ಮಾಸಾಶನ ಪಡೆಯುವವರು ಎನ್‍ಪಿಸಿಐ ಜೋಡಣೆ ಮಾಡಿಸಿಕೊಳ್ಳಿ- ಡಿ.ಸಿ. ದಿವ್ಯಪ್ರಭು ಮನವಿ

by | 15/10/23 | ಸುದ್ದಿ


ಚಿತ್ರದುರ್ಗ ಅ. 15
ಸಾಮಾಜಿಕ ಭದ್ರತೆಯ ವಿವಿಧ ಯೋಜನೆಗಳಡಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಅವರ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಖಾತೆಗಳಿಗೆ ನೇರವಾಗಿ ಮಾಸಾಶನ ಮೊತ್ತ ಪಾವತಿಯಾಗುವುದರಿಂದ, ಫಲಾನುಭವಿಗಳು ಕೂಡಲೆ ಬ್ಯಾಂಕ್ ಅಥವಾ ಅಂಚೆ ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಮನವಿ ಮಾಡಿದ್ದಾರೆ.
ಸರ್ಕಾರದಿಂದ ಸಾಮಾಜಿಕ ಭಧ್ರತೆಯ ವಿವಿಧ ಯೋಜನೆಗಳಾದ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಸೇರಿದಂತೆ ವಿವಿಧ ಯೋಜನೆಯಡಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ಪಿಂಚಣಿ ಮೊತ್ತವನ್ನು ಫಲಾನುಭವಿಯ ಬ್ಯಾಂಕ್ ಅಥವಾ ಅಂಚೆ ಖಾತೆಗಳಿಗೆ ಕಳೆದ ಸೆಪ್ಟಂಬರ್ ತಿಂಗಳಿನಿಂದಲೇ ನೇರ ಹಣ ಸಂದಾಯ (ಡಿಬಿಟಿ) ವ್ಯವಸ್ಥೆ ಮೂಲಕ ಪಾವತಿಸಲು ಸರ್ಕಾರ ತೀರ್ಮಾನಿಸಿರುತ್ತದೆ. ವಿವಿಧ ಯೋಜನೆಗಳ 2,75,965 ಫಲಾನುಭವಿಗಳ ಪೈಕಿ ಜಿಲ್ಲೆಯ 9653 ಫಲಾನುಭವಿಗಳು ಇದುವರೆಗೂ ಎನ್‍ಸಿಪಿಐ ಜೋಡಣೆ ಮಾಡದಿರುವುದು ಕಂಡುಬಂದಿರುತ್ತದೆ. ಇದರಲ್ಲಿ 3123 ಫಲಾನುಭವಿಗಳ ಖಾತೆ ನಿಷ್ಕ್ರಿಯವಾಗಿದ್ದರೆ, 6526 ಫಲಾನುಭವಿಗಳ ಬ್ಯಾಂಕ್ ಖಾತೆಗಳು ಇನ್ನು ಆಧಾರ್ ಜೋಡಣೆ ಆಗಿಲ್ಲ. ಹೀಗಾಗಿ ಎನ್‍ಸಿಪಿಐ ಜೋಡಣೆ ಮಾಡಿಸದಿರುವ ಫಲಾನುಭವಿಗಳ ಖಾತೆಗೆ ಸರ್ಕಾರದಿಂದ ಬರುವ ಮಾಸಿಕ ಪಿಂಚಣಿ ಅತಿ ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ. ಹೀಗಾಗಿ ಎನ್‍ಪಿಸಿಐ (ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ) ಜೋಡಣೆ ಮಾಡಿಸದಿರುವ ಫಲಾನುಭವಿಗಳು ನಿರ್ಲಕ್ಷ್ಯ ತೋರದೆ, ಕೂಡಲೆ ತಾವು ಹೊಂದಿರುವ ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಬೇಕು.
ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಒಟ್ಟು 60419 ಫಲಾನುಭವಿಗಳಿದ್ದು, 2255 ಫಲಾನುಭವಿಗಳು ಬ್ಯಾಂಕ್ ಅಥವಾ ಅಂಚೆ ಖಾತೆಗೆ ಆಧಾರ್ ಜೋಡಣೆ ಮಾಡುವುದು ಬಾಕಿ ಇದೆ. ಅದೇ ರೀತಿ ಚಿತ್ರದುರ್ಗ ತಾಲ್ಲೂಕಿನಲ್ಲಿ 56719 ಫಲಾನುಭವಿಗಳ ಪೈಕಿ 2744 ಜನ, ಹಿರಿಯೂರು ತಾಲ್ಲೂಕಿನಲ್ಲಿ 44548 ಫಲಾನುಭವಿಗಳ ಪೈಕಿ 1562, ಹೊಳಲ್ಕೆರೆ ತಾಲ್ಲೂಕಿನ 38509 ಫಲಾನುಭವಿಗಳ ಪೈಕಿ 966, ಹೊಸದುರ್ಗ ತಾಲ್ಲೂಕಿನ 54680 ಫಲಾನುಭವಿಗಳ ಪೈಕಿ 1662 ಹಾಗೂ ಮೊಳಕಾಲ್ಮೂರು ತಾಲ್ಲೂಕಿನ 21090 ಫಲಾನುಭವಿಗಳ ಪೈಕಿ 464 ಫಲಾನುಭವಿಗಳು ಬ್ಯಾಂಕ್ ಅಥವಾ ಅಂಚೆ ಖಾತೆಗಳಿಗೆ ಆಧಾರ್ ಜೋಡಣೆ ಬಾಕಿ ಇರುತ್ತದೆ. ಫಲಾನುಭವಿಗಳು ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳನ್ನು ಸಂಪರ್ಕಿಸಿ, ಎನ್‍ಪಿಸಿಐ ಮ್ಯಾಪಿಂಗ್ ಬಾಕಿ ಇರುವುದನ್ನು ಖಚಿತಪಡಿಸಿಕೊಂಡು, ಒಂದು ವೇಳೆ ಮ್ಯಾಪಿಂಗ್ ಕಾರ್ಯ ಬಾಕಿ ಇದ್ದಲ್ಲಿ, ನೇರವಾಗಿ ಫಲಾನುಭವಿಗಳೇ ತಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಥವಾ ಅಂಚೆ ಖಾತೆ ಪುಸ್ತಕದೊಂದಿಗೆ ಸಂಬಂಧಪಟ್ಟ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ನೀಡಿ ಎನ್‍ಪಿಸಿಐ ಮ್ಯಾಪಿಂಗ್ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *