ರಾಜ್ಯದ ಜನ ನಿರೀಕ್ಷೆಯಿಟ್ಟು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಜನರ ಮನಸ್ಸಿಗೆ ಬೇಸರವಾಗದಂತೆ ನಡೆದುಕೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ

by | 10/10/23 | ರಾಜಕೀಯ


ಚಿತ್ರದುರ್ಗ ಅ.10 : ರಾಜ್ಯದ ಜನ ನಿರೀಕ್ಷೆಯಿಟ್ಟು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಜನರ ಮನಸ್ಸಿಗೆ ಬೇಸರವಾಗದಂತೆ ನಡೆದುಕೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತ ವಿಧಾನಸಭಾ ಚುನಾವಣಾ ಪೂರ್ವದಲ್ಲಿಯೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇವರುಗಳು ಐದು ಉಚಿತ ಗ್ಯಾರೆಂಟಿಗಳನ್ನು ಘೋಷಿಸಿದರು. ಅದರಂತೆ ಅಧಿಕಾರಕ್ಕೆ ಬಂದ ಕೂಡಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಲ್ಕು ಗ್ಯಾರೆಂಟಿಗಳನ್ನು ಈಡೇರಿಸಿದ್ದಾರೆ. ಇನ್ನೊಂದು ಗ್ಯಾರೆಂಟಿಯನ್ನು ತಲುಪಿಸುತ್ತಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಎದುರಾಗಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿರುವುದರಿಂದ ಕಾರ್ಯಕರ್ತರು ಈಗಿನಿಂದಲೆ ಸಿದ್ದರಾಗಬೇಕು ಎಂದು ಕರೆ ನೀಡಿದರು.

ಜನತೆಗೆ ಗ್ಯಾರೆಂಟಿಗಳನ್ನು ನೀಡುವುದಷ್ಟೆ ಸರ್ಕಾರದ ಕೆಲಸವಲ್ಲ. ಜನರು ನಮ್ಮ ಮೇಲೆ ಇಟ್ಟಿರುವ ಭರವಸೆಗೆ ಚ್ಯುತಿ ಬಾರದಂತೆ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗಬೇಕಿದೆ. ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹಂತ ಹಂತವಾಗಿ ಎಲ್ಲವನ್ನು ಬಗೆಹರಿಸಲಾಗುವುದು. ಜಿಲ್ಲೆಯ ಕೆಲವು ಕಡೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮಧ್ಯಕರ್ನಾಟಕದ ಬಯಲುಸೀಮೆ ಮೊದಲಿನಿಂದಲೂ ಬರಗಾಲವನ್ನು ಎದುರಿಸಿಕೊಂಡು ಬರುತ್ತಿದೆ. ಹಾಗಾಗಿ ಚಿತ್ರದುರ್ಗ ಜಿಲ್ಲೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕಾಗಿರುವುದರಿಂದ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಭರವಸೆ ಕೊಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ ಕೃಷ್ಣಭೈರೇಗೌಡರು ಈ ಹಿಂದೆಯೂ ಸಚಿವರಾಗಿದ್ದವರು. ಆದ್ದರಿಂದ ನಮ್ಮ ಜಿಲ್ಲೆಯ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ. ಚಿತ್ರದುರ್ಗ ಜಿಲ್ಲೆ ಸದಾ ಬರಪೀಡಿತ ಪ್ರದೇಶ. ಜನ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ಜನರ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡುತ್ತಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಕಾಯಕರ್ತರಲ್ಲಿ ಮನವಿ ಮಾಡಿದರು.

ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಇವರುಗಳು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಹಿರಿಯ ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ರೀಮತಿ ಗೀತನಂದಿನಿಗೌಡ, ಯುವ ಮುಖಂಡ ಜೆಜೆ.ಹಟ್ಟಿಯ ಡಾ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಯೋಗೇಶ್‍ಬಾಬು, ಸೈಯದ್ ಖುದ್ದೂಸ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ಲಾ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಮೆಹಬೂಬ್ ಖಾತೂನ್, ಕಾಂಗ್ರೆಸ್ ಕಿಸಾನ್‍ಸೆಲ್ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಪ್ಪ, ಹೆಚ್.ಶಬ್ಬೀರ್‍ಭಾಷ, ಚಾಂದ್‍ಪೀರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್, ನ್ಯಾಯವಾದಿಗಳಾದ ಸುದರ್ಶನ್, ನೂರುಲ್ಲಾ ಹಸನ್, ಬೀಸ್ನಳ್ಳಿ ಜಯಣ್ಣ, ರವೀಂದ್ರ ಸೇರಿದಂತೆ ಅಪಾರ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *