ಬೆಂಗಳೂರು ಸೆ.19. ಬೆಂಗಳೂರು ಸುತ್ತಮುತ್ತಲು ಸುಮಾರು 75000 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. 5-6 ಸಾವಿರ ಎಕರೆ ತಂಗುದಾಣಗಳ ಭೂಮಿಯನ್ನು ಕಾನೂನು ಬಾಹಿರವಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂಬ ವಿಚಾರವನ್ನು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಲ್ಯಾಂಡ್ ಆಡಿಟಿಂಗ್ ವಿಚಾರವಾಗಿ ಕ್ರಮವಹಿಸಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಮಾಜಿ ಎಂಎಲ್‌ಸಿ ರಮೇಶ್ ಬಾಬು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಸಮಸ್ಯೆಯ ತೀವ್ರತೆಯನ್ನು ಅವರು ಪತ್ರದಲ್ಲಿ ವಿವರಿಸಿದ್ದರು. ಅಲ್ಲದೆ, ಬೆಂಗಳೂರು ಮತ್ತು ಸುತ್ತಮುತ್ತ ಭೂಮಿಯ ಬೆಲೆ ಏರಿಕೆ ಆಗಿರುವುದರಿಂದ ಸ್ವಂತ ಲಾಭಕ್ಕೋಸ್ಕರ ಕೆಲವರು ಅಕ್ರಮ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪತ್ರದಲ್ಲಿ ರಮೇಶ್ ಬಾಬು ಉಲ್ಲೇಖಿಸಿದ್ದರು. ಈಗ ಈ ಪತ್ರದ ಆಧಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕ್ರಮ ವಹಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಸೂಚನೆ ನೀಡಿ ಸಿಎಂ ಬರೆದ ಪತ್ರದಲ್ಲಿ ಏನಿದೆ?
ಬೆಂಗಳೂರು ಮತ್ತು ಸುತ್ತಮುತ್ತ ಭೂಮಿಯ ಬೆಲೆ ಬಹಳಷ್ಟು ಏರಿಕೆಯಾಗಿದೆ. ವಾಣಿಜ್ಯ ಉದ್ದೇಶಗಳಿಗಾಗಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ಅಕ್ರಮ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಲಾಗುತ್ತಿದೆ. ನಗರದ ಸುತ್ತಮುತ್ತ ಒಂದು ನೂರು ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಿತವಾಗಿರುವ ರೆಸಾರ್ಟ್ ಮತ್ತು ಅತಿಥಿ ತಂಗುದಾಣಗಳು ಸಹ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ದೂರುಗಳು ದಾಖಲಾಗಿರುತ್ತವೆ.
ನಗರದ ಸುತ್ತಮುತ್ತ ಸುಮಾರು 75000 ಎಕರೆ ಭೂಮಿ ಒತ್ತುವರಿಯಾಗಿದೆ. ತಂಗುದಾಣಗಳು 5-6 ಸಾವಿರ ಎಕರೆ ಭೂಮಿ ಕಾನೂನು ಬಾಹಿರವಾಗಿ ಸ್ವಾಧೀನ ಪಡೆದಿರುವ ಮಾಹಿತಿ ಇದೆ. ಮಾಹಿತಿ ಅಂಕಿ – ಅಂಶಗಳ ಮೂಲಕ ಬಹಿರಂಗವಾಗಿರುವುದಾಗಿ ತಿಳಿಸಲಾಗಿದೆ.
ಸಾರ್ವಜನಿಕ ಹಿತದೃಷ್ಟಿ ಹಾಗೂ ಸರ್ಕಾರದ ಸಂಪನ್ಮೂಲ ಕ್ರೋಢೀಕರಣ ದೃಷ್ಟಿಯಿಂದ ತಂಗುದಾಣಗಳ ಅಕ್ರಮ ಭೂಮಿ ಸ್ವಾಧೀನ ಕುರಿತು ಲ್ಯಾಂಡ್ ಆಡಿಟಿಂಗ್ ಮಾಡಬೇಕು. ಈ ಬಗ್ಗೆ ಮಾಜಿ ಎಂಎಲ್‌ಸಿ ರಮೇಶ್ ಬಾಬು ಕೋರಿಕೆ ಸಲ್ಲಿಸಿದ್ದು, ಅಗತ್ಯ ಕ್ರಮವಹಿಸಿ ಎಂದು ಸಿಎಂ ನೀಡಿದ್ದಾರೆ.
0 Comments