ಮಾಗಡಿ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅವರಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಸ್ಥಾಪಿಸಲು ಶ್ರಮಿಸಿದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರಿಗೆ ಭಾನುವಾರ ಜನಾಭಿನಂದನೆಯ ಗೌರವ ಸಲ್ಲಿಸಲಾಯಿತು.
ಕೆಂಪೇಗೌಡ ಸಂಘಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಸಚಿವರಿಗೆ ಪುಷ್ಪವೃಷ್ಟಿ, ಸೇಬಿನ ಬೃಹತ್ ಹಾರ ಮತ್ತು ಬೆಳ್ಳಿಯ ಗದೆಯನ್ನು ಪ್ರೀತಿಯಿಂದ ಅರ್ಪಿಸಲಾಯಿತು. ತಮ್ಮ ತವರೂರಿನ ಜನರ ಈ ಪ್ರೀತಿ-ಅಭಿಮಾನಗಳಲ್ಲಿ ಸಚಿವರು ಮಿಂದೆದ್ದರು.
ನಂತರ ಮಾತನಾಡಿದ ಸಚಿವರು, ‘ಕೆಂಪೇಗೌಡರ ಪರಂಪರೆಗೆ ಸೇರಿದವರೆಂಬ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಬೇಕು. 108 ಅಡಿ ಎತ್ತರದ ಕಂಚಿನ ಪ್ರತಿಮೆಯು ನಮ್ಮ ಶಕ್ತಿಯ ಸಂಕೇತವಾಗಿದೆ’ ಎಂದರು.
ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ನಂಬರ್ ಒನ್ ನಗರವಾಗಿದೆ. ಇದಕ್ಕೆ ಈ ನಗರವನ್ನು ಪೇಟೆಗಳ ಆಧಾರದಲ್ಲಿ ಅವರು ಕಟ್ಟಿದ್ದೇ ಕಾರಣ ಎಂದು ಅವರು ಬಣ್ಣಿಸಿದರು.
ಕೆಂಪೇಗೌಡರು ದೂರದೃಷ್ಟಿ ಉಳ್ಳವರಾಗಿದ್ದರು. ಮಾಗಡಿ ಪ್ರದೇಶ ಕೂಡ ಅವರ ಪರಂಪರೆಗೆ ಸೇರಿದೆ. ನೀವೆಲ್ಲರೂ ಅವರ ಶೌರ್ಯ, ಸಾಹಸಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ಸಚಿವರು ನುಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಪ್ರಸಾದ, ಬಸವರಾಜು, ಮುನಿರಾಜು ಮುಂತಾದವರು ಉಪಸ್ಥಿತರಿದ್ದರು.
0 Comments