ವಾಣಿವಿಲಾಸಸಾಗರಕ್ಕೆ ಭದ್ರಾನೀರು ಹರಿಸುವ ಮೂಲಕ ನಮ್ಮ ಬಿಜೆಪಿ ಸರ್ಕಾರ ಕೊಟ್ಟಮಾತು ಉಳಿಸಿಕೊಂಡಿದೆ ರಾಜ್ಯದಮುಖ್ಯಮಂತ್ರಿಗಳಾದ ಬಸವರಾಜಬೊಮ್ಮಾಯಿ

by | 22/11/22 | ರಾಜಕೀಯ

ಹಿರಿಯೂರು :
ವಾಣಿವಿಲಾಸಸಾಗರಕ್ಕೆ ಭದ್ರಾ ನೀರು ಹರಿಸಲು ಈ ಭಾಗದ ಜನರು ಹಾಗೂ ರೈತರು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರು, ನಂತರ 2008-2009 ರಲ್ಲಿ ಈ ಭಾಗದ ರೈತರು ರೈತಸಂಘದ ನೇತೃತ್ವದಲ್ಲಿ ಸುಮಾರು 580 ದಿನ ಹೋರಾಟ ಮಾಡಿದ ಪ್ರತಿಫಲವಾಗಿ ಆಗಿನ ನಮ್ಮ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಲಾಯಿತು ಎಂಬುದಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ವಾಣಿವಿಲಾಸ ಸಾಗರಕ್ಕೆ ಬಾಗಿನ ಅರ್ಪಿಸಿದ ನಂತರ ನಗರದ ನೆಹರೂ ಮೈದಾನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲ್ಲಿನ ರೈತ ಹೋರಾಟಗಾರರು ಬರೋಬ್ಬರಿ 580 ದಿನಗಳಿಂದ ಹೋರಾಟ ಕುಳಿತ ಸುದ್ದಿ ತಿಳಿದು ಸ್ಥಳಕ್ಕೆ ಬಂದಾಗ ವಾಣಿವಿಲಾಸ ಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಎಕರೆ ಅಡಿಕೆ, ತೆಂಗಿನ ತೋಟಗಳು ಒಣಗಿ ಇಲ್ಲಿನ ಜನರ ನೀರಿನ ಬವಣೆ ಅರಿವಿಗೆ ಬಂತು. ಆಗ ನಾನು ನೀರಾವರಿ ಸಚಿವನಾಗಿ ಕೇವಲ ಒಂದೂವರೆ ತಿಂಗಳಾಗಿತ್ತು. ನಂಜಾವಧೂತ ಶ್ರೀಗಳು ಇಲ್ಲಿನ ಧರಣಿ ನಿರತ ರೈತರ ನೇತೃತ್ವ ವಹಿಸಿದ್ದರು. ಅಂದು ಸುಮಾರು ಹತ್ತು ಸಾವಿರ ರೈತರು ಇಲ್ಲಿ ಸೇರಿದ್ದರು.
ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆ ಎಸ್ ನಿಜಲಿಂಗಪ್ಪನವರ ಕಾಲದಿಂದಲೂ ನೆನೆಗುದಿಗೆ ಬಿದ್ದಿದೆ. ನಿಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಾದರೂ ಈ ಭಾಗದ ರೈತರ ಕನಸು ನನಸು ಮಾಡಿ ಎಂಬುದಾಗಿ ಸ್ವಾಮೀಜಿ ಮನವಿ ಮಾಡಿದ್ದರು. ಅಲ್ಲಿಂದ ಕೇವಲ ಹದಿನೈದೇ ದಿನದಲ್ಲಿ ಸರ್ಕಾರ ಈ ಆದೇಶ ನೀಡಿದ್ದಲ್ಲದೆ, ಇಂದು ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಸುವ ಮೂಲಕ ಆ ಮಾತು ಉಳಿಸಿಸಿಕೊಂಡಿದ್ದೇವೆ
ಈ ರಾಜ್ಯದಲ್ಲಿ ಸುಮಾರು 50 ಕ್ಕೂ ಹೆಚ್ಚು ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಸರ್ಕಾರ ವಾಣಿವಿಲಾಸ ಸಾಗರಕ್ಕೆ ಯಾವುದೇ ಕಾಯಕಲ್ಪ ನೀಡುವ ಮನಸ್ಸು ಮಾಡಲಿಲ್ಲ. ರಾಜ್ಯದಲ್ಲಿ ಜನ ಸಂಪನ್ಮೂಲ, ಜಲ ಸಂಪನ್ಮೂಲ, ಪ್ರಕೃತಿ ಸಂಪನ್ಮೂಲ ಎಲ್ಲವೂ ಇದೆ. ಆದರೆ ದಿಟ್ಟ ನಾಯಕತ್ವದ ಕೊರತೆ ಮತ್ತು ಬಡವರ ಹಾಗೂ ರೈತಪರ ಇಚ್ಛಾಶಕ್ತಿ ಇರದ ಕಾರಣ ಈ ಭಾಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬರಲಿಲ್ಲ, ಈಗ ಅದೆಲ್ಲವನ್ನೂ ನಮ್ಮ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ.
ರಾಜ್ಯದ ಜನರ ಹಾಗೂ ರೈತರ ಬದುಕನ್ನು ಹಸನು ಮಾಡುವುದೇ ಬಿಜೆಪಿ ಪಕ್ಷದ ಆಳ್ವಿಕೆಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಭದ್ರಾ ಮೇಲ್ದoಡೆ ಯೋಜನೆ ಶೀಘ್ರದಲ್ಲೇ ರಾಷ್ಟ್ರೀಯ ಯೋಜನೆ ಆಗಲಿದ್ದು, ರಾಷ್ಟ್ರೀಯ ಯೋಜನೆಯಾದರೆ ಕೇಂದ್ರ ಸರ್ಕಾರ 16 ಸಾವಿರ ಕೋಟಿ ರೂಗಳ ಅನುದಾನ ನೀಡಲಿದ್ದು, ಈ ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದಲ್ಲೇ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಈ ಬಯಲು ಸೀಮೆಯ ಬರದ ನಾಡು ಹಸಿರಿನ ಬೀಡು ಆಗಲಿದೆ ಎಂದರು.
ವಾಣಿ ವಿಲಾಸ ಸಾಗರದಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ಮೈಸೂರಿನ ಕೆ.ಆರ್.ಎಸ್ ತರಹ ಉದ್ಯಾನವನ ಅಭಿವೃದ್ಧಿ ಮಾಡಲಾಗುವುದು. ಅಲ್ಲದೆ ಜಲಾಶಯದ ಎಡ-ಬಲ ನಾಲೆಗಳ ನವೀಕರಣಕ್ಕೆ ಸರ್ಕಾರ 738 ಕೋಟಿ ರೂಗಳನ್ನು ಮಂಜೂರು ಮಾಡಲಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದಂತೆ ಭದ್ರಾ ಮೇಲ್ದoಡೆ ಯೋಜನೆ ಅoದರೆ ಬಿಜೆಪಿ, ಬಿಜೆಪಿ ಅಂದರೆ ಭದ್ರಾ ಯೋಜನೆ ಅನ್ನುವಂತಾಗಿದೆ. ಸುಮಾರು 500 ಕೋಟಿಗೂ ಹೆಚ್ಚಿನ ಅನುದಾನವನ್ನು ಈ ಕ್ಷೇತ್ರಕ್ಕೆ ನೀಡಲಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ ಜನರ ಜೀವನ ಸಮೃದ್ಧವಾಗಲಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ನೀರಾವರಿ ಸವಲತ್ತು ಒದಗಿಸಲಾಗುವುದು, ಜಿಲ್ಲೆಯಲ್ಲಿ ಐಐಎಸ್ಸಿ, ಇಸ್ರೋ ಸಂಸ್ಥೆಗಳು ಇರುವುದರಿಂದ ಜಿಲ್ಲೆ ದೊಡ್ಡಮಟ್ಟದಲ್ಲಿ ಬೆಳೆಯಲಿದೆ. ಅಲ್ಲದೆ ಜಿಲ್ಲೆಯಲ್ಲಿ 1000 ಎಕರೆ ಇಂಡಸ್ಟ್ರಿಯಲ್ ಟೌನ್ ನಿರ್ಮಾಣ ಮಾಡಲಾಗುವುದು, ಈ ಭಾಗದ ಯುವಕರಿಗೆ ಕೈ ತುಂಬಾ ಕೆಲಸ ಸಿಗಲಿದ್ದು, ತುಮಕೂರು ಚಿತ್ರದುರ್ಗ ದಾವಣಗೆರೆ ರೈಲ್ವೆ ಯೋಜನೆಗೆ ತ್ವರಿತಗತಿಯಲ್ಲಿ ಚಾಲನೆ ನೀಡಲಾಗುವುದು ಎಂದರಲ್ಲದೆ,
ವಾಣಿವಿಲಾಸ ಸಾಗರ ಜಲಾಶಯ ಈ ಬಾರಿ ತುಂಬಿ ಕೋಡಿ ಹರಿದಿದೆ, ಆದ್ದರಿಂದ ಈ ಭಾಗದ ರೈತರು ಇಲ್ಲಿನ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭ ಮಾಡುವಂತೆ ಬೇಡಿಕೆ ಸಲ್ಲಿಸಿದ್ದು, ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ಈ ಬಗ್ಗೆ ಒತ್ತಡ ತಂದಿದ್ದು, ಈ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭ ಮಾಡುವುದರ ಬಗ್ಗೆ ತಜ್ಞರ ಕಳಿಸಿ ಅಧ್ಯಯನ ನಡೆಸಲಾಗುವುದು. ಇಂತಹ ಜನೋಪಯೋಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರನ್ನು ಮತ್ತೊಮ್ಮೆ ಗೆಲ್ಲಿಸುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರು ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಸುವುದು ಸೇರಿದಂತೆ ಕ್ಷೇತ್ರದಲ್ಲಿ ಬದ್ಧತೆಯಿಂದ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನಮೆಚ್ಚಿದ ಶಾಸಕಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಅವರ ಎದುರು ಚುನಾವಣೆಗೆ ನಿಲ್ಲುವ ಸಾಹಸವನ್ನು ಯಾರೂ ಮಾಡಲಾರರು ಎಂಬುದಾಗಿ ಹೇಳಿದರಲ್ಲದೆ,ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರದ ಜನ ಪೂರ್ಣಿಮಾ ಶ್ರೀನಿವಾಸ್ ರವರನ್ನು 25 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಲಿದ್ದಾರೆ ಎಂಬುದಾಗಿ ಹೇಳಿದರು.
ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ರೈತಸಂಘದ ಹೋರಾಟದಿಂದ 2008 ರಲ್ಲಿ ಅಂದಿನ ಮುಖ್ಯಮಂತ್ರಿಗಳ ಬಿ.ಎಸ್.ಯಡಿಯೂರಪ್ಪ ಹಾಗೂ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರು 2008 ಈ ಭಾಗದ ಜನರ ನೀರಿನ ಬವಣೆಯನ್ನು ನೀಗಿಸಲು ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿದ್ದರಿಂದ ಇದೀಗ ಈ ಪ್ರದೇಶ ಅಚ್ಚ ಹಸುರಿನಿಂದ ಸಮೃದ್ಧವಾಗಿದೆ ಎಂದರಲ್ಲದೆ,
ನಮ್ಮ ಮೊದಲನೆಯ ಆದ್ಯತೆ ಶಿಕ್ಷಣ ಮತ್ತು ಆರೋಗ್ಯ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ತಾಲ್ಲೂಕಿನ 700 ಕೋಟಿಗೂ ಹೆಚ್ಚು ಅನುದಾನವನ್ನು ನಮ್ಮ ಬಿಜೆಪಿ ಸರ್ಕಾರದ ಇಬ್ಬರು ಮುಖ್ಯಮಂತ್ರಿಗಳು ನೀಡಿದ್ದು, ಅದನ್ನು ನಮ್ಮ ಸಚಿವರ ಸಹಕಾರದಿಂದ ಅನುದಾನವನ್ನು ತಂದು ಈ ತಾಲ್ಲೂಕಿನಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿದ್ದರಿಂದ ಈ ತಾಲ್ಲೂಕು ಹಸಿರಿನಿಂದ ಕಂಗೊಳಿಸಲು ಸಾಧ್ಯವಾಗಿದೆ ಎಂದರು.
ಈ ತಾಲ್ಲೂಕಿನ ರಸ್ತೆಗಳು, ಪಿಡಬ್ಲೂಡಿ, ಹಳ್ಳಿಗಳ ರಸ್ತೆಗಳಿರಬಹುದು, ಇವುಗಳ ಸಹ ಆದ್ಯತೆ ನೀಡಿದ್ದೇವೆ, ಅದೇ ರೀತಿಯಾಗಿ ತಾಲ್ಲೂಕಿನಲ್ಲಿ 25 ಕೋಟಿ ರೂ ವೆಚ್ಚದಲ್ಲಿ ಹೊಸ ಆಸ್ಪತ್ರೆ ಮಂಜೂರು ಮಾಡಿತ್ತು, ಈ ಕಾಮಗಾರಿಯು ಸಹ ಭರದಿಂದ ಸಾಗುತ್ತಾ ಇದೆ, ಇದಲ್ಲದೆ, ಈ ತಾಲ್ಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು 10 ಕೋಟಿ ತಂದು ಕಾಮಗಾರಿ ಮಾಡುತ್ತಾ ಇದ್ದೇವೆ ಎಂದರಲ್ಲದೆ,
ಇಂದು ಮುಖ್ಯಮಂತ್ರಿಗಳು ನಗರಸಭೆ ಉದ್ಘಾಟನೆ ಮಾಡಿದ್ದು, ನಗರಸಭೆ ನಿರ್ಮಾಣಕ್ಕೆ ಹಣದ ಕೊರತೆ ಬಂದಾಗ 1.50 ಕೋಟಿ ರೂಗಳ ಹೆಚ್ಚುವರಿ ಹಣವನ್ನು ಮಂಜೂರು ಮಾಡಿದ್ದಾರೆ, ಈ ನಗರಕ್ಕೆ 75 ಸಾವಿರ ಹೆಚ್ಚು ಜನಸಂಖ್ಯೆ ಇದೆ, ಈಗಾಗಲೇ ಯುಜಿಡಿ ಆಗಬೇಕಿತ್ತು.ಕಳೆದ ಒಂದು ತಿಂಗಳ ಹಿಂದೆ ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ 208 ಕೋಟಿ ಮಂಜೂರು ಮಾಡಿದ್ದು, ಅದರಲ್ಲಿ ಈಗಾಗಲೇ 104 ಕೋಟಿಯನ್ನು ಯುಜಿಡಿ ಅಂಡರ್ ಗ್ರೌಂಡ್ ಡ್ರೈನೇಜ್ ವ್ಯವಸ್ಥೆ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಚಿವರಾದ ಶ್ರೀರಾಮುಲು, ಕೆ.ಎಸ್.ಆರ್.ಟಿ. ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಚಂದ್ರಪ್ಪ, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಶಿರಾ ಶಾಸಕ ರಾಜೇಶ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಎಂ.ಎಲ್.ಸಿ ಕೆ.ಎಸ್.ನವೀನ್, ನಾರಾಯಣಸ್ವಾಮಿ, ರವಿಕುಮಾರ್, ಮುಖಂಡರುಗಳಾದ ಸಿದ್ದೇಶ್ ಯಾದವ್, ಆರ್.ರಾಜೇಶ್, ಸಂಪತ್, ಬಿ.ನರೇಂದ್ರ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಜಿಲ್ಲಾ ನೀರಿವಾರಿ ಹೋರಾಟ ಸಮಿತಿ ಸದಸ್ಯರು, ರೈತರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *