ಮುರುಘಾ ಶರಣರು ಲೈಂಗಿಕ ದೌರ್ಜನ್ಯ ಎಸಗಿದ ಸ್ಥಳ ಮಹಜರು ನಡೆಸಿದ ಪೊಲೀಸರು

by | 05/11/22 | ಕರ್ನಾಟಕ, ಕ್ರೈಂ

ಚಿತ್ರದುರ್ಗನ.5
ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಿವಮೂರ್ತಿ ಮುರುಘಾ ಶರಣರ ವಿರುದ್ಧ 2ನೇ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಈ ಸಂಬಂಧ ಪೊಲೀಸ್ ತನಿಖಾಧಿಕಾರಿಗಳು ಶನಿವಾರ ಮುರುಘಾ ಮಠಕ್ಕೆ ಸ್ಥಳ ಮಹಜರು ನಡೆಸಿದರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ವಿವಿಧ ಸ್ಥಳಗಳಲ್ಲಿ ಮಹಜರು ನಡೆಸಿ ಬಳಿಕ ಶ್ರೀಗಳನ್ನು ಕರೆದೊಯ್ಯಲಾಯಿತು.
ಕಾರಾಗೃಹದಲ್ಲಿರುವ ಶಿವಮೂರ್ತಿ ಮುರುಘಾ ಶರಣರನ್ನು ಡಿವೈಎಸ್ಪಿ ನೇತೃತ್ವದಲ್ಲಿ ಕರೆತಂದ ತನಿಖಾ ತಂಡ ಶರಣರು ಮಠದಲ್ಲಿ ವಾಸಿಸುತ್ತಿದ್ದ ಕೊಠಡಿ, ವಿದ್ಯಾರ್ಥಿಗಳು ತಂಗಿದ್ದ ಹಾಸ್ಟೆಲ್ ಸೇರಿದಂತೆ ಮತ್ತಿತರ ಕಡೆ ಮಹಜರು ನಡೆಸಿದರು. ಮೈಸೂರು ಒಡನಾಡಿ ಸಂಸ್ಥೆಯವರು ನೀಡಿದ ದೂರಿನ ಮೇರೆಗೆ ಮುರುಘಾ ಶ್ರೀಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ಮಹಜರು ಮಾಡಲಾಯಿತು.

ಬಸವ ಮಾಚಿದೇವ ಸ್ವಾಮಿಗಳು ಪೊಲೀಸರು ಮಹಜರು ನಡೆಸುತ್ತಿದ್ದ ವೇಳೆ ಮಠದ ಒಳಗೆ ಬರಲು ಪ್ರಯತ್ನಿಸಿದರು. ಆದರೆ ತನಿಖಾ ತಂಡ ಮಹಜರು ನಡೆಯುತ್ತಿರುವ ವೇಳೆ ಒಳಗೆ ಹೋಗುವುದು ಸೂಕ್ತವಲ್ಲ. ದಯವಿಟ್ಟು ತನಿಖೆಗೆ ಸಹಕಾರ ಕೊಡಬೇಕು ಬಸವ ಮಾಚಿದೇವ ಸ್ವಾಮಿಗಳಿಗೆ ಮನವಿ ಮಾಡಿದರು.
ಪುರುಷತ್ವ ಪರೀಕ್ಷೆ: ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪ ಎದುರಿಸುವ ಶಿವಮೂರ್ತಿ ಮುರುಘಾ ಶರಣರು ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಪುರುಷತ್ವ ಪರೀಕ್ಷೆ ನಡೆಸಲಾಯಿತು.
ಅಪ್ರಾಪ್ತ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ 2ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೂರ್ತಿ ಮುರುಘಾ ಶರಣರನ್ನು ಶುಕ್ರವಾರ ಜಿಲ್ಲಾ ಆಸ್ಪತ್ರೆಯ ಡಾ.ವೇಣು ಹಾಗೂ ಡಾ.ಲೀಲಾ ರಾಘವನ್‌ ನೇತೃತ್ವದ ವೈದ್ಯರ ತಂಡ ಪುರುಷತ್ವ ಪರೀಕ್ಷೆ ನಡೆಸಿತ್ತು. ಪುರುಷತ್ವ ಪರೀಕ್ಷೆಗಾಗಿ ವಿವಿಧ ಪರೀಕ್ಷೆ ನಡೆಸಿ ಕೂದಲು, ಉಗುರು ಹಾಗೂ ರಕ್ತದ ಮಾದರಿ ಸಂಗ್ರಹಿಸಿತು. ಈ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಪೊಲೀಸ್‌ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ತನಿಖಾಧಿಕಾರಿ ಬಾಲಚಂದ್ರ ನಾಯ್ಕ್‌ ನೇತೃತ್ವದ ತಂಡ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದು, ಹಲವು ವಿಷಯಗಳ ಕುರಿತು ಹೇಳಿಕೆ ಪಡೆಯಲಾಗುತ್ತಿದೆ. ಆಗಾಗ ಮೌನಕ್ಕೆ ಜಾರಿದರೂ ಆರೋಪಿಯು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಮೊದಲ ಬಾರಿಗೆ ಸೆ.3ರಂದು ಶಿವಮೂರ್ತಿ ಮುರುಘಾ ಶರಣರು 1ನೇ ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆ ಎದುರಿಸಿದ್ದರು. ಈ ವರದಿ ತನಿಖಾಧಿಕಾರಿಯ ಕೈಸೇರಿದ್ದು, ದೋಷಾರೋಪ ಪಟ್ಟಿಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.

ಆರೋಪಿಯ ಪೊಲೀಸ್‌ ಕಸ್ಟಡಿ ಅವಧಿ ಶನಿವಾರ ಅಂತ್ಯವಾಗಲಿದೆ. ಕೃತ್ಯ ನಡೆದ ಸ್ಥಳದ ಮಹಜರು ಬಾಕಿ ಇದ್ದು ಅದನ್ನು ಶನಿವಾರ ಸ್ಥಳ ಮಹಜರು ನಡೆಸಲಾಯಿತು.

ಶಿವಮೂರ್ತಿ ಮುರುಘಾ ಶರಣರನ್ನ ಪ್ರೌಢಶಾಲೆಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸೆ.1ರಂದು ಬಂಧಿಸಲಾಗಿತ್ತು. 2ನೇ ಪ್ರಕರಣದಲ್ಲಿ ತನ್ನ ಇಬ್ಬರು ಪುತ್ರಿಯರು ಹಾಗೂ ಇನ್ನಿಬ್ಬರು ವಿದ್ಯಾರ್ಥಿನಿಯರ ಮೇಲೂ ಶಿವಮೂರ್ತಿ ಮುರುಘಾ ಶರಣರು ಲೈಂಗಿಕ ದೌರ್ಜನ್ಯ ನಡೆದಿದ್ದರು ಎಂದು ಮಹಿಳೆಯೊಬ್ಬರು ಅ. 14ರಂದು ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ದೂರಿನ ಪ್ರಕರಣದಲ್ಲಿ ಸ್ಥಳ ಮಹಜರು, ಪುರುಷತ್ವ ಪರೀಕ್ಷೆ ಇತ್ಯಾದಿ ಪರೀಕ್ಷೆಗಳನ್ನು ತನಿಖಾ ತಂಡದ ಪೊಲೀಸರು ನಡೆಸುತ್ತಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *