ಜನಪದರು ತಮ್ಮ ಹಾಡುಗಳಲ್ಲಿ ಹೀಗೆ ಹೇಳುತ್ತಾರೆ

‘ಅಡ್ಡಡ್ಡ ಮಳೆ ಬಡಿದು, ದೊಡ್ಡ ದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ…

ರೈತರ ದೇವತೆ ಎನ್ನುವಲ್ಲಿ ಹಾಡುವ ಹಾಡು ಹೀಗಿದೆ,

‘ಹಾಸ್ಯಾಸಿ ಮಳಿ ಬಡಿದು ಬೀಸಿ ಬೀಸಿ ಕೆರೆ ತುಂಬಿ, ಬಾಸಿಂಗದಂತ ತೆನೆಬಾಗಿ ಗೌಡರ ರಾಶಿಯ ಮ್ಯಾಲೆ, ಸಿರಿ ಬಂದು ಜೋಕಮಾರ….

“ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ್ ಗುಡ್ಡಗಳೆಲ್ಲ ಹಸಿರಾಗಿ ಜೋಕುಮಾರ, ಹಾಸ್ಯಾಸಿ ಮಳಿ ಬಡಿದು, ಬೀಸಿ ಬೀಸಿ ಕೆರೆತುಂಬಿ ಬಾಸಿಂಗದಂತ ತೆನೆಬಾಗಿ ಜೋಕುಮಾರ.ಈ ವೇಳೆ ಮನೆಯವರು ಜೋಕುಮಾರಸ್ವಾಮಿಗೆ ಜೋಳ, ಅಕ್ಕಿ ಮೆಣಸಿನಕಾಯಿ, ಹಾಗೂ ತರಕಾರಿ ಸೇರಿದಂತೆ ವಿವಿಧ ಧಾನ್ಯಗಳನ್ನು ನೀಡುತ್ತಾರೆ. ಈ ರೀತಿ ಧಾನ್ಯ ನೀಡಿದ ಮಹಿಳೆಯರಿಗೆ ಜೋಕುಮಾರಸ್ವಾಮಿ ಹೊತ್ತ ಮಹಿಳೆಯರು ಕಾಡಿಗೆ ಮತ್ತು ಅಂಬಲಿಯನ್ನು ನೀಡುತ್ತಾರೆ. ಈ ಕಾಡಿಗೆಯನ್ನು ಮನೆಯ ಬಾಗಿಲಿಗೆ ಹಚ್ಚುವುದು ,ರೈತರು ಜಮೀನುಗಳಿಗೆ ಚರಗ ಚೆಲ್ಲುತ್ತಾರೆ. ಅಂಬಲಿಯನ್ನು ಜಮೀನಿಗೆ ಚರಗ ಚೆಲ್ಲುವುದರಿಂದ ಉತ್ತಮ ಬೆಳೆ ಬರುತ್ತದೆ ಎಂಬುದು ಜನರ ನಂಬಸಮೃದ್ಧಿಯನ್ನು ಹೊತ್ತು ತರುವ ಜೋಕುಮಾರಸ್ವಾಮಿ :ಪ್ರಸ್ತುತ ಮಳೆಯಿಲ್ಲದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜೋಕುಮಾರಸ್ವಾಮಿ ಕೈಲಾಸಕ್ಕೆ ಹೋಗಿ ಮಳೆಯಿಲ್ಲದ ರೈತರ ಸಂಕಷ್ಟವನ್ನು ಪಾರ್ವತಿ ಪರಮೇಶ್ವರನಿಗೆ ತಿಳಿಸುತ್ತಾನೆ. ಬಳಿಕ ಭೂಲೋಕದಲ್ಲಿ ಮಳೆ ಬೆಳೆ ಉಂಟಾಗುತ್ತದೆ ಎಂಬುದು ನಂಬಿಕೆ. ಇಂದೀಗೂ ಜನರಲ್ಲಿ ನಂಬಿಕೆ ಇದೆ.


ಜೊತೆಗೆ ಮದುವೆಯಾಗದವರಿಗೆ ಮದುವೆ, ಮಕ್ಕಳಾಗದವರಿಗೆ ಸಂತಾನಭಾಗ್ಯವನ್ನು ಜೋಕುಮಾರಸ್ವಾಮಿ ಕಲ್ಪಿಸುತ್ತಾನೆ. ಈ ರೀತಿ ಬೇಡಿಕೊಂಡವರು ಜೋಕುಮಾರ ಸ್ವಾಮಿಗೆ ತೊಟ್ಟಿಲು, ಲಿಂಗದಕಾಯಿ ಮತ್ತು ಉಡುದಾರ ನೀಡುತ್ತಾರೆ. ಅಲ್ಲದೆ ಜೋಕುಮಾರಸ್ವಾಮಿ ಬಾಯಿಗೆ ಬೆಣ್ಣೆ ಸವರಲಾಗುತ್ತದೆ. ಈ ರೀತಿ ಬೆಣ್ಣೆ ಸವರಿದರೆ ಮನೆಯಲ್ಲಿ ಹಸುಗಳು ಹಾಲು ಹೆಚ್ಚು ನೀಡುತ್ತವೆ ಎಂಬುದು ಜನರ ನಂಬಿಕೆಯಾಗಿದೆ.
ಜೋಕುಮಾರ ಎಂದರೆ ಶಿವ ಪುತ್ರ ಕುಮಾರಸ್ವಾಮಿ. ನಾಡ ಜನಪದರು ತಮ್ಮ ಪ್ರೀತಿಯ ದೈವವಾದ್ದರಿಂದ ಆತನನ್ನು ಮುದ್ದಿನ ಕುಮಾರಸ್ವಾಮಿ ಎಂದು ಬಣ್ಣಿಸಲಾಗುತ್ತದೆ. ‘ ಜೋಕುಮಾರ’ ಎಂದು ಕರೆಯಲಾಗುತ್ತದೆ. ಪಾರ್ವತಿಪುತ್ರ ಗಣಪತಿಯು ಭೂಲೋಕಕ್ಕೆ ಬಂದು ಹೋದ ಬಳಿಕ ಕೈಲಾಸದಿಂದ ಧರೆಗೆ ಬರುತ್ತಾನೆ ಶಿವಪುತ್ರ ಕುಮಾರಸ್ವಾಮಿ ಅಥವಾ ಷಣ್ಮುಖ. ಲೋಕಪ್ರಭುವಾದ ಪರಮೇಶ್ವರ ಶಿವನ ಮೊದಲ ಮಗ ಗಣಪತಿಯು ಪ್ರಭುತ್ವದ ಪ್ರತೀಕವಾದರೆ ಕಿರಿಯ ಮಗ ಕುಮಾರಸ್ವಾಮಿಯು ತನ್ನ ಲೋಕಾನುಗ್ರಹ ಬುದ್ಧಿಯಿಂದ ಜನಪದರ ದೈವವಾದನು.

ಗಣಪತಿಯು ಶಿಷ್ಟದೇವತೆಯಾದರೆ ಷಣ್ಮುಖನು ಜನಪದರ ದೈವವಾದನು. ತಮ್ಮ ಕಷ್ಟಕ್ಕೆ ಕರಗಿ ಶಿವಕಾರುಣ್ಯವನ್ನು ಲೋಕಕ್ಕೆ ಉಣಬಡಿಸಿದ ಕುಮಾರಸ್ವಾಮಿಯನ್ನು ಜನಪದರು ಪ್ರೀತಿಯಿಂದ ‘ ಜೋಕುಮಾರ’ ಎಂದು ಕರೆದು, ಗೌರವಿಸುತ್ತಾರೆ.

ಗಣೇಶ ಸವಿಸವಿಯಾದ ಭೋಜನ ಸವಿದು ಹೋದರೆ, ಜೋಕಮಾರಸ್ವಾಮಿ ಮನೆ ಮನೆಗೆ ಸುತ್ತಿ ಜನರು ಪಡುವ ಕಷ್ಟಗಳನ್ನು ನೋಡಿ ಅವುಗಳನ್ನು ಶಿವನಿಗೆ ತಿಳುಸುತ್ತಾನೆ. ಜೋಕುಮಾರ ಸ್ವಾಮಿ ಹೋದ ನಂತರ ಮಳೆಯಾಗುತ್ತದೆ ಎಂಬುದು ಜನರ ನಂಬಿಕೆ.
7 ದಿನಗಳ ಕಾಲ ಜೋಕುಮಾರನನ್ನು ಹೊತ್ತು ಸಾಗುವ ಮಹಿಳೆಯರು ನಂತರ ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ “ದಿನ” ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ.


ಪ್ರತೀ ವರ್ಷ ನಾವು ಜೋಕುಮಾರಸ್ವಾಮಿ ಹಬ್ಬವನ್ನು ಆಚರಿಸುತ್ತೇವೆ. ಗ್ರಾಮದ ಹೊರಗಿರುವ ಕೆರೆಗಳಿಂದ ಮಣ್ಣನ್ನು ತರುವ ಮಹಿಳೆಯರು ನಂತರ ಅದರಿಂದ ಜೋಕುಮಾರಸ್ವಾಮಿ ಮೂರ್ತಿಯನ್ನು ಸಿದ್ಧಪಡಿಸುತ್ತಾನೆ. ಸ್ನಾನ ಮಾಡಿ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು 7 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಧಾನ್ಯಗಳನ್ನು ಸಂಗ್ರಹಿಸುತ್ತಾರೆಂದು ಆಚರಣೆ ಕುರಿತು ಜೋಕುಮಾರಸ್ವಾಮಿಯನ್ನ ಒತ್ತು ತಂದ ಮಹಿಳೆಯರು ಮಾಹಿತಿ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಣೀಯ: ಶಿವರಾಜ ತಂಗಡಗಿ

ಕೊಪ್ಪಳ ಸೆಪ್ಟೆಂಬರ್ 17 : ಕಲ್ಯಾಣ ಕರ್ನಾಟಕ ಭಾಗದ ವಿಮೋಚನೆಗಾಗಿ ನಡೆದ ಅವಿರತ ಹೋರಾಟದಲ್ಲಿ ಭಾಗಿಯಾದ ಮಹನಿಯರ ತ್ಯಾಗ ಬಲಿದಾನವು ಸ್ಮರಣೀಯವಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 17ರಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಜಿಲ್ಲೆಯ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಹೈದ್ರಾಬಾದ್ ಪ್ರಾಂತ್ಯದ ಕೊಪ್ಪಳ ಜಿಲ್ಲೆಯ ಈ ವಿಮೋಚನಾ ಹೋರಾಟದಲ್ಲಿ ಈ ಭಾಗದ ಅನೇಕ ಮಹನಿಯರು ಹೋರಾಟ ಮಾಡಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ರಾಮಚಂದ್ರಪ್ಪ ವೀರಪ್ಪ, ವೀರಭದ್ರಪ್ಪ ಶಿರೂರ, ಶಿವಮೂರ್ತಿಸ್ವಾಮಿ ಅಳವಂಡಿ, ಪುಂಡಲೀಕಪ್ಪ ಜ್ಞಾನಮೋಠೆ, ಬೇಳೂರ ತಿಮ್ಮನಗೌಡ, ಬಸವಂತರಾಯ ಕಾಟ್ರಳ್ಳಿ, ದಾನಸೂರ ಬಸರಿಗಿಡದ ವೀರಪ್ಪ, ಜನಾರ್ಧನರಾವ್ ದೇಸಾಯಿ, ಸಿ.ಎಂ. ಚುರ್ಚಿಹಾಳಮಠ, ಕೊಪ್ಪಳದ ಭೀಮನಗೌಡ ಕವಲೂರ, ಷಣ್ಮುಖಪ್ಪ ಯರಾಶಿ, ದೇವೇಂದ್ರಕುಮಾರ ಹಕಾರಿ, ಡಾ.ಪಂಚಾಕ್ಷರಿ ಹಿರೇಮಠ ಸೇರಿದಂತೆ ಈ ಭಾಗದ ಇನ್ನು ಅನೇಕರು ಭಾಗಿಯಾದರು ಎಂದು ತಿಳಿಸಿದರು.


ಅಸಂಖ್ಯಾತ ಮಹನಿಯರ ಹೋರಾಟ ತ್ಯಾಗ ಬಲಿದಾನದಿಂದಾಗಿ ಭಾರತ ದೇಶಕ್ಕೆ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕಿತು. ಅಂದು ಭಾರತದ ಎಲ್ಲಾ ಕಡೆಗಳಲ್ಲಿ ಸ್ವಾತಂತ್ರ್ಯವನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸಲಾಯಿತು. ಆದರೆ, ನಮ್ಮ ಭಾಗದ ಹೈದ್ರಾಬಾದ್ ಸಂಸ್ಥಾನದ ಪ್ರಜೆಗಳಿಗೆ ಮಾತ್ರ ಈ ಉತ್ಸಾಹದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಅಂದಿನ ನಿಜಾಮ ಸರ್ಕಾರವು ಯಾರು ಕೂಡ ಭಾರತದ ರಾಷ್ಟçಧ್ವಜವನ್ನು ಹಾರಿಸಬಾರದು ಎಂದು ಫರ್ಮಾನು ಹೊರಡಿಸಿತ್ತು. ಸಭೆ ಮೆರವಣಿಗೆ ಮೇಲೆ ನಿರ್ಬಂಧ ಹಾಕಲಾಗಿತ್ತು. ಆಗ ಕೊಪ್ಪಳದ ವಕೀಲರೊಬ್ಬರು ಸಭೆ ನಡೆಸಿ ಸೆರೆಯಾಳಾದರು. ಆ ವೇಳೆ ಕೊಪ್ಪಳ, ಕಾತರಕಿ, ಕಿನ್ನಾಳ, ಯಲಬುರ್ಗಿ, ಕೂಕನೂರ ಕಡೆಗಳಲ್ಲಿ ಧ್ವಜ ಹಾರಿಸಲು ಸಿದ್ಧತೆ ಮಾಡಿ ಕೆಲವು ಹೋರಾಟಗಾರರು ಧ್ವಜ ಹಾರಿಸಿ ಬಂಧನಕ್ಕೊಳಗಾದರು.
ಸತ್ಯಾಗ್ರಹವು ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಯಿತು. ನಿಜಾಂ ಸರ್ಕಾರ ಹಾಗೂ ರಜಾಕಾರರು ರೊಚ್ಚಿಗೆದ್ದು ಮನಬಂದಂತೆ ವರ್ತಿಸಿದರು. ಆಗ ಈ ಭಾಗದಲ್ಲಿ ರಜಾಕಾರರ ಕ್ಯಾಂಪುಗಳು ಸ್ಥಾಪಿತವಾದವು. ಸ್ವತಂತ್ರ ಹೈದ್ರಾಬಾದ್‌ಗಾಗಿ ನಿಜಾಮನು ಅನೇಕ ಪೂರ್ವಭಾವಿ ಯೋಜನೆಗಳನ್ನು ಹಾಕಿಕೊಂಡನು. ಸ್ವಾತಂತ್ರ್ಯ ಹೋರಾಟಗಾರರನ್ನು ಮಟ್ಟ ಹಾಕಲು ರಜಾಕಾರರೆಂಬ ಅರೇ ಸೈನಿಕ ಪಡೆಗಳನ್ನು ಹೈದ್ರಾಬಾದ್ ರಾಜ್ಯಾದ್ಯಂತ ಕಳುಹಿಸಿದನು. ಇದರ ಭಾಗವಾಗಿ ಈ ನಮ್ಮ ಕೊಪ್ಪಳ ಸೇರಿದಂತೆ ಈ ಭಾಗದಲ್ಲಿ ಅಂದು ಹಿಂಸೆ, ಲೂಟಿ, ಅತ್ಯಾಚಾರಗಳು ಬಹಳಷ್ಟು ನಡೆದವು.
ಈ ಭಾಗದ ವಿಮೋಚನಾ ಹೋರಾಟದಲ್ಲಿ ಗಂಗಾವತಿ ತಾಲೂಕಿನ ನವಲಿ ಗ್ರಾಮದ ಘಟನೆ, ಮಾಲಗಿತ್ತಿಯಲ್ಲಿ ನಿಜಾಮ ಪಡೆಯ ಹತ್ಯೆ, ಹಿರೇವಂಕಲಕುಂಟ ಪೊಲೀಸ್ ಠಾಣೆ ಮೇಲೆ ದಾಳಿ, ಮುಧೋಳ ಮತ್ತು ಗಜೇಂದ್ರಗಡ ಮಧ್ಯದ ಕಗ್ಗಲ್ಲು ಹಳ್ಳದ ಯುದ್ಧ, ಹುಲೈಹೈದರನಲ್ಲಿ ತಹಸೀಲ್ದಾರಗೆ ಲಾಠಿ ಏಟು, ಕಲಾಲಬಂಡಿ ಕಾರ್ಯಾಚರಣೆ, ಯಲಬುರ್ಗಿ ತಹಸೀಲ್ದಾರ ಕಚೇರಿಯ ಮೇಲೆ ದಾಳಿ, ಕುಷ್ಟಗಿ ತಾಲೂಕಿನ ಬಾದಿಮನಾಳ ಘಟನೆ, ಸ್ವಾತಂತ್ರ್ಯ ಯೋಧ ಶ್ರೀರಾಮು ಹತ್ಯೆ, ಮುಕ್ಕುಂಪಿ ಮಹಿಳೆಯರ ಸಾಹಸ, ಕುಕನೂರ ಪೊಲೀಸ್ ಠಾಣೆಗೆ ಮುತ್ತಿಗೆ, ಮುಂಡರಗಿ ಸಮೀಪದ ಬಳಗಟ್ಟಿ ಗ್ರಾಮದ ಪ್ರಕರಣ, ಕವಲೂರ ಹತ್ಯಾಕಾಂಡ, ಲೇವಿ ಹಪ್ತೆ ಕರೋಡಗಿರಿಗಳ ಲೂಟಿ, ಡೊಣ್ಣೆ ಗುಡ್ಡದ ಸುಂಕದ ಕಟ್ಟೆಗೆ ಬೆಂಕಿ, ಸಿರಗುಪ್ಪ ಹಾಗೂ ಮುದನೂರ ಸುಂಕದ ಕಟ್ಟೆಗೆ ಬೆಂಕಿ, ಬೇವೂರ ಮಾಲ್ಗುಜಾರಿ ಲೂಟಿ, ಮುಧೋಳ ಹಪ್ತೆ ಲೂಟಿ, ಕವಲೂರ ಗ್ವಾತಗಿ ಮ್ಯಾಗೇರಿ ಲೂಟಿ, ಚಿಕ್ಕೊಪ್ಪ ಮತ್ತು ಬನ್ನಿಗೊಳ ಲೂಟಿ ಹೀಗೆ ಅನೇಕ ಘಟನೆಗಳು ನಡೆದವು. ಆಗ ಭಾರತ ಸರ್ಕಾರವು ಈ ಹೈದ್ರಾಬಾದ್ ಪ್ರಾಂತದಲ್ಲಿ ಆಗುತ್ತಿರುವ ಹಿಂಸೆ, ಅನ್ಯಾಯ, ಲೂಟಿ ಪ್ರಸ್ತಾಪಿಸಿ ಶ್ವೇತ ಪತ್ರ ಹೊರಡಿಸಿ ನಿಜಾಮನಿಗೆ ಎಚ್ಚರಿಕೆ ಕೊಟ್ಟಿತು. ಆದರೆ, ಅದು ಉಪಯೋಗಕ್ಕೆ ಬರಲಿಲ್ಲ. ಆಗ ಪೊಲೀಸ್ ಆ್ಯಕ್ಷನ್ : ಆಪರೇಷನ್ ಪೋಲೊ ನಡೆಯಿತು.
ಭಾರತ ಸರ್ಕಾರವು ಜನರ ಮನವಿಗೆ ಕಿವಿಗೊಟ್ಟು ಇಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಿ ಸೆಪ್ಟೆಂಬರ್ 13ರಂದು ಪೊಲೀಸ್ ಆ್ಯಕ್ಷನ್ ಆಫರೇಶನ್ ಪೋಲೊ ಕೈಗೊಂಡಿತು. ಭಾರತದ ಸೈನ್ಯ ಎಲ್ಲ ಕಡೆಯಿಂದ ಹೈದ್ರಾಬಾದ್ ಪ್ರಾಂತವನ್ನು ಮುತ್ತಿತ್ತು. ದಕ್ಷಿಣ ಭಾರತದ ಪ್ರಧಾನ ದಂಡನಾಯಕ ಲೆ.ಜ.ಮಹಾರಾಜ ಸಿಂಗ್ ನೇತೃತ್ವದಲ್ಲಿ ಮೇಜರ್ ಜನರಲ್ ಡಿ.ಎಸ್.ಬ್ರಾರ್, ಜನರಲ್ ಜೆ.ಎಚ್.ಚೌದರಿ, ಎ.ಎ.ರುದ್ರ, ಬ್ರಿಗೇಡಿಯರ್ ಶೋಯದತ್ತ ಸಿಂಗ್ ಮೊದಲಾದವರು ಸೈನ್ಯವನ್ನು ಮುನ್ನೆಡಿಸಿದರು. ಭಾರತ ಸೈನ್ಯಕ್ಕೆ ನಿಜಾಮ ಸೈನ್ಯವಾಗಲಿ ಪಠಾಣರಾಗಲಿ ಎಲ್ಲಿಯೂ ತಡೆಯೊಡ್ಡಲಿಲ್ಲ. ಆದರೆ ನಳದುರ್ಗ ಮತ್ತು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಡ್ಯಾಮಿನಲ್ಲಿ ಮತ್ತೆ ಯುದ್ಧವಾಗಿ ಸೋತು ಶರಣಾದರು. ಕೇವಲ ನಾಲ್ಕು ದಿನಗಳಲ್ಲಿ ಹೈದ್ರಾಬಾದ್ ನಿಜಾಮನು ಭಾರತಕ್ಕೆ ಶರಣಾದನು. ಅಂದು ಸೆಪ್ಟೆಂಬರ್ 17ರ ಸಂಜೆ, ಮರುದಿನ ಸೆಪ್ಟೆಂಬರ್ 18ರಂದು ಹೈದ್ರಾಬಾದ್ ಪ್ರಾಂತವು ಭಾರತದಲ್ಲಿ ವಿಧಿವತ್ತಾಗಿ ವಿಲೀನವಾಯಿತು. ಆಗ ಕೊಪ್ಪಳ ಜಿಲ್ಲೆಯು ಭಾರತದ ಒಂದು ಭಾಗವಾಗಿ ಉಳಿಯಿತು.
ಉಕ್ಕಿನ ಮನುಷ್ಯರೆಂದೇ ಹೆಸರಾಗಿದ್ದ ಸರ್ದಾರ್ ವಲ್ಲಭ ಬಾಯಿ ಪಟೇಲರು ಕೈಗೊಂಡ ಪೊಲೀಸ್ ಕಾರ್ಯಚರಣೆಯು ಸ್ಮರಣೀಯವಾಗಿದೆ. ಸ್ವಾಮಿ ರಮಾನಂದ ತೀರ್ಥರು ಈ ವಿಮೋಚನಾ ಹೋರಾಟವು ಅಹಿಂಸಾತ್ಮಕವಾಗಿ ನಡೆಯುವಂತೆ ನೋಡಿಕೊಂಡರು.
2019ರಲ್ಲಿ ಅಂದಿನ ಸರ್ಕಾರದ ಮುಖ್ಯಮಂತ್ರಿಗಳು ಹೈದರಾಬಾದ್ ಕರ್ನಾಟಕ ಪ್ರದೇಶವನ್ನು “ಕಲ್ಯಾಣ ಕರ್ನಾಟಕ ಪ್ರದೇಶ” ವನ್ನಾಗಿ ಅಧಿಕೃತವಾಗಿ ಘೋಷಿಸಿದರು. ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಇದೀಗ ‘ಕಲ್ಯಾಣ ಕರ್ನಾಟಕ ಉತ್ಸವ’ ದಿನವನ್ನಾಗಿ ಆಚರಿಸಲಾಗುತ್ತಿದೆ.
ಸ್ವಾತಂತ್ರ‍್ಯ ಪೂರ್ವದಲ್ಲಿ ಹೈದ್ರಾಬಾದ್ ಸಂಸ್ಥಾನದಲ್ಲಿದ್ದ ಈ ಪ್ರದೇಶವು ಸ್ವಾತಂತ್ರ‍್ಯ ನಂತರ 1956ರಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆಯಾದಾಗ ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಯಾಯಿತು. ಹಲವಾರು ಐತಿಹಾಸಿಕ ಕಾರಣಗಳಿಂದಾಗಿ ಈ ಪ್ರದೇಶವು ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ತೀರಾ ಹಿಂದುಳಿದ ಪ್ರದೇಶವಾಗಿತ್ತು. ಈ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಿ ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಈ ಭಾಗದ ಜನರಿಂದ ನಿರಂತರ ಹೋರಾಟ ನಡೆಯುತ್ತಿತ್ತು. ಅಂತಿಮವಾಗಿ ರಾಜ್ಯದ ಜನತೆಯ ಈ ಹೋರಾಟಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರವು ಸಂವಿಧಾನದ 371(ಜೆ) ಕಲಂನ ಅಡಿಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದತ್ತವಾದ ವಿಶೇಷ ಸ್ಥಾನಮಾನ ನೀಡಿದೆ.
ಹಿಂದುಳಿದ ಭಾಗ ಎನ್ನುವ ಹಣೆಪಟ್ಟಿ ಅಳಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಿದ್ದು, ಪ್ರತಿವರ್ಷ ಸರ್ಕಾರವು ವಿಶೇಷ ಅನುದಾನ ನೀಡುತ್ತಿದೆ. ಜೊತೆಗೆ ಉದ್ಯೋಗ ಮತ್ತು ಮೀಸಲಾತಿ ಕೂಡ ನೀಡಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ನೀರಾವರಿ, ಕುಡಿಯುವ ನೀರು, ರಸ್ತೆ ಮತ್ತು ಸಂಪರ್ಕ, ಅಂತರ್ಜಲ ಸಂರಕ್ಷಣೆ ಹಾಗೂ ಕೃಷಿಗೆ ಸಂಬಂಧಿಸಿದ ವಲಯಗಳಲ್ಲಿ ಆದ್ಯತೆಗೆ ಅನುಗುಣವಾಗಿ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ದಪಡಿಸಿ ಅನುಷ್ಠಾನ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಸಚಿವರು ತಿಳಿಸಿದರು.
ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಂಸದರಾದ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ, ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಶರಣಬಸಪ್ಪ ಸುಬೇದಾರ, ತಹಸೀಲ್ದಾರ ವಿಠಲ್ ಚೌಗಲಾ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯರಾದ ಸಿ.ವಿ.ಜಡಿಯವರ ಅವರು ನಿರೂಪಿಸಿದರು.
*ಮಹಾತ್ಮರ ಭಾವಚಿತ್ರಕ್ಕೆ ಪೂಜೆ:* ಸಮಾರಂಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಸಚಿವರು, ಸಂಸದರು, ಶಾಸಕರು, ಗಣ್ಯರು ಮತ್ತು ಅಧಿಕಾರಿಗಳು ಇದೆ ವೇಳೆ ಪುಷ್ಪನಮನ ಸಲ್ಲಿಸಿ ಗೌರವಿಸಿದರು.
*ಅಚ್ಚುಕಟ್ಟಾದ ಪಥ ಸಂಚಲನ:* ಪೊಲೀಸ್ ವಾದ್ಯ ವೃಂದದಿಂದ ಪಂಥ ಸಂಚಲನ ಅಚ್ಚುಕಟ್ಟಾಗಿ ನಡೆಯಿತು. ಪರೇಡ್ ಕಮಾಂಡರ್ ಆರ್‌ಎಸ್‌ಐ ಬಾಹುಬಲಿ ಅವರ ಮುಖಂಡತ್ವದಲ್ಲಿ 13 ಪರೇಡ್ ತಂಡಗಳು ಶಿಸ್ತುಬದ್ಧವಾಗಿ ಸಾಗಿದವು. ಆರ್‌ಎಸ್‌ಐ ಅಮರೇಶ ನೇತೃತ್ವದಲ್ಲಿ ಜಿಲ್ಲಾ ಸಶ್ರಸ್ತ್ರ ಮೀಸಲು ಪಡೆ, ಪಿಎಸ್‌ಐ ಪ್ರಶಾಂತ ನೇತೃತ್ವದಲ್ಲಿ ನಾಗರಿಕ ಮೀಸಲು ಪಡೆ, ಬಾಬುಸಾಬು ಕೆ ನೇತೃತ್ವದಲ್ಲಿ ಗೃಹರಕ್ಷಕ ದಳ, ಕ್ಯಾಪ್ಟನ್ ಈರಪ್ಪ ಮುಖಂಡತ್ವದಲ್ಲಿ ಅರಣ್ಯ ಇಲಾಖೆಯ ತಂಡ, ಕ್ಯಾಪ್ಟನ್ ವಿಜಯಲಕ್ಷ್ಮೀ ಅವರ ಮುಖಂಡತ್ವದಲ್ಲಿ ಗೃಹ ರಕ್ಷಕ ದಳ, ಎನ್‌ಸಿಸಿ ಬಾಲಕರ ಸರ್ಕಾರಿ ಪ್ರೌಢಶಾಲೆ ತಂಡ, ಕ್ಯಾಪ್ಟನ್ ಕಾರ್ತಿಕ ನೇತೃತ್ವದಲ್ಲಿ ಎನ್‌ಸಿಸಿ ಗವಿಸಿದ್ದೇಶ್ವರ ಪ್ರೌಢಶಾಲೆ ತಂಡ, ಕ್ಯಾಪ್ಟನ್ ಸಿಂಧು ನೇತೃತ್ವದಲ್ಲಿ ಭಾರತ ಸೇವಾ ದಳದ ಬಾಲಕಿಯರ ಸರ್ಕಾರಿ ಬಾಲಕಿಯರ ತಂಡ, ಕ್ಯಾಪ್ಟನ್ ಹೃತಿಕ್ ನೇತೃತ್ವದಲ್ಲಿ ಸ್ಕೌಟ್ ಗವಿಸಿದ್ದೇಶ್ವರ ಪ್ರೌಢಶಾಲೆ ತಂಡ, ಕ್ಯಾಪ್ಟನ್ ಶ್ರೇಯಾ ನೇತೃತ್ವದಲ್ಲಿ ಗೈಡ್ಸ್ ಶಿವಶಂತವೀರ ಪ್ರೌಢಶಾಲೆ ತಂಡ, ಕ್ಯಾಪ್ಟನ್ ಜಾವಿದ್ ನೇತೃತ್ವದಲ್ಲಿ ಸ್ಜೌಟ್ಸ್ ಶಿವಶಾಂತವೀರ ಪ್ರೌಢಶಾಲೆ ತಂಡ, ಕ್ಯಾಪ್ಟನ್ ಕಾರ್ತಿಕ ನೇತೃತ್ವದಲ್ಲಿ ಭಾರತ ಸೇವಾದಳ ಕಾಳಿದಾಸ ಪ್ರೌಢಶಾಲೆ ತಂಡದವರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.
*ಸಾಂಸ್ಕೃತಿಕ ಕಾರ್ಯಕ್ರಮ:* ಸಮಾರಂಭದಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಭಾಗ್ಯನಗರದ ಸರ್ಕಾರಿ ಪ್ರೌಢಶಾಲೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು.

ಗೌರಿಗಣೇಶ ಹಾಗೂಗೌರಸಮುದ್ರ ಮಾರಮ್ಮದೇವಿ ಜಾತ್ರೆಗೆ ಬರುವ ಭಕ್ತರಿಗೆ ಶಾಸಕ ಟಿ.ರಘುಮೂರ್ತಿ‌ ಶುಭಕೋರಿದ್ದಾರೆ.


ಚಳ್ಳಕೆರೆ ಜನಧ್ವನಿ ವಾರ್ತೆ.ಸೆ.,17. ಮಧ್ಯ ಕರ್ನಾಟಕದ ಪ್ರಸಿದ್ಧ ಶಕ್ತಿ ದೇವತೆ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ನಿಮಿತ್ತ ಒಂದು ವಾರದವರೆಗೆ ಅಮ್ಮನವರಿಗೆ ಸ್ನಾನವಿಲ್ಲ. ದೇವಾಲಯದಲ್ಲಿ ಗಂಟೆ ಹೊಡೆಯಲ್ಲ. ಸುತ್ತ ಹಳ್ಳಿಯ ಜನರು ಸಹ ಯಾರೂ ಜಳಕ ಮಾಡಲ್ಲ. ತಲೆ ಕೂದಲಿಗೆ ಕತ್ತರಿಯಿಲ್ಲ, ಕ್ಷೌರ ಕೂಡ ಮಾಡಿಸಲ್ಲ. ಇಂಥ ವಿಶಿಷ್ಟ ಆಚರಣೆ ನಡೆಯಲಿದೆ.

ಸೆ.17 ರಂದು ಹುತ್ತಕ್ಕೆ ಅಭಿಷೇಕ, ಮಾರಮ್ಮ ದೇವಿಯ ದೊಡ್ಡ ಜಾತ್ರೆ ತುಂಬಲಿಗೆ ದೇವಿ ಆಗಮನ, ರಾತ್ರಿ ಗ್ರಾಮದಲ್ಲಿಮೆರವಣಿಗೆ, 20ರಂದು ಹೋಕಳಿ 20 ಕ್ಕೆ ಮುಂಜಾನೆ ಮಹಾ ಮಂಗಳಾರತಿ, ನಂತರ ದೇವಿಯ ಗರ್ಭಗುಡಿ ಪ್ರವೇಶದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ. ಅಕ್ಟೋಬರ್ 17ರಂದು ಮರಿಪರಿಸೆ ನಡೆಯಲಿದೆ.

ಮಾರಮ್ಮ


ಸೆ.19ರಂದು ತುಮಲಿನ ಬಯಲು ಪ್ರದೇಶದಲ್ಲಿನಡೆಯುವ ಜಾತ್ರೆಗೆ ರಾಜ್ಯ ಸೇರಿ ಆಂಧ್ರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿಭಕ್ತರು ಆಗಮಿಸುತ್ತಾರೆ. ದೇವಿಗೆ ಕುರಿ, ಕೋಳಿಗಳ ಬಲಿ ನೀಡಿ, ಬಾಡೂಟ ಮಾಡ್ತುತಾರೆ. ಆದರೆ, ಗೌರಸಮುದ್ರ ಗ್ರಾಮ ಸೇರಿದಂತೆ ಸುತ್ತಹಳ್ಳಿಯ ಜನರು ಮಾತ್ರ ಜಾತ್ರೆ ಆಚರಿಸುತ್ತಾರೆ. ಬಾಡೂಟ ಮಾಡದೆ ತಿಂಗಳ ಮರಿ ಪರಿಷೆ ಹರಕೆ ಪೂರೈಸಿದ ನಂತರವೇ ಮಾರಮ್ಮ ಹಬ್ಬ ನಡೆಸುವುದು ವಿಶೇಷ.

ನಾನಾ ಹೆಸರು


ಮಾರಮ್ಮ ದೇವಿಗೆ ಬಿಸುಲು ಮಾರಿ, ದುರ್ಗಿ, ಕರಿಮಾರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ದೇವಿಯ ಜಾತ್ರೆ ಸಮಯದಲ್ಲಿತನ್ನ ಕೆಂಗಣ್ಣಿನಲ್ಲಿಶೇಂಗಾ, ಸಜ್ಜೆ, ಜೋಳ, ತೊಗರಿ, ಸೂರ್ಯಕಾಂತಿ ಇನ್ನಿತರ ಬೆಳೆಗಳನ್ನು ಬಾಡಿಸಿ ನಂತರ ಸಮೃದ್ಧ ಮಳೆ ತರಿಸುತ್ತಾಳೆಂಬ ನಂಬಿಕೆ ಇಂದಿಗೂ ಜನರಲ್ಲಿಉಳಿದಿದೆ.

ಜಿಲ್ಲೆಯ ಪ್ರಮುಖ ಸಮುದಾಯಗಳಾದ ನಾಯಕ, ಗೊಲ್ಲ, ಉಪ್ಪಾರ ಸೇರಿದಂತೆ ಎಲ್ಲರಿಗೂ ಇಲ್ಲಿನ ಮಾರಮ್ಮ ಶಕ್ತಿ ದೇವತೆ. ಹೀಗಾಗಿ ಎಲ್ಲಸಮುದಾಯದವರು ದೇವಿಯ ಉತ್ಸವದಲ್ಲಿಪಾಲ್ಗೊಳ್ಳುತ್ತಾರೆ.
ಜಾತ್ರೆಗಳ ಆರಂಭ

ಶ್ರಾವಣ ಮಾಸ ಮುಕ್ತಾಯವಾಗಿ ಭಾದ್ರಪದ ಮಾಸದ ಆರಂಭ ದಿನವೇ ಈ ಗೌರಸಮುದ್ರದ ದೇವಿ ಜಾತ್ರೆ ನಡೆದ ನಂತರವೇ ರಾಜ್ಯದ ಅನೇಕ ಕಡೆ ಅಲ್ಲಿನ ಹೆಣ್ಣು ದೇವರಿನ ಜಾತ್ರೆಗಳು ನಡೆಯುವುದು ವಿಶೇಷ. ಜತೆಗೆ ದೊಡ್ಡ ಜಾತ್ರೆಯ ನಂತರ ಜಿಲ್ಲೆಯ ಎಲ್ಲಗ್ರಾಮಗಳಲ್ಲಿಪ್ರತಿ ಮಂಗಳವಾರ ಒಂದು ತಿಂಗಳ ಕಾಲ ಮಾರಮ್ಮನ ಹಬ್ಬವನ್ನು ಆಚರಿಸುವ ಪದ್ಧತಿ ಇದೆ ಕಟ್ಟು ನಿಟ್ಟಿನ ಆಚರಣೆಗಳು
ಬುಡಕಟ್ಟು ಸಮುದಾಯಗಳಲ್ಲಿ ಹಬ್ಬ, ಹರಿದಿನ, ಜಾತ್ರೆಗಳ ಸಂದರ್ಭದಲ್ಲಿಕಟ್ಟು ನಿಟ್ಟಿನ ಆಚರಣೆಗಳನ್ನು ನಡೆಸಲಾಗುತ್ತದೆ. ದೇವಾಲಯಕ್ಕೆ ಬರುವ ಭಕ್ತರಿಗೆ ನಿರಾಸೆ ಮಾಡಬಾರದೆಂದು ಹಣ್ಣು, ಕಾಯಿ ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಸುತ್ತಮುತ್ತಲಿನ ಹಳ್ಳಿಯ ಜನರು ಸ್ನಾನ ಮಾಡಲ್ಲ. ಒಲೆ ಮೇಲೆ ಹಂಚಿಟ್ಟು ರೊಟ್ಟಿ, ಚಪಾತಿ ಮಾಡುವುದಿಲ್ಲ. ಕಡ್ಲೆಬೀಜ ಹುರಿಯುವುದಿಲ್ಲ. ಎಣ್ಣೆಯಲ್ಲಿ ಪದಾರ್ಥಗಳನ್ನು ಕರಿಯುವುದಿಲ್ಲ. ಇಂಥ ವಿಶಿಷ್ಟ ಪದ್ಧತಿಯನ್ನು ಇಂದಿಗೂ ಪಾಲಿಸುತ್ತಿರುವುದು ವಿಶೇಷ.

ಉತ್ತಮ ಮಳೆ ಬೆಳೆ ಆರೋಗ್ಯ ಐಶ್ವರ್ಯ ಕರುಣಿಸಲಿ

. ಗೌರಿ.ಗಣೇಶ ಹಾಗೂ ಶ್ರೀ ಗೌರಸಮುದ್ರ ಮಾರಮ್ಮ ದೇವಿ ನಾಡಿನಲ್ಲಿ ಉತ್ತಮ ಮಳೆ.ಬೆಳೆ.ಆರೋಗ್ಯ.ಐಶ್ವರ್ಯ ಕರುಣಿಸಲಿ ಎಂದು ಶಾಸಕ‌ ಟಿ.ರಘುಮೂರ್ತಿ ಪ್ರಾರ್ಥನೆ ಮಾಡಿಕೊಳ್ಳುವ ಮೂಲಕ ರಾಜ್ಯದ ವಿವಿಧ ಪ್ರದೇಶಗಳಿಂದ ಸೆ.19 ರ ಮಂಗಳವಾರ ಗೌರಸಮುದ್ರ ಗ್ರಾಮದ ಮಧ್ಯಾಹ್ನದ ಮಾರಮ್ಮ ದೇವಿಯ ಜಾತ್ರೆಗೆ ಬರುವ ಭಕ್ತರಿಗೆ ಶುಭಕೋರಿದ್ದಾರೆ.

ಎತ್ತಪ್ಪ ಗುಡ್ಡದ ಅಭಿವೃದ್ಧಿಗಾಗಿ 3.50 ಕೋಟಿ ಮಂಜೂರು ಕಾಡುಗೊಲ್ಲ ಸಮುದಾಯವು ಎಸ್ ಟಿ ಮೀಸಲಾತಿ ಪಡೆಯಲು ಸಂಘಟಿತರಾಗಬೇಕು; ರಾಜ್ಯಾಧ್ಯಕ್ಷ ರಾಜಣ್ಣ


ಚಳ್ಳಕೆರೆ: ಕಾಡುಗೊಲ್ಲ ಸಮುದಾಯವು ಅಭಿವೃದ್ಧಿ ಹೊಂದಬೇಕಾದರೆ ಎಸ್ ಟಿ ಮೀಸಲಾತಿ ಅವಶ್ಯಕವಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯನ್ನು ಕಾಡುಗೊಲ್ಲರ  ಹಟ್ಟಿಗಳಲ್ಲಿ ಬಹಿಷ್ಕರಿಸಿ ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಿದಾಗ ಮಾತ್ರ ನಮ್ಮ ಹಕ್ಕನ್ನು ಪಡೆಯಲು ಸಾಧ್ಯ ಎಂದು ಕಾಡುಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷ ರಾಜಣ್ಣ ಕರೆ ನೀಡಿದರು.


ತಾಲೂಕಿನ ತಳಕು ಹೋಬಳಿಯ ಎತ್ತಪ್ಪ ಗುಡ್ಡದಲ್ಲಿ ಕಾಡುಗೊಲ್ಲ ಸಮುದಾಯದ ವತಿಯಿಂದ ಆಯೋಜಿಸಿದ್ದ ಕಾಡುಗೊಲ್ಲರ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಡುಗೊಲ್ಲ ಸಮುದಾಯವು ನಮ್ಮ ಹಿಂದಿನ ಪದ್ಧತಿಗಳನ್ನು ಅನುಸರಿಸಿಕೊಂಡು ಬರುತ್ತಿರುವುದರಿಂದ ನಮಗೆ ಮೀಸಲಾತಿ ದೊರೆಯುತ್ತಿಲ್ಲ ಸಮುದಾಯದಲ್ಲಿನ ಕೆಲವು ಅನಿಷ್ಟ ಪದ್ದತಿಯ ಆಚರಣೆಗಳನ್ನು ಬದಲಿಸಿಕೊಂಡು ಆಧುನಿಕತೆಯತ್ತ ಮರಳಬೇಕಿದೆ ನಮ್ಮ ಮುಂದಿನ ಪೀಳಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕಾದರೆ ಮೀಸಲಾತಿ ಅವಶ್ಯಕವಾಗಿದೆ ಕಾಡುಗೊಲ್ಲ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇರುವುದರಿಂದ ರಾಜಕೀಯ ಪಕ್ಷಗಳು ನಮ್ಮನ್ನು ಹಿಂದೆ ತಳ್ಳುತ್ತಿವೆ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಉದ್ದೇಶಗಳು ಈಡೇರಲು ಸಾಧ್ಯವಿಲ್ಲ ಹೀಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ಮೂಲಕ ನಮ್ಮ ಹಕ್ಕನ್ನು ಪಡೆಯಲೇಬೇಕಾದ ಅನಿವಾರ್ಯತೆ ಎದುರಾಗಿದೆ ಈಗನಿಂದಲೇ ಎಲ್ಲರೂ ಸಂಘಟಿತರಾಗಿ ಹೋರಾಡೋಣ ಎಂದರು.


ಕಾಡುಗೊಲ್ಲ ಸಮುದಾಯದ ಜಿಲ್ಲಾಧ್ಯಕ್ಷ ರಾಜ್ ಕುಮಾರ್ ಮಾತನಾಡಿ ಸರ್ಕಾರಗಳನ್ನು ನಡೆಸುವ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ನಮ್ಮ ಸರ್ಕಾರ ಬಂದರೆ ಮೀಸಲಾತಿ ನೀಡುತ್ತೇವೆ ಎಂಬ ಮಾತುಗಳಿಂದ ನಮ್ಮ ಮೂಗಿಗೆ ತುಪ್ಪ ಸವರಿ ಮತ ಗಿಟ್ಟಿಸಿಕೊಂಡು ಚುನಾವಣೆಯ ನಂತರ ನಮ್ಮನ್ನು ಕಡೆಗಣಿಸಲಾಗುತ್ತಿದೆ ಗೊಲ್ಲರಹಟ್ಟಿಗಳಲ್ಲಿ ಯುವಕರು ಸಂಘಗಳನ್ನು ರಚಿಸಿಕೊಂಡು ಒಗ್ಗಟ್ಟಾಗಿ ರಾಜ್ಯ ಜಿಲ್ಲಾ ತಾಲೂಕು ಸಂಘಟನೆಗಳು ಹೇಳುವ ವ್ಯಕ್ತಿಗೆ ಹಾಗೂ ನಮ್ಮ ಬೇಡಿಕೆಯನ್ನು ಈಡೇರಿಸುವ ಪಕ್ಷಕ್ಕೆ ಮತ ನೀಡುತ್ತೇವೆ ಎಂಬ ಧ್ವನಿಯನ್ನು ಎತ್ತಿದಾಗ ಮಾತ್ರ ನಮ್ಮ ಮೀಸಲಾತಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಸೇರಿದಂತೆ ಇತರೆ ಬೇಡಿಕೆಗಳು ಈಡೇರಲು ಸಾಧ್ಯ ಎಂದು ತಿಳಿಸಿದರು.


ಕಾಡುಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಎಸ್ ರವಿಕುಮಾರ್ ಮಾತನಾಡಿ ಎತ್ತಪ್ಪ ಗುಡ್ಡವನ್ನು ಅಭಿವೃದ್ಧಿಪಡಿಸಲು ಈಗಾಗಲೇ 1.50 ಕೋಟಿ ಮಂಜೂರು ಆಗಿದ್ದು 30 ಲಕ್ಷ ಬಿಡುಗಡೆಯಾಗಿ ಕೆಲಸ ಪ್ರಾರಂಭವಾಗಿದೆ ಈ ಎತ್ತಪ್ಪ ಗುಡ್ಡವನ್ನು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಿ ಜಾತ್ರೆಯ ರೂಪದಲ್ಲಿ ರಾಜ್ಯದಲ್ಲಿ ಇರುವ ಕಾಡುಗೊಲ್ಲ ಸಮುದಾಯದ ಎಲ್ಲಾ ಬಾಂಧವರು ಸೇರಿ ಆಚರಿಸುವಂತಾಗಬೇಕು ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಒತ್ತಡವನ್ನು ಹೇರಿ ಕಾಡುಗೊಲ್ಲ ಸಮುದಾಯಕ್ಕೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ದೊರಕುವಂತೆ ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಎಲ್ಲ ತಹಶೀಲ್ದಾರ್ ಗಳ ಸಭೆ ನಡೆಸಲು ತೀರ್ಮಾನಿಸಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಎಸ್ಟಿ ಮೀಸಲಾತಿ ಪಡೆಯಲು ಒತ್ತಡ ಹೇರುವ ಸಲುವಾಗಿ ಹೋರಾಟದ ರೂಪುರೇಷೆಗಳನ್ನು ರೂಪಿಸಲಾಗುವುದು ಸಮುದಾಯದ ಜನರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಕೇಳಿಕೊಂಡರು.

ಕಾರ್ಯಕ್ರಮಕ್ಕೆ ಮುನ್ನ ಎತ್ತಪ್ಪ ಗುಡ್ಡದಲ್ಲಿನ ಎತ್ತಪ್ಪ ಸ್ವಾಮಿಯ ಸಮಾಧಿಗೆ ಕಾಡುಗೊಲ್ಲ ಸಮುದಾಯದ ಸಂಪ್ರದಾಯದಂತೆ ಪೂಜೆಯನ್ನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಡುಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಮೀಸೆ ಮಹಾಲಿಂಗಪ್ಪ ಬಾಲರಾಜ್ ದೊಡ್ಡ ನಾಗಯ್ಯ ದೇವರಾಜ್ ರಾಜಣ್ಣ ಕರಿಯಪ್ಪ ರಂಗಸ್ವಾಮಿ ಗೋವಿಂದಪ್ಪ ಸುಂಕಪ್ಪ ಬಸವರಾಜ್ ಸೇರಿದಂತೆ ಕಾಡುಗೊಲ್ಲ ಸಮುದಾಯದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು

You cannot copy content of this page