ಬಬ್ಬೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ರಸ್ತೆಯ ವಿವಾದಬಗೆಹರಿಸಲು ಚಂದ್ರಾಲೇಔಟ್ ನಾಗರಿಕರಮನವಿ

by | 12/12/22 | ಸುದ್ದಿ

ಹಿರಿಯೂರು :
ನಗರದ 3 ನೇ ವಾರ್ಡ್ ಗೆ ಸೇರಿದಂತೆ ವೇದಾವತಿ ನಗರದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಚಂದ್ರಾ ಲೇ ಔಟ್ ಪಾಂಡುರಂಗಪ್ಪ ಲೇ ಔಟ್,ಶಿವಶಂಕರಪ್ಪ ಲೇ ಔಟ್ ಮೂಲಕ ಬಬ್ಬೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪಾರಂಪರಿಕ ಹಳೆಯ ರಸ್ತೆಯನ್ನು ಕಳೆದ 3 ವರ್ಷಗಳಿಂದ ಬಬ್ಬೂರು ಸರ್ವೇ ನಂಬರ್ 39 ಮತ್ತು 40 ರ ನಡುವೆ ತಡೆ ಹಿಡಿಯಲಾಗಿದೆ ಎಂಬುದಾಗಿ ಚಂದ್ರಾ ಲೇ ಔಟ್ ನಾಗರಿಕರು ಆಪಾದಿಸಿದ್ದಾರೆ.
ಈ ಹಿಂದೆ ಎಲ್ಲಾ ಕಾಲಕ್ಕೂ ಬಂಡಿದಾರಿ ಇರುವ ಬಗ್ಗೆ ಅಡ್ಡಿ ಪಡಿಸಿರುವ ಉಭಯ ಪಕ್ಷಗಾರರು ಒಪ್ಪಿಕೊಳ್ಳುತ್ತಾರೆ, ಆದಾಗ್ಯೂ ಅಳತೆ ಮಾಡಿಸಿ ರಸ್ತೆ ಗಡಿ ಗುರುತು ಮಾಡುವಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ರಸ್ತೆ ಬಂದ್ ಮಾಡಲಾಗಿದೆ, ಇಂತಹ ಸಂದರ್ಭದಲ್ಲಿ ಉಭಯ ಪಕ್ಷಗಾರರಿಗೆ ನೋಟೀಸು ಜಾರಿ ಮಾಡಿ ಅವರ ಪರವಾದ ದಾಖಲೆ ಮತ್ತು ಹೇಳಿಕೆ ಪಡೆದು, ಉಭಯತ್ರರು ದಾರಿ ಬಿಡಲು ಒಪ್ಪದೇ ಇದ್ದಾಗ ಎಸ್ಟಿಮೆಂಟ್ ಆಕ್ಟ್ ಪ್ರಕಾರ ರಸ್ತೆ ಬಿಡಿಸಿಕೊಡಲು ಕಾನೂನಿನಲ್ಲಿ ಅವಕಾಶ ಇದ್ದಾಗ್ಯೂ, ಇಲ್ಲಿಯತನಕ ಯಾವ ಅಧಿಕಾರಿಗಳಿಗೂ ರಸ್ತೆ ಬಿಡಿಸಿಕೊಡಲು ಸಾಧ್ಯವಾಗಿಲ್ಲ.
ಈ ಭಾಗದ ಜನ ಜಾನುವಾರುಗಳು ಕೂಲಿ ಕಾರ್ಮಿಕರು,ಕಚೇರಿಗೆ ತೆರಳುವ ನೌಕರರು,ಅಂಗವಿಕಲರು,ವಯೋವೃದ್ಧರು, ಮಹಿಳೆಯರು,ಶಾಲಾ ಮಕ್ಕಳು ತಗ್ಗು ಗುಂಡಿಗಳಲ್ಲಿ ಬಿದ್ದು ಅಪಾಯ ಕೂಡ ಮಾಡಿ ಕೊಂಡಿರುತ್ತಾರೆ.ನಮಗೆ ಯಾವುದೇ ದಿಕ್ಕಿನಿಂದಲೂ ಸರಿಯಾದ ಶಾಶ್ವತ ರಸ್ತೆ ಸಂಪರ್ಕ ಇರುವುದಿಲ್ಲ,ಮಳೆಗಾಲದಲ್ಲಿ ಇಲ್ಲಿನ ನಾಗರಿಕರು ಕೆಸರುಗದ್ದೆ ಕೊಚ್ಚೆ ಗುಂಡಿಗಳಲ್ಲಿ ಸುತ್ತಿ ಬಳಸಿ ಅರ್ಧ ಕಿಲೋ ಮೀಟರ್ ನಲ್ಲಿ ಸಿಗುವ ಮುಖ್ಯ ರಸ್ತೆ ತಲುಪಲು 2 ಕಿಲೋ ಮೀಟರ್ ಚಲಿಸಿ ಹರಸಾಹಸ ಮಾಡಿ ತಮ್ಮ ಕೆಲಸ ಕಾರ್ಯಗಳಿಗೆ ಹೋಗಬೇಕಾಗಿದೆ.
ಅಲ್ಲದೆ ಈ ದಾರಿಯನ್ನು ಅಡ್ಡಿ ಪಡಿಸಿರುವ ಸ್ಥಳದಲ್ಲಿ ಮಳೆಗಾಲ ಸೇರಿದಂತೆ ಎಲ್ಲಾ ಕಾಲದಲ್ಲಿ ಕೊಳಚೆ ನೀರು ನಿಂತು ಹಂದಿ ಮತ್ತು ಸೊಳ್ಳೆಗಳ ಆಶ್ರಯ ತಾಣವಾಗಿ ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಸ್ವಂತ ವಾಹನ ಇಲ್ಲದೆ ಕಾಲ್ನಡಿಗೆಯಲ್ಲಿ ಓಡಾಡುವ ನಾಗರಿಕರು ಕಲ್ಲು ಮುಳ್ಳು,ಹಾವು ಚೇಳು,ವಿಷ ಜಂತುಗಳ ನಡುವೆ ಜೀವದ ಹಂಗು ತೊರೆದು ತಗ್ಗು ಗುಂಡಿ,ಕೊಳಚೆ ದಾಟಿ ನಗರಕ್ಕೆ ಹೋಗುವ ಮುಖ್ಯ ರಸ್ತೆಯನ್ನು ತಲುಪಬೇಕಾಗಿದೆ.
ಈಗಾಗಲೆ ಜಗತ್ತಿನಾದ್ಯಂತ ಕೋವಿಡ್ ಸಾಂಕ್ರಾಮಿಕ ಸಂಕಷ್ಟ ಸ್ವಚ್ಛತೆ ಪಾಠ ಕಲಿಸಿದ್ದರೂ ಕೂಡ,ಇಲ್ಲಿ ಮಾತ್ರ ನಮ್ಮ ಗೋಳು ಕೇಳುವವರು ಇಲ್ಲವಾಗಿದೆ. ಸ್ವಚ್ಛ ಭಾರತ್ ಯೋಜನೆ ಘೋಷಣೆಯಾಗಿ ಉಳಿದಿದೆ. ಈ ಭಾಗದಲ್ಲಿ ಒಳ ಚರಂಡಿ ಸಿ ಸಿ ರಸ್ತೆ ಬಾಕ್ಷ್ ಚರಂಡಿ ಬೀದಿ ಲೈಟ್ ಮುಂತಾದ ಮೂಲಭೂತ ಸೌಕರ್ಯ ಕೂಡ ಇರುವುದಿಲ್ಲ.ರಾತ್ರಿ ಸಮಯದಲ್ಲಿ ಗರ್ಭಿಣಿ,ಬಾಣಂತಿ ಮಕ್ಕಳು ವಯೋವೃದ್ಧರು ತುರ್ತು ಚಿಕಿತ್ಸೆಗೆ ಹೋಗಿ ಬರಲು ಆಟೋರಿಕ್ಷಾ ಆಂಬುಲೆನ್ಸ್ ಕೂಡಾ ಮನೆ ಹತ್ತಿರ ಬರಲು ಸಾಧ್ಯವಿಲ್ಲ.
ಆದಪ್ರಯುಕ್ತ ಸಂಬಂಧಪಟ್ಟ ಅಧಿಕಾರಿಗಳು ದಯಮಾಡಿ ರಸ್ತೆ ಅಡ್ಡಿ ಪಡಿಸಿರುವ ಉಭಯ ಪಕ್ಷಗಾರರ ನಡುವೆ ರಾಜೀ ಸಂಧಾನ ಏರ್ಪಡಿಸಿ ಇಲ್ಲವೇ ತಾತ್ಕಾಲಿಕವಾಗಿ ಓಡಾಡಲು ಅನುಕೂಲ ಆಗುವಂತೆ ಚರಂಡಿ ನೀರನ್ನು ಒಂದು ಕಡೆ ಹರಿಯುವಂತೆ ಮಾಡಿ ಸೀಮೆ ಜಾಲಿ ಪಾರ್ಥೇನಿಯಂ ಗಿಡ ತೆಗಿಸಿ ಮೇಲ್ಕಂಡ ಪಾರಂಪರಿಕ ರಸ್ತೆಯನ್ನು ಬಿಡಿಸಿಕೊಟ್ಟು ರಸ್ತೆ ಅಭಿವೃದ್ಧಿ ಪಡಿಸಿಕೊಡಬೇಕೆಂದು ಚಂದ್ರಾ ಲೇ ಔಟ್ ನಾಗರಿಕರ ಹಿತರಕ್ಷಣಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ,ತಹಶೀಲ್ದಾರ್,ಮತ್ತು ಪೌರಾಯುಕ್ತರಿಗೆ ಆಗ್ರಹ ಪೂರ್ವಕ ಒತ್ತಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಡಾವಣೆ ನಿವಾಸಿಗಳಾದ ಸಂತೋಷ ರಾಥೋಡ್,ಸಿ ಜಿ ಗೌಡ, ಎಸ್ ಕೆ ಸ್ವಾಮಿ, ಜಾಫರ್,ಸನಾವುಲ್ಲಾ,ಶ್ರೀನಿವಾಸ್, ರಂಗಸ್ವಾಮಿ, ರಂಗನಾಥ, ಗೋವರ್ಧನ್, ಪರಮೇಶ್ವರಪ್ಪ, ಜಕ್ತರ್ ಸಿಂಗ್, ರಾಘವೇಂದ್ರ, ತಿಪ್ಪೇಸ್ವಾಮಿ, ಅಶ್ವಥ್, ಚನ್ನಪ್ಪ ಇತರರು ಉಪಸ್ಥಿತರಿದ್ಧರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *