ಮಕ್ಕಳ ರಕ್ಷಣಾ ನೀತಿ-2016 ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ರಚನೆ ಕಡ್ಡಾಯ – ರಾಜ್ಯ ಮಕ್ಕಳ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ

by | 12/10/23 | ಆರೋಗ್ಯ


ಚಿತ್ರದುರ್ಗ ಅ.12:
ಮಕ್ಕಳ ರಕ್ಷಣಾ ನೀತಿ-2016 ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲಾ ಹಂತದ ಅಧಿಕಾರಿಗಳು ಪ್ರಯತ್ನಿಸಬೇಕು. ಸರ್ಕಾರಿ, ಖಾಸಗಿ ಸೇರಿದಂತೆ ವಿವಿಧ ಇಲಾಖೆಗಳ ಅಡಿ ಕಾರ್ಯನಿರ್ವಹಿಸುವ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸುರಕ್ಷತಾ ಸಮಿತಿ ರಚನೆ ಮಾಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪಗ್ರತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಮಕ್ಕಳ ರಕ್ಷಣಾ ನೀತಿ ಅನುಷ್ಠಾನದ ಕಾರ್ಯಸೂಚಿಗಳನ್ನು ಈಗಾಗಲೇ ಹೊರಡಿಸಲಾಗಿದೆ. ಪ್ರತಿ ಶಾಲೆಗಳಲ್ಲೂ ಮಕ್ಕಳ ಸುರಕ್ಷತಾ ಸಮಿತಿ, ಮಕ್ಕಳ ಸಹಾಯ ಗುಂಪು ರಚನೆ ಮಾಡಬೇಕು. ಮಕ್ಕಳ ದೂರುಗಳನ್ನು ಸಲ್ಲಿಸಲು ದೂರು ಪಟ್ಟಿಗೆಗಳನ್ನು ಕಡ್ಡಾಯವಾಗಿ ಶಾಲೆಗಳಲ್ಲಿ ಇಡಬೇಕು. ಎಲ್ಲಾ ಖಾಸಗಿ ಶಾಲೆಗಳ ಪ್ರಾರಂಭಕ್ಕೂ ಮುನ್ನಾ ಆಡಳಿತ ಮಂಡಳಿಗಳು ಮಕ್ಕಳ ರಕ್ಷಣಾ ಬದ್ದತೆ ಪತ್ರಕ್ಕೆ ಸಹಿ ಹಾಕುವುದು ಕಡ್ಡಾಯವಾಗಿದೆ. ಮಕ್ಕಳ ರಕ್ಷಣಾ ಸಮಿತಿಯಿಂದ ಖಾಸಗಿ ಶಾಲೆಗಳ ಪರಿಶೀಲನೆಗೆ ತೆರಳಿದಾಗ ಸಂಪೂರ್ಣವಾಗಿ ಸಹಕಾರ ನೀಡಬೇಕು. ಆದರೆ ಜಿಲ್ಲೆಯ ಕೆಲವು ಖಾಸಗಿ ಶಾಲೆಗಳು ಮಕ್ಕಳ ರಕ್ಷಣಾ ಅಧಿಕಾರಿಗಳ ಪರಿಶೀಲನೆಗೆ ಅನುಮತಿಸದೇ ಕಾರ್ಯಚರೆಣೆಗೆ ಅಡ್ಡಿಪಡಿಸಿದ ಘಟನೆಗಳು ಕಂಡುಬಂದಿವೆ. ಇವುಗಳ ಕುರಿತು ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಕ್ತ ನಿರ್ದೇಶನವನ್ನು ಖಾಸಗಿ ಶಾಲೆಗಳಿಗೆ ನೀಡಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಪೋಕ್ಸೋ ಕಾಯ್ದೆಯ ಕುರಿತು ಜಾಗೃತಿ ಕಾರ್ಯಗಾರ ಆಯೋಜಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸುವಾಗ ಅವರ ಹಿನ್ನಲೆ ಪರಿಶೀಲಿಸಿ ನೇಮಕ ಮಾಡಿಕೊಳ್ಳಬೇಕು ಎಂದರು.
ಮೊಬೈಲ್ ಕುರಿತು ಜಾಗೃತಿ : ಶಾಲೆ ಮಕ್ಕಳು ಮೊಬೈಲ್ ಬಳಕೆ ಮಾಡುವುದು ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಬಳಕೆಯಲ್ಲಿ ಮಕ್ಕಳು ತೊಡಗಿದ್ದಾರೆ. ಇದು ವ್ಯತಿರಿಕ್ತ ಪರಿಣಾಮಗಳಿಗೂ ಕಾರಣವಾಗಬಹುದು. ಮಕ್ಕಳಿಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಬಳಕೆ ಹಾಗೂ ನಿರ್ವಹಣೆ ಕುರಿತು ಶಾಲೆಗಳಲ್ಲಿ ಜಾಗೃತಿ ಮೂಡಿಸುವಂತೆ ಡಾ.ಕೆ.ಟಿ.ತಿಪ್ಪೇಸ್ವಾಮಿ ಸೂಚನೆ ನೀಡಿದರು.
ಕೃಷಿ ಹೊಂಡ ನಿರ್ವಹಣೆಗೆ ತಾಕೀತು: ಮಕ್ಕಳ ರಕ್ಷಣೆ ದೃಷ್ಟಿಯಿಂದ ಕೃಷಿ ಹೊಂಡ, ಕಲ್ಲು ಕ್ವಾರಿ ಹಾಗೂ ಇತರ ಜಲಮೂಲಗಳ ಸುತ್ತ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಆಯೋಗ ಪ್ರಮಾಣಿಕೃತ ಕಾರ್ಯಚಾರಣೆ ವಿಧಾನಗಳನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಕೃಷಿ ಹೊಂಡದಲ್ಲಿ 328 ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ. ಇದು ತುಂಬಾ ಕಳವಳಕಾರಿ ವಿಷಯವಾಗಿದೆ. ಜಿಲ್ಲಾ ಪಂಚಾಯಿತಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಇದರ ಬಗ್ಗೆ ಗಮನ ಹರಿಸಬೇಕು. ಕೃಷಿ ಹೊಂಡಗಳ ಸುತ್ತಲೂ ಬೇಲಿ ಅಳವಡಿಸಬೇಕು. ಮಕ್ಕಳು ನೀರಿನಲ್ಲಿ ಮುಳುಗದಂತೆ ಕೃಷಿ ಹೊಂಡಗಳ ತಾಂತ್ರಿಕ ರಚನೆ ಮಾಡಬೇಕು ಎಂದು ಡಾ.ಕೆ.ಟಿ.ತಿಪ್ಪೇಸ್ವಾಮಿ ತಾಕೀತು ಮಾಡಿದರು. ಜಿಲ್ಲೆಯಲ್ಲಿ ಕೃಷಿ ಹೊಂಡ ಹಾಗೂ ಕಲ್ಲು ಕ್ವಾರಿಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿಯನ್ನು ಮಕ್ಕಳ ರಕ್ಷಣಾ ಘಟಕದಿಂದ ನೀಡಬೇಕು ಎಂದರು.
ಮಕ್ಕಳ ಸಹಾಯವಾಣಿ 1098/112 ಸಂಖ್ಯೆ ಪ್ರಚುರಪಡಿಸಿ: ಸರ್ಕಾರದಿಂದ ಮಕ್ಕಳ ರಕ್ಷಣೆಗಾಗಿ ಸಹಾಯವಾಣಿ ಸಂಖ್ಯೆ 1098/112 ಆರಂಭಿಸಲಾಗಿದೆ. ಇದನ್ನು ನೆಪ ಮಾತ್ರಕ್ಕೆ ಪ್ರಚುರ ಪಡಿಸಲಾಗುತ್ತಿದೆ. ಇದು ಬದಲಾಗಬೇಕು, ಸರ್ಕಾರಿ ಹಾಗೂ ಖಾಸಗಿ ಶಾಲೆ, ವಸತಿ ನಿಲಯಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ದೊಡ್ಡದಾಗಿ ಸಾರ್ವಜನಿಕರಿಗೆ ಗೋಚರಿಸುವಂತೆ ಸೂಕ್ತ ಸ್ಥಳದಲ್ಲಿ ಪೇಂಟ್ ಬಳಸಿ ಬರೆಸಬೇಕು. ಎಲ್ಲಾ ಸರ್ಕಾರಿ ಕಚೇರಿ ಪತ್ರಗಳ ಮೇಲು ಅಥವಾ ಕೆಳಬದಿಗಳಲ್ಲಿ ಸಹಾಯವಾಣಿ ಸಂಖ್ಯೆ 1098/112 ಸಂಖ್ಯೆ ಬರೆಯುವ ಕೆಲಸವಾಗಬೇಕು. ಗ್ರಾಮ ಪಂಚಾಯತಿ, ಸರ್ಕಾರಿ ಕಟ್ಟಡಗಳು, ಬಸ್ ನಿಲ್ದಾಣಗಳಲ್ಲಿಯೂ ಸಹಾಯವಾಣಿ ಸಂಖ್ಯೆ ಕುರಿತು ಫಲಕಗಳನ್ನು ಅಳವಡಿಸಬೇಕು. ಜಿಲ್ಲೆಗೆ ಸಂಬಂಧಿಸಿದಂತೆ ಏಪ್ರಿಲ್-2023 ರಿಂದ ಸೆಪ್ಟಂಬರ್ 2023 ವರೆಗೆ 133 ಕರೆಗಳು ಮಕ್ಕಳ ಸಹಾಯವಾಣಿಗೆ ಬಂದಿವೆ. ಇದು ಸಾಲದು, ಪ್ರತಿ ಜಿಲ್ಲೆಯಲ್ಲೂ ಪ್ರತಿ ಮಾಹೆ ಸರಾಸರಿ 300 ಕರೆಗಳು ಮಕ್ಕಳ ರಕ್ಷಣೆ ಕೋರಿ ಬರುತ್ತವೆ. ಸಹಾಯವಾಣಿ ಕುರಿತು ತೀವ್ರ ತರನಾದ ಪ್ರಚಾರ ಕೈಗೊಳ್ಳುವುದು ಅವಶ್ಯಕತೆಯಿದೆ ಎಂದರು.
ಜಿಲ್ಲಾಡಳಿತ ಕಾರ್ಯಕ್ಕೆ ಮೆಚ್ಚುಗೆ : ಚಿತ್ರದುರ್ಗ ಜಿಲ್ಲೆಯ ಮಕ್ಕಳ ರಕ್ಷಣಾ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಉಳಿದ ಜಿಲ್ಲೆಗಳಿಗೆ ಹೊಲಿಸಿದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಬಾಲ ನ್ಯಾಯ ಕಾಯ್ದೆ, ಬಾಲ್ಯ ವಿವಾಹ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗಿದೆ. ಎಲ್ಲಾ ಇಲಾಖೆಗಳ ಸಮನ್ವಯ ಕಾರ್ಯದಿಂದ ಸಂಕಷ್ಟದಲ್ಲಿರುವ ಬಹಳಷ್ಟು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಆಯೋಗದ ಅಧ್ಯಕ್ಷರು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ಸಭೆ, ನಡೆಸಿದ ಬಳಿಕ ಎಲ್ಲಾ ಅನುಷ್ಠಾನ ಇಲಾಖೆಗಳನ್ನು ಸಮನ್ವಯಗೊಳಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಜಿಲ್ಲೆಯ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಭಾಗದಲ್ಲಿ ಹೆಚ್ಚು ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ದತಿಗಳು ಕಂಡುಬರುತ್ತಿವೆ. ಇದನ್ನು ತಡೆಗಟ್ಟಲು ಕಾರ್ಯಪಡೆ ನೇಮಿಸಲಾಗಿದೆ. ಮಕ್ಕಳ ರಕ್ಷಣೆಯನ್ನು ಆದ್ಯತೆ ಮೇರೆಗೆ ಪರಿಗಣಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಇದಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೂ ಬೆಂಬಲ ವ್ಯಕ್ತವಾಗಿದೆ. ನಗರ ಹಾಗೂ ಗ್ರಾಮಗಳಲ್ಲಿ ಮಕ್ಕಳಿಗೆ ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಗರ್ಭಧಾರಣೆ ಹಂತದಲ್ಲಿ 209 ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ: ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ಇರುವ ಹೆಣ್ಣುಮಕ್ಕಳು ಗರ್ಭಧರಿಸಿರುವ ಕುರಿತು 209 ಪ್ರಕರಣಗಳು ಆರೋಗ್ಯ ಇಲಾಖೆಯಿಂದ ಗುರುತಿಸಲ್ಪಟ್ಟಿವೆ. ತಾಯಿ ಕಾರ್ಡ್ ನೀಡುವ ವೇಳೆ ಜನ್ಮದಿನಾಂಕ ಪರಿಶೀಲನೆಯಿಂದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸಂಬಂಧಪಟ್ಟವರ ಮೇಲೆ ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಪ್ರಾಪ್ತೆ ಗರ್ಭಿಣಿಯರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮುಂದೆ ಹಾಜರು ಪಡಿಸಲಾಗಿದೆ. ಪ್ರಕರಣಗಳನ್ನು ಬಾಲ ನ್ಯಾಯ ಮಂಡಳಿಗೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರೇಣುಪ್ರಸಾದ್ ಸಭೆಯಲ್ಲಿ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯಿಂದ ನೀಡುವ ಹೊರರೋಗಿ ಚೀಟಿಗಳಲ್ಲಿ “ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ” ಎನ್ನುವ ಘೋಷಣೆಯನ್ನು ಮುದ್ರಿಸುವಂತೆ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ನಿರ್ದೇಶನ ನೀಡಿದರು.
ಮಕ್ಕಳ ವಿಶೇಷ ಪೊಲೀಸ್ ಘಟಕ ಸ್ಥಾಪನೆ ಸೂಚನೆ: ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕ ಸ್ಥಾಪನೆ ಮಾಡಬೇಕು. ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತೆರೆದ ಮನೆ ಕಾರ್ಯಕ್ರಮ ಆಯೋಜಿಸಿ ಪ್ರೌಢಶಾಲಾ ಹಂತದ ಮಕ್ಕಳಿಗೆ ಪೊಲೀಸ್ ಠಾಣೆಗಳ ಕಾರ್ಯವೈಖರಿ ಬಗ್ಗೆ ತಿಳಿಸಿಕೊಡಬೇಕು. ಗ್ರಾಮ ಪಂಚಾಯತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗಳಿಗೆ ಬೀಟ್ ಪೊಲೀಸರು ನೇಮಿಸಬೇಕು. ಗ್ರಾಮ ಪಂಚಾಯಿತಿಯಲ್ಲಿ ವಿಶೇಷವಾಗಿ ಆಯೋಜಿಸುವ ಮಕ್ಕಳ ಗ್ರಾಮ ಸಭೆಗೆ ಪೊಲೀಸರು ತಪ್ಪದೇ ಪಾಲ್ಗೊಳ್ಳಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ ಆರೊಗ್ಯ ಇಲಾಖೆಯಿಂದ ಗುರುತಿಸಲ್ಪಟ್ಟ ಪ್ರಕರಣಗಳು ಸೇರಿ ಪೊಲೀಸ್ ಇಲಾಖೆಯಲ್ಲಿ 269 ಬಾಲ್ಯವಿವಾಹ ಪ್ರಕರಣ ದಾಖಲಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ 94 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1 ಪ್ರಕರಣ ಸುಳ್ಳು ಎಂದು ಕಂಡು ಬಂದಿದೆ. 6 ಪ್ರಕರಣಗಳಲ್ಲಿ ಶೂನ್ಯ ಎಫ್.ಐ.ಆರ್ ಆಗಿದ್ದು, ಸಂಬಂಧಪಟ್ಟ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. ಒಟ್ಟು 87 ಪೋಕ್ಸೋ ಪ್ರಕರಣಗಳಲ್ಲಿ 29 ತನಿಖಾ ಹಂತ, 57 ವಿಚಾರಣೆ ಹಂತದಲ್ಲಿವೆ. 1 ಪ್ರಕರಣದಲ್ಲಿ ಖುಲಾಸೆಯಾಗಿದೆ. ಐಪಿಸಿ 363 ಅಡಿ 83 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 40 ಸುಳ್ಳು ಪ್ರಕರಣಗಳಿವೆ. 1 ಪ್ರಕರಣ ಬೇರೆ ಜಿಲ್ಲೆಗೆ ವರ್ಗಾಹಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಜೆ.ಕುಮಾರಸ್ವಾಮಿ ಸಭೆಯಲ್ಲಿ ಮಾಹಿತಿ ನೀಡಿದರು.
ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗಿರುವ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿ ಕುರಿತು ಡಾ.ಕೆ.ಟಿ.ತಿಪ್ಪೇಸ್ವಾಮಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಪ್ರಾಯೋಜಕತ್ವ ಯೋಜನೆ ಫಲಾನುಭವಿಗಳು ಗುರುತಿಸಿ: ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಏಕ ಪಾಲಕ, ಪೋಷಕರನ್ನು ಕಳೆದುಕೊಂಡ ಹಾಗೂ ಪೋಷಕರು ಜೈಲು ಪಾಲದ ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆಯಡಿ ಪ್ರತಿ ಮಾಹೆ ರೂ.4000 ಸಹಾಯ ಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೇವಲ 140 ಫಲಾನುಭವಿಗಳು ಇದ್ದಾರೆ. ಇನ್ನೂ ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಲಾಭ ತಲುಪಿಸುವ ಕೆಲಸವಾಗಬೇಕು ಎಂದು ಡಾ,ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದರು.
ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಘಟಕದಿಂದ 63 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟಲಾಗಿದೆ. 30 ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲಾಗಿದೆ. ವಿಶೇಷ ಪಾಲನೆ ಯೋಜನೆಯಡಿ 350 ಮಕ್ಕಳಿಗೆ ಪ್ರತಿ ಮಾಹೆ ರೂ.1000, 18 ವರ್ಷ ತುಂಬಿದ ಮಕ್ಕಳ ಪಾಲನಾ ಸಂಸ್ಥೆಗಳಿಂದ ತೆರಳಿದ 2 ಫಲನಾಭವಿಗಳಿಗೆ ಉಪಕಾರ ಯೋಜನೆಯಡಿ ಪ್ರತಿ ಮಾಹೆ ರೂ.5000 ಸಹಾಯಧನ ನೀಡಲಾಗುತ್ತಿದೆ. ಕೋವಿಡ್‍ನಿಂದ ಪೋಷಕರನ್ನು ಕಳೆದು ಕೊಂಡ 3 ಮಕ್ಕಳಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಪ್ರತಿ ಮಾಹೆ ರೂ.3500 ಧನ ಸಹಾಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ 140 ಮಕ್ಕಳು ಆಶ್ರಯ ಪಡೆದಿದ್ದಾರೆ. ಪೋಕ್ಸೋ ಕಾಯ್ದೆಯಡಿ ಬಾದಿತವಾದ 5 ಮ್ಕಕಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ರೂ.16,50,500 ಪರಿಹಾರ ಧನ ನೀಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಾಧಿಕಾರಿ ಸವಿತಾ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣಧಿಕಾರಿ ಸುಬ್ರಾನಾಯ್ಕ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *