ಮತಗಟ್ಟೆಗಳಿಗೆ ಮತಪಟ್ಟಿ ವೀಕ್ಷಕರಾದ ಡಾ. ಶಮ್ಲಾ ಇಕ್ಬಾಲ್ ಭೇಟಿ : ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ಯಶಸ್ವಿಗೆ ಬಿಎಲ್‍ಒ ಗಳಿಗೆ ಕರೆ

by | 20/11/23 | ಸುದ್ದಿ

ಚಳ್ಳಕೆರೆ ನ. 20 :
ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿ, ಅರ್ಹರಿರುವವರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲೆಗೆ ಮತದಾರರ ಪಟ್ಟಿ ವೀಕ್ಷಕರಾಗಿರುವ ಡಾ. ಶಮ್ಲಾ ಇಕ್ಬಾಲ್ ಅವರು ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ಅಂಗವಾಗಿ ಸೋಮವಾರದಂದು ಜಿಲ್ಲೆಯ ವಿವಿಧೆಡೆ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಚಿತ್ರದುರ್ಗ ತಾಲ್ಲೂಕು ಸೀಬಾರ, ಚಳ್ಳಕೆರೆ ತಾಲ್ಲೂಕು ಎನ್. ಮಹದೇವಪುರ, ಚಳ್ಳಕೆರೆ ನಗರದ ಗಾಂಧಿನಗರದಲ್ಲಿನ ಮತಗಟ್ಟೆಗಳಿಗೆ ಭೇಟಿ ನೀಡಿದರು. ಮತಗಟ್ಟೆಯಲ್ಲಿ ಬಿಎಲ್‍ಒ ಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದ ಅವರು, ಪರಿಷ್ಕರಣೆ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಗ್ರಾಮಗಳಲ್ಲಿ ಮದುವೆಯಾಗಿ ಬೇರೆಡೆ ಹೋಗಿರುವ ಹೆಣ್ಣು ಮಕ್ಕಳು, ತಾವು ಹೋಗಿರುವ ಊರುಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿದ್ದಲ್ಲಿ, ಅಂತಹವುಗಳನ್ನು ಪರಿಶೀಲಿಸಬೇಕು, ಅಲ್ಲದೆ ಮರಣ ಹೊಂದಿರುವ ಮತದಾರರಿದ್ದಲ್ಲಿ, ಅಂತಹವರ ಮರಣ ಪ್ರಮಾಣ ಪತ್ರವನ್ನು ಪರಿಶೀಲಿಸಿದ ಬಳಿಕವೇ ಹೆಸರು ತೆಗೆಯಲು ಅಗತ್ಯ ಪ್ರಕ್ರಿಯೆ ಕೈಗೊಳ್ಳಬೇಕು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು 18 ವರ್ಷ ಮಾತ್ರವಲ್ಲದೆ, 17 ವರ್ಷ ಪೂರ್ಣಗೊಂಡವರನ್ನೂ ಕೂಡ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ನಮೂನೆ-06 ಪಡೆದುಕೊಳ್ಳಬೇಕು. ಪರಿಷ್ಕರಣೆ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ. ಡಿ. 09 ರವರೆಗೆ ಜರುಗುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಯಶಸ್ವಿಗೊಳಿಸಬೇಕು ಎಂದು ಡಾ. ಶಮ್ಲಾ ಇಕ್ಬಾಲ್ ಅವರು ಸೂಚನೆ ನೀಡಿದರು.
ಸಾರ್ವಜನಿಕರೊಂದಿಗೆ ಮಾತನಾಡಿದ ಡಾ. ಶಮ್ಲಾ ಇಕ್ಬಾಲ್ ಅವರು ಅರ್ಹರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಸಹಕಾರ ನೀಡಬೇಕು, ಅಲ್ಲದೆ ಬೇರೆಡೆ ವಲಸೆ ಹೋಗಿರುವವರನ್ನು ಸಂಪರ್ಕಿಸಿ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ಮಾಹಿತಿ ನೀಡಿ, ಅವರಲ್ಲಿ ಯಾರಾದರೂ ಅರ್ಹರಿದ್ದಲ್ಲಿ, ಅಂತಹವರನ್ನು ಮತದಾರರ ಪಟ್ಟಿಗೆ ಸೇರಿಸಲು ಯತ್ನಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಉಪವಿಭಾಗಾಧಿಕಾರಿ ಎಂ. ಕಾರ್ತಿಕ್, ತಹಸಿಲ್ದಾರ್‍ಗಳು, ಸಂಬಂಧಪಟ್ಟ ಮತಗಟ್ಟೆಗಳ ಬಿಎಲ್‍ಒ ಗಳು ಈ ಸಂದರ್ಭದಲ್ಲಿ ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *