ಪತ್ರಕರ್ತರಿಗೆ ಬೇಕೀಗ ಆರ್ತಧ್ಯಾನ

by | 13/11/22 | ಮಾತೆಂದರೆ ಇದು, ವೈರಲ್

ಪತ್ರಕರ್ತರಿಗೆ ಬೇಕೀಗ ಆರ್ತಧ್ಯಾನ( ಫೇಸ್ ಬುಕ್ ಕೃಪೆ)
———————————————
ಬೇಡವಾದುದನ್ನು ತ್ಯಜಿಸಿ ಬೇಕಾದುದನ್ನು ಪಡೆಯುವ ಕುರಿತು ಗಂಭೀರವಾಗಿ ಚಿಂತಿಸುವ ಸ್ಥಿತಿಯೇ ಆರ್ತಧ್ಯಾನ. ತಮ್ಮ ವೃತ್ತಿಗೆ ಬೇಕಾದುದು ಯಾವುದು, ಬೇಡವಾದುದು ಯಾವುದು ಎಂದು ನಡುಗೆರೆ ಎಳೆದು ಪ್ರತ್ಯೇಕವಾಗಿ ಗುರುತಿಸಿ ಅಂಥ ಆರ್ತಧ್ಯಾನಕ್ಕೆ ಮಾಧ್ಯಮಜೀವಿಗಳು ತಮ್ಮನ್ನು ತಾವೇ ಸಿದ್ಧಪಡಿಸಿಕೊಳ್ಳಬೇಕಿದೆ.
ಹಾಗೆ ಗುರುತಿಸಿಕೊಳ್ಳಬೇಕಾಗಿರುವುದು ಯಾವುದು? ಪತ್ರಕರ್ತರಿಗೆ ಬಹುಮುಖ್ಯವಾಗಿ ಬೇಕಿರುವುದು ವೃತ್ತಿನಿಷ್ಠೆ. ಇದು ಅವಲಂಬಿಸಿರುವುದು ಸಾಮಾಜಿಕ ಬದ್ಧತೆ ಮತ್ತು‌ಪ್ರಾಮಾಣಿಕತೆ. ವೃತ್ತಿನಿಷ್ಠೆಗೆ ಎರಡೂ ಮುಖ್ಯ. ಜಾತಿಯಿಂದಾಗಿಯೇ ಅಸಮಾನತೆ ಇರುವ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಬದ್ಧತೆ ಅತ್ಯಗತ್ಯ.ಈ‌ ನೆಲೆಯಲ್ಲೇ ಸಾಮಾಜಿಕ ಬದ್ಧತೆ ವಿಚಾರದಲ್ಲಿ ಪತ್ರಕರ್ತನ ಹೃದಯ ಕೆಲಸ ಮಾಡಬೇಕು. ಪ್ರಾಮಾಣಿಕತೆಗೆ ಮೆದುಳು ಮಾತ್ರ ಸಾಕು. ದುರಂತ ಎಂದರೆ ಎಲ್ಲೋ ಕೆಲವು ಅಪವಾದ ಹೊರತುಪಡಿಸಿದರೆ ಸಾಮಾಜಿಕ ಬದ್ಧತೆ ವಿಚಾರದಲ್ಲಿ ಬಹುತೇಕ ಪತ್ರಕರ್ತರ ಮೆದುಳು ಕೆಲಸ ಮಾಡುತ್ತಿದೆ.ಅಪ್ರಾಮಾಣಿಕತೆ ವಿಚಾರದಲ್ಲಿ ಪತ್ರಕರ್ತರ ನಡುವೆ ಹೀನಾಯ ಸ್ಪರ್ಧೆಯೇ ನಡೆಯುತ್ತಿದೆ. ಹೀಗಾಗಿಯೇ ಬೆರಳೆಣಿಕೆಯಷ್ಟು ಪತ್ರಕರ್ತರು ಹೊರತುಪಡಿಸಿದರೆ ಬಹುತೇಕರು ವೃತ್ತಿನಿಷ್ಠೆಯಿಂದ ವಿಚಲಿತರಾಗಿ ತುಂಬ ಸಮಯವಾಗಿದೆ. ಹೀಗಾಗಿ ಇದನ್ನು ಎರಡು ಆಯಾಮಗಳಲ್ಲಿ ನೋಡಬೇಕಾಗಿದೆ.
ಪತ್ರಕರ್ತರು ಸಾಮಾಜಿಕ ಬದ್ಧತೆಯಿಂದ ದೂರ ಸರಿಯುವುದು ಮತ್ತು ಭ್ರಷ್ಟರಾಗುವುದು ಎರಡರಿಂದಲೂ ಈ ದೇಶಕ್ಕೆ ಅಪಾರ ಮತ್ತು ಸಮಾನ ಹಾನಿಯಾಗುತ್ತದೆ. ಮಲಿನಗೊಂಡ ಮನಸ್ಸು ಸತ್ಯ ಬರೆಯಲು ಹಿಂಜರಿಯುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಜಾತಿನಿಷ್ಠರು ಮತ್ತು ಭ್ರಷ್ಟರು ಇಬ್ಬರೂ ಅನಿಷ್ಠರೇ. ಪ್ರಭಾವಿ ಜಾತಿಗೆ ಸೇರಿದ ಪತ್ರಕರ್ತರ ಜಾತಿನಿಷ್ಠೆ ದಶಕಗಳ ಕಾಲ ಭಾರತದ ಬಹುಸಂಖ್ಯಾತರಿಗೆ ಅನ್ಯಾಯ ಎಸಗುವ ಮೂಲಕ ಜಾತ್ಯತೀತ ಪರಂಪರೆಗೆ ದ್ರೋಹ ಬಗೆದಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಬಲ ಜಾತಿಗೆ ಸೇರಿದ ಪತ್ರಕರ್ತರಲ್ಲೂ ಜಾತಿನಿಷ್ಠೆ ರೋಗ ಉಲ್ಬಣಗೊಂಡಿದೆ. ಪ್ರಭಾವಿ ಮತ್ತು ಪ್ರಬಲ ಜಾತಿಗೆ ಸೇರಿದ ಪತ್ರಕರ್ತರ ಈ ರೋಗದಿಂದ ಇತರ ಸಮುದಾಯಗಳು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ತಾರತಮ್ಯ ಅನುಭವಿಸುತ್ತಲೇ ಇವೆ.
ಇಷ್ಟೆಲ್ಲ ನಾನು ಯಾಕೆ ಹೇಳುತ್ತಿದ್ದೇನೆ ಎಂಬುದನ್ನು ನೀವು ಬಲ್ಲಿರಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರ ಕಾರ್ಯಾಲಯದಿಂದ ಮುಖ್ಯವಾಹಿನಿಯ ಪತ್ರಿಕೆಗಳ ಆಯ್ದ ಪತ್ರಕರ್ತರಿಗೆ ದೀಪಾವಳಿ ಪ್ರಯುಕ್ತ ಸಿಹಿಯ ಜತೆ ಸ್ಥಾನಮಾನದ ಯೋಗ್ಯತೆಗೆ ತಕ್ಕಂತೆ ‘ಗೌರವಧನ'(ಕೆಲವರು ಅದನ್ನು ಭಕ್ಷೀಸೆಂದೂ ಇನ್ನು ಕೆಲವರು ಲಂಚವೆಂದೂ ಕರೆದುಬಿಟ್ಟಿದ್ದಾರೆ)ವನ್ನೂ ಕಳಿಸಿದ್ದರೆನ್ನುವುದು ವಿವಾದ ಉಂಟುಮಾಡಿದೆ. ಈ ಒಂದು ಮಾಹಿತಿ ಬಯಲಾಗುವುದಕ್ಕೆ ಮುಖ್ಯ ಕಾರಣರಾದ ಡೆಕ್ಕನ್ ಹೆರಲ್ಡ್ ಇಂಗ್ಲಿಷ್ ದಿನಪತ್ರಿಕೆಯ ಮುಖ್ಯವರದಿಗಾರ ಭರತ್ ಜೋಷಿ ಅವರನ್ನು ಅಭಿನಂದಿಸಲೇಬೇಕು. ಬಯಲಾಗುವುದಕ್ಕೆ ಮುಖ್ಯ ಕಾರಣ ಭರತ್ ಜೋಷಿ ಎಂದರೆ ಈ ಮಾಹಿತಿಯನ್ನು ಅವರೇ ಡಂಗುರ ಸಾರಿ ಹೇಳಿದರೆಂದಲ್ಲ. ಮುಖ್ಯಮಂತ್ರಿಯ ಮಾಧ್ಯಮ ಸಂಯೋಜಕರ ಕಚೇರಿಯಿಂದ ಬಂದಿದ್ದ ದೀಪಾವಳಿ ಕೊಡುಗೆಯನ್ನು ತೆರೆದು ನೋಡಿದ ಜೋಷಿ ಅವರಿಗೆ ಹಣ ಇರಿಸಿರುವ ಲಕೋಟೆ ಕಂಡು ತಮ್ಮ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಮನಕ್ಕೆ ತಂದು ಲಕೋಟೆಯಲ್ಲಿದ್ದ ಹಣದ ಸಹಿತ ಕೊಡುಗೆಯನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಮಾಧ್ಯಮ ಸಂಯೋಜಕರಿಗೆ ತಿಳಿಸಿದ್ದಾರೆ. ಆನಂತರ ಈ ಸುದ್ದಿ ನಾನಾ ಆಯಾಮಗಳನ್ನು ಪಡೆದುಕೊಂಡು ಹರಿದಾಡಿದೆ. ಈ ಮಾಹಿತಿ ಆಧರಿಸಿ ಜನಸಂಘರ್ಷ ಪರಿಷತ್ ಎಂಬ ಸ್ವಯಂಸೇವಾ ಸಂಸ್ಥೆಯ ಆದರ್ಶ್ ಅಯ್ಯರ್ ಲೋಕಾಯುಕ್ತರಿಗೂ ದೂರು ನೀಡಿದ್ದಾರೆ.ಭ್ರಷ್ಟಾಚಾರದ ವಿರುದ್ಧ ನಿರಂತರ ಜವಾಬ್ದಾರಿಯುತ ಹೋರಾಟದ‌ ಮೂಲಕ ಈ ಸಂಸ್ಥೆ ಸದಾ ಕ್ರಿಯಾಶೀಲವಾಗಿದೆ‌. ಆದರೆ ಈ ದೂರಿನ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಲೋಕಾಯುಕ್ತರು ಒಂದೇ ಒಂದು ಹೆಜ್ಜೆ ಮುಂದಿರಿಸಿಲ್ಲ. ಈ ಹೊತ್ತಿಗೆ ಲೋಕಾಯುಕ್ತರು, ಪತ್ರಕರ್ತರಿಗೆ ಸಿಹಿಯ ಜತೆ ನಗದು ಇರಿಸಿದ್ದ ಕೊಡುಗೆ ತಲುಪಿಸಿದವರಿಗೂ, ಮುಖ್ಯಮಂತ್ರಿ ವಿರುದ್ಧವೂ ಅಗತ್ಯ ಕ್ರಮದ ಪ್ರಕ್ರಿಯೆ ಆರಂಭಿಸಬೇಕಿತ್ತು. ಲೋಕಾಯುಕ್ತರಿಗೆ ಕ್ರಮ ಕೈಗೊಳ್ಳುವುದು ಈವರೆಗೆ ಯಾಕೆ ಸಾಧ್ಯವಾಗಿಲ್ಲ? ಇದು ಮಾಧ್ಯಮಗಳಿಗೆ ಪ್ರಶ್ನಾರ್ಹ ಸುದ್ದಿಯಾಗಬೇಕಿತ್ತು. ಆದರೆ ಮುಖ್ಯಮಂತ್ರಿ ಪರವಾಗಿ ಅವರ ಮಾಧ್ಯಮ ಸಂಯೋಜಕರು ಪತ್ರಿಕಾಲಯಗಳಿಗೇ ತೆರಳಿ ಆಯ್ದ ಪತ್ರಕರ್ತರಿಗೆ ದಕ್ಷಿಣೆ ನೀಡಿದ ವಿಷಯವನ್ನು ಆಯಾ ಪತ್ರಿಕೆಗಳೇ ಕಟುವಾದ ಪದಗಳಲ್ಲಿ ಖಂಡಿಸಿ ಸುದ್ದಿಯನ್ನು‌ ಮುಖಪುಟದಲ್ಲೇ ಪ್ರಕಟಿಸಬೇಕಿತ್ತು. ಈಗ ಕೆಲವು ಪತ್ರಕರ್ತರು ತಮಗೆ ಮುಖ್ಯಮಂತ್ರಿಗಳು ನೀಡಿದ್ದ ಹಣವನ್ನು ವಾಪಸ್ ನೀಡಿದ್ದಾಗಿ ಅಲ್ಲಿ ಇಲ್ಲಿ ಹೇಳುತ್ತಿದ್ದಾರಲ್ಲಾ, ಅವರೆಲ್ಲ ಯಾರ ಕೈಗೆ ಹಣ ವಾಪಸ್‌ ಮಾಡಿದರು, ಅವರಿಗೆ‌ ನೀಡಿದ್ದ ಹಣದ‌ ಮೊತ್ತವೆಷ್ಟೆಂದು ಬಯಲು‌ ಮಾಡಲೇಬೇಕು. ಲಂಚ‌ಕೊಡುವುದೂ, ಪಡೆದುಕೊಳ್ಳುವುದೂ ಅಪರಾಧವೇ. ಅದರಲ್ಲೂ‌ ಪ್ರಜಾಸತ್ತಾತ್ಮಕ ವ್ಯವಸ್ಥೆಯ ನಾಲ್ಕನೇ ಅಂಗವಾದ ಮಾಧ್ಯಮಗಳ ಪ್ರತಿನಿಧಿಗಳಿಗೇ ಸ್ವತಃ ಮುಖ್ಯಮಂತ್ರಿಯೇ ಆಮಿಷ ಒಡ್ಡುತ್ತಾರೆಂದರೆ? ಎಷ್ಟು ಪತ್ರಕರ್ತರಿಗೆ ಸಿಹಿಯ ಜತೆ ಲದ್ದಿ ನೀಡಿದ್ದಾರೆ? ಅದರ ಒಟ್ಟು ಮೊತ್ತ ಎಷ್ಟು? ಅದರ ಮೂಲ ಯಾವುದು? ಈ ಎಲ್ಲ ಪ್ರಶ್ನೆಗಳನ್ನು ಸ್ವತಃ ಈ ಪ್ರಕರಣದ ಮುಖ್ಯ ಸಾಕ್ಷಿಗಳಾಗಿರುವ ಪತ್ರಕರ್ತರು ಕೇಳಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಜವಾಬ್ದಾರಿಯುತ ಮಾಧ್ಯಮಗಳಿರುವ ರಾಜ್ಯವಾಗಿದ್ದರೆ ಈ ಹೊತ್ತಿಗೆ‌ ಮುಖ್ಯಮಂತ್ರಿ‌ ಬೊಮ್ಮಾಯಿ ರಾಜೀನಾಮೆ‌‌‌ ನೀಡಿರಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಯಾವುದೇ‌ ಪತ್ರಿಕೆಗಳಲ್ಲೂ ಈ ಸುದ್ದಿ‌ ಪ್ರಕಟವಾದಂತೆ‌ ಕಾಣಲಿಲ್ಲ.ಈ‌ ಪ್ರಕರಣವನ್ನು ಮತದಾರರು ಗಂಭೀರವಾಗಿ‌ ಪರಿಗಣಿಸಿ ಭ್ರಷ್ಟಾಚಾರ ಪೋಷಿಸುತ್ತಿರುವ‌ ಮುಖ್ಯಮಂತ್ರಿ‌ ಮತ್ತು ‘ಸುದ್ದಿಗೆ‌ಲದ್ದಿ’ ಪಡೆಯುವ ಪತ್ರಕರ್ತರಿಂದ ಪ್ರಜಾಸತ್ತಾತ್ಮಕ‌ ವ್ಯವಸ್ಥೆ ದುರ್ಬಲಗೊಳ್ಳುವ‌ ಅಪಾಯ ಕುರಿತು ಚರ್ಚೆ‌ ನಡೆಸುವ ವಾತಾವರಣ‌ ನಿರ್ಮಾಣವಾಗಬೇಕಿತ್ತು. ಆದರೆ ಹಾಗೇನೂ ಆಗಿಲ್ಲ. ಮಾಧ್ಯಮಗಳಿಗೆ ಸಂಬಂಧಿಸಿದ ಎಲ್ಲೋ ಕೆಲವು ವಾಟ್ಸ್ ಆಪ್ ಗುಂಪುಗಳು‌ ಮತ್ತು‌ ಸಾಮಾಜಿಕ‌ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡಿದ್ದು ಬಿಟ್ಟರೆ ವ್ಯಾಪಕವಾಗಿ ಹಬ್ಬಲಿಲ್ಲ. ಇದರರ್ಥ ಏನು? ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ನೀಡಿದ‌ ಪ್ರೇಮದ ಕಾಣಿಕೆ‌ ವಿಷಯ ಪತ್ರಿಕೆಗಳ ಓದುಗರಿಗೆ‌ ಸಂಬಂಧಿಸಿದಂತೆ ಗುಟ್ಟಾಗಿಯೇ ಉಳಿಯಿತು.‌ ಪೀಪಲ್ ಮೀಡಿಯಾ ಎಂಬ ಸುದ್ದಿ ಜಾಲತಾಣ ಮೊದಲಿಗೆ ಈ ಸುದ್ದಿ ಪ್ರಕಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭಗೊಳ್ಳುವವರೆಗೆ ಮುಖ್ಯಮಂತ್ರಿಯ ಕೊಡುಗೆ ವಿರುದ್ಧ ಪತ್ರಿಕಾ ಸಂಸ್ಥೆಗಳಿಂದಾಗಲೀ, ಕಾಣಿಕೆ ಪಡೆದ ಪತ್ರಕರ್ತರಿಂದಾಗಲೀ ಈ ಬಗ್ಗೆ ಆಯಾ ಪತ್ರಿಕೆಗಳಲ್ಲಿ ಯಾಕೆ‌ ಆಕ್ರೋಶ ‌ವ್ಯಕ್ತವಾಗಲಿಲ್ಲ?
ಒಂದೋ ಪತ್ರಿಕಾ ಸಂಸ್ಥೆಗಳು ‌ಮುಖ್ಯಮಂತ್ರಿಯ ಜತೆ‌ ಆತ್ಮೀಯ‌ ‘ಬಾಂಧವ್ಯ’ ಇರಿಸಿಕೊಂಡಿರಬೇಕು ಅಥವಾ ವ್ಯಾವಹಾರಿಕ ಸಂಬಂಧ ಇರಬೇಕು. ಬೇರೇನೂ ಕಾರಣ‌ ಕಾಣುತ್ತಿಲ್ಲ.ಅಥವಾ‌ ‘ಕೇವಲ’ ಒಂದು‌ ಲಕ್ಷ ಅಥವಾ ಎರಡು‌ಲಕ್ಷ ರೂಪಾಯಿ ಎಂದು ಸುದ್ದಿಯನ್ನು ಅಲಕ್ಷಿಸಿರಬಹುದು ಎನ್ನಲಾಗದು. ಸ್ವತಃ ಮುಖ್ಯಮಂತ್ರಿಗೆ ಮಾಧ್ಯಮ‌ ಪ್ರತಿನಿಧಿಗಳಿಗೆ ಹೀಗೆ ಕಾಣಿಕೆ‌ ಕೊಡುವ ಧೈರ್ಯ ಬಂದಿದೆ‌ ಎಂದರೆ ಈ ಮೊದಲೇ ಸಣ್ಣ‌ ಪ್ರಮಾಣದಲ್ಲಿ ನೀಡಿದ ಅನುಭವ ಇರಬಹುದು.‌ ನಿರ್ಲಜ್ಜ ಮುಖ್ಯಮಂತ್ರಿಗೆ ಮಾಧ್ಯಮಗಳಲ್ಲಿ ಲಜ್ಜೆ ಇರುವವರೂ ಇದ್ದಾರೆಂಬುದು ಮರೆತುಹೋಗಿರಬಹುದು.
ಅದು ಹೋಗಲಿ. ಸ್ವತಃ ಪತ್ರಕರ್ತರಾಗಿ ಅನುಭವ ಇದ್ದ‌ ಮಾಧ್ಯಮ‌ ಸಂಯೋಜಕರು‌ ಪತ್ರಕರ್ತರಿಗೆ ಕಾಣಿಕೆ‌ ನೀಡುವುದು ಆರೋಗ್ಯಕರ‌ ರಾಜಕಾರಣದ ಲಕ್ಷಣವಲ್ಲ ಎಂದು ಮುಖ್ಯಮಂತ್ರಿಗೆ ಯಾಕೆ‌ ಸಲಹೆ‌‌ ನೀಡಲಿಲ್ಲ? ಒಂದು‌ ವೇಳೆ ಸಲಹೆಯನ್ನು‌ ಮುಖ್ಯಮಂತ್ರಿ ನಿರ್ಲಕ್ಷಿಸಿದ್ದರೂ ಕಾಣಿಕೆ‌ ತಲುಪಿಸುವ‌ ಕೆಲಸ‌ ತಮ್ಮಿಂದಾಗದು‌ ಎಂದು‌ ಮಾಧ್ಯಮ‌ ಸಂಯೋಜಕರು ಯಾಕೆ‌‌‌ ದೂರ‌ ಸರಿಯಲಿಲ್ಲ? ಹೀಗೆ ಸಲಹೆ ನೀಡದೇ ಇರುವ‌ ಅಥವಾ ಸಲಹೆ‌‌‌ ನೀಡಿದ್ದರೂ ಅದನ್ನು‌ ನಿರ್ಲಕ್ಷಿಸಿದ ಮುಖ್ಯಮಂತ್ರಿ‌ ಕಾರ್ಯಾಲಯದಲ್ಲಿ ಒಬ್ಬ ವ್ಯಕ್ತಿ ಮಾಧ್ಯಮ ಸಂಯೋಜಕನಾಗಿ ಮುಂದುವರಿಯುತ್ತಾನೆಂದರೆ ಆತ‌ ಪತ್ರಕರ್ತನಾಗಿರುವುದು‌ ಸಾಧ್ಯವಿಲ್ಲ. ಬದಲಿಗೆ ಅವಕಾಶವಾದಿ ವ್ಯವಹಾರಸ್ಥನಾಗಿರುವ ಸಾಧ್ಯತೆಯೇ ಹೆಚ್ಚು.
ಹಾಗಾದರೆ ವಿಪಕ್ಷಗಳ ನಾಯಕರಾದರೂ ಟೀಕೆಯ ಶಾಸ್ತ್ರದ ಬದಲು ಈ ಪ್ರಕರಣವನ್ನು ಮುಖ್ಯಮಂತ್ರಿ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡು ರಾಜೀನಾಮೆ ನೀಡುವಂತೆ ಪಟ್ಟು ಹಿಡಿಯಬಹುದಿತ್ತಲ್ಲಾ? ಇಂಥ ಒಳ್ಳೆಯ ಅವಕಾಶವನ್ನು ವಿಪಕ್ಷಗಳ ನಾಯಕರು ಯಾಕೆ ಕಳೆದುಕೊಳ್ಳುತ್ತಿದ್ದಾರೆ? ಅವರ ಆಡಳಿತದಲ್ಲೂ ಮಾಧ್ಯಮ‌ ಪ್ರತಿನಿಧಿಗಳಿಗೆ ಪ್ರೇಮದ ಕಾಣಿಕೆ ನೀಡುವ ಪರಿಪಾಠ ಇತ್ತೇ? ಖಂಡಿತ ಇತ್ತು. ಅವರ ಕಾಲದ ಪ್ರೇಮದ ಕಾಣಿಕೆಯ ಹಗರಣಗಳು ಹೊರಬಂದಾವೆಂಬ ಭಯ ಕಾಡುತ್ತಿರಬಹುದು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ‘ಸುದ್ದಿಗೆ ಲದ್ದಿ’ ಪಡೆದಿದ್ದ ಪತ್ರಕರ್ತರು ಈವರೆಗೂ ಎಸ್.ಎಂ.ಕೆ. ಮೇಲಿನ ಕೃತಜ್ಞತಾಭಾವದಿಂದ ಹೊರಬಂದಿಲ್ಲ.ಲಕ್ಷಗಳ ಮೌಲ್ಯದ ಜಿ ಕೆಟಗರಿ ನಿವೇಶನಗಳನ್ನು ಪಡೆದಿದ್ದ ಆಯ್ದ ಪತ್ರಕರ್ತರು ಎಸ್.ಎಂ.ಕೆ.ತೊಡೆಯ ಮೇಲಿನ ಮುದ್ದಿನ ಪೊಮರೇನಿಯನ್ ನಾಯಿಮರಿಗಳಂತೆ ಈಗಲೂ ಕಾಣುತ್ತಾರೆ.ಆ ನಿವೇಶನಗಳನ್ನು ಆಯಾ ಪತ್ರಕರ್ತರೇ ಸ್ವಂತ ಹಣ ನೀಡಿ ಖರೀದಿಸಿದ್ದರೇ? ಅಂದ ಹಾಗೇ ಇಂಡಿಯಾ ಟುಡೇ ಎಂಬ ನಿಯತಕಾಲಿಕದಿಂದ ದೇಶದ ನಂಬರ್ ಒನ್ ಮುಖ್ಯಮಂತ್ರಿ ಎಂದು ಕರೆಸಿಕೊಂಡಿದ್ದ ಕೃಷ್ಣ ಸ್ವಕ್ಷೇತ್ರದಿಂದ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರಕ್ಕೆ ಪಲಾಯನ ಮಾಡಿದ್ದರೆಂದರೆ ಅದು ಯಾವ‌ ಮಟ್ಟದ ನಂಬರ್ ಒನ್ ಮುಖ್ಯಮಂತ್ರಿಯಾಗಿದ್ದಿರಬಹುದು? ಅವರನ್ನು ಹಾಗೆ ಗುರುತಿಸಿದ ನಿಯತಕಾಲಿಕಕ್ಕೆ ಅದೆಷ್ಟು ಲದ್ದಿ ತಿನ್ನಿಸಿರಬಹುದು?
ಎಸ್.ಎಂ.ಕೆ.ಯಿಂದ ಪಡೆದ ನಿವೇಶನಗಳ ಮೌಲ್ಯಕ್ಕೆ ಹೋಲಿಸಿದರೆ ಈ‌ ಮೊತ್ತ ಜುಜುಬಿ ಎಂದು ತಳ್ಳಿ ಹಾಕುವಂತಿಲ್ಲ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ‌ ಕಳ್ಳ!
ಈ ಪ್ರಕರಣ ಓರ್ವ‌ ಮುಖ್ಯಮಂತ್ರಿಯ ನೈತಿಕತೆ, ಕಾನೂನುಬಾಹಿರ ನಡವಳಿಕೆ, ಸಂವಿಧಾನ ವಿರೋಧಿ ನಿಲುವನ್ನು ಪ್ರಶ್ನಿಸುತ್ತದೆ. ಹಾಗೇ ಪತ್ರಕರ್ತರ ಭ್ರಷ್ಟಾಚಾರವನ್ನೂ, ಕುಸಿಯುತ್ತಿರುವ ಪತ್ರಿಕಾ ಧರ್ಮದ ಮೌಲ್ಯಗಳನ್ನೂ ತೆರೆದಿಡುತ್ತದೆ. ಕೊಟ್ಟವನು‌ ಕೋಡಂಗಿ, ಈಸ್ಕೊಂಡವನು ಈರಭದ್ರ ಎಂದು ಸುಮ್ಮನಾಗುವಂತಿಲ್ಲ. ಪ್ರಜಾಸತ್ತಾತ್ಮಕ ಮೌಲ್ಯಕ್ಕೇ ಧಕ್ಕೆ ಉಂಟು‌ಮಾಡಿದ ಈ ಪ್ರಕರಣದ ಬಗ್ಗೆ ಪ್ರಾಮಾಣಿಕ ತನಿಖೆಯಂತೂ ನಡೆಯಬೇಕು. ಇತರೆಲ್ಲ ಭ್ರಷ್ಟಾಚಾರ ಪ್ರಕರಣಗಳಂತೆ ಪತ್ರಕರ್ತರ ಅಕ್ರಮ ಆಸ್ತಿಯ ಬಗ್ಗೆಯೂ ತನಿಖೆ ಆಗಲೇಬೇಕು. ತಮ್ಮ‌ಹುದ್ದೆಯಲ್ಲಿ ಮುಂದುವರಿಯುವ ಯಾವ ಯೋಗ್ಯತೆಯೂ ಇಲ್ಲದ‌ ನಾಲಾಯಕ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸುವ ಒಂದು ಹೋರಾಟ ಕನ್ನಡಿಗರಿಂದಲೇ ಸ್ವಯಂಪ್ರೇರಿತವಾಗಿ ಆರಂಭವಾಗಬೇಕು. ಈ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಉಳಿಯಬೇಕೆಂದರೆ ಈ ಹೋರಾಟವೂ ಬೇಕು.
ಹಾಗೇ ಓರ್ವ ಪತ್ರಕರ್ತ ಪ್ರಾಮಾಣಿಕವಾಗಿದ್ದಾನೆಂದರೆ ಅದಕ್ಕೂ ಎದೆಗಾರಿಕೆ ಬೇಕು, ಆಳುವವರ ಅಂಗಳದಲ್ಲಿ ಭಜನೆ‌ ಮಾಡುತ್ತಾ ಕಾಲ ಕಳೆಯುವವನು ಪತ್ರಕರ್ತನೇ ಅಲ್ಲ. ಅದಕ್ಕೆ ಎದೆಗಾರಿಕೆ ಬೇಕಿಲ್ಲ, ಮೂರೂ ಬಿಟ್ಟವನೆಂಬ ಅಪಖ್ಯಾತಿ ತಾನಾಗಿಯೇ ಒದಗಿ ಬರುತ್ತದೆ. ಹಾಗೆಂದ ಮಾತ್ರಕ್ಕೆ ಇವತ್ತು ಪತ್ರಿಕೆಗಳನ್ನು, ಪತ್ರಕರ್ತರನ್ನು ಜನಸಾಮಾನ್ಯರು ಸಂಪೂರ್ಣವಾಗೇನೂ ನಂಬುತ್ತಿಲ್ಲ.ಅಧಿಕೃತ‌ ಮೂಲಗಳ ಸುದ್ದಿಗಳಿಗಾಗಿಯಷ್ಟೇ ಬಹುತೇಕರು ಪತ್ರಿಕೆಗಳನ್ನು ನೆಚ್ಚಿಕೊಂಡಿದ್ದಾರೆ. ಬುರುಡೆ ಜ್ಯೋತಿಷಿಗಳಂಥ, ಸದಾ ಬೆಂಕಿಯುಗುಳುವ, ಸಾಮಾಜಿಕ‌ನಿಷ್ಠೆ ಎಳ್ಳಷ್ಟೂ ಇಲ್ಲದೇ ಘನತೆ‌ಕಳೆದುಕೊಂಡಿರುವ ನಿರೂಪಕರಿರುವ ಕನ್ನಡ ಖಾಸಗಿ ಸುದ್ದಿ ವಾಹಿನಿಗಳಿಂದ ಬೇಸತ್ತಿರುವ ಜನಸಾಮಾನ್ಯರು ಈಗಲೂ ಸ್ವಲ್ಪವಾದರೂ ನಂಬುತ್ತಿರುವುದು ಪತ್ರಿಕೆಗಳನ್ನು. ಈ ಬೆಳವಣಿಗೆಗಳ‌ ನಡುವೆ ಪತ್ರಕರ್ತರು ಸಮಾಜದಲ್ಲಿ ಪ್ರಭಾವಿ‌ ವ್ಯಕ್ತಿಗಳೆಂಬ ಎಂಬ‌ ಭ್ರಮೆಯಲ್ಲಿ ವಯ್ಯಾರ‌ ಮಾಡುತ್ತಾ ಓಡಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಅನರ್ಥ ಕಾಯುತ್ತಿರುತ್ತದೆ.
-ಟಿ.ಕೆ‌.ತ್ಯಾಗರಾಜ್

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *