ಸಹಕಾರಿ ತತ್ವಗಳ ಅಡಿಯಲ್ಲಿ ರಾಷ್ಟ್ರದಪ್ರಗತಿಸಾಧ್ಯ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್

by | 16/11/22 | ಸುದ್ದಿ

ಹಿರಿಯೂರು :
ಭಾರತದ ಪ್ರಥಮ ಪ್ರಧಾನಿ ದಿ.ಜವಹರ್ ಲಾಲ್ ನೆಹರು ಅವರಿಗೆ ಸಹಕಾರಿ ತತ್ವಗಳಲ್ಲಿ ಭಾರಿ ನಂಬಿಕೆಯಿದ್ದು, ಈ ಸಹಕಾರಿ ತತ್ವಗಳ ಅಡಿಯಲ್ಲಿ ರಾಷ್ಟ್ರದ ಪ್ರಗತಿ ಕನಸು ಕಂಡಿದ್ದರು, ಭಾರತದ ಸರ್ವತೋಮುಖ ಪ್ರಗತಿಗೆ ಹಗಲು ರಾತ್ರಿ, ಶ್ರಮಿಸಿದ ನೆಹರುರವರು ಸಹಕಾರಿ ತತ್ವದ ಮೂಲಕ ಈ ರಾಷ್ಟ್ರದ ಭವಿಷ್ಯ ನಿರ್ಧರಿಸಬಹುದು ಎಂಬ ಆಶಯ ಇಟ್ಟುಕೊಂಡು ಹಲವಾರು ಯೋಜನೆಗಳನ್ನು ರೂಪಿಸಿದರು ಎಂಬುದಾಗಿ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಯರಬಳ್ಳಿ ಗ್ರಾಮದಲ್ಲಿ ರಾಜ್ಯ ಸಹಕಾರಿ ಮಹಾಮಂಡಳಿ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ಚಿತ್ರದುರ್ಗ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚಿತ್ರದುರ್ಗ, ಕಳವಿಭಾಗಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 69ನೇ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಾಲಿನ ಸಹಕಾರಿ ಸಪ್ತಾಹದ ಕೊಡುಗೆಯೆಂಬಂತೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಜನರಿಗೆ ನಿಂತು ಹೋಗಿದ್ದ ಯಶಸ್ವಿನಿ ಆರೋಗ್ಯ ರಕ್ಷಣೆ ವಿಮೆಯನ್ನು ಮರು ಜಾರಿಗೆ ತರುವ ಮೂಲಕ ಜನರ ಆರೋಗ್ಯ ರಕ್ಷಣೆಯ ಹೊಣೆ ಹೊತ್ತಿದೆ, ಇದೊಂದು ಉತ್ತಮ ಯೋಜನೆಯಾಗಿದ್ದು, ಸಾರ್ವಜನಿಕರು ಸಹಕಾರ ಸಂಘಗಳ ಸದಸ್ಯರಾಗುವ ಮೂಲಕ ಈ ಯಶಸ್ವಿನಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂಬುದಾಗಿ ಕರೆ ನೀಡಿದರು.
ನಮ್ಮ ತಾಲ್ಲೂಕಿನಲ್ಲೂ ಸಹ ಸಹಕಾರಿ ಸಂಘಗಳು ಯಶಸ್ವಿಯಾಗಿ ಕೆಲಸ ನಿರ್ವಹಿಸುವ ಮೂಲಕ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಯರಬಳ್ಳಿಯಲ್ಲಿನ ಕಳಾವಿಭಾಗಿ ಕೃಷಿ ಪತ್ತಿನ ಸಹಕಾರ ಸಂಘ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಂಘದ ಅಧ್ಯಿಕ್ಷರಾದ ಪ್ರತಾಪಸಿಂಹರವರು ಸಹಕಾರ ಸಂಘದಲ್ಲಿ “ಸೂಪರ್ ಮಾರ್ಕೆಟ್” ಮಾಡಬೇಕೆಂಬ ಆಶಯ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಅದಕ್ಕೆ ಸಂಬಂಧಪಟ್ಟ ಕಟ್ಟಡ ನಿರ್ಮಿಸಲು ಶಾಸಕರ ಅನುದಾನದಿಂದ 10 ಲಕ್ಷ ರೂಗಳ ಅನುದಾನ ನೀಡುವುದಾಗಿ ಸಭೆಯಲ್ಲಿ ಘೋಷಿಸಿದರು.
ಸಹಕಾರಿ ರತ್ನ ಪ್ರಶಸ್ತಿ ವಿಜೇತ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯರಕ್ಷರಾದ ಜಿಂಕಲ್ ಬಸವರಾಜು ಮಾತನಾಡಿ, ಸಹಕಾರಿ ಸಂಘಗಳು ವಿಶಾಲವಾದ ವ್ಯಾಪ್ತಿಪ್ರದೇಶವನ್ನು ಹೊಂದಿದ್ದು, ಈ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೃಷಿಕರಿಗೆ ಎಲ್ಲಾ ರೀತಿಯ ಸಾಲಸೌಲಭ್ಯ ದೊರಕಲಿದ್ದು, ಪಶುಸಂಗೋಪನೆಗೆ ಸಹಾಯಧನ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ರೈತರಿಗೆ ರಸಗೊಬ್ಬರಗಳ ರಿಯಾಯಿತಿ ಸೇರಿದಂತೆ ಎಲ್ಲಾರೀತಿಯ ಸೌಲಭ್ಯಗಳು ದೊರಕಲಿವೆ ಎಂಬುದಾಗಿ ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ವಾಣಿಕಾಲೇಜಿನ ಪ್ರಾಂಶುಪಾಲರಾದ ಡಾ.ಧರಣೇಂದ್ರಯ್ಯ ಮಾತನಾಡಿ, ಗ್ರಾಮೀಣ ಜನರು ಸ್ವಾವಲಂಬನೆಯತ್ತ ಹೆಜ್ಜೆ ಹಾಕಲು ಸಹಕಾರಿ ಕ್ಷೇತ್ರ ಒಂದು ವರದಾನವಾಗಿದೆ, ಸಹಕಾರಿ ಸಂಘಗಳು ಕೇವಲ ಸಾಲಕೊಟ್ಟು ಲಾಭಗಳಿಸುವ ಕೆಲಸ ಮಾಡದೆ, ಈ ದೇಶದ ಆರ್ಥಿಕ ಅಬಲರ, ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡದವರ, ಅಲ್ಪಸಂಖ್ಯಾತರ ಆರ್ಥಿಕ ಬೆಳವಣಿಗೆಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಎಲ್ಲಾ ವರ್ಗದ ಜನರಿಗೂ ಸಹಕಾರ ಚಳುವಳಿಗಳ ಲಾಭ ದೊರಕುವಂತೆ ಮಾಡಬೇಕಾಗಿದೆ ಎಂಬುದಾಗಿ ಹೇಳಿದರು.
ಆರಂಭದಲ್ಲಿ ಪ್ರಾಸ್ತಾವಿಕನುಡಿಗಳನ್ನಾಡಿದ ವಾಣಿವಿಲಾಸ ಪತ್ತಿನ ಸಹಕಾರ ಸಂಘದ ಆಲೂರು ಹನುಮಂತರಾಯಪ್ಪ ಮಾತನಾಡಿ, ರಾಜ್ಯಾದ್ಯಂತ ನವಂಬರ್ 14 ರಿಂದ 20 ರವರೆಗೆ ಈ ಸಹಕಾರಿ ಸಪ್ತಾಹ ಆಚರಿಸಲಾಗುತ್ತಿದ್ದು, ನಮ್ಮ ಜಿಲ್ಲೆಯಲ್ಲೂ ಸಹ 7 ದಿನಗಳ ಕಾಲ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಈ ಸಹಕಾರಿ ಸಪ್ತಾಹ ಆಚರಿಸಲಾಗುತ್ತಿದೆ, ಈ ಸಂದರ್ಭದಲ್ಲಿ ಸಹಕಾರ ಚಳುವಳಿ ನಡೆದುಬಂದ ದಾರಿ ಹಾಗೂ ಈ ಹಾದಿಯಲ್ಲಿನ ಸಾಧನೆ ಹಾಗೂ ವೈಫಲ್ಯಗಳನ್ನು ಕುರಿತು ಚಿಂತನ-ಮಂಥನ ನಡೆಸಲಾಗುವುದು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ ಯರಬಳ್ಳಿ ರಂಗಸ್ವಾಮಿ ಹಾಗೂ ಜಿ.ತಿಪ್ಪೇಸ್ವಾಮಿ ಗೊಲ್ಲಹಳ್ಳಿ ಇವರುಗಳನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಶಿಮುಲ್ ನಿರ್ದೇಶಕರಾದ ವೀರಭದ್ರಬಾಬು, ಯಶವಂತ್ ರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಶರೀಫ್ ಇತರರು ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಿಕ್ಷತೆಯನ್ನು ಕಳಾವಿಭಾಗಿ ಪತ್ತಿನ ಸಹಕಾರ ಸಂಘದ ಅಧ್ಯಮಕ್ಷ ಹೆಚ್.ವಿ.ಪ್ರತಾಪಸಿಂಹ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಶರೀಫ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಮಧುಶ್ರೀನಿವಾಸ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ, ಜಿಲ್ಲಾ ಸಹಕಾರಿ ಯೂನಿಯನ್ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್ ಪಾಟೀಲ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಹೆಚ್.ಶಶಿಧರ್, ಹೆಚ್.ಶ್ರೀಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರಮ್ಯರಾಜು, ರಾಜ್ಯ ಸಹಕಾರಿ ಮಹಾಮಂಡಳಿ ನಿರ್ದೇಶಕರಾದ ಎಸ್.ಜೆ.ಹನುಮಂತರಾಯ, ಶಿಮುಲ್ ನಿರ್ದೇಶಕರುಗಳಾದ ವೀರಭದ್ರಬಾಬು, ಯಶವಂತರಾಜು, ಹಿರಿಯ ಸಹಕಾರಿಗಳಾದ ವದ್ದೀಕೆರೆಕಾಂತರಾಜ್, ಪಿ.ಆರ್.ಸತೀಶಬಾಬು, ಪ್ರಸನ್ನ ಕುಮಾರ್, ರಾಮಕೃಷ್ಣ, ಗುರುಸ್ವಾಮಿ, ರಂಗಸ್ವಾಮಿ, ರಂಗಪ್ಪ, ರಾಮಚಂದ್ರಯ್ಯ, ರಾಜಣ್ಣ, ಸಿದ್ದೇಶ್, ಇತರರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *