ಚಿತ್ರದುರ್ಗ .ಅ.11:
ವಿವಿಧ ವೃತ್ತಿ ಆಧಾರಿತ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡಲು ಜಾರಿಗೊಂಡಿರುವ ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಾದ್ಯಂತ ವಾರದಲ್ಲಿ ಕನಿಷ್ಟ 10 ಸಾವಿರ ಫಲಾನುಭವಿಗಳನ್ನು ನೊಂದಣಿ ಮಾಡಿಸಬೇಕು, ಸಾಮಾನ್ಯ ಸೇವಾ ಕೇಂದ್ರದಲ್ಲಿ ಅರ್ಜಿ ನೋಂದಣಿ ಉಚಿತವಾಗಿದ್ದು, ಇದಕ್ಕಾಗಿ ಸೇವಾ ಕೇಂದ್ರಗಳಲ್ಲಿ ಹಣ ಪಡೆದರೆ ಅಂತಹವರ ವಿರುದ್ಧ ಕಠಿಣ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಪಿ.ಎಂ. ವಿಶ್ವಕರ್ಮ ಯೋಜನೆಯ ಕುರಿತ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ವೃತ್ತಿ ಆಧಾರಿತ ಕುಶಲಕರ್ಮಿಗಳು, ಅಸಂಘಟಿತ ಕಾರ್ಮಿಕ ವರ್ಗದವರೂ ಸೇರಿದಂತೆ ನಾನಾ ವೃತ್ತಿಗಳಲ್ಲಿ ತೊಡಗಿರುವ ಶ್ರಮಿಕ ವರ್ಗದವರಿಗೆ ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಬಡಗಿ, ದೋಣಿ ತಯಾರಿಕೆ, ಶಸ್ತ್ರ ತಯಾರಿಕೆ, ಕಮ್ಮಾರಿಕೆ, ಕಲ್ಲುಕುಟಿಗ, ಬಟ್ಟೆ, ಚಾಪೆ-ಕಸಪರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಿಕೆ, ಕ್ಷೌರಿಕ ವೃತ್ತಿ, ಸುತ್ತಿಗೆ ಮತ್ತು ಉಪಕರಣಗಳ ತಯಾರಿಕೆ, ಹೂಮಾಲೆ ತಯಾರಿಕೆ, ಅಗಸರು (ದೋಬಿ) ಆಭರಣ ತಯಾರಿಕೆ, ಟೈಲರಿಂಗ್, ಕುಂಬಾರಿಕೆ, ಮೀನು ಬಲೆ ಹೆಣೆಯುವವರು, ಮೂರ್ತಿ ಮತ್ತು ಕಲ್ಲಿನ ಕೆತ್ತನೆ ಮಾಡುವ ಶಿಲ್ಪಿಗಳು, ಚಮ್ಮಾರರು, ಪಾದರಕ್ಷೆ ತಯಾರಕರು, ಬೀಗ ತಯಾರಿಕೆ ಸೇರಿದಂತೆ ವಿವಿಧ ಬಗೆಯ ವೃತ್ತಿ ಮಾಡುವವರು, ತಮ್ಮ ವೃತ್ತಿ ಸುಧಾರಣೆಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಬಡತನ ಅಡ್ಡಿಯಾಗಿರುತ್ತದೆ, ಇಂತಹವರೆಲ್ಲರಿಗೂ ಆರ್ಥಿಕ ಸಹಾಯ ನೀಡುವ ಸಲುವಾಗಿ ಸರ್ಕಾರದಿಂದ ಪಿ.ಎಂ. ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಹೆಚ್ಚಿರುವ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿರುವ ಚಿತ್ರದುರ್ಗ ಜಿಲ್ಲೆಗೆ ಈ ಯೋಜನೆ ನಿಜಕ್ಕೂ ಅತ್ಯಂತ ಸಹಕಾರಿಯಾಗಿದೆ. ವಿಶೇಷವೆಂದರೆ ಸರ್ಕಾರದಿಂದ ಫಲಾನುಭವಿಗಳ ಆಯ್ಕೆಗೆ ಯಾವುದೇ ಗುರಿ ನಿಗದಿ ಮಾಡಿಲ್ಲ ಹಾಗೂ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಬೇಕು ಎನ್ನುವ ಯಾವುದೇ ಮಾನದಂಡ ಇಲ್ಲ. ಹೆಚ್ಚು ಹೆಚ್ಚು ಜನರು ಯೋಜನೆಗೆ ನೊಂದಣಿ ಮಾಡಿಕೊಳ್ಳುವ ಮೂಲಕ ಇದರ ಲಾಭ ಪಡೆದುಕೊಳ್ಳುವಂತೆ ಆಗಬೇಕು ಎಂದರು.
ಸೇವಾ ಕೇಂದ್ರಗಳ ಕುಂಟುನೆಪಕ್ಕೆ ಅಸಮಾಧಾನ : ಕಳೆದ ಸೆಪ್ಟೆಂಬರ್ 17 ರಿಂದಲೇ ಪಿ.ಎಂ.ವಿಶ್ವಕರ್ಮ ಯೋಜನೆಗಾಗಿ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆ ಅರ್ಜಿ ಸಲ್ಲಿಕೆ ವಿಷಯದಲ್ಲಿ ತುಂಬಾ ಹಿಂದುಳಿದಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಮಜಾಯಿಷಿ ನೀಡುವಂತೆ ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ನೋಡಲ್ ಅಧಿಕಾರಿಯನ್ನು ಸಭೆಯಲ್ಲಿ ಪ್ರಶ್ನಿಸಿದರು. ನೊಂದಣಿಗೆ ಸರ್ವರ್, ಇಂಟರ್‍ನೆಟ್ ಹಾಗೂ ವಿದ್ಯುತ್ ತೊಂದರೆ ಇರುವುದಾಗಿ ನೋಡಲ್ ಅಧಿಕಾರಿ ಉತ್ತರಿಸಿದರು, ಇದರಿಂದ ಕುಪಿತಗೊಂಡ ಜಿಲ್ಲಾಧಿಕಾರಿಗಳು, ಬೇರೆ ಜಿಲ್ಲೆಗಳಲ್ಲಿ ಇಲ್ಲದ ಸರ್ವರ್ ಸಮಸ್ಯೆ ನಮ್ಮಲ್ಲಿ ಏಕೆ? ವಿದ್ಯುತ್ ಸರಬರಜಿನಲ್ಲೂ ಅಡಚಣೆ ಇಲ್ಲ. ನಿಮ್ಮ ಇಚ್ಛಾಶಕ್ತಿ ಕೊರತೆಯಿಂದ ಅರ್ಜಿ ಸಲ್ಲಿಕೆಯಲ್ಲಿ ಹಿಂದುಳಿದಿದ್ದೇವೆ, ಇಲ್ಲಸಲ್ಲದ ಸಬೂಬು ಹೇಳಿ ನಿರ್ಲಕ್ಷ್ಯ ತೋರುವುದನ್ನು ಸಹಿಸುವುದಿಲ್ಲ ಎಂದರು.
ಸಾಮಾನ್ಯ ಸೇವಾ ಕೇಂದ್ರದಲ್ಲಿ ಫಲಾನುಭವಿಗಳ ನೊಂದಣಿಗೆ 50 ರಿಂದ 100 ರೂ. ಹಣ ಪಡೆಯುತ್ತಿರುವುದಾಗಿ ವಿವಿಧ ಸಮಾಜದ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸಾಮಾನ್ಯ ಸೇವಾ ಕೇಂದ್ರದವರಿಗೆ ಪ್ರತಿ ಫಲಾನುಭವಿಯ ನೊಂದಣಿಗೆ 80 ರೂ. ಮೊತ್ತವನ್ನು ಸರ್ಕಾರ ನೀಡುತ್ತದೆ, ಆದರೂ ಸಾರ್ವಜನಿಕರಿಂದ ಹಣ ಪಡೆಯುದು ಅಪರಾಧವಾಗಿದೆ. ಹಣ ಪಡೆದವರ ಮೇಲೆ ಎಫ್.ಐ.ಆರ್ ದಾಖಲಿಸಿ, ಪಡೆದ ಹಣ ಹಿಂದಿರುಗಿಸಬೇಕು. ಮುಂದೆ ಇಂತಹ ಘಟನೆಗಳು ನಡೆದರೆ, ಸಾಮಾನ್ಯ ಸೇವಾ ಕೇಂದ್ರಗಳನ್ನು ಕಪ್ಪು ಪಟ್ಟಿಗೆ ಸೇರಿಸಿ, ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡದಂತೆ ಸರ್ಕಾರಕ್ಕೆ ಖುದ್ದು ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು.
ನೊಂದಣಿ ವಿಧಾನ ಸರಳ: ಯೋಜನೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಆನಂದ್ ಅವರು, ಪಿ.ಎಂ. ವಿಶ್ವಕರ್ಮ ಯೋಜನೆಯ ಲಾಭ ಪಡೆಯಲು ಕುಶಲಕರ್ಮಿಗಳು https://pmvishwakarma.gov.in ವೆಬ್‍ಸೈಟ್ ಮೂಲಕ ಅಥವಾ ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಪಾಸ್ ಬುಕ್ ಹಾಗೂ ಮೊಬೈಲ್ ಸಂಖ್ಯೆ ಇದಿಷ್ಟಿದ್ದರೆ ಸಾಕು, ನೊಂದಣಿ ಮಾಡಿಕೊಳ್ಳಲು. ನೋಂದಣಿ ನಂತರದ ಹಂತದಲ್ಲಿ ಅರ್ಜಿ ಸಲ್ಲಿಸಿದವರ ವೃತ್ತಿ ಕುರಿತಾಗಿ ಆಯಾ ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ವೆಬ್‍ಪೋರ್ಟಲ್‍ನಲ್ಲಿ ದೃಢೀಕರಣ ನೀಡುವರು. ಈ ಎಲ್ಲಾ ಪ್ರಕ್ರಿಯೆಗಳು ಆನ್ ಲೈನ್ ಮೂಲಕ ನಡೆಯಲಿವೆ. ಗ್ರಾಮ ಪಂಚಾಯತಿ ಅಧ್ಯಕ್ಷರ ಲಾಗಿನ್ ಐಡಿ ಸೃಜನೆ ಮಾಡಲಾಗಿದ್ದು, ತರಬೇತಿ ನೀಡಲಾಗುವುದು. ಈಗಾಗಲೆ ಕಾರ್ಮಿಕ ಇಲಾಖೆಯ ಇ-ಶ್ರಮ ಪೋರ್ಟಲ್‍ನಲ್ಲಿ ಲಭ್ಯವಿರುವ ಜಿಲ್ಲೆಯ 18,923 ಜನರನ್ನು ಯೋಜನೆಯಡಿ ನೊಂದಣಿಗೆ ಕ್ರಮ ವಹಿಸಲಾಗಿದೆ ಎಂದರು.
ಕೌಶಲ್ಯ ತರಬೇತಿ, ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ:
*ಯೋಜನೆಯಡಿ ನೊಂದಣಿ ಮಾಡಿಕೊಂಡವರಿಗೆ ಪಿ.ಎಂ. ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಐಡಿ ಕಾರ್ಡ್ ನೀಡಲಾಗುವುದು. ತರಬೇತಿ ಬಯಸುವವರಿಗೆ ಮೊದಲ ಹಂತದಲ್ಲಿ 5 ದಿನಗಳ ಕೌಶಲ್ಯ ತರಬೇತಿ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಪ್ರತಿದಿನ 500 ರೂ. ಭತ್ಯೆ ನೀಡಲಾಗುವುದು. ಅಲ್ಲದೆ 15 ಸಾವಿರ ರೂ.ಗಳನ್ನು ಸುಧಾರಿತ ಉಪಕರಣಗಳ ಖರೀದಿಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು. ಬಳಿಕ ಮೊದಲ ವರ್ಷದಲ್ಲಿ ಬ್ಯಾಂಕುಗಳ ಮೂಲಕ ಶೇ.5 ರ ಬಡ್ಡಿ ದರದಲ್ಲಿ ರೂ.01 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಎರಡನೇ ಹಂತದಲ್ಲಿ ರೂ.2 ಲಕ್ಷದ ವರೆಗೆ ಸಾಲ ನೀಡಲಾಗುವುದು. ಇದರೊಂದಿಗೆ ಡಿಜಿಟಲ್ ವಹಿವಾಹಟು ಮಾರುಕಟ್ಟೆ ವಿಸ್ತರಣೆಗೆ ಬೆಂಬಲ ಹಾಗೂ ಪೆÇ್ರೀತ್ಸಾಹ ನೀಡಲಾಗುವುದು. ಈ ಮೂಲಕ ಅಸಂಘಟಿತ ಕುಶಲಕರ್ಮಿಗಳನ್ನು ಸಂಘಟಿತ ವಲಯಕ್ಕೆ ತರುವುದು ಯೋಜನೆಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
400 ಕಂಪ್ಯೂಟರ್ ಆಪರೇಟರ್‍ಗಳ ನೇಮಕ:
ಜಿಲ್ಲೆಯಲ್ಲಿ 400 ಸಾಮಾನ್ಯ ಸೇವಾ ಕೇಂದ್ರಗಳು ಇವೆ. ಇದರಲ್ಲಿ 800 ಕಂಪ್ಯೂಟರ್ ಆಪರೇಟರ್‍ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 400 ಕಂಪ್ಯೂಟರ್ ಆಪರೇಟರ್‍ಗಳನ್ನು ಪಿ.ಎಂ. ವಿಶ್ವಕರ್ಮ ಅರ್ಜಿ ನೊಂದಣಿ ಕಾರ್ಯಕ್ಕೆ ನಿಯೋಜಿಸಬೇಕು. ಇವರಿಗೆ ಪ್ರತಿನಿತ್ಯದ ಗುರಿ ನೀಡಿ ಕೆಲಸ ನೊಂದಣಿ ಕಾರ್ಯ ಪೂರ್ಣಗೊಳಿಸಬೇಕು. ವಿಶ್ವಕರ್ಮ ಸಮಾಜ, ಸವಿತಾ ಸಮಾಜ, ಕಟ್ಟಡ ಕಾರ್ಮಿಕರ ಸಂಘದವರು ಬಯಸಿದಲ್ಲಿ, ಒಂದೇ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಬೇಕು, ಸೂಕ್ತ ರೀತಿಯಲ್ಲಿ ಯೋಜನೆ ರೂಪಿಸಿ, ಕುಶಲಕರ್ಮಿಗಳನ್ನು ಸಂಘ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿ ಮೂಲಕ ಒಂದಡೆ ಕರೆ ತಂದು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವಂತೆ ಮಾಡಬೇಕು. ಅಧಿಕಾರಿಗಳ ಸಮನ್ವಯಕ್ಕಾಗಿ ವಾಟ್ಸಪ್ ಗ್ರೂಪ್ ರಚನೆ ಮಾಡಿ. ಪ್ರತಿನಿತ್ಯದ ನೋಂದಣಿ ಬಗ್ಗೆ ವರದಿ ನೀಡುವಂತೆ ದಿವ್ಯಪ್ರಭು.ಜಿ.ಆರ್.ಜೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವ್ಯಾಪಕ ಪ್ರಚಾರಕ್ಕೆ ಸೂಚನೆ :
ಪಿ.ಎಂ.ವಿಶ್ವಕರ್ಮ ಯೋಜನೆಯ ಬಗ್ಗೆ ಗ್ರಾಮಾಂತರ ಪ್ರದೇಶದಲ್ಲಿ ಪಂಚಾಯತಿಗಳಿಂದ ಹೆಚ್ಚಿನ ಪ್ರಚಾರ ನೀಡಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಟೈಲರಿಂಗ್ ವೃತ್ತಿಯಲ್ಲಿ ತೊಡಗಿದ್ದಾರೆ. ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ಕೂಡ ಮಹಿಳೆಯರು ಟೈಲರಿಂಗ್ ಮಾಡುವವರಿದ್ದಾರೆ, ಇವರೆಲ್ಲರು ಅರ್ಜಿ ಸಲ್ಲಿಸುವಂತೆ ಆಗಬೇಕು. ಯೋಜನೆಗೆ ಸಂಬಂಧಪಟ್ಟಂತೆ ಕುಶಲಕರ್ಮಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಜಾಗೃತಿ ಮೂಡಿಸಬೇಕು. ಅಕ್ಕಸಾಲಿಗರು, ಕ್ಷೌರಿಕರು, ಬಡಗಿ, ಕಮ್ಮಾರಿಕೆ, ಕಲ್ಲುಕುಟಿಕ, ಪಾದರಕ್ಷೆ, ಚಾಪೆ, ಕಸಬರಿಕೆ ತಯಾರಿಕೆ, ಟೈಲರಿಂಗ್ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುವಂತೆ ಮಾಡಬೇಕು ಎಂದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಸೂಚನೆ ನೀಡಿದರು.
ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ, ಸಾಮಾನ್ಯ ಸೇವಾ ಕೇಂದ್ರದವರು, ಗ್ರಾಮಗಳಲ್ಲಿ ಸರ್ವರ್ ಅಥವಾ ಇಂಟರ್‍ನೆಟ್ ಸಮಸ್ಯೆ ಇದೆ ಎಂಬುದಾಗಿ ಸುಳ್ಳು ಹೇಳಿ, ಜನರನ್ನು ಅಥವಾ ಅಧಿಕಾರಿಗಳನ್ನು ತಪ್ಪುದಾರಿಗೆ ಎಳೆಯಬೇಡಿ, ಸರ್ಕಾರದ ಯೋಜನೆಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಲು ಆದಷ್ಟು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದರು.
ಸಭೆಯಲ್ಲಿ ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಬಿ. ಆನಂದ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾ.ಪಂ. ಗಳ ಇಓಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸವಿತಾ ಸಮಾಜ, ವಿಶ್ವಕರ್ಮ ಸಮಾಜ, ಕಟ್ಟಡ ಕಾರ್ಮಿಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ಪಿ.ಎಂ. ವಿಶ್ವಕರ್ಮ ಯೋಜನೆ : ವಾರದಲ್ಲಿ 10 ಸಾವಿರ ನೋಂದಣಿ ಗುರಿ ಸೇವಾ ಕೇಂದ್ರದಲ್ಲಿ ನೋಂದಣಿಗೆ ಹಣ ಪಡೆದರೆ ಕಠಿಣ ಕ್ರಮ- ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments