ಟಿ.ಬಿ.ಜಯಚಂದ್ರ ವಿರುದ್ಧ ಕಪ್ಪುಪಟ್ಟಿ ಧರಿಸಿ ಕರಾಳದಿನ ಆಚರಿಸಿದ ಕುಂಚಿಟಿಗ ಮುಖಂಡ :ಕಸವನಹಳ್ಳಿರಮೇಶ್

by | 09/11/23 | ಪ್ರತಿಭಟನೆ


ಹಿರಿಯೂರು ನ.9
ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿಯಲ್ಲಿ ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದು ತಾರತಮ್ಯ ಮಾಡದಂತೆ ಕುಂಚಿಟಿಗರಿಗೆ ಕೇಂದ್ರ ಓ ಬಿ ಸಿ ಮೀಸಲಾತಿ ಕೊಡಲು ಶಿಫಾರಸು ಮಾಡಲಾಗಿದ್ದು, ಕುಂಚಿಟಿಗರ ಹೆಸರಿನಲ್ಲಿ ಸ್ಥಾನಮಾನ ಪಡೆದು ಕುಂಚಿಟಿಗರಿಗೆ ದ್ರೋಹ ಮಾಡಿದರೆ 101 ಕುಲಬೆಡಗಿನ ಕುಂಚಿಟಿಗರ ಮನೆದೇವರುಗಳು ಕೂಡ ಕ್ಷಮಿಸುವುದಿಲ್ಲ ಎಂಬುದಾಗಿ ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್ ಆಕ್ರೋಶ ವ್ಯಕ್ತಪಡಿಸಿ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಕುಂಚಿಟಿಗರ ರಾಜ್ಯ ಒಕ್ಕೂಟದ ಸದಸ್ಯರು, ಮಾಜಿಸಚಿವ ಹಾಗೂ ಕುಂಚಿಟಿಗರ ಕುಲದ ಮುಖಂಡ ಟಿ.ಬಿ.ಜಯಚಂದ್ರ ವಿರುದ್ಧ ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸುವ ಮೂಲಕ ಪ್ರತಿಭಟನೆ ನಡೆಸಿದರಲ್ಲದೆ, ನಂತರ ತುರ್ತು ಸುದ್ದಿಗೋಷ್ಠಿ ಸಭೆ ನಡೆಸಿ, ಅವರು ಮಾತನಾಡಿದರು.
ಕುಂಚಿಟಿಗರ ಹಿರಿಯ ಮುತ್ಸದ್ದಿ ರಾಜಕಾರಣಿ ಟಿಬಿ ಜಯಚಂದ್ರರಿಗೆ ಶಿಕಾರಿಪುರ ಸಮಾವೇಶದಿಂದಲೂ ಮತ್ತೆ ಮತ್ತೆ ಹೇಳುತ್ತ ಬಂದಿದ್ದೇವೆ, ಆದಾಗ್ಯೂ ಅವರದೇ ಸರ್ಕಾರದಲ್ಲಿ ಗ್ರಾಮೀಣ ಕುಂಚಿಟಿಗರಿಗೆ ಮಾತ್ರ ಓ ಬಿ ಸಿ ಮೀಸಲಾತಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದು ಅತ್ಯಂತ ದುರಂತಮಯ ಸಂಗತಿ. ಈ ಕರಾಳ ಸತ್ಯವನ್ನು ಕುಂಚಿಟಿಗರು ಜೀವನ ಪರ್ಯಂತ ಮರೆಯುವುದಿಲ್ಲ ಎಂಬುದಾಗಿ ದೂರಿದರು.
ಕುಂಚಿಟಿಗರಿಗೆ ಕೇಂದ್ರ ಸರ್ಕಾರದಲ್ಲಿದ್ದ ಓಬಿಸಿ ಮೀಸಲಾತಿಯನ್ನು ಉದ್ದೇಶ ಪೂರ್ವಕವಾಗಿ ತಪ್ಪಿಸಿ ಕುಂಚಿಟಿಗರೆಲ್ಲ ಒಕ್ಕಲಿಗ ಎಂದು ಬರೆಯಿಸಿ ಕೇಂದ್ರ ಓಬಿಸಿ ಮೀಸಲಾತಿ ಪಡೆಯಿರಿ ಎಂದು ಧಾರ್ಮಿಕ ನೇತಾರರು ರಾಜಕೀಯ ಧುರೀಣರು ಉಪದೇಶ ಮಾಡಿ ಕುಂಚಿಟಿಗರನ್ನು ಅಡಕತ್ತರಿಯಲ್ಲಿ ಸಿಲುಕಿಸಿ ಕಳೆದ 27 ವರ್ಷಗಳಿಂದ ವ್ಯವಸ್ಥಿತವಾಗಿ ಕುಂಚಿಟಿಗರಿಗೆ ನಂಬಿಕೆದ್ರೋಹ ಮಾಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಒಕ್ಕಲಿಗ ಸಮಾನಾಂತರ ಇನ್ನಿತರೆ 9 ಜಾತಿಗಳಿಗೆ ಗ್ರಾಮೀಣ ಮತ್ತು ನಗರ ಎಂದು ತಾರತಮ್ಯ ಮಾಡದೆ ಹಾಗೂ ಅವರು ಕೇಳದೆ ಇದ್ದರು ಕೂಡ ಓಬಿಸಿ ಮೀಸಲಾತಿ ಕೊಡಲಾಗಿದೆ. ಕುಂಚಿಟಿಗರಿಗೆ ಮಾತ್ರ ಇದ್ದ ಓಬಿಸಿ ತಪ್ಪಿಸಿ ಕಂಬ ಸುತ್ತುವಂತೆ ಮಾಡಿದ್ದಾರೆ. ಈಗಾಗಲೇ ಕೇಂದ್ರ ಓ ಬಿ ಸಿ ಮೀಸಲಾತಿ ಕೈತಪ್ಪಿ ಹೋದ ಸಮಸ್ಥ ಕುಂಚಿಟಿಗರಿಗೆ ಇಡಬ್ಲೂ.ಎಸ್ ಮೀಸಲಾತಿ ಜಾರಿಯಲ್ಲಿದೆ.ಇನ್ನು ಮುಂದೆ ನಗರ ಕುಂಚಿಟಿಗರಿಗೆ ಇಡಬ್ಲೂ.ಎಸ್ ಮೀಸಲಾತಿ ಕೈಬಿಟ್ಟು ಹೋಗಿ ಜನರಲ್ ಮೆರಿಟ್ ನಲ್ಲಿ ಬರುತ್ತಾರೆ ಎಂದರಲ್ಲದೆ,
ಆದಪ್ರಯುಕ್ತ ಟಿ.ಬಿ.ಜಯಚಂದ್ರರವರು ಕುಂಚಿಟಿಗರ ಮೀಸಲಾತಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ಈಗಾಗಲೇ ಕುಲಶಾಸ್ತ್ರ ಅಧ್ಯಯನ ವರದಿಗೆ ವಿರುದ್ಧವಾಗಿ ಗ್ರಾಮೀಣ ಕುಂಚಿಟಿಗರಿಗೆ ಮಾತ್ರ ಓಬಿಸಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿರುವ ಕಡತವನ್ನು ಹಿಂದಕ್ಕೆ ತರಿಸಿ ಸಮಸ್ತ ಕುಂಚಿಟಿಗರಿಗೆ ಕೇಂದ್ರ ಓ ಬಿ ಸಿ ಮೀಸಲಾತಿ ಕೊಡುವಂತೆ ಶಿಫಾರಸು ಮಾಡಬೇಕು, ಇದಕ್ಕೆ ತಪ್ಪಿದಲ್ಲಿ ಸೂಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಕಾನೂನಾತ್ಮಕ ಹೋರಾಟ ಮಾಡಲು ಸಕಲ ಸಿದ್ಧತೆ ಮಾಡಲಾಗಿದೆ ಎಂಬುದಾಗಿ ತಿಳಿಸಿದರು.
ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವರಾದ ನಾರಾಯಣಸ್ವಾಮಿ,ಯವರು ದಯಮಾಡಿ ಕುಂಚಿಟಿಗರ 3 ದಶಕಗಳ ಮೀಸಲಾತಿ ಹೋರಾಟಕ್ಕೆ ಹಂಸಕ್ಷೀರ ನ್ಯಾಯ ಒದಗಿಸಬೇಕು. ಅದಕ್ಕಾಗಿ ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಗಾಗಿ ಗ್ರಾಮೀಣ ಮತ್ತು ನಗರ ತಾರತಮ್ಯ ಮಾಡದಂತೆ ಸಮಸ್ಥ ಕುಂಚಿಟಿಗರಿಗೆ ಕೇಂದ್ರ ಓಬಿಸಿ ಮೀಸಲಾತಿ ಕೊಡಿಸಿಕೊಡುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹುಲಿರಂಗನಾಥ್, ಗೌರವಾಧ್ಯಕ್ಷ ಯಳನಾಡು ಗಿರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ.ಕುಬೇರಪ್ಪ, ಉಪಾಧ್ಯಕ್ಷ ಮಲ್ಲಪ್ಪನಹಳ್ಳಿ ಜೋಗೇಶ್, ದೇವರಕೊಟ್ಟ ರಂಗಸ್ವಾಮಿ, ಹುಚ್ಚವನಹಳ್ಳಿ ಅವಿನಾಶ್,,ಪೆಪ್ಸಿ ಹನುಮಂತರಾಯ, ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್, ಆಪ್ಟಿಕಲ್ಸ್ ರಾಜೇಶ್, ಚಿಲ್ಲಹಳ್ಳಿ ಚಿದಾನಂದಪ್ಪ, ಬೆಳ್ಳುಳ್ಳಿ ಶಿವಣ್ಣ ಸೇರಿದಂತೆ ಅನೇಕ ಕುಂಚಿಟಿಗ ಮುಖಂಡರು ಉಪಸ್ಥಿತರಿದ್ಧರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *