ಚಳ್ಳಕೆರೆ:ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಗುಂಪು ಮತ್ತು ಗೆಳೆಯರ ಒತ್ತಡಕ್ಕೆ ಮಣಿದು ಮಾದಕ ದ್ರವ್ಯಗಳನ್ನು ಸೇವಿಸಲು ಪ್ರಾರಂಭಿಸುತ್ತಾರೆ ಮತ್ತು ಇತರ ಅನಾರೋಗ್ಯಕರ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಅಂತಹ ಒತ್ತಡವನ್ನು ತಡೆದುಕೊಳ್ಳುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಮತ್ತು ಅಂತಹ ವಿಷಯಗಳಿಂದ ದೂರವಿರಬೇಕು ಎಂದು ತಾಲೂಕು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಗೌಡ ಜಗದೀಶರುದ್ರೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಮತ್ತು ಕೈಗಾರಿಕಾ ತರಬೇತಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಮೌಲ್ಯ ಮತ್ತು ಯೋಗಕ್ಷೇಮದೊಂದಿಗೆ ಆಯ್ಕೆಗಳನ್ನು ಮಾಡಬೇಕು ಒತ್ತಡವನ್ನು ಎದುರಿಸುವ ಸಾಮರ್ಥ್ಯ ವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಮಾನಸಿಕ ಆರೋಗ್ಯಕ್ಕೆ ಇದು ಅವಶ್ಯಕವಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ನಾವು ಕುಟುಂಬದ ಸದಸ್ಯರು, ಸ್ನೇಹಿತರು, ಶಿಕ್ಷಕರು ಮತ್ತು ಇತರ ಹಿತೈಷಿಗಳೊಂದಿಗೆ ಮುಕ್ತವಾಗಿ ಸಂವಹನವನ್ನು ಹೊಂದಿರಬೇಕು ಮತ್ತು ಸಮಸ್ಯೆಗಳನ್ನು ಚರ್ಚಿಸಬೇಕು. ಇದು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ ಪರಿಹರಿಸಲು ಸಹಾಯ ಮಾಡುತ್ತದೆ. ತಿಳಿದಿರುವ ಜನರೊಂದಿಗೆ ಚರ್ಚಿಸುವುದರ ಜೊತೆಗೆ ಮನೋವೈದ್ಯರನ್ನು, ಸಲಹೆಗಾರರನ್ನು, ತಜ್ಞರನ್ನು ಸಂಪರ್ಕಿಸಬೇಕು.
ಉತ್ತಮ ಮಾನಸಿಕ ಆರೋಗ್ಯಕ್ಕೆ ಆರೋಗ್ಯಕರ ಮತ್ತು ಸಂತೋಷದ ಜೀವನಶೈಲಿ ಬಹಳ ಮುಖ್ಯ. ಅದಕ್ಕಾಗಿ ಆರೋಗ್ಯಕರ ಆಹಾರ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಟಿಐ ಕಾಲೇಜಿನ ಪ್ರಾಂಶುಪಾಲ ಬಿ ಎಂ ಬಸಣ್ಣ ಮಾತನಾಡಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ
ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯ ಮುಖ್ಯ ಅನಾರೋಗ್ಯಕರ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಡಿ ಮತ್ತು ಔಷಧಗಳು ಮತ್ತು ವಸ್ತುಗಳನ್ನು ಬಳಸಬೇಡಿ ಎಂದು ಹೇಳಿದರು.
ಅಪರ ಸಿವಿಲ್ ನ್ಯಾಯಾಧೀಶೆ ಹೆಚ್ ಆರ್ ಹೇಮಾ ಮಾತನಾಡಿ ಮಾನಸಿಕ ಆರೋಗ್ಯ ಸಾರ್ವತ್ರಿಕ ಮಾನವ ಹಕ್ಕು ಎಂಬ ಘೋಷ ವಾಕ್ಯವನ್ನು ಈ ಬಾರಿಯ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹೊಂದಿದ್ದು ಎಲ್ಲರಿಗೂ ಆರೋಗ್ಯ ಎಂಬ ವಾಗ್ದಾನಕ್ಕೆ ಭಾರತವು ಬದ್ಧವಾಗಿದೆ ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವಲ್ಲ ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸುಸ್ಥಿರವಾಗಿರುವುದೇ ಆರೋಗ್ಯ ದೇಹಕ್ಕೆ ಖಾಯಿಲೆಗಳು ಬರುವಂತೆ ಮನಸಿಗೂ ಖಾಯಿಲೆಗಳು ಬರುತ್ತವೆ ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ದೇಹದ ಖಾಯಿಲೆಗಳು ಮನಸ್ಸಿನ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸುವುದು ಬಹು ಮುಖ್ಯವಾಗಿದೆ ಸಮಾಜದಲ್ಲಿರುವ ತಪ್ಪು ನಂಬಿಕೆಗಳು ಹಾಗೂ ಮಾನಸಿಕ ರೋಗಗಳಿಗೆ ಇರುವ ಸಾಮಾಜಿಕ ಕಳಂಕದಿಂದಾಗಿ ಮಾನಸಿಕ ಅಸ್ವಸ್ಥ ರೋಗಿಗಳು ಸೂಕ್ತ ಚಿಕಿತ್ಸೆ ಪಡೆಯುವಲ್ಲಿ ವಿಫಲವಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು
ಈ ಸಂದರ್ಭದಲ್ಲಿ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಕಾಶಿ ವಕೀಲರ ಸಂಘದ ಅಧ್ಯಕ್ಷ ಕೆ ಎಂ ನಾಗರಾಜ್ ಉಪಾಧ್ಯಕ್ಷ ಪಿ ಪಾಲಯ್ಯ ಮನೋರೋಗ ತಜ್ಞ ಡಾ. ಮಂಜುನಾಥ್ ಆರೋಗ್ಯ ಇಲಾಖೆಯ ತಿಪ್ಪೇಸ್ವಾಮಿ ಸೇರಿದಂತೆ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
0 Comments