ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ಸಮರ್ಪಣೆ ಸಾಮಾಜಿಕ ಅಧಿಕಾರಿತಾ ಶಿಬಿರದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ 26 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಸಾಧನ ಸಲಕರಣೆಗಳ ವಿತರಣೆ

by | 24/09/23 | ಜನಧ್ವನಿ


ಚಿತ್ರದುರ್ಗ ಸೆ.24:
ವಿಕಲಚೇತನರ ಸಬಲೀಕರಣಕ್ಕಾಗಿ ಕಳೆದ 9 ವರ್ಷಗಳಲ್ಲಿ 14,174 ಮೌಲ್ಯಮಾಪನ ಶಿಬಿರ ನಡೆಸಿ, 26 ಲಕ್ಷಕ್ಕೂ ಅಧಿಕ ಅಂಗವಿಕಲ ಫಲಾನುಭವಿಗಳಿಗೆ ಅಗತ್ಯ ಸಾಧನ-ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ (ದಿವ್ಯಾಂಗಜನ್), ಕೃತಕ ಅಂಗಾಂಗ ತಯಾರಿಕಾ ಕಾರ್ಪೋರೇಷನ್ ಆಫ್ ಇಂಡಿಯಾ (ಅಲಿಂಕೋ), ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ಸಾಮಾಜಿಕ ಅಧಿಕಾರಿತಾ ಶಿಬಿರ-ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಗವಿಕಲರು ಸಮಾಜದಲ್ಲಿ ಎಲ್ಲರಂತೆ ಬದುಕಲಿ ಎಂಬ ದೃಷ್ಟಿಯಿಂದ ಶಸ್ತ್ರಚಿಕಿತ್ಸೆ, ಸ್ಕಾಲರ್‍ಶಿಪ್, ಸಾಧನ-ಸಲಕರಣೆ, ಕೌಶಲ ತರಬೇತಿ, ಸಾಲ ಸೌಲಭ್ಯ ಸೇರಿ ಇತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅವುಗಳನ್ನು ಪ್ರಾಮಾಣಿಕವಾಗಿ ತಲುಪಿಸಲು ಸಿದ್ಧನಿದ್ದೇನೆ. ನಿಮ್ಮ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲಿದ್ದೇನೆ ಎಂದು ಭರವಸೆ ನೀಡಿದರು.
ವೈಜ್ಞಾನಿಕವಾಗಿ ಭಾರತ ಸಾಕಷ್ಟು ಮುಂದುವರೆದಿದ್ದು, ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಯಾವ ದೇವರ ಶಾಪದಿಂದಲೂ ಅಂಗವಿಕಲರಾಗಿ ಜನಿಸುವುದಿಲ್ಲ. ಪಾಲಕರ ಕೆಲ ಸಣ್ಣ-ಪುಟ್ಟ ತಪ್ಪುಗಳಿಂದ, ಕೆಲವು ಸಲ ವೈದ್ಯರ ನಿರ್ಲಕ್ಷ್ಯದಿಂದಾಗಿ ಅಂಗವಿಕಲತೆ ಉಂಟಾದರೂ ಅದಕ್ಕೆ ತ್ವರಿತವಾಗಿ ಶಸ್ತ್ರಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಮೂಢನಂಬಿಕೆಯಿಂದ ಮೊದಲು ಹೊರಬನ್ನಿ. ನಿಮ್ಮ ಬದುಕು-ಭವಿಷ್ಯ ರೂಪಿಸಿಕೊಳ್ಳಲು ದೃಢ ಸಂಕಲ್ಪ ಮಾಡಿ. ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಜಾರಿಗೊಳಿಸಿದ ವಿಶ್ವಕರ್ಮ ಯೋಜನೆ ದೇಶದಲ್ಲೇ ಅತ್ಯುತ್ತಮ ಯೋಜನೆ. ಕುಲಕಸುಬುಗಳಲ್ಲಿ ತೊಡಗುವವರು ಗ್ರಾಮ ಪಂಚಾಯಿತಿ ವತಿಯಿಂದ ದೃಢೀಕರಣ ಪತ್ರ ಪಡೆದು, ಜಿಲ್ಲಾಡಳಿತ ಫಲಾನುಭವಿ ಗುರುತಿಸಿದರೆ, 5 ದಿನದ ಕೌಶಲ ತರಬೇತಿ ನೀಡುವುದರ ಜೊತೆಗೆ ಆರ್ಥಿಕವಾಗಿ ಒಂದಿಷ್ಟು ನೆರವು ನೀಡಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಘೋಷಿಸುವ ಯೋಜನೆಗಳನ್ನು ಜಾರಿಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಕಚೇರಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗಬಾರದು. ಸೌಲಭ್ಯ ತಲುಪಿಸದ ಅಧಿಕಾರಿಗಳನ್ನು ಕ್ಷಮಿಸಲಾರೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಕೇಂದ್ರ ಸರ್ಕಾರ ವಿಕಲಚೇತನರ ಸಬಲೀಕರಣಕ್ಕಾಗಿ, ಅವರು ಯಾವುದೇ ರೀತಿಯಾದ ಅಂಗಾಂಗ ನ್ಯೂನತೆಯಿಂದ, ದಿನನಿತ್ಯದ ಬದುಕಿನಲ್ಲಿ ಅವರಿಗೆ ಕೊರತೆಯಾಗದಿರಲು ದಿವ್ಯಾಂಗದರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಿ, ಸಾಧನ ಸಲಕರಣೆಗಳ ವಿತರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದಿವ್ಯಾಂಗರಿಗೆ ಹೆಚ್ಚಿನ ಒತ್ತು ಕೊಡುವ ಮೂಲಕ ದಿವ್ಯಾಂಗರಿಗೆ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.
ದಿವ್ಯಾಂಗರು ಸಾಧನ-ಸಲಕರಣೆಗಳನ್ನು ಪಡೆದುಕೊಂಡು ತಮ್ಮ ಬದುಕನ್ನು ಮತ್ತಷ್ಟು ಗಟ್ಟಿಯಾಗಿ, ಆತ್ಮಸ್ಥೈರ್ಯ, ಆತ್ಮವಿಶ್ವಾಸದಿಂದ ಎಲ್ಲರಂತೆ ಬದುಕನ್ನು ನಡೆಸಬೇಕು ಎಂದು ಹೇಳಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಜಂಟಿ ಕಾರ್ಯದರ್ಶಿ ರಾಜೀವ್ ಶರ್ಮ ಮಾತನಾಡಿ, ವಿಶೇಷಚೇತನರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಕಾಳಜಿ ಹೊಂದಿದ್ದಾರೆ. ವಿಶೇಷಚೇತನರಿಗೆ ಸಾಧನ ಸಲಕರಣೆ, ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಅವರನ್ನು ಕೂಡ ಮುಖ್ಯವಾಹಿನಿಗೆ ತರುವನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಎಲ್ಲರಂತೆ ಅವರ ಜೀವನ ಸುಗಮವಾಗಿ ನಡೆಯಬೇಕು ಎಂಬ ಉದ್ದೇಶ ಅಡಗಿದೆ. ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣೆ ಮಾಡಲಾಗುತ್ತಿದ್ದು, ಇದೊಂದು ಮಹತ್ವಪೂರ್ಣವಾದ ಯೋಜನೆಯಾಗಿದ್ದು, ದೇಶಾದಾದ್ಯಂತ ಹಲವರು ಇದರ ಪಡೆದಿದ್ದಾರೆ. ಇದರಿಂದ ವಿಶೇಷ ಚೇತನರಿಗೆ ಅನುಕೂಲವಾಗಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ವಿಕಲಚೇತನರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ವಿಶ್ವದ ಇತರೆ ದೇಶಗಳಿಗೆ ಹೋಲಿಕೆ ಮಾಡಿದಾಗ ನಮ್ಮ ದೇಶದಲ್ಲಿ ಹೆಚ್ಚಿನ ಮಾನವ ಸಂಪನ್ಮೂಲ ಇದೆ. ದೇಶದ ಒಬ್ಬೊಬ್ಬ ವ್ಯಕ್ತಿಯಲ್ಲಿನ ಮಾನವ ಸಂಪನ್ಮೂಲದ ಶಕ್ತಿಯನ್ನು ಹೆಚ್ಚಿಸುವ ಗುರಿಯೊಂದಿಗೆ ವಿಶೇಷಚೇತನರನ್ನೂ ಮುಖ್ಯವಾಹಿನಿಗೆ ತರುವನಿಟ್ಟಿನಲ್ಲಿ ಈ ಮಾನವ ಸಂಪನ್ಮೂಲವನ್ನು ದೇಶದ ಬೆಳವಣಿಗೆಗೆ ಅವರು ಕೂಡ ಪಾತ್ರರಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಅಡಿಪ್ ಯೋಜನೆ ರೂಪಿಸಿದೆ. ಈ ಯೋಜನೆಯಡಿ ವಿಕಲಚೇತನರ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ, ಅವರ ಅಂಗವಿಕಲತೆಯನ್ನು ಪರಿಶೀಲನೆ ಮಾಡಿ ಅವರ ಅವಶ್ಯಕತೆಗನುಗಣವಾಗಿ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ. ಅಡಿಪ್ ಯೋಜನೆಯಡಿಯಲ್ಲಿ ಜಿಲ್ಲೆಯ ವಿಶೇಷಚೇತನರಿಗೆ ಎರಡನೇ ಬಾರಿಗೆ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರಿಂದ ವಿಶೇಷಚೇತನರ ಜೀವನ ಬದಲಾವಣೆಗೆ ಕಾರಣವಾಗಲಿದೆ ಎಂದರು.
1017 ವಿಕಲಚೇತನ ಫಲಾನುಭವಿಗಳಿಗೆ 1.12 ಕೋಟಿ ಮೊತ್ತದ ಸಾಧನ ಸಲಕರಣೆಗಳ ವಿತರಣೆ: ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ಜಿಲ್ಲೆಯ 1017 ವಿಕಲಚೇತನ ಫಲಾನುಭವಿಗಳಿಗೆ ರೂ.1,12,59,910 ಮೊತ್ತದ 2293 ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದರು.
ಕೇಂದ್ರ ಸಚವರಾದ ಎ.ನಾರಾಯಣಸ್ವಾಮಿ ಅವರ ಸೂಚನೆ ಮೇರೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯ ಅಡಿಯಲ್ಲಿ ಅಡಿಪ್ ಯೋಜನೆಯ ಅನುಷ್ಠಾನ ಸಂಸ್ಥೆಯಾದ ಭಾರತದ ಕೃತಕ ಅಂಗಾಂಗ ಉತ್ಪಾದನಾ ನಿಗಮದವರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ 2023ರ ಜುಲೈ ಮಾಹೆಯಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ತಜ್ಞ ವೈದ್ಯರ ತಂಡದೊಂದಿಗೆ ವಿಕಲಚೇತನರಿಗೆ ವಿವಿಧ ಸಾಧನ ಸಲಕರಣೆಗಳ ಗುರುತಿಸುವಿಕೆ ಶಿಬಿರಗಳನ್ನು ಹಮ್ಮಿಕೊಂಡು, ಫಲಾನುಭವಿಗಳಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತದೆ ಎಂದರು.
ಈ ಸಾಮಾಜಿಕ ಅಧಿಕಾರಿತಾ ಶಿಬಿರದಲ್ಲಿ 39 ಬ್ಯಾಟರಿಚಾಲಿತ ಯಾಂತ್ರೀಕೃತ ಸೈಕಲ್ಸ್, 79 ಸಾದಾ ಕೈಚಾಲಿತ ಸೈಕಲ್ಸ್, 226 ಗಾಲಿಕುರ್ಚಿಗಳು, 614 ಕಂಕುಳ ಊರುಗೋಲು, 11 ವಾಕಿಂಗ್ ಸ್ಟಿಕ್ಸ್, 1 ಬ್ರೈಲ್ ಕ್ಯಾನೆಸ್, 1 ಬ್ರೈಲ್ ಸ್ಲೇಟ್, ಅಂದರಿಗೆ 15 ಬ್ರೈಲ್‍ಕಿಟ್ಸ್, 69 ರೊಲೇಟರ್ಸ್, 850 ಶ್ರವಣ ಸಾಧನ, 80 ಸುಗಮ್ಯ ಕೇನ್ಸ್, 27 ಅಂಧರಿಗೆ ಸ್ಮಾರ್ಟ್‍ಪೋನ್, 224 ಪ್ರಾಸ್ಥೆಸಿಸ್ ಮತ್ತು ಕ್ಯಾಲಿಫರ್ಸ್ ಸೇರಿದಂತೆ ಒಟ್ಟು 2293 ಸಾಧನ ಸಲಕರಣೆಗಳನ್ನು ವಿಶೇಷಚೇತನರಿಗೆ ವಿತರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ತಿಮ್ಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಅಲಿಂಕೋ ಹಿರಿಯ ವ್ಯವಸ್ಥಾಪಕ ಅಶೋಕ್ ಕುಮಾರ್ ಸೇರಿದಂತೆ ವಿಕಲಚೇತನ ಫಲಾನುಭವಿಗಳು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *