ಕೊಪ್ಪಳ ನವೆಂಬರ್ 15 ಮುಂದಿನ ಜೂನ್‌ವರೆಗೂ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಮುಖ್ಯಮಂತ್ರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತನ್ನಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಬೆಳೆಹಾನಿ ಮತ್ತು ಬರ ಪರಿಹಾರ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕುಕನೂರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಕಂಡುಬರುವ ಸಾಧ್ಯತೆ ಇದೆ. ಆದ್ದರಿಂದ ಸಂಬAಧಿಸಿದ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರರು, ನೀರಾವರಿ ಇಲಾಖೆ ಅಧಿಕಾರಿಗಳು ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಕುಡಿಯುವ ನೀರನ್ನು ಒದಗಿಸಲು ಪರ್ಯಾಯ ವ್ಯವಸ್ಥೆಗಳಾದ ಕೊಳವೆಬಾವಿ ದುರಸ್ಥಿ, ಟ್ಯಾಂಕರ್ ಮೂಲಕ ನೀರಿನ ಪೂರೈಕೆ, ಖಾಸಗಿ ಬೋರ್‌ವೆಲ್‌ಗಳ ಬಾಡಿಗೆ ಪಡೆಯುವುದು ಮುಂತಾದವುಗಳನ್ನು ಬೇಡಿಕೆ ಹಾಗೂ ಲಭ್ಯತೆಗನುಸಾರ ಕ್ರಮ ಕೈಗೊಂಡು ಕುಡಿಯುವ ನೀರಿನ ತೊಂದರೆ ಆಗದಂತೆ ಎಚ್ಚರ ವಹಿಸಿ. ಅದರಂತೆ ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಿ. ಜಿಲ್ಲೆಯ ರೈತರ ಬೇಡಿಕೆಗನುಸಾರ ಬರುವ ಜೂನ್‌ವರೆಗೂ ಮೇವು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಆದ್ದರಿಂದ ಸೂಕ್ತ ರೀತಿಯಲ್ಲಿ ಮೇವಿನ ದಾಸ್ತಾನು ಇರುವಂತೆ ನೋಡಿಕೊಳ್ಳಿ. ಹಾಗೆಯೇ ಗಂಗಾವತಿ ಮತ್ತು ಕಾರಟಗಿ ಭಾಗದ ರೈತರಿಗೆ ಮುಂದಿನ ದಿನಗಳಲ್ಲಿ ಮೇವಿನ ಅಭಾವ ಉಂಟಾಗುವ ಸಾಧ್ಯತೆ ಇದ್ದು, ರೈತರು ಕಟಾವಿನ ನಂತರ ಮೇವು ಸುಟ್ಟು ಹಾಕದೆ ದಾಸ್ತಾನು ಮಾಡಿಟ್ಟುಕೊಳ್ಳಬೇಕು ಎಂದು ಜಾಗೃತಿ ಮೂಡಿಸಿ ಎಂದು ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳಿ ಸಚಿವರು ಸೂಚನೆ ನೀಡಿದರು.
ಕುಡಿಯುವ ನೀರು ಸೇರಿದಂತೆ ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ನಿಧಿಯಿಂದ ಎಲ್ಲ ತಹಶೀಲ್ದಾರರ ಖಾತೆಗೆ ರೂ. 50 ಲಕ್ಷಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಕುರಿತಂತೆ ತಹಶೀಲ್ದಾರರು ಸಂಬAಧಿಸಿದ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕ್ರಿಯಾ ಯೋಜನೆ ಸಿದ್ದಪಡಿಸಿ, ಅಚ್ಚುಕಟ್ಟು ಬರ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಬರದ ಸಮರ್ಪಕ ನಿರ್ವಹಣೆಯ ಉದ್ದೇಶದಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಯಾವುದೇ ಇಲಾಖೆಯ ಅಧಿಕಾರಿಗಳು ತುರ್ತು ಪರಿಸ್ಥಿತಿ ಹೊರತು ಪಡಿಸಿ ರಜೆಯ ಮೇಲೆ ತೆರಳುವಂತಿಲ್ಲ. ಹಾಗೂ ರಜೆಯ ಮೇಲೆ ತೆರಳುವಾಗ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮಾಹಿತಿ ನೀಡಬೇಕು. ಬರ ನಿರ್ವಹಣೆ ಕುರಿತು ಯಾವುದೇ ಸಂದರ್ಭದಲ್ಲಿ ಸಭೆ ನಡೆಸುವ ಅನಿವಾರ್ಯತೆ ಬರಬಹುದು. ಆದ್ದರಿಂದ ಅಧಿಕಾರಿಗಳು ಯಾವುದೇ ಸಬೂಬು ಹೇಳದೆ ಖುದ್ದಾಗಿ ಸಭೆಗೆ ಹಾಜರಾಗಿ, ಬರ ನಿರ್ವಹಣೆ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಎಚ್ಚರಿಕೆ ನೀಡಿದರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಕೊಪ್ಪಳ ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗದಂತೆ ಕ್ರಮ ಕೈಗೊಳ್ಳಿ. ಅದರಂತೆ ತಾಲ್ಲೂಕಿನ ಜಾನುವಾರಗಳಿಗೆ ಅಗತ್ಯ ಪ್ರಮಾಣದ ಮೇವು ದಾಸ್ತಾನು ಹಾಗೂ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶ ಅವರು ಮಾತನಾಡಿ, ಮುಂಗಾರು ಹಂಗಾಮಿನ ವಾಡಿಕೆ ಮಳೆ 383 ಮೀ.ಮೀ. ಯಿದ್ದು, ವಾಸ್ತವಿಕ 269 ಮೀ.ಮೀ. ಆಗಿದ್ದು, ಶೇ.30 ಮಳೆ ಕೊರತೆಯಾಗಿರುತ್ತದೆ. ಕೃಷಿ ಬೆಳೆಗಳಲ್ಲಿ ಮುಂಗಾರು ಹಂಗಾಮಿನಲ್ಲಿ 313795 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಮಳೆ ಹಾಗೂ ತೇವಾಂಶದ ಕೊರತೆಯಿಂದ ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ನೀರಾವರಿ ಬೆಳೆಗಳು ಹೊರತುಪಡಿಸಿ 250061 ಹೆಕ್ಟರ್ ಪ್ರದೇಶ ಹಾನಿಯಾಗಿರುತ್ತದೆ. ಇದಕ್ಕೆ ಬೇಕಾಗುವ ರೂ 216.41 ಕೋಟಿ ಬೆಳೆ ಪರಿಹಾರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ 2023-24 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 75058 ರೈತರು ಬೆಳೆವಿಮೆಗೆ ನೋಂದಾಯಿಸಿರುತ್ತಾರೆ. ತೀವ್ರ ತೇವಾಂಶದ ಕೊರತೆಯಿಂದ ಮುಖ್ಯ ಬೆಳೆಗಳಾದ ಮೆಕ್ಕೆಜೋಳ ಮಳೆಯಾಶ್ರಿತ, ಹತ್ತಿ ಮಳೆಯಾಶ್ರಿತ, ತೊಗರಿ ಮಳೆಯಾಶ್ರಿತ ಮತ್ತು ಶೇಂಗಾ ಮಳೆಯಾಶ್ರಿತ ಬೆಳೆಯಲ್ಲಿ ಶೇ.50 ಕ್ಕಿಂತ ಹೆಚ್ಚು ಬೆಳೆನಷ್ಟವಾಗಿದ್ದು, ಮಧ್ಯಂತರ ಪರಿಹಾರವಾಗಿ ಒಟ್ಟು 33375 ಫಲಾನುಭವಿಗಳಿಗೆ ರೂ.26. 17 ಕೋಟಿ ಬೆಳೆವಿಮೆ ಮಂಜೂರಾಗಿದ್ದು, ರೈತರ ಖಾತೆಗೆ ಜಮೆ ಆಗುತ್ತಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 4601 ರೈತರಿಗೆ ರೂ. 776.95 ಲಕ್ಷ ತುಂತುರು ನೀರಾವರಿ ಘಟಕ ವಿತರಣೆ ಮಾಡಲು ಗುರಿಯನ್ನು ಹೊಂದಲಾಗಿದೆ, ತೋಟಗಾರಿಕೆ ಇಲಾಖೆಯಿಂದ 1362 ರೈತರಿಗೆ ರೂ. 2130.00 ಲಕ್ಷ ಹನಿ ನೀರಾವರಿ ಘಟಕ ವಿತರಣೆ ಮಾಡಲು ಗುರಿಯನ್ನು ಹೊಂದಲಾಗಿದೆ. 1.42 ಲಕ್ಷ ಬಿ.ಪಿ.ಎಲ್ ಕಾರ್ಡ್ ಹೊಂದಿದ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ನರೇಗಾ ಹಾಗೂ ಇತರೆ ಯೋಜನೆಗಳಲ್ಲಿ ವಿವಿಧ ಸವಲತ್ತುಗಳನ್ನು ನೀಡಲಾಗಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 74543 ಕೃಷಿ ಬೆಳೆಸಾಲ ಹೊಂದಿದ ರೈತರ ಖಾತೆಗಳನ್ನು ಪುನರ್ ರಚನೆ ಮಾಡಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ, ಆದೇಶಿಸಿರುತ್ತಾರೆ. ಸರ್ಕಾರದಿಂದ ದಿನಾಂಕ: 31-10-2023 ರಂದು ಜಿಲ್ಲೆಗೆ ರೂ. 10.50 ಕೋಟಿ ಅನುದಾನ ಬಿಡುಗಡೆ ಯಾಗಿದ್ದು, ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ಮುಂಚೆ ರೂ. 9.50 ಕೋಟಿ ಅನುದಾನ ಲಭ್ಯವಿದ್ದು, ಒಟ್ಟಾರೆಯಾಗಿ ರೂ. 20.00 ಕೋಟಿ ಅನುದಾನ ಲಭ್ಯವಿರುತ್ತದೆ ಅದರಲ್ಲಿ ಜಿಲ್ಲೆಯ ಪ್ರತಿ ತಾಲೂಕಿಗೆ ರೂ. 50.00 ಲಕ್ಷ ರಂತೆ ಒಟ್ಟು 350.00 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ತಹಶೀಲ್ದಾರರಿಗೆ ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್ ರಡಿಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಮತ್ತು ಮೇವಿನ ಸಮಸ್ಯೆ ಉಧ್ಭವಿಸಿದರೆ ತಕ್ಷಣ ಸ್ಪಂದಿಸಲು ಗ್ರಾಮಮಟ್ಟದ ಮತ್ತು ತಾಲೂಕು ಮಟ್ಟದ ಟಾಸ್ಕ್ಫೋರ್ಸ್ನಲ್ಲಿ ಸಮಿತಿಯನ್ನು ರಚನೆ ಮಾಡಿಕೊಳ್ಳಲಾಗಿದೆ ಯಾವುದೇ ಸಮಸ್ಯೆ ಉದ್ಭವಿಸಿದರೆ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.
ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸದ್ಯಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ ಮುಂದಿನ ಮೂರು ತಿಂಗಳಲ್ಲಿ 143 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ 220 ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿದ್ದು, ಖಾಸಗಿ ಬೋರ್‌ವೆಲ್‌ಗಳ ಮಾಲೀಕರಿಂದ ಕರಾರು ಪತ್ರವನ್ನು ಮಾಡಿಸಿಕೊಂಡಿರುತ್ತೇವೆ. ಅಲ್ಲದೆ ಗ್ರಾಮೀಣ ಮಟ್ಟದಲ್ಲಿ ಅತಿಯಾಗಿ ಕುಡಿಯುವ ನೀರಿನ ಸಮಸ್ಯೆಯಾದರೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿಕೊಳ್ಳಲುಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾದ ಅನುದಾನದಲ್ಲಿ ರೂ. 45.00 ಲಕ್ಷಗಳನ್ನು ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಮೀಸಲಿಡಲಾಗಿದೆ ಹಾಗೂ 7 ತಾಲೂಕಿನ ತಹಶೀಲ್ದಾರರ ಪಿ.ಡಿ ಖಾತೆಯಲ್ಲಿ ಸಹ ತುರ್ತು ಕುಡಿಯುವ ನೀರಿನ ಸರಬರಾಜು ಸಲುವಾಗಿ ತಲಾ ರೂ. 50 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಹೀಗಾಗಿ ಜಿಲ್ಲಾಡಳಿತದಿಂದ ಕುಡಿಯುವ ನೀರು ಸಲುವಾಗಿ ಎಲ್ಲಾ ರೀತಿಯಿಂದ ಸಿದ್ದತೆ ಮಾಡಿಟ್ಟುಕೊಳ್ಳಲಾಗಿದೆ ಎಂದು ಕುಡಿಯುವ ನೀರಿನ ಪೂರೈಕೆಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿದರು.
2023-24ನೇ ಸಾಲಿನ ನರೇಗಾ ಯೋಜನೆಯಡಿ ವಾರ್ಷಿಕವಾಗಿ 82 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಿದ್ದು, ಇಲ್ಲಿಯವರೆಗೆ 78.37 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.95.57 ಸಾಧನೆ ಮಾಡಲಾಗಿದೆ. ಇಲ್ಲಿವರೆಗೆ ಕೂಲಿಗಾಗಿ ರೂ.229.92 ಕೋಟಿ ಹಾಗೂ ಸಾಮಗ್ರಿಗಾಗಿ ರೂ.55.07 ಕೋಟಿ ಹೀಗೆ ಒಟ್ಟು ರೂ.284.99 ಕೋಟಿ ಅನುದಾನ ಖರ್ಚು ಮಾಡಲಾಗಿದೆ. ನೀರು ಸಂರಕ್ಷಣೆ ಮಾಡಲು 47 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ.
ಜಿಲ್ಲೆಯಲ್ಲಿ 100 ದಿನಗಳನ್ನು ಪೂರೈಸಿದ ಕುಟುಂಬಗಳ ಸಂಖ್ಯೆ 1885, 75 ರಿಂದ 90 ದಿನಗಳನ್ನು ಪೂರೈಸಿದ ಕುಟುಂಬಗಳ ಸಂಖ್ಯೆ 26481 ಮತ್ತು 50 ರಿಂದ 75 ದಿನಗಳನ್ನು ಪೂರ್ಣಗೊಳಿಸಿದ ಕುಟುಂಬಗಳು 38123. ಸರ್ಕಾರ ಈಗಾಗಲೇ 100 ದಿನಗಳ ಉದ್ಯೋಗವಕಾಶವನ್ನು ಒಂದು ಕುಟುಂಬಕ್ಕೆ ಕಲ್ಪಿಸಿದ್ದು, ಇನ್ನೂ 150 ದಿನಗಳ ಮಾನವ ದಿನಗಳ ಉದ್ಯೋಗವನ್ನು ಹೆಚ್ಚಿಸುವ ಅವಕಾಶವಿದ್ದು, 150 ದಿನಗಳ ಉದ್ಯೋಗವನ್ನು ಒದಗಿಸಲು ಈಗಾಗಲೇ ಕ್ರಿಯಾ ಯೋಜನೆಗಳಿಗೆ ಜಿಲ್ಲಾ ಪಂಚಾಯಿತಿಯಿAದ ಅನುಮೋದನೆಯನ್ನು ಪಡೆಯಲಾಗಿದೆ. ಉದ್ಯೋಗ ನೀಡುವಲ್ಲಿ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುತ್ತೇವೆ. ಪ್ರತಿ ಗ್ರಾಮಗಳಲ್ಲಿಯೂ ಸಮುದಾಯ ಕಾಮಗಾರಿಗಳನ್ನು ಇಟ್ಟುಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 8354 ಸಮುದಾಯ ಕಾಮಗಾರಿಗಳಿಗೆ ಅನುಮೋದನೆ ಪಡೆದುಕೊಂಡಿದ್ದು, ಎಲ್ಲಾ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಗ್ರಾಮೀಣ ಮಟ್ಟದ ಬಡಕುಟುಂಬಗಳಿಗೆ ಉದ್ಯೋಗ ಕಲ್ಪಿಸಲು ಎಲ್ಲಾ ತಯಾರಿ ಮಾಡಿಕೊಂಡಿರುತ್ತೇವೆ. ಪ್ರಸ್ತುತ 3054 ಚಾಲ್ತಿ ಎನ್.ಎಂ.ಆರ್ ಇರುತ್ತವೆ ಎಂದು ಉಪಕಾರ್ಯದರ್ಶಿಗಳು ಸಚಿವರಿಗೆ ಮಾಹಿತಿ ನೀಡಿದರು.
ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 272467 ಜಾನುವಾರುಗಳಿದ್ದು, ಪ್ರಸ್ತುತ 399377.92 ಮೆ.ಟನ್ ಮೇವು ಲಭ್ಯವಿರುತ್ತದೆ. ಕುಷ್ಟಗಿ ತಾಲೂಕಿನಲ್ಲಿ 14 ವಾರ ಮತ್ತು ಉಳಿದ ತಾಲೂಕಿನಲ್ಲಿ ಇನ್ನೂ 28 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿರುತ್ತದೆ. ಭತ್ತ ಕಟಾವು ನಂತರ ಅದನ್ನು ಹಾಗೇ ಸಂಗ್ರಹಿಸಿ ಇಟ್ಟುಕೊಳ್ಳಲು ರೈತರಿಗೆ ತಿಳುವಳಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಏನಾದರೂ ಮೇವಿನ ಸಮಸ್ಯೆ ಉಂಟಾದರೆ ಅದನ್ನು ಗ್ರಾಮ ಮಟ್ಟದ ಟಾಸ್ಕ್ಫೋರ್ಸ್ ಸಭೆಯಲ್ಲಿ ಪಶು ಸಖಿಯವರು ಮಾಹಿತಿ ನೀಡಿದಲ್ಲಿ ಮೇವಿನ ಬ್ಯಾಂಕ್ ತೆರೆಯಲು ಕ್ರಮಕೈಗೊಳ್ಳಲಾಗುವುದು. ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ 4 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿಲ್ಲದಿದ್ದಲ್ಲಿ ಮೇವಿನ ಬ್ಯಾಂಕ್ ಮತ್ತು 2 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿಲ್ಲದಿದ್ದಲ್ಲಿ ಗೋಶಾಲೆಗಳನ್ನು ತೆರೆಯಲು ಎಲ್ಲಾ ವ್ಯವಸ್ಥೆ ಮಾಡಿಟ್ಟುಕೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯಾರಾಣಿ, ತಹಶೀಲ್ದಾರ ವಿಠ್ಠಲ್ ಚೌಗಲೆ, ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲ್ಲೂಕು ಮಟ್ಟದ ಬೆಳೆಹಾನಿ ಮತ್ತು ಬರ ಪರಿಹಾರ ಕುರಿತ ಪ್ರಗತಿ ಪರಿಶೀಲನಾ ಸಭೆ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಿ : ಸಚಿವ ಶಿವರಾಜ ಎಸ್.ತಂಗಡಗಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments