
ಹೊಸದುರ್ಗ: ಗಣಪತಿ ಪೂಜೆ ಕುರಿತು ಪಂಡಿತಾರಾಧ್ಯ ಶ್ರೀಗಳು ಹೇಳಿದ ಮೇಲೂ ಗಣಪತಿ ಪೂಜೆ ಬಿಟ್ಟವರು ಎಷ್ಟಿದ್ದೀರಿ? ಇಂದಿಗೂ ಗುಡಿಗುಂಡಾರಗಳು ಹೆಚ್ಚುತ್ತಿವೆ. ಜಾತಿ, ಉಪಜಾತಿಗೊಂದು ದೇವರುಗಳು ಹುಟ್ಟಿಕೊಂಡಿವೆ. 12ನೇ ಶತಮಾನದಲ್ಲಿ ಬಸವಣ್ಣನವರು ಮೂರ್ತಿ ಪೂಜೆ ಖಂಡಿಸಿ ಸ್ಪಷ್ಟವಾಗಿ ಹೇಳಿದರೂ ಯಾರೂ ಪಾಲಿಸಲಿಲ್ಲ ಎಂದು ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಶನಿವಾರ ಸಂಜೆ ರಾಷ್ಟ್ರೀಯ ನಾಟಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸುಳ್ಳು ಮಾಧ್ಯಮಗಳ ಮಧ್ಯೆ ನಮ್ಮ ಚಾರಿತ್ರ್ಯವನ್ನು ರಾಜಕಾರಣಿಗಳು ಕಾಪಾಡಿಕೊಂಡು ಹೋಗುವುದು ಕಷ್ಟಸಾಧ್ಯವಾಗಿದೆ. ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮಾಧ್ಯಮಗಳು ಅಪರೂಪ. ಮಾಧ್ಯಮ ಕ್ಷೇತ್ರ ಇಂದು ವ್ಯಾಪಾರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭಕ್ತರಿಗೆ ಬೋಧನೆ ಮಾಡಲು ವಿಭಿನ್ನವಾದ ಮಾರ್ಗ ಕಂಡು ಹಿಡಿದಿರುವ ಪಂಡಿತರಾಧ್ಯ ಶ್ರೀಗಳು, ನಾಟಕದ ಮೂಲಕ ಧರ್ಮಜಾಗೃತಿ ಹಾಗೂ ಜನರ ಬದುಕನ್ನು ಬದಲಾಯಿಸಲು ಶ್ರಮಿಸುತ್ತಿದ್ದಾರೆ. ಸಾಹಿತ್ಯಕ್ಕಿಂತ, ಕೀರ್ತನೆಗಳಿಗಿಂತ, ಭಾಷಣಗಳಿಗಿಂತ ಹೆಚ್ಚು ಪರಿಣಾಮ ಬೀರುವುದು ನಾಟಕ ಮಾಧ್ಯಮ. ಇದಕ್ಕಾಗಿ ಸಾಣೇಹಳ್ಳಿಯನ್ನು ಪ್ರಯೋಗಶಾಲೆಯಾಗಿ ಮಾಡಿದ್ದಾರೆ ಎಂದರು.
0 Comments