ಚಿತ್ರದುರ್ಗ/ಚಳ್ಳಕೆರೆ ಆ.21:
ಇತ್ತೀಚೆಗೆ ಸುರಿದ ಹೆಚ್ಚಿನ ಮಳೆಯಿಂದ ಹಾನಿಗೊಳಗಾದ ಚಿತ್ರದುರ್ಗ ತಾಲ್ಲೂಕಿನ ಓಬಣ್ಣನಹಳ್ಳಿ, ಚಳ್ಳಕೆರೆ ನಗರ, ಚಳ್ಳಕೆರೆ ತಾಲ್ಲೂಕು ಮನಮೈನಹಟ್ಟಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಓಬಣ್ಣನಹಳ್ಳಿ ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ಹೆಚ್ಚಿನ ಮಳೆ ಸುರಿದ ಪರಿಣಾಮ ಸುಮಾರು 41 ಮನೆಗಳಿಗೆ ನೀರು ನುಗ್ಗಿದ ಘಟನೆ ವರದಿಯಾಗಿತ್ತು. ಹೆಚ್ಚಿನ ಮಳೆಯಿಂದಾಗಿ ಓಬಣ್ಣನಹಳ್ಳಿ ಗ್ರಾಮದ ಗುಡ್ಡದ ಮೇಲಿನಿಂದ ಬರುವ ಸಣ್ಣ ನೈಸರ್ಗಿಕ ಹಳ್ಳ ತುಂಬಿ ಹರಿದ ಪರಿಣಾಮವಾಗಿ ಗ್ರಾಮದ 41 ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿ 06 ಮನೆಗಳು ಭಾಗಶಃ ಹಾನಿಗೆ ಒಳಗಾಗಿರುವುದು ಹಾಗೂ ಮನೆಗಳಿಗೆ ನೀರು ನುಗ್ಗಿ ಮನೆಯ ಸಾಮಗ್ರಿಗಳು ಹಾನಿಗೀಡಾಗಿರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಳೆ ನೀರು ಸರಾಗವಾಗಿ ಹರಿದು ಹೋಗಲು ಹಳ್ಳದಲ್ಲಿ ತುಂಬಿದ ಮಣ್ಣನ್ನು ಶೀಘ್ರ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದ ನೀರು ನುಗ್ಗಿ ಹಾನಿಗೆ ಒಳಗಾಗಿರುವ ಮನೆಗಳಿಗೂ ತೆರಳಿ, ಮನೆಯವರಿಂದಲೂ ಮಾಹಿತಿ ಪಡೆದುಕೊಂಡರು. ಮಳೆಯಿಂದ ಹಲವಾರು ಮನೆಯವರ ರೇಷನ್, ಮಕ್ಕಳ ಪುಸ್ತಕಗಳು, ಸಾಮಗ್ರಿಗಳು ಹಾನಿಯಾಗಿರುವ ಬಗ್ಗೆಯೂ ಮಾಹಿತಿ ಪಡೆದು, ಹಾನಿಗೊಳಗಾದವರಿಗೆ ನಿಯಮಾನುಸಾರ ಪರಿಹಾರ ದೊರಕಿಸುವುದಾಗಿ ಹೇಳಿದ ಅವರು, ಮಳೆಯಿಂದ ಹಾನಿಗೊಳಗಾದ ಗ್ರಾಮಸ್ಥರ ಅನುಕೂಲಕ್ಕಾಗಿ ಆಹಾರ ಇಲಾಖೆಯಿಂದ ಗಾಮದಲ್ಲಿಯೇ ಕೂಡಲೆ ಪಡಿತರ ವಿತರಣೆ ಮಾಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದಲ್ಲಿ ಮಳೆಯ ನೀರು ಸರಾಗವಾಗಿ ಹರಿದುಹೋಗಲು ಇರುವ ಅಡ್ಡಿಯನ್ನೂ ನಿವಾರಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ತಹಶೀಲ್ದಾರ್ ಡಾ. ನಾಗವೇಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಚಳ್ಳಕೆರೆ ತಾಲ್ಲೂಕಿಗೆ ಭೇಟಿ: ಚಳ್ಳಕೆರೆ ತಾಲ್ಲೂಕಿನ ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಳ್ಳಕೆರೆ ತಾಲ್ಲೂಕಿನ ಮನಮೈನಹಟ್ಟಿ ಹಾಗೂ ಚಳ್ಳಕೆರೆ ನಗರದ ಪರಶುರಾಂಪುರ ರಸ್ತೆ, ಬಳ್ಳಾರಿ ರಸ್ತೆಯ ಹಾಗೂ ರಹೀಂನಗರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತ ಕ್ರಮವಹಿಸಬೇಕು, ಮನೆ ಹಾನಿ ಸಂಭವಿಸಿದ್ದಲ್ಲಿ ನಿಯಮಾನುಸಾರ ತ್ವರಿತವಾಗಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ತಹಶೀಲ್ದಾರ್ ರೆಹಾನ್ ಪಾಷಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
0 Comments