ಚಿತ್ರದುರ್ಗ. ಸೆ.02:
ಬಾಲ್ಯವಿವಾಹ ಪಿಡುಗು ಬಹಳ ಗಂಭೀರವಾದ ವಿಷಯವಾಗಿದ್ದು, ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೇ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಿದ್ದು, ನಂ.1 ಸ್ಥಾನ ಪಡೆದಿದೆ. ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಜಾಗೃತಿ ಶಿಬಿರಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಖಾತೆ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾದ ಹಿನ್ನಲೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲು ಜಿಲ್ಲೆಗೆ ಆಗಮಿಸಿದ್ದೇನೆ. ಜಿಲ್ಲೆಯಲ್ಲಿ ಹೆಚ್ಚಿದ ಬಾಲ್ಯ ವಿವಾಹ ತಡೆಗೆ ಕೈಗೊಂಡ ಕ್ರಮಗಳೇನು? ಯಾವ ಕ್ರಮಗಳು ಕೈಗೊಂಡರೆ ಬಾಲ್ಯವಿವಾಹ ತಡೆಯಲು ಸಾಧ್ಯವಿದೆ? ಅಧಿಕಾರಿಗಳ ಕಾರ್ಯವೈಖರಿ ಏನು? ತಪ್ಪಿತಸ್ಥ ಎಷ್ಟು ಜನರಿಗೆ ಶಿಕ್ಷೆಯಾಗಿದೆ ಎಂದು ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ, ಈಗಾಗಲೇ ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಶಿಬಿರ ನಡೆಸಿ ಅರಿವು ಮೂಡಿಸಲಾಗುತ್ತಿದೆ. ಬಾಲ್ಯವಿವಾಹ ನಿಷೇಧ ಅಧಿಕಾರಿಗಳಿಗೂ ಈ ಕುರಿತು ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 87 ದೂರುಗಳು ಬಂದಿದ್ದು, 42 ಪ್ರಕರಣಗಳನ್ನು ತಡೆಯಲಾಗಿದ್ದು, 41 ಬಾಲ್ಯ ವಿವಾಹ ಪ್ರಕರಣಗಳು ನಡೆದಿವೆ, ಈ ಪ್ರಕರಣಗಳಿಗೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ತಾಯಂದಿರ ಮರಣ ಪ್ರಮಾಣ ಒಂದು ಲಕ್ಷ ಜೀವಂತ ಜನನಕ್ಕೆ 83.29 ಇರುವುದು ಕಳವಳಕಾರಿಯಾಗಿದೆ. ತಾಯಂದಿರ ಮರಣ ರಾಜ್ಯ ಪ್ರಮಾಣ ಸರಾಸರಿ 69 ರಷ್ಟಿದೆ. ಸಾಂಸ್ಥಿಕ ಹೆರಿಗೆಯ ನಂತರೂ ಬಾಣಂತಿಯರು ಸಾವನ್ನಪ್ಪುತ್ತಿರುವುದು ಏಕೆ? ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಹೆರಿಗೆ ನಂತರ ಬಾಣಂತಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲವೇ? ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಅವರನ್ನು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಜುಲೈವರೆಗೆ 5 ಬಾಣಂತಿಯರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ 21 ರಿಂದ 24 ವಯೋಮಾನದವರಾಗಿದ್ದು, ಆಸ್ಪತ್ರೆಯಲ್ಲಿ ಹೆರಿಗೆ ಆದ ಮೇಲೆ ಮನೆಗೆ ತೆರಳಿದ ನಂತರ ಸಾವನ್ನಪ್ಪಿದ್ದಾರೆ ಎಂದು ಡಾ.ಅಭಿನವ್ ತಿಳಿಸಿದರು.
ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಒಂದು ಸಾವಿರ ಜೀವಂತ ಜನನಕ್ಕೆ 13 ಇದೆ. ರಾಜ್ಯದ ಶಿಶು ಪ್ರಮಾಣ ಸರಾಸರಿ 19 ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯ ಶಿಶು ಪ್ರಮಾಣ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ.ಟಿ.ವೆಂಕಟೇಶ್ ಸಚಿವರ ಗಮನಕ್ಕೆ ತಂದರು.
ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ಅಸಮಾಧಾನ:
ಜಿಲ್ಲೆಯ ಮಹಿಳಾ ಸಾಕ್ಷರತಾ ಪ್ರಮಾಣ ಶೇ.65 ರಷ್ಟಿದೆ. ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 21ನೇ ಸ್ಥಾನಕ್ಕೆ ಕುಸಿದಿದೆ ಎಂದು ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಉಸ್ತುವಾರಿ ಉಡುಪಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮ ಕಳೆದ ಬಾರಿ 19ನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಮೊದಲನೆ ಸ್ಥಾನಕ್ಕೆರಿಕೆಯಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಒಟ್ಟಾಗಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಪ್ರಯತ್ನಿಸಬೇಕು ಎಂದು ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಸೂಚನೆ ನೀಡಿದರು.
ಕಳೆದ ಕೆಡಿಪಿ ಸಭೆಯಲ್ಲಿಯೇ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕ್ರಮ ಕೈಗೊಳ್ಳುವ ಕಠಿಣ ನಿರ್ದೇಶನ ನೀಡಿದ್ದೇನೆ. ಫಲಿತಾಂಶ ಇಳಿಕೆಗೆ ಸಂಬಂಧಪಟ್ಟ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಹೊಣೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಅಂಗನವಾಡಿ ಕಟ್ಟಡಕ್ಕೆ ಸಿಎ ನಿವೇಶನ ಹಂಚಿಕೆ:
ಅಂಗನವಾಡಿ ಕಟ್ಟಡಕ್ಕೆ ಉಚಿತವಾಗಿ ಸಿಎ ನಿವೇಶನ ಹಂಚಿಕೆ ಮಾಡಲು ಸರ್ಕಾರದಿಂದ ತೀರ್ಮಾನಿಸಲಾಗಿದೆ. ಈ ಬಗ್ಗೆ ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.
ಜಿಲ್ಲೆಯ ಗಣಿಬಾಧಿತ ತಾಲ್ಲೂಕುಗಳಲ್ಲಿ ಕೆ.ಎಂ.ಇ.ಆರ್.ಸಿ ಹಾಗೂ ಡಿ.ಎಂ.ಎಫ್ ಅನುದಾನದಡಿ ಅಂಗನವಾಡಿಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ. ಉಳಿದ ತಾಲ್ಲೂಕುಗಳಿಗೆ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ಸಚಿವರು ನೀಡಿದರು.
ಜಿಲ್ಲೆಯಲ್ಲಿ 2428 ಅಂಗನವಾಡಿ ಕೇಂದ್ರಗಳು ಇವೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ 1798 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ 112 ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಲಭ್ಯವಿದೆ. 43 ಸ್ಥಳಗಳಲ್ಲಿ ನಿವೇಶನ ಲಭ್ಯವಿಲ್ಲ. ನಗರ ಪ್ರದೇಶದಲ್ಲಿ 22 ಕಡೆ ನಿವೇಶನ ಲಭ್ಯವಿದ್ದು, 107 ಕಡೆ ನಿವೇಶನ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಹ ಅಧಿಕಾರಿಗಳ ಧೋರಣೆಗೆ ಅಸಮಧಾನ ವ್ಯಕ್ತಪಡಿಸಿ, ಸಚಿವರು ಬಂದರೂ ಸಂಬಂಧಪಟ್ಟ ಇಲಾಖಾ ಅಧಿಕಾರಗಳು ಇಲ್ಲ ಎಂದರೆ ಹೇಗೆ? ಯಾರಿಗೆ ತಿಳಿಸಿ ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುವುದಾಗಿ ಹೇಳಿದರು.
ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗ 192 ಅಂಗನವಾಡಿ ಕಟ್ಟಡ ಪೈಕಿ 100 ಕಟ್ಟಡ ನಿರ್ಮಾಣ ಪೂರ್ಣಗೊಳಿಸಲಾಗಿದೆ. 34 ಕಟ್ಟಡ ಪ್ರಗತಿಯಲ್ಲಿವೆ. 62 ಕಟ್ಟಡ ನಿರ್ಮಾಣ ಪ್ರಾರಂಭಿಸುವುದು ಬಾಕಿಯಿದೆ. ಕೆ.ಆರ್.ಐ.ಡಿ.ಎಲ್ ವತಿಯಿಂದ 72 ಅಂಗನಾಡಿ ಕಟ್ಟಡಗಳ ಪೈಕಿ 52 ಪೂರ್ಣಗೊಂಡಿವೆ. 1 ಕಟ್ಟಡ ಪಗ್ರತಿಯಲಿದ್ದು, 17 ಕಟ್ಟಡ ನಿರ್ಮಾಣ ಪ್ರಾರಂಭವಾಗಿಲ್ಲ. ನಿರ್ಮಿತಿ ಕೇಂದ್ರದಿಂದ 69 ಕಟ್ಟಡಗಳ ಪೈಕಿ 34 ಪೂರ್ಣಗೊಂಡಿದ್ದು 29 ಪ್ರಗತಿಯಲ್ಲಿದೆ, 6 ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರು ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಪ್ರಾರಂಭ:
ಬಡವರ ಮಕ್ಕಳಿಗೂ ಕೂಡ ಬಾಲ್ಯದಲ್ಲಿ ಉತ್ತಮ ಶಿಕ್ಷಣ ಸಿಗಬೇಕು, ಖಾಸಗಿ ನರ್ಸರಿಗಳ ಹಾವಳಿ ತಡೆಗಟ್ಟಬೇಕು ಎಂಬ ಉದ್ದೇಶದಿಂದ ಸರ್ಕಾರವೇ ರಾಜ್ಯದಲ್ಲಿ ಅಂಗನವಾಡಿಗಳಲ್ಲಿಯೇ ಎಲ್‍ಕೆಜಿ, ಯುಕೆಜಿ ಶಿಕ್ಷಣ ನೀಡಲು ಸರ್ಕಾರಿ ಮಾಂಟೆಸ್ಸರಿ ಪ್ರಾರಂಭ ಮಾಡಬೇಕು ಎಂಬ ದಿಟ್ಟ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಇದಕ್ಕೆ ನೇಮಕಗೊಳ್ಳುವವರಿಗೆ ಪಿಯುಸಿಯನ್ನು ಕನಿಷ್ಠ ವಿದ್ಯಾರ್ಹತೆ ಆಗಿ ನಿಗದಿಪಡಿಸಿದೆ. ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಪದವಿಧರ ಮಹಿಳೆಯರು ಕೂಡ ಅರ್ಜಿ ಸಲ್ಲಿಸಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಚಳ್ಳಕೆರೆ ಶಾಸಕ ರಘುಮೂರ್ತಿ ಅವರು ವಿಧವೆಯರಿಗೆ ಹಾಗೂ ವಿಕಲಚೇತನ ಮಹಿಳೆಯರಿಗೆ ನೇಮಕದಲ್ಲಿ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು, ಇದಕ್ಕೆ ಸ್ಪಂದಿಸಿದ ಸಚಿವರು, ನಾನೂ ಕೂಡ ಮಹಿಳೆಯಾಗಿದ್ದು, ಅವರ ಬಗ್ಗೆ ನನಗೂ ಕಾಳಜಿ ಇದೆ. ವಿಧವೆಯರಿಗೆ ಹಾಗೂ ವಿಕಲಚೇತನ ಮಹಿಳೆಯರಿಗೆ ನೇಮಕದಲ್ಲಿ ಈಗಿರುವ ಕೃಪಾಂಕವನ್ನು ಶೇ. 5 ರಿಂದ 10 ಕ್ಕೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಆಹಾರ ಅಕ್ರಮ ಸಾಗಾಣಿಕೆಗೆ ಕಠಿಣ ಕ್ರಮ :
ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಆರೋಗ್ಯವಂತರಾಗಲಿ ಎಂಬ ಉದ್ದೇಶದಿಂದ ಇಲಾಖೆಯು ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಠಿಕ ಆಹಾರವನ್ನು ನೇರವಾಗಿ ಅವರ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಈ ನಡುವೆ, ರಾಜ್ಯದ ವಿವಿಧೆಡೆ ಈ ಆಹಾರ ಅಕ್ರಮವಾಗಿ ಬೇರೆಯವರ ಮನೆ ಸೇರುತ್ತಿದೆ ಎಂಬ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಯಾವುದೇ ಕಾರಣಕ್ಕೂ ಇಂತಹದನ್ನು ನಾನು ಸಹಿಸುವುದಿಲ್ಲ. ಈ ರೀತಿ ಅಕ್ರಮವಾಗಿ ಆಹಾರ ಸಾಗಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಇದಕ್ಕೆ ಆಯಾ ಅಂಗನವಾಡಿ ವ್ಯಾಪ್ತಿಯ ಮೇಲ್ವಿಚಾರಕರು ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ ಎಂದು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಚ್ಚರಿಕೆ ನೀಡಿದರು.
ಗೃಹಲಕ್ಷ್ಮೀ ಯೋಜನೆಗೆ ವರ್ಷ : ಸಚಿವೆ ಲಕ್ಷ್ಮಿ ಹರ್ಷ:
ಗೃಹಲಕ್ಷ್ಮೀ ಯೋಜನೆ ಜಾರಿಯಾಗಿ ಒಂದು ವರ್ಷ ಪೂರೈಹಿಸಿದ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಖಾತೆ ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿದರು.
ಚುನಾವಣೆ ಪ್ರಣಾಳಿಕೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ವಾಗ್ದಾನ ನೀಡಿದಾಗ ವಿರೋಧ ಪಕ್ಷಗಳು ಇದು ಕೇವಲ ಚುನಾವಣೆ ಗಿಮಿಕ್ ಎಂದಿದ್ದವು. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಯೋಜನೆ ಜಾರಿ ಮಾಡಿ ರಾಜ್ಯದ ಅರ್ಹ ಮಹಿಳೆಯರ ಖಾತೆಗೆ ಪ್ರತಿ ಮಾಹೆ ರೂ.2000 ಜಮೆ ಮಾಡಲಾಗುತ್ತಿದೆ. ಇದುವರೆಗೂ ಜೂನ್ ಮಾಹೆಯವರೆಗಿನ ಗೃಹಲಕ್ಷ್ಮೀ ಹಣವನ್ನು ಜಮೆ ಮಾಡಲಾಗಿದೆ. ಬಾಕಿ ಇರುವ ಜುಲೈ ಹಾಗೂ ಆಗಸ್ಟ್ ತಿಂಗಳ ಹಣವನ್ನು 5 ರಿಂದ 10 ದಿನದೊಳಗೆ ಜಮೆ ಮಾಡುವುದಾಗಿ ಹೇಳಿದರು.
ಗೃಹಲಕ್ಷ್ಮೀ ಯೋಜನೆಯಡಿ ಇದುವರೆಗೂ ರೂ.26,260 ಕೋಟಿ ಹಣ ಮಹಿಳೆಯರ ಖಾತೆಗೆ ಜಮೆ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯ ಹಣ, ದೇಶದ ಸಣ್ಣ ಪುಟ್ಟ ರಾಜ್ಯಗಳ ವಾರ್ಷಿಕ ಆಯವ್ಯಯಕ್ಕೆ ಸಮನಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಯೋಜನೆ ಲಾಭ ಪಡೆದ ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಮೂಲಕ ಹಿಮ್ಮಾಯಿತಿ ನೀಡಬಹುದು. ಫೇಸ್‍ಬುಕ್, ಯುಟ್ಯೂಬ್, ಇನ್ಸ್ಟಾಗ್ರಾಂ ಮೂಲಕ ಅಭಿಪ್ರಾಯವನ್ನು ರೀಲ್ಸ್ ವಿಡಿಯೋ ಮೂಲಕ ವ್ಯಕ್ತಪಡಿಸಲು ಕೋರಿದ್ದು, ಅತ್ಯುತ್ತಮ ವಿಡಿಯೋ ರೀಲ್ಸ್‍ಗೆ ಬಹುಮಾನ ನೀಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದರು.
ಪಿಂಚಣಿ ಅದಾಲತ್ ನಡೆಸಿ: ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ಅಂಗವಿಕಲರ ಮಾಸಾಶನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳು ಅರ್ಹರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪಿಂಚಣಿ ಅದಾಲತ್ ನಡೆಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ 3-4 ತಿಂಗಳಿಂದ ಮಾಸಾಶನ ಬರುತ್ತಿಲ್ಲ ಎಂದು ದೂರುಗಳಿದ್ದು, ಈ ಹಿನ್ನಲೆಯಲ್ಲಿ ಪಿಂಚಣಿ ಹಣ ಅರ್ಹರಿಗೆ ಸಮರ್ಪಕವಾಗಿ ವಿತರಣೆಗೆ ಕ್ರಮವಹಿಸಬೇಕು. ಕಾಲಕಾಲಕ್ಕೆ ಪಿಂಚಣಿ ಅದಾಲತ್ ನಡೆಸಿ, ಅವರ ಸಮಸ್ಯೆಗಳನ್ನು ಬಗೆಹರಿಸಬೇಕು. ಅಂಗವಿಕಲರು, ವಯೋವೃದ್ಧರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.
ವಿಕಲಚೇನರಿಗೆ ದ್ವಿಚಕ್ರ ಮೋಟಾರು ವಾಹನ ವಿತರಣೆ:
ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 33 ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಿಸಿದರು. ಇದೇ ವೇಳೆ 3 ವಿಕಲಚೇತನರಿಗೆ ಬ್ಯಾಟರಿಚಾಲಿತ ವೀಲ್ ಚೇರ್ ವಿತರಿಸಿದರು. ನಂತರ ಸೆಪ್ಟೆಂಬರ್ 1 ರಿಂದ 30ರವರೆಗೆ ನಡೆಯಲಿರುವ ರಾಷ್ಟ್ರೀಯ ಪೋಷಣ್ ಮಾಸಾಚರಣೆಗೆ ಚಾಲನೆ ನೀಡಿದರು.
ಪರಿಶೀಲನಾ ಸಭೆಯ ಆರಂಭಕ್ಕೂ ಮುನ್ನ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರು ಸುಕನ್ಯಾ ಸಮೃದ್ಧಿ ಯೋಜನೆ ಪಾಸ್ ಬುಕ್ ವಿತರಣೆ, ಅಂಗನಾವಾಡಿ ಕಾರ್ಯಕರ್ತರಿಗೆ ನೇಮಕಾತಿ ಆದೇಶ, ಲಿಂಗತ್ವ ಅಲ್ಪಸಂಖ್ಯಾತ ಗುರುತಿನ ಚೀಟಿ ವಿತರಿಸಿದರು.
ಸಭೆಯಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ, ದ್ರಾಕ್ಷರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಶಾಸಕ ಎಂ.ಚಂದ್ರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಗ್ಯಾರೆಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಬಿ.ಎನ್.ಮೈಲಾರಪ್ಪ, ಮಹಿಳಾ ಮತ್ತು ಮಕ್ಕಳ ಇಲಾಖೆ ನಿರ್ದೇಶಕ ಸಿದ್ದೇಶ್ವರ್, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶಕ ರಾಘವೇಂದ್ರ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೋಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
0 Comments