ಚಳ್ಳಕೆರೆ ಸೆ.3
ತುಳಿತಕ್ಕೊಳಗಾಗಿದ್ದ ಮಾದಿಗ ಸಮುದಾಯ ಜಾಗೃತಗೊಂಡಿದೆ. ಸಮುದಾಯದಲ್ಲಿ ಇತ್ತೀಚೆಗೆ ಒಂದಿಷ್ಟು ಜಾಗೃತಿ ಮೂಡಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ, ರಾಜ್ಯ ಯೋಜನಾ ಮತ್ತು ಸಾಂಖಿಕ ಸಚಿವ ಡಿ.ಸುಧಾಕರ್ ತಿಳಿಸಿದರು.ಚಳ್ಳಕೆರೆ ನಗರದ ಅನಂತನಾಥ ಜೈನ ಭವನದಲ್ಲಿ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘ ನೇತೃತ್ವದಲ್ಲಿ ಚಳ್ಳಕೆರೆ ತಾಲ್ಲೂಕು ಮಾದಿಗ ನೌಕರರ ಸಂಘ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಮತ್ತು ನೂತನ ಸಚಿವ, ಶಾಸಕರಿಗೆ ಅಭಿನಂದಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಕಂಡ ಕನಸು ನನಸು ಮಾಡುವ ನಿಟ್ಟಿನಲ್ಲಿ ಮಾದಿಗ ಸಮಾಜ ನಡೆಯಬೇಕಿದೆ. ಮಾದಿಗ ಸಮುದಾಯ ಅನೇಕ ಸಂಕಷ್ಟಗಳನ್ನು ಎದುರಿಸಿ ಸಮಾಜದಲ್ಲಿ ತನ್ನದೇಯಾದ ಬದುಕು ರೂಪಿಸಿಕೊಳ್ಳುವ ಪ್ರಯತ್ನದಲ್ಲಿದೆ. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವ ಮೂಲಕ ಶೈಕ್ಷಣಿಕ ಪ್ರಗತಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಅಂಬೇಡ್ಕರ್‌ರವರ ಚಿಂತನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತಾವೆಲ್ಲರೂ ಸಂಘಟಿತರಾಗಿ ಅಭಿವೃದ್ದಿ ಪಥದತ್ತ ಹೆಜ್ಜೆ ಇಡಬೇಕು ಎಂದು ಸುಧಾಕರ್ ತಿಳಿಸಿದರು.
ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಈ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ನನ್ನ ಹ್ಯಾಟ್ರಿಕ್ ಗೆಲುವಿನಲ್ಲಿ ಮಾದಿಗ ಸಮಾಜದ ಬಂಧುಗಳ ಪಾತ್ರ ಹೆಚ್ಚಿದೆ. ದಲಿತರಲ್ಲಿ ಮೂಡುವ ಅಸಮಾನತೆಯನ್ನು ತೊಡೆದು ಹಾಕಬೇಕಿದೆ ಸಮುದಾಯದ ವಿಚಾರಗಳು ಬಂದಾದ ಪಕ್ಷಬೇದ ಮರೆತು ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತೇನೆ. ಯಾವುದೇ ಸಂದರ್ಭದಲ್ಲೂ ಈ ಸಮಾಜದ ಮೇಲೆ ಯಾರೂ ಸಹ ವಕ್ರದೃಷ್ಟಿಬೀರದಂತೆ ಎಚ್ಚರಿಕೆ ವಹಿಸುವೆ ಎಂದರು. ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಸಮುದಾಯದ ಎಲ್ಲಾ ಬಂಧುಗಳು ಸೇರಿ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಹಮ್ಮಿಕೊಂಡಿರುವುದು ಹೆಚ್ಚು ಸಂತಸ ತಂದಿದೆ. ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದರೆ ಮಾತ್ರ ನಿರೀಕ್ಷಿಸಿದ ಗುರಿ ಮುಟ್ಟಲು ಸಾಧ್ಯ. ಮಾದಿಗ ಸಮುದಾಯಕ್ಕೆ ಹೆಚ್ಚಿನ ನೌಕರಿಭಾಗ್ಯವಿಲ್ಲ. ಆದರೂ ಸಮುದಾಯದ ಯುವಕರು ಸಂಘಟಿತರಾಗಿ ಸಮಾಜದ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬದುಕಬೇಕು ಎಂದರು. ಮಾದಾರ ಚನ್ನಯ್ಯಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ,
ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪೂರ್ತಿತುಂಬಲು ಈ ಕಾರ್ಯಕ್ರಮ ಆಯೋಜಿಸಿದೆ. ಕಳೆದ ಬಾರಿಗಿಂತ ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಸನ್ಮಾನಿತರಾಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಬದುಕು ರೂಪಿಸಿಕೊಳ್ಳುವ ಸಂದರ್ಭದಲ್ಲಿ ಸಮಾಜಕ್ಕೆ ಅವನು ಏನು ಕೊಡುಗೆ ನೀಡಬಹುದು ಎಂಬ ಬಗ್ಗೆ ಚಿಂತನೆ ನಡೆಸಬೇಕು. ಸರ್ಕಾರ ಶೈಕ್ಷಣಿಕವಾಗಿ ಅಭಿವೃದ್ದಿಹೊಂದಲು ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗ ಪ್ರಾಮಾಣಿಕವಾಗಿ ಆಗಬೇಕು ಎಂದರು. ಕೋಡಿಹಳ್ಳಿ ಆದಿಜಾಂಬವ ಪೀಠದ ಷಡಾಕ್ಷರಿಮುನಿ ಸ್ವಾಮೀಜಿ ಮಾತನಾಡಿ, ಮಾದಿಗ ಸಮುದಾಯದ ಬಂಧುಗಳು ಶೋಷಣೆ ಮುಕ್ತರಾಗಿ ಅಭಿವೃದ್ದಿ ಪಥದತ್ತ ಹೆಜ್ಜೆ ಇಡುತ್ತಿವುದು ಸಮಾದಾನದ ಸಂಗತಿ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಮುದಾಯದ ಪರವಾಗಿ ಉತ್ತಮ ಬಾಂಧವ್ಯ ಹೊಂದಿವೆ. ಮಾದಿಗ ಸಮುದಾಯ ಇನ್ನೂ ಅತ್ಯಂತ ವಿಶಾಲವಾಗಿ ಹರಡಿದ್ದು, ಎಲ್ಲರೊಂದಿಗೆ ಸೌಹಾರ್ದತೆಯಿಂದ ಬದುಕು ನಡೆಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಡಿ.ದಯಾನಂದ ಮಾತನಾಡಿ, ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಬಂಧುಗಳು ಸೇರ್ಪಡೆಯಾಗಿದ್ದಾರೆ, ಪ್ರತಿಭಾಪುರಸ್ಕಾರ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಮತ್ತೊಮ್ಮೆ ಸಂಘಟಿತರಾಗಬೇಕೆಂಬ ಮಾಹಿತಿ ವಿನಿಯಮ ಮಾಡಿಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯದ ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಯುವುದು ಎಂದರು.
ಉಪನ್ಯಾಸಕ ಡಾ.ಬಿ.ಎಂ.ಗುರುನಾಥ, ಸಮುದಾಯ ನಡೆದುಬಂದ ದಾರಿ ಬಗ್ಗೆ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಸಚಿವ ನಾರಾಯಣಸ್ವಾಮಿ ಆಪ್ತ ಕಾರ್ಯದರ್ಶಿ ಸೋಮನಾಥ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಸಮರ್ಥರಾಯ, ನಗರಸಭಾ ಸದಸ್ಯ ಕೆ.ವೀರಭದ್ರಪ್ಪ, ಜಯಕುಮಾರ್, ನಿವೃತ್ತ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಅಧೀಕ್ಷಕ ಅಭಿಯಂತರ ಕೆ.ಜಿ.ಜಗದೀಶ್, ನಿವೃತ್ತ ಬಿಸಿಎಂ ಅಧಿಕಾರಿ ಡಿ.ಟಿ.ಜಗನ್ನಾಥ, ಪೌರಾಯುಕ್ತ ಸಿ.ಚಂದ್ರಪ್ಪ, ನಗರಸಭಾ ಸದಸ್ಯೆ ಜಯಲಕ್ಷ್ಮಿ, ಡಿ.ಟಿ.ಶ್ರೀನಿವಾಸ್, ಹನುಮಂತರಾಯ, ಎಸ್.ಬಿ.ತಿಪ್ಪೇಸ್ವಾಮಿ, ಎಚ್.ತಿಪ್ಪೇಸ್ವಾಮಿ, ದುರುಗಪ್ಪ, ಹನುಮಂತಪ್ಪ, ಹೇಮಲತಾ, ಡಿ.ನಾಗರಾಜು, ಶ್ವೇತ, ಚನ್ನಕೇಶವ, ಜೆ.ಸಿದ್ದಲಿಂಗಮ್ಮ, ಸಣ್ಣಯಲ್ಲಪ್ಪ, ಡಿ.ಟಿ.ಶ್ರೀನಿವಾಸ್, ಡಿ.ಟಿ.ಹನುಮಂತರಾಯ ಮುಂತಾದವರು ಉಪಸ್ಥಿತರಿದ್ದರು.
0 Comments