ಬರ ನಿರ್ವಹಣೆ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು

by | 16/11/23 | ಸುದ್ದಿ


ಚಿತ್ರದುರ್ಗ ನ.16:
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಬರುವ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಬಹುದಾದ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ, ಮುಂದಿನ ಆರು ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಿಯಾ ಯೋಜನೆ ತಯಾರಿಸಿ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಬರದ ಹಿನ್ನಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಕೃಷಿ ಕೈಗಾರಿಕೆಗಳಿಗೆ ನೀರು, ಬೆಳೆ ಹಾನಿ, ಜನರ ಉದ್ಯೋಗ ಸ್ಥಿತಿ, ಬರ ಪರಿಹಾರ ವಿತರಣೆ ಮುಂತಾದ ಬರ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಗ್ರಾಮ ಪಂಚಾಯಿತಿವಾರು ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆಯಾತ್ಮಕ ಗ್ರಾಮಗಳು, ಜನವರಿ ಹಾಗೂ ಫೆಬ್ರವರಿ, ಮಾರ್ಚ್-ಏಪ್ರಿಲ್ ಮಾಹೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಹುದಾಂತಹ ಗ್ರಾಮಗಳನ್ನು ಗುರುತಿಸಿ, ಮುಂಜಾಗ್ರತಾ ಕ್ರಮವಾಗಿ ಬರ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಮಳೆಯ ಕೊರತೆ ಕಾರಣ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಯೋಜನೆ ರೂಪಿಸಬೇಕು. ತೀವ್ರ ಸಮಸ್ಯೆ ಉಂಟಾದಾಗ ಸಿದ್ಧತೆ ಮಾಡಿಕೊಳ್ಳಲು ಸಮಯ ವ್ಯರ್ಥ ಮಾಡುವುದು ಸರಿಯಲ್ಲ, ಅದರ ಬದಲಿಗೆ ಮುಂಜಾಗ್ರತಾ ಕ್ರಮವಾಗಿ ಈಗಲೇ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ತಕ್ಷಣ ಕೊಳವೆಬಾವಿ ಅವಶ್ಯಕತೆ ಇದ್ದರೆ ತಕ್ಷಣ ಕೊರೆಸಬೇಕು. ಎಲ್ಲೆಲ್ಲಿ ಕೊಳವೆಬಾಯಿ ಕೊರೆಸಬೇಕು ಎಂಬ ಮಾಹಿತಿ ತಹಶೀಲ್ದಾರ್‍ಗಳ ಬಳಿ ಇರಬೇಕು. ಸಮಸ್ಯಾತ್ಮಕ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲು ಈಗಲೇ ಪಾಯಿಂಟ್ ಮಾಡಿಕೊಳ್ಳಬೇಕು. ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ, ಜಲಜೀವನ್ ಮಿಷನ್, ಗ್ರಾಮ ಪಂಚಾಯಿತಿ 15ನೇ ಹಣಕಾಸು ಯೋಜನೆಯಡಿ ಅನುದಾನ ಬಳಸಿಕೊಂಡು ಕೊಳವೆ ಬಾವಿ ಕೊರೆಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಜಿಲ್ಲೆಯ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ಬರ ಹಿನ್ನಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಆರ್.ಓ ಘಟಕ ಸರಿಪಡಿಸಿ: ಜಿಲ್ಲೆಯಲ್ಲಿ ದುರಸ್ಥಿಯಲ್ಲಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಗೆ, ತಾ.ಪಂ ಇಒ ಹಾಗೂ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಜನರು ಆರ್.ಓ. ಘಟಕದ ನೀರನ್ನು ಬಳಸುತ್ತಿದ್ದಾರೆ. ಆರ್.ಓ. ಘಟಕ ಸರಿಯಾಗಿ ಕಾರ್ಯಾರಂಭ ಮಾಡದಿದ್ದರೆ ಹೇಗೆ? ಸಂಬಂಧಪಟ್ಟ ಏಜೆನ್ಸಿ ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ದುರಸ್ಥಿಯಲ್ಲಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶೀಘ್ರವೇ ಸರಿಪಡಿಸಬೇಕು ಎಂದು ಹೇಳಿದರು.
15 ದಿನಗಳಿಗೊಮ್ಮೆ ನೀರಿನ ಪರೀಕ್ಷೆ ನಡೆಸಿ: ಪ್ರತಿ 15 ದಿನಗಳಿಗೊಮ್ಮೆ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಒಳಪಡಿಸಬೇಕು. ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ನೀರಿನ ಪರೀಕ್ಷೆಯ ವರದಿ ಇಟ್ಟುಕೊಳ್ಳಬೇಕು. ಆರೋಗ್ಯ ಇಲಾಖೆ ವತಿಯಿಂದ ಮೈಕ್ರೋ ಬಯೋಲಾಜಿ ಟೆಸ್ಟ್ ಹಾಗೂ ಗ್ರಾಮೀಣ ಕುಡಿಯುವ ಸರಬರಾಜು ಇಲಾಖೆ ವತಿಯಿಂದ ಕೆಮಿಕಲ್ ಟೆಸ್ಟ್ ಮಾಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಮೇವು ಲಭ್ಯತೆ ನಿಖರ ಮಾಹಿತಿ ನೀಡಿ: ಜಿಲ್ಲೆಯಲ್ಲಿ ಮೇವು ಲಭ್ಯತೆಯ ನಿಖರ ಮಾಹಿತಿಯನ್ನು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ನೀಡಬೇಕು. ಅಧಿಕಾರಿಗಳು ಕೊಡುವ ವರದಿ ಬಹಳ ಮುಖ್ಯವಾಗಿದ್ದು, ಇದರಿಂದ ಬರ ಪರಿಹಾರ ಕಾರ್ಯಕೈಗೊಳ್ಳಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸದ್ಯದ ಮೇವಿನ ಸ್ಥಿತಿಗತಿ ಹಾಗೂ ಮುಂದಿನ 90 ದಿನಗಳಿಗೆ ಎಷ್ಟು ಮೇವು ಬೇಕಾಗಬಹುದು ಎಂದು ಮಾಹಿತಿ ನೀಡಬೇಕು ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಬೇಡಿಕೆಗನುಗುಣವಾಗಿ ಗೋಶಾಲೆ ತೆರೆಯಲು ಬೇಕಾಗಿರುವ ಜಾಗ, ಕುಡಿಯುವ ನೀರು, ಮೇವು ಸೇರಿದಂತೆ ಅಗತ್ಯ ಮೂಲಸೌಕರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಾಬ್‍ಕಾರ್ಡ್ ಮೇಳ ಆಯೋಜಿಸಿ: ಜಿಲ್ಲೆಯ ಜನರ ವಲಸೆ ತಪ್ಪಿಸುವ ನಿಟ್ಟಿನಲ್ಲಿ ನರೇಗಾದಲ್ಲಿ ಉದ್ಯೋಗ ನೀಡುವುದು ಬಹಳ ಮುಖ್ಯವಾಗಿದ್ದು, ಅರ್ಹ ಫಲಾನುಭವಿಗಳನ್ನು ನೋಂದಣಿ ಮಾಡಿಸಬೇಕು. ಈ ನಿಟ್ಟಿನಲ್ಲಿ ಜಾಬ್‍ಕಾರ್ಡ್ ಮೇಳ ಆಯೋಜಿಸಬೇಕು ಎಂದು ಜಿಲ್ಲಾಕಾರಿಗಳು ತಿಳಿಸಿದರು.
ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಜನರು ವಲಸೆ ಹೋಗುತ್ತಿರುವುದು ಗಮನಕ್ಕೆ ಬಂದಿದ್ದು, ವಿಶೇಷವಾಗಿ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಜನರನ್ನು ಜಾಬ್‍ಕಾರ್ಡ್‍ಗೆ ನೋಂದಣಿ ಮಾಡಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಜನರು ವಲಸೆ ಹೋಗುವುದು ತಪ್ಪಲಿದೆ. ಈ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಬಾಬುರತ್ನ, ಸೇರಿದಂತೆ ತಹಶೀಲ್ದಾರ್‍ಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *