ಬಳ್ಳಾರಿ,ನ.11
ಬೀಜ ಬಿತ್ತನೆ ಮಾಡಿ, ನಷ್ಟ ಹೊಂದಿದ ಎಲ್ಲ ರೈತರಿಗೆ ಖಂಡಿತವಾಗಿ ಬರ ಪರಿಹಾರ ನೀಡಲಾಗುವುದು, ಈ ಕುರಿತು ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಕ್ರಮವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ರೈತರಿಗೆ ಆಶ್ವಾಸನೆ ನೀಡಿದರು.
ಅವರು, ಬಳ್ಳಾರಿ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಾದ ಹಲಕುಂದಿ, ಮಿಂಚೇರಿ, ಸಂಜೀವರಾಯನಕೋಟೆಯ ಸೇರಿದಂತೆ ಹಲವು ಗ್ರಾಮಗಳಿಗೆ ಜಿಲ್ಲಾ ಮಟ್ಟದ ಅಕಾರಿಗಳ ತಂಡದೊಂದಿಗೆ ತೋಗರಿ, ಮೆಕ್ಕೆಜೋಳ, ಸಜ್ಜೆ, ರಾಗಿ ಸೇರಿದಂತೆ ಇತರೆ ಒಣಗಿರುವ ಬೆಳೆಯ ಹೊಲಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಹಲಕುಂದಿ ಗ್ರಾಮದ ರೈತ ನಂದಾ ತೊಗರಿ ಹೊಲಕ್ಕೆ ಭೇಟಿ ನೀಡಿ, ಬೆಳೆ ಪರೀಕ್ಷಿಸಿದರು. ಕಳೆದ ಒಂದೆರಡು ದಿನಗಳಿಂದ ಮಳೆ ಆಗಿದ್ದು, ಬೆಳೆ ಹಸಿರು ಇದೆ. ಈ ವೇಳೆಗೆ ತೊಗರಿ ಕಾಳು ಕಟ್ಟಬೇಕಿತ್ತು. ಬೆಳೆ ಒಣಗದೇ ಜೀವ ಹಿಡಿದು ಹಸಿರಾಗಿ ನಿಂತಿದೆ. ಈ ತೊಗರಿ ಬೆಳೆಯ ಫಸಲು ಸಿಗುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ಸಚಿವರಿಗೆ ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ 68 ಸಾವಿರ ಹೆಕ್ಟೇರ್ ಪ್ರದೇಶ ಬೆಳೆ ನಷ್ಟವಾಗಿದೆ. ಮೆಣಸಿನ ಕಾಯಿ, ಹತ್ತಿ, ಸಜ್ಜೆ, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ಒಣಗಿದೆ. ಅಲ್ಲಲ್ಲಿ ಬೆಳೆ ರೋಗ ಅಂಟಿದೆ. ಈಗಾಗಲೇ ಎನ್.ಡಿ.ಆರ್.ಎಫ್ ತಂಡವು ಭೇಟಿ ನೀಡಿದ್ದು, ಸಮೀಕ್ಷೆ ನಡೆಸಿದ್ದಾರೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ಸಚಿವರಿಗೆ ಗಮನಕ್ಕೆ ತಂದರು.
ಪ್ರತಿ ಹೆಕ್ಟರ್ ಬೆಳೆಗೆ 8 ಸಾವಿರ ನಷ್ಟ ಪರಿಹಾರ ನೀಡಲಾಗುತ್ತದೆ. ಪರಿಹಾರ ನೀಡಲು ಕೂಡಲೇ ಕ್ರಮಕೈಗೊಳ್ಳುವಂತೆ ಕೃಷಿ ಅಕಾರಿಗಳಿಗೆ ಸಚಿವ ನಾಗೇಂದ್ರ ಸೂಚನೆ ನೀಡಿದರು.
ಬೆಳೆಗಳಿಗೆ ಇನ್ಸೂರೆನ್ಸ್ ಮಾಡಿಸಿದ್ದೇವೆ. ನಷ್ಟವಾದ ಬೆಳೆಗೆ ವಿಮೆ ನೀಡಬೇಕು ಎಂದು ಸಚಿವರಲ್ಲಿ ರೈತರು ಅಳಲು ತೊಡಿಕೊಂಡರು. ಈ ಬಗ್ಗೆ ಪರಿಶೀಲಿಸುವುದಾಗಿ ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ತಹಸೀಲ್ದಾರ ಗುರುರಾಜ್, ಕೃಷಿ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.
——-
0 Comments