ರೈತರ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ 7ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

by | 13/10/23 | ಪ್ರತಿಭಟನೆ


ಚಿತ್ರದುರ್ಗ :
ರೈತರ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ 7ಗಂಟೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ಬದಲಾಗಿ ಕೇವಲ 4 ಗಂಟೆಗಳು ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಇದರಿಂದ ಹೊಲದಲ್ಲಿ ಬೆಳೆದ ಬೆಳೆಗಳಿಗೆ ಉತ್ತಮ ನೀರು ಪೂರೈಕೆ ಮಾಡಲು ಸಾಧ್ಯವಾಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಈ ಕೂಡಲೇ ರೈತರ ಪಂಪ್ ಸೆಟ್ ಗಳಿಗೆ 7 ಗಂಟೆಗಳು ವಿದ್ಯುತ್ ಪೂರೈಕೆಯಾಗಬೇಕು ಎಂಬುದಾಗಿ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಕೆ.ಪಿ.ಭೂತಯ್ಯ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಾನ್ಯ ಚಿತ್ರದುರ್ಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ರೈತರ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ 7ಗಂಟೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವುದು ಹಾಗೂ ರಾತ್ರಿ ಸಿಂಗಲ್ ಪೇಜ್ ವಿದ್ಯುತ್ ಪೂರೈಸುವಂತೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ರಾಜ್ಯಾದ್ಯಂತ ಲಕ್ಷಾಂತರ ರೈತರು ತಮ್ಮ ಜಮೀನುಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ಪಂಪ್ ಸೆಟ್ ಗಳಿಗೆ ಇಲಾಖೆಯಿಂದ ವಿದ್ಯುತ್ ಪಡೆದಿದ್ದು, ಕೃಷಿ ಪಂಪ್ ಸೆಟ್ ಗಳಿಂದ ವ್ಯವಸಾಯದ ಜೊತೆಗೆ ಪಶುಸಂಗೋಪನೆ, ಹೈನುಗಾರಿಕೆ ಉಪಕಸುಬಾಗಿ ಮಾಡಿಕೊಂಡು, ತಮ್ಮ ಜಮೀನುಗಳಲ್ಲಿ ರಾತ್ರಿ ಸಮಯದಲ್ಲಿ ಹೊಲಗದ್ದೆ ತೋಟಗಳಲ್ಲಿ ವಾಸಿಸುತ್ತಿದ್ದಾರೆ, ಇದೀಗ ಅಗತ್ಯ ವಿದ್ಯುತ್ ಪೂರೈಕೆಯಾಗದೇ ರೈತರು ತೊಂದರೆಗೆ ಸಿಲುಕಿದ್ದಾರೆ, ಈ ಕೂಡಲೇ ಅಧಿಕಾರಿಗಳಿಗೆ ವಿದ್ಯುತ್ ಪೂರೈಕೆ ಮಾಡಲು ಸೂಚಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಮಾತನಾಡಿ, ತಮ್ಮ ಜಮೀನಿನಲ್ಲಿಯೇ ಮನೆಕಟ್ಟಿಕೊಂಡು ವಾಸಿಸುವ ರೈತರ ಪಂಪ್ ಸೆಟ್ ಗಳಿಗೆ ಸಂಜೆ 6 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯ ವರೆಗೆ ಸಿಂಗಲ್ ಪೇಜ್ ವಿದ್ಯುತ್ ಪೂರೈಕೆ ನಿಲ್ಲಿಸಿರುವುದರಿಂದ ರಾತ್ರಿ ವೇಳೆ ವಿದ್ಯುತ್ ಇಲ್ಲದೆ, ಕೊಲೆ, ಸುಲಿಗೆ, ದರೋಡೆ ಕಳ್ಳ-ಕಾಕರ ಹಾವಳಿ ಹೆಚ್ಚಾಗಿರುವುದರಿಂದ ರೈತರು ರಾತ್ರಿ ಸಮಯದಲ್ಲಿ ಜಮೀನಿನಲ್ಲಿ ವಾಸಿಸಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೇ ಈ ಪದ್ಧತಿಯನ್ನು ನಿಲ್ಲಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ರಾಜ್ಯ ರೈತಸಂಘದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳಾದ ದಿವ್ಯಾಪ್ರಭು ಮಾತನಾಡಿ, ನಿಮ್ಮ ಸಮಸ್ಯೆಗಳು ನನಗೆ ಅರ್ಥವಾಗುತ್ತದೆ, ಈ ಕುರಿತು ಬೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚೆ ನಡೆಸಿ, ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷರಾದ ಧನಂಜಯ, ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಬ್ಯಾಡರಹಳ್ಳಿ ಶಿವಕುಮಾರ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾದ ಹಂಪಣ್ಣ, ರೈತಮುಖಂಡರಾದ ತಿಪ್ಪೇಸ್ವಾಮಿ ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *