ರೈತರ ಕೃಷಿ ಪಂಪ್ ಸೆಟ್ ಗಳಿಗೆ 5 ಗಂಟೆಗಳ ವಿದ್ಯುತ್ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬಿಳಗಿ

by | 17/10/23 | ಪ್ರತಿಭಟನೆ


ಚಿತ್ರದುರ್ಗ:
ಜಿಲ್ಲೆಯ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ 5 ಗಂಟೆಗಳ ಕಾಲ ಅನಿಯಮಿತವಾಗಿ ಯಾವುದೇ ಅಡಚಣೆ ಇಲ್ಲದೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ, ಈ ವಿಚಾರದಲ್ಲಿ ರೈತರಿಗೆ ಯಾವುದೇ ಗೊಂದಲಗಳು ಬೇಡ ಎಂಬುದಾಗಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬಿಳಗಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರದಂದು ಕೆಪಿಟಿಸಿಎಲ್ ಬೆಸ್ಕಾಂ ಅಧಿಕಾರಿಗಳು ಹಾಗೂ ರೈತ ಮುಖಂಡರ ಜೊತೆಗೆ ಸಭೆ ನಡೆಸಿ, ನಂತರ ಅವರು ಮಾತನಾಡಿದರು.
ರೈತರ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ವಿದ್ಯುತ್ ವಿತರಣೆ ಮಾಡಲಾಗುತ್ತದೆ, ಸಂಜೆ 6 ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೆ ತೋಟದ ಮನೆಗಳಿಗೆ ಸಿಂಗಲ್ ಫೀಸ್ ವಿದ್ಯುತ್ ನೀಡಲಾಗುತ್ತದೆ, ಈ ಸಮಯದಲ್ಲಿ ಕೃಷಿ ಪಂಪ್ ಸೆಟ್ ಗಳನ್ನು ಸ್ಥಗಿತಗೊಳಿಸಬೇಕು, ಬೆಳಗ್ಗೆ ನೀಡುವ 5ಗಂಟೆ ವಿದ್ಯುತ್ ನಲ್ಲಿ ಕೃಷಿ ಚಟುವಟಿಕೆ ನಡೆಸಬೇಕು ಎಂಬುದಾಗಿ ಅವರು ಹೇಳಿದರು.
ಅಲ್ಲದೆ ರೈತರ ಜಮೀನುಗಳ ವ್ಯಾಪ್ತಿಯಲ್ಲಿ ಬರುವ ವಿಫಲವಾದ ವಿದ್ಯುತ್ ಪರಿವರ್ತಕಗಳನ್ನು ನಿಗದಿತ ಅವಧಿಯಲ್ಲಿ ಬದಲಾಯಿಸಬೇಕು, 11 ಕೆವಿ ಮತ್ತು ಎಲ್.ಟಿ ಮಾರ್ಗಗಳಿಗೆ ಅಡಚಣೆಯಾಗುವ ಮರಗಿಡಗಳನ್ನು ತೆರವು ಮಾಡಬೇಕು ಎಂಬುದಾಗಿ ತಮ್ಮ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಆರ್.ಜೆ ದಿವ್ಯಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ ಬೆಸ್ಕಾಂ ನಿರ್ದೇಶಕರು ಕ್ರಮವಹಿಸಿದ್ದಾರೆ, ಇನ್ನು ಮುಂದೆ ರೈತರ ಕೃಷಿ ಪಂಪ್ ಸೆಟ್ ಗಳಿಗೆ ನಿರಂತರ 5ಗಂಟೆಗಳ ಕಾಲ ವಿದ್ಯುತ್ ವಿತರಣೆ ಆಗಲಿದೆ, ಈ ವ್ಯವಸ್ಥೆಗೆ ಎಲ್ಲರೂ ಸಹಕರಿಸಬೇಕು ಎಂಬುದಾಗಿ ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್.ಜೆ.ರಮೇಶ್, ಚಿತ್ರದುರ್ಗ ವಲಯ ಮುಖ್ಯ ಇಂಜಿನಿಯರ್ ಗೋವಿಂದಪ್ಪ, ದಾವಣಗೆರೆಯ ಅಧೀಕ್ಷಕ ಎಂಜಿನಿಯರ್ ಬಿ.ಎಸ್.ಜಗದೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *