ಜನ ಜಾನವಾರುಗಳಿಗೆ ಕುಡಿಯುವ ನೀರು, ಆಹಾರ, ಮೇವಿನ ಕೊರತೆ ಆಗಬಾರದು. ಹಣಕ್ಕೆ ತೊಂದರೆ ಇಲ್ಲ. ಅಗತ್ಯವಿದ್ದಷ್ಟು ಕೇಳಿ ಸರ್ಕಾರ ನೀಡಲಿದೆ. ಸಿ.ಎಂ ಸಿದ್ದರಾಮಯ್ಯ ಭರವಸೆ.

by | 31/10/23 | Uncategorized


ಮಂಡ್ಯ ಅ31 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದರು.

ಜನ ಜಾನವಾರುಗಳಿಗೆ ಕುಡಿಯುವ ನೀರು, ಆಹಾರ, ಮೇವಿನ ಕೊರತೆ ಆಗಬಾರದು. ಹಣಕ್ಕೆ ತೊಂದರೆ ಇಲ್ಲ. ಅಗತ್ಯವಿದ್ದಷ್ಟು ಕೇಳಿ ಸರ್ಕಾರ ನೀಡಲಿದೆ.

ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಪಶು ಸಂಗೋಪನೆ, ಕೃಷಿ ಇಲಾಖೆಗಳ ಪ್ರಗತಿಗೆ ಪ್ರಥಮ ಆಧ್ಯತೆ ನೀಡಬೇಕು.

DC, CEO, ಕಾರ್ಯದರ್ಶಿಗಳ ಸಭೆಯಲ್ಲಿ ನಾನು ಕೊಟ್ಟ ಸೂಚನೆಗಳು, ನಿರ್ದೇಶನಗಳು ಚಾಚೂ ತಪ್ಪದೆ ಜಾರಿ ಆಗಿದೆಯಾ? ಎಷ್ಟು ಜಾರಿ ಆಗಿದೆ ಎನ್ನುವ ಕುರಿತು ಸಭೆಗೆ ಸ್ಪಷ್ಟ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಬರಗಾಲ ನಿರ್ವಹಣೆಗೆ ಎಷ್ಟೇ ಹಣ ಅಗತ್ಯವಿದ್ದರೂ, ಎಷ್ಟೇ ಕಷ್ಟ ಆದರೂ ಸರ್ಕಾರ ಹಣ ಒದಗಿಸುತ್ತದೆ. ನೀವು ಜನ ಜಾನವಾರುಗಳಿಗೆ ಯಾವುದಕ್ಕೂ ತೊಂದರೆ ಆಗದಂತೆ ಕೆಲಸ ಮಾಡಬೇಕು.

ಮಾರ್ಚ್, ಏಪ್ರಿಲ್, ಮೇ ತಿಂಗಳಿಗಿಂತ ಹೆಚ್ಚು ವಿದ್ಯುತ್ ಬೇಡಿಕೆ ಇದೆ. ಆಗ 11 ಸಾವಿರ ಮೆಗಾವ್ಯಾಟ್ ಬಳಕೆ ಆಗುತ್ತಿತ್ತು. ಈಗ 15-16 ಸಾವಿರ ಮೆಘಾವ್ಯಾಟ್ ವಿದ್ಯುತ್ ಗೆ ಬೇಡಿಕೆ ಇದೆ. ರೈತರ ಪಂಪ್ ಸೆಟ್ ಮತ್ತು ಜನರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ನಕಾಶೆ, ಯೋಜನೆ ಸಿದ್ಧಪಡಿಸಿ ಅದಕ್ಕೆ ತಕ್ಕಂತೆ ಕ್ರಮ ವಹಿಸಬೇಕು.
ಸದ್ಯ ಕಟಾವಿಗೆ ಬರುವ ಬೆಳೆಗಳನ್ನು ಉಳಿಸಿಕೊಳ್ಳಲು ತೀವ್ರ ನಿಗಾವಹಿಸಿ ಕ್ರಮ ಕೈಗೊಳ್ಳಬೇಕು.

ಬೆಳೆ ಇಳುವರಿ ಮತ್ತು ಬಿತ್ತನೆ ಪ್ರಮಾಣದಲ್ಲಿ ಮಂಡ್ಯ ಜಿಲ್ಲೆ ರಾಜ್ಯದ ಸರಾಸರಿಗಿಂತ ಕಡಿಮೆ ಇದೆ. ಏಕೆ ಹೀಗಾಗಿದೆ‌?
ಭೂಮಿಯ ಫಲವತ್ತತೆ ಕಡಿಮೆ ಆಗಿದ್ದರೆ ಫಲವತ್ತತೆ ಹೆಚ್ಚಿಸಲು ಸರ್ಕಾರದ ಕಾರ್ಯಕ್ರಮಗಳಿವೆ. ಅದನ್ನು ಎಷ್ಟು ಜಾರಿ ಮಾಡಲಾಗಿದೆ?

ಕೃಷಿ ಭೂಮಿಗಳಿಗೆ ತಪ್ಪದೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ರೈತರ ಜತೆ ಮಾತನಾಡಿ ಅವರ ಸಮಸ್ಯೆಗಳನ್ನು ಕೇಳಿಸಿಕೊಳ್ಳಬೇಕು. ರೋಗ ರಹಿತ ಬೀಜ, ಅಗತ್ಯ ರಸಗೊಬ್ಬರ, ಫಲವತ್ತತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಮುಂದಿನ ಸಭೆ ವೇಳೆಗೆ ಪರಿಸ್ಥಿತಿ ಸುಧಾರಿಸಿರಬೇಕು.

ಮಂಡ್ಯ ಜಿಲ್ಲೆಯ ಹಲವು ಭಾಗಗಳಲ್ಲಿ ಆನೆ, ಚಿರತೆ, ಹಾವಿನ ಕಾಟ ಇದ್ದು ಕೃಷಿಗೆ ರಾತ್ರಿ ವೇಳೆಗಿಂತ ಹಗಲಿನಲ್ಲೇ ನಿರಂತರ ಐದು ಗಂಟೆ ವಿದ್ಯುತ್ ಕೊಡಬೇಕು ಎನ್ನುವ ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ಕ್ರಮ ವಹಿಸಲು ಸಾಧ್ಯವೇ ಪರೀಕ್ಷಿಸಿ.

ದಿನ ಬಿಟ್ಟು ದಿನ ಬೇರೆ ಬೇರೆ ಬ್ಯಾಚ್ ಗಳಲ್ಲಿ ನಿರಂತರ ಐದು ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಕಡ್ಡಾಯವಾಗಿ ಆಗಲೇಬೇಕು. ಯಾವ ವೇಳೆಯಲ್ಲಿ ವಿದ್ಯುತ್ ಸರಬರಾಜು ಆಗುತ್ತದೆ ಎನ್ನುವ ಮಾಹಿತಿ ಆಯಾ ಭಾಗದ ರೈತರಿಗೆ ಕೊಡಬೇಕು. ಈ ಸಭೆಯಲ್ಲಿ ತೆಗೆದುಕೊಂಡ ಎಲ್ಲಾ ತೀರ್ಮಾನಗಳನ್ನು ಚಾಚೂ ತಪ್ಪದೆ ಜಾರಿ ಮಾಡಬೇಕು. ರೈತರಿಗೆ ದ್ರೋಹ ಮಾಡದೆ ಅವರಿಗೆ ನೆರವಾಗಿ. ತಪ್ಪಿದರೆ ಕ್ರಮ ಜರುಗಿಸಲಾಗುವುದು.

ಮಂಡ್ಯ ಜಿಲ್ಲೆಯ ಯಾವುದೇ ಭಾಗದಲ್ಲೂ ಕುಡಿಯುವ ನೀರಿಗೆ ತೊಂದರೆ ಆಗಬಾರದು. ಬೇಕಿದ್ದರೆ ಎಷ್ಟಾದರೂ ಹಣ ಕೇಳಿ. ಕುಡಿಯುವ ನೀರಿನ ಬಗ್ಗೆ ದೂರು ಬಂದರೆ ನೇರವಾಗಿ ಜಿಲ್ಲಾ ಪಂಚಾಯ್ತಿ CEO ಅವರನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು.

ಮಳವಳ್ಳಿಯಲ್ಲಿ ಕುಡಿಯುವ ನೀರು ಪೈಪ್ ಲೈನ್ ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಿ, ಕಳಪೆ ಕಾಮಗಾರಿ ಮಾಡಿರುವ ಕುರಿತು ತನಿಖೆ ನಡೆಸಿ ಎಲ್ಲಿ ತಪ್ಪಾಗಿದೆ ಎಂದು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ.

ಬರಗಾಲದ ಸಂದರ್ಭದಲ್ಲಿ ನರೇಗಾ ಕೆಲಸ 100 ದಿನ, 120 ದಿನ ಅಂತೆಲ್ಲಾ ಮಿತಿ ಹಾಕಿಕೊಳ್ಳಬೇಡಿ. ಕೆಲಸ ಕೇಳಿದವರಿಗೆಲ್ಲಾ ಕೆಲಸ ಕೊಡಿ. ಹಣ ಬೇಕಿದ್ದರೆ ಸರ್ಕಾರಕ್ಕೆ ಬರೆಯಿರಿ.

100 ಬೆಡ್ ಗಳ ಹೆರಿಗೆ ಆಸ್ಪತ್ರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಾಕಿ ಕೆಲಸ ಮುಗಿಸಲು ಕೇವಲ 8 ಕೋಟಿ ರೂಪಾಯಿ ಅಗತ್ಯವಿದ್ದು, ಈ ಹಣ ಬಿಡುಗಡೆಗೊಳಿಸುವುದು.

ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಅಗತ್ಯ ಅಂಡರ್ ಪಾಸ್, ಡ್ರೈನೇಜ್ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ನಡೆಸಬೇಕಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ, ನಾನು ಈ ಬಗ್ಗೆ ಕೇಂದ್ರ ಸಚಿವರನ್ನು ಭೇಟಿಯಾದಾಗ ಅಗತ್ಯ ಕಾಮಗಾರಿಗಳಿಗೆಲ್ಲಾ ಅನುಮತಿ ನೀಡುವ ಭರವಸೆ ನೀಡಿದ್ದರು. ಆದಷ್ಟು ಬೇಗ ಸಂಬಂಧಪಟ್ಟವರನ್ನು ಸಂಪರ್ಕಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.

ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಜನರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *