ವಿಚಾರ ಸಂಕಿರಣದಲ್ಲಿ ಪ್ರಾಂಶುಪಾಲ ಡಾ.ಪ್ರಭುರಾಜ್ ಕೆ.ನಾಯಕ್ ಗಾಂಧೀಜಿ ಸ್ವರಾಜ್ಯದ ಪರಿಕಲ್ಪನೆ ಯುವ ಜನತೆ ಅರ್ಥಮಾಡಿಕೊಳ್ಳಬೇಕಿದೆ

by | 12/10/23 | ಶಿಕ್ಷಣ


ಚಿತ್ರದುರ್ಗ ಅ.12:
ಮಹಾತ್ಮಾ ಗಾಂಧೀಜಿ ಅವರ ಸ್ವರಾಜ್ಯದ ಪರಿಕಲ್ಪನೆ ಹಾಗೂ ಆರ್ಥಿಕ ವಿಚಾರಗಳ ಕುರಿತು ಯುವ ಜನರು ಅರ್ಥಮಾಡಿಕೊಳ್ಳುವ ಜರೂರು ಇದೆ ಎಂದು ಕೊಪ್ಪಳ ಜಿಲ್ಲೆ ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಪ್ರಭುರಾಜ್ ಕೆ.ನಾಯಕ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ “ಮಹಾತ್ಮಾ ಗಾಂಧೀಜಿಯವರು ಕಂಡ ಸ್ವರಾಜ್ಯ ಹಾಗೂ ಆರ್ಥಿಕ ಚಿಂತನೆಗಳು” ವಿಷಯ ಕುರಿತು ಏರ್ಪಡಿಸಿದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಹಾತ್ಮಾ ಗಾಂಧೀಜಿಯವರನ್ನು ಇಡೀ ಜಗತ್ತು ಅರಿಯುವ ಪ್ರಯತ್ನ ಮಾಡುತ್ತಿದ್ದರೆ, ನಮ್ಮ ದೇಶದಲ್ಲಿ ಮಾತ್ರ ಗಾಂಧೀಜಿಯವರ ವಿಚಾರ ಮತ್ತು ತತ್ವಗಳನ್ನು ಮರೆಯುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ. ಗಾಂಧೀಜಿ ಅವರು ಸ್ವರಾಜ್ಯವನ್ನು ಭಿನ್ನ ಭಿನ್ನ ಅರ್ಥದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸ್ವರಾಜ್ಯ ಎಂದರೆ ಸ್ವಂತರಾಜ್ಯ, ರಾಮರಾಜ್ಯ ಎಂದರ್ಥ. ಸ್ವರಾಜ್ಯ ಪರಿಕಲ್ಪನೆಯನ್ನು ಮೊದಲು ದಾದಾಬಾಯಿ ನವರೋಜಿ ಅವರು ಬಳಕೆ ಮಾಡಿದರೂ ಗಾಂಧೀಜಿ ಅವರು ಸ್ವರಾಜ್ಯ ಪರಿಕಲ್ಪನೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದ್ದಾರೆ. ಸ್ವರಾಜ್ಯ ಎಂದರೆ ನಮ್ಮ ಆತ್ಮನಿಯಂತ್ರಣವೇ ಆಗಿದೆ. ನನ್ನನ್ನು ನಾವು, ಕುಟುಂಬ, ಕೆಲಸದ ಸ್ಥಳ, ಸಮಾಜ, ಜಗತ್ತು ಗೆಲ್ಲುವುದಾಗಿದೆ ಹಾಗೂ ಮಾನವ ಕುಲಕ್ಕೆ ಮಾರ್ಗದರ್ಶನ ಮಾಡುವುದಾಗಿದೆ. ಆದರೆ ನಾವು ಸ್ವರಾಜ್ಯವನ್ನು ಪಾಲನೆ ಮಾಡುವ ವಿಚಾರದಲ್ಲಿ ಹಿಂದೆ ಇದ್ದೇವೆ. ಸ್ವರಾಜ್ಯ ಎಂದರೆ ನನ್ನ ದೇಹ ಮತ್ತು ಮನಸ್ಸನ್ನು ನಾನು ನಿಯಂತ್ರಿಸುವ ಸಾಮಥ್ರ್ಯವನ್ನು ಹೊಂದಬೇಕಿರುವುದು ಬಹಳ ಮುಖ್ಯವಾಗಿದೆ. ನನ್ನ ಮತ್ತು ಸಮಾಜದ ಪ್ರಗತಿಗೆ ಅನುಕೂಲವಾಗುವ ಚಟುವಟಿಕೆಗಳಲ್ಲಿ ತೊಡಗಿದರೆ ಅದುವೇ ಸ್ವರಾಜ್ಯ. ಹೊರಗಿನ ನಿಯಂತ್ರಣಗಳನ್ನು ಹೊಂದದೆ ಒಳಗಿನ ನಿಯಂತ್ರಣದಿಂದ ಬದುಕುವುದು ಸ್ವರಾಜ್ಯವಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಸ್ವರಾಜ್ಯದಲ್ಲಿ ಗಾಂಧೀಜಿ ಅವರು, ಸಮಾಜದಲ್ಲಿ ಪ್ರತಿಯೊಬ್ಬರು ಕೂಡ ಘನತೆ, ಗೌರವ, ಸಮಾನತೆ, ಭ್ರಾತೃತ್ವ, ವಿಶ್ವಾಸದಿಂದ ಬದುಕಬೇಕು ಎಂದು ಹೇಳಿದರು. ಸ್ವತಃ ಗಾಂಧೀಜಿ ಅವರೇ ಹರಿಜನ ಕೇರಿಗಳಿಗೆ ಹೋಗಿ ಹರಿಜನರ ಸೇವೆಗೆ ಸದಾ ಸಿದ್ದರಾಗಿದ್ದರು. ಇಡೀ ಬದುಕನ್ನು ಹರಿಜನರ ಉದ್ದಾರಕ್ಕಾಗಿಯೇ ಸಮಯ ವಿನಿಯೋಗ ಮಾಡಿದರು ಎಂದರು.
ಗಾಂಧೀಜಿಯವರ ಆರ್ಥಿಕ ಚಿಂತನೆಗಳನ್ನು ಗಮನಿಸಿದಾಗ, ಅವರ ಪ್ರಕಾರ ಗ್ರಾಮಗಳು ಗಣರಾಜ್ಯವಾಗಿ ಬದಲಾಗಬೇಕು ಎಂಬ ಆಶಯ ಹೊಂದಿದ್ದರು. ಗಣರಾಜ್ಯ ಎಂದರೆ ಪೂರ್ಣ ಸ್ವಾವಲಂಬಿಯಾಗಿರುವ ರಾಜ್ಯ. ಪ್ರತಿ ಗ್ರಾಮವೂ ಸ್ವಾವಲಂಬಿಯಾಗಿ ಬದುಕುವ ಸಾಮಥ್ರ್ಯ ಗಳಿಸಬೇಕು, ನಮ್ಮ ಅಗತ್ಯದ ವಸ್ತುಗಳನ್ನು ನಾವೇ ತಯಾರಿಸಿಕೊಳ್ಳಬೇಕು, ಗುಡಿ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು. ನಗರ, ಪಟ್ಟಣ ಗ್ರಾಮಗಳಲ್ಲಿ ಎಲ್ಲ ಹಂತದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಬೇಕು, ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲ ಹಂತಗಳಲ್ಲಿರಬೇಕು ಎಂಬುವುದು ಗಾಂಧೀಜಿ ಅವರ ಕನಸಾಗಿತ್ತು, ಆ ದಿಸೆಯಲ್ಲಿಯೇ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿಗಳು ಅಸ್ತಿತ್ವಕ್ಕೆ ಬಂದವು ಎಂದು ಹೇಳಿದರು.
ದೊಡ್ಡ ಪ್ರಮಾಣದ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುವುದನ್ನು ಗಾಂಧೀಜಿಯವರು ಒಪ್ಪಲಿಲ್ಲ. ತಂತ್ರಜ್ಞಾನವು ನಿರುದ್ಯೋಗ ಹೆಚ್ಚಿಸುತ್ತದೆ. ಯಂತ್ರೋಪಕರಣಗಳ ಸ್ಥಳದಲ್ಲಿ ಸಾಮೂಹಿಕ ಉತ್ಪಾದನೆಯನ್ನು ಅವರು ಪ್ರಚೋದಿಸಿದರು ಎಂದರು.
ಗಾಂಧೀಜಿ ಅವರಿಂದ ಪ್ರಭಾವಿತರಾದ ವಿಶ್ವದ ಬಹುತೇಕ ಚಿಂತಕರು ಗಾಂಧೀಜಿ ಅವರ ವಿಚಾರಗಳಿಂದ ಪ್ರೇರಿತರಾಗಿ, ಸಾಧನೆ ಮಾಡಿ ನೋಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿರುವುದನ್ನು ಕಾಣಬಹುದಾಗಿದೆ. ಆದರೆ ಸ್ವರಾಜ್ಯವನ್ನು ಪ್ರತಿಧ್ವನಿಸಿದ ಮಹಾತ್ಮ ಗಾಂಧೀಜಿಯವರ ವಿಚಾರಗಳಿಂದ ನಾವು ಹಿಂದಕ್ಕೆ ಸರಿದಿದ್ದೇವೆ. ಅವರ ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ ಸೇರಿದಂತೆ ಎಲ್ಲ ರಂಗಗಳ ವಿಚಾರಗಳನ್ನು ಸೈಡ್‍ಲೈನ್ ಮಾಡಿ ನಮ್ಮದೇ ಆದಂತಹ ಭಿನ್ನ ದಾರಿಯಲ್ಲಿ ನಾವು ಹೋಗಿರುವುದನ್ನು ಕಾಣಬಹುದಾಗಿದೆ ಎಂದು ಡಾ. ಪ್ರಭುರಾಜ್ ನಾಯಕ್ ಬೇಸರಿಸಿದರು.
ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಗುಡ್ಡದೇಶ್ವರಪ್ಪ ಮಾತನಾಡಿ, ಗಾಂಧೀಜಿ ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಬಹಳ ಜನರು ವಿಫಲರಾಗಿದ್ದಾರೆ. ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ವರ್ಗಭೇದ, ವರ್ಣಭೇದ, ನಿರಂಕುಶ ಪ್ರಭುತ್ವ, ವಸಾಹತು ಶಾಹಿ, ಬಡತನ, ಜಾತಿ ವ್ಯವಸ್ಥೆಗಳಿಂದ ಇಡೀ ಜಗತ್ತೆ ನರಳಿತು. ಸ್ವರಾಜ್ಯ ಕಲ್ಪನೆಯಲ್ಲಿ ಗಾಂಧೀಜಿ ಅವರ ಆತ್ಮಚಿಂತನೆಯು ಒಂದು. ಸತ್ಯಾಗ್ರಹ, ಅಹಿಂಸೆ, ಸಾಮಾಜಿಕ ನ್ಯಾಯ, ಚಳುವಳಿಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಸ್ವರಾಜ್ಯ ಪರಿಕಲ್ಪನೆಯಲ್ಲಿ ಅರ್ಥಿಕ ಪರಿಕಲ್ಪನೆ ಇದೆ. ಬ್ರಿಟೀಷರು ರೈತಾಪಿ ವರ್ಗದವರಿಗೆ ಕಿರುಕುಳ ನೀಡುತ್ತಿರುವಾಗ, ಮೊದಲು ರೈತರ ಬೆಂಬಲಕ್ಕೆ ನಿಂತವರು ಗಾಂಧೀಜಿ. ಬಡತನ ಮತ್ತು ಶೋಷಣೆಯಲ್ಲಿ ನಲುಗುತ್ತಿದ್ದ ವ್ಯಕ್ತಿಗಳ ಬಗ್ಗೆ ಯೋಚನೆ ಮಾಡುತ್ತಿದ್ದರು. ಗಾಂಧೀಜಿ ಅವರ ಚಿಂತನೆಗಳಿಗೆ ಇಂದಿನ ಯುವ ಪೀಳಿಗೆಯು ದೂರ ಸರಿಯುತ್ತಿದ್ದಾರೆ. ಯುವ ಮನಸ್ಸುಗಳಿಗೆ ಗಾಂಧೀ ವಿಚಾರ, ಚಿಂತನೆಗಳನ್ನು ಬಿತ್ತಬೇಕಿದೆ ಎಂದು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚನ್ನಕೇಶವ, ಕನ್ನಡ ವಿಭಾಗದ ಮುಖ್ಯಸ್ಥ ಮಂಜುನಾಥ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶಿವಣ್ಣ, ಆಂಗ್ಲಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಧುಸೂದನ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಲೀಲಾವತಿ, ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಶಕುಂತುಲ, ಗ್ರಂಥಪಾಲಕ ಕುಮಾರಸ್ವಾಮಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *